Advertisement

ಯುಜಿಡಿ ಅವಾಂತರ, ಒಡೆದ ಪೈಪ್‌ಲೈನ್‌

02:38 PM Mar 23, 2022 | Team Udayavani |

ಸಿಂಧನೂರು: ನಗರದಲ್ಲಿ ಪ್ರಮುಖ ಹಟ್ಟಿ ಮಾರ್ಗದ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಯುಜಿಡಿ (ಒಳಚರಂಡಿ) ಪೈಪ್‌ಲೈನ್‌ ಮಾರ್ಗ ದೊಡ್ಡ ತಲೆನೋವು ಸೃಷ್ಟಿಸಿದೆ.

Advertisement

ಕುಷ್ಟಗಿ ರಸ್ತೆಯಿಂದ ವಿಎಸ್‌ಎಸ್‌ ಎನ್‌ ಮಾಜಿ ಅಧ್ಯಕ್ಷ ಅಮರೇಶಪ್ಪ ಮೈಲಾರ್‌ ಮನೆಯತನಕವೂ ರಸ್ತೆ ಅಗೆಯಲಾಗಿದೆ. ಸಿ.ಸಿ ರಸ್ತೆ ನಿರ್ಮಿಸುವ ಉದ್ದೇಶದಿಂದ ಕಳೆದ 15 ದಿನಗಳ ಹಿಂದೆ ರಸ್ತೆ ಕಿತ್ತು ಹಾಕಲಾಗಿದೆ. ಈ ಸಂದರ್ಭದಲ್ಲಿ ಯಜಿಡಿ ಪೈಪ್‌ಲೈನ್‌, ಯುಜಿಡಿ ಪಿಟ್‌ ಗಳಲ್ಲಿ ನೀರು ಹರಿದುಬಂದು ರಸ್ತೆ ಹೊಂಡವಾಗಿದೆ. ಈ ನೀರು ಬಂದ್‌ ಮಾಡುವ ಮಾರ್ಗ ಅಧಿಕಾರಿಗಳಿಗೆ ತಿಳಿಯದಾಗಿದೆ. ಒಳಚರಂಡಿ ಮಾರ್ಗದಲ್ಲಿ ಯಾವ ಪ್ರದೇಶದಿಂದ ನೀರು ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದ್ದು, ಈವರೆಗೂ ಯಶಸ್ಸು ಕಂಡಿಲ್ಲ.

ಸಂಚಾರಕ್ಕೆ ತಾಪತ್ರಯ

ಹಟ್ಟಿ ರಸ್ತೆಯ ಮಾರ್ಗದಲ್ಲಿ ಎರಡು ಬೃಹತ್‌ ಖಾಸಗಿ ಆಸ್ಪತ್ರೆ, 6ಕ್ಕೂ ಹೆಚ್ಚು ಶಾಲೆಗಳಿವೆ. ಇದೇ ರಸ್ತೆಯಲ್ಲಿ ಜನ ಸಾಗಬೇಕಿದ್ದು, ತಾತ್ಕಾಲಿಕವಾಗಿ ತೊಂದರೆ ಎದುರಾಗಿದೆ. ಸಮಸ್ಯೆ ತಲೆದೋರಿ 15 ದಿನ ಕಳೆದರೂ ಪರಿಹಾರ ಕಂಡುಕೊಳ್ಳದ್ದರಿಂದ ಹಿಡಿಶಾಪ ಹಾಕುವಂತಾಗಿದೆ. ದ್ವಿಚಕ್ರ ವಾಹನ ಸಂಚಾರ ಸ್ಥಗಿತವಾಗಿದ್ದು, ಕಾಲ್ನಡಿಗೆಯಲ್ಲಿ ಹೋಗುವುದಕ್ಕೆ ಆಗುತ್ತಿಲ್ಲ. ನೀರು ನಿಲುಗಡೆಯಾಗಿ ಕೆಸರುಗದ್ದೆ ಯಂತಾಗಿದ್ದು, ವಿದ್ಯಾರ್ಥಿಗಳು ಹೆದರುವಂತಾಗಿದೆ.

ಮುಂಜಾಗ್ರತೆಯಿಲ್ಲದ ಹೆಜ್ಜೆ

Advertisement

ಆರಂಭದಲ್ಲಿ ಪೈಪ್‌ಲೈನ್‌, ಯುಜಿಡಿ ಲೈನ್‌ಗಳ ಸುರಕ್ಷತೆ ಮತ್ತು ಸಿ.ಸಿ ರಸ್ತೆ ಕಾಮಗಾರಿಗೆ ಅಡ್ಡಿಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕಿತ್ತು. ರಸ್ತೆ ಅಗೆದ ಮೇಲೆ ಅವಾಂತರ ಉಂಟಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಗರಸಭೆಯ ದುಂಬಾಲು ಬಿದ್ದಿದ್ದಾರೆ. ಯುಜಿಡಿ ಪಾಟ್‌ ವಾಲ್‌ಗ‌ಳು ಕೂಡ ಒಡೆದು ಹೋಗಿವೆ. ಪೈಪ್‌ಲೈನ್‌, ಯುಜಿಡಿಯಿಂದ ಬರುತ್ತಿರುವ ನೀರು ತಡೆಗಟ್ಟಿ, ಸಿ.ಸಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಪಿಡಬ್ಲ್ಯೂಡಿ ಇಲಾಖೆ ಬೇಡಿಕೆ ಇಟ್ಟಿದೆ. ಎರಡು ಇಲಾಖೆಗಳ ನಡುವಿನ ಸಮನ್ವಯ ಕೊರತೆ ಜನರನ್ನು ಇಕ್ಕಟ್ಟಿಗೆ ದೂಡಿದೆ.

ಕಂಕರ್‌ ಹಾಕಿದ ಮೇಲೆ ರಸ್ತೆ ಅಗೆತ

ನಗರದ ಗಂಗಾ ನಗರದಲ್ಲಿ ಒಳರಸ್ತೆಯೊಂದರ ಸಿ.ಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಮರಂ ಹಾಕಿ, ಕಂಕರ್‌ ಲೇಯರ್‌ ಜೋಡಿಸಲಾಗಿತ್ತು. ಆದರೆ, ಸಿ.ಸಿ ರಸ್ತೆಯಾಗುವ ಮುನ್ನ ಕುಡಿವ ನೀರಿನ ಪೈಪ್‌ಲೈನ್‌ ಬದಲಿಸಬೇಕೆಂದು ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಕಂಕರ್‌ ಹಾಕಿದ ರಸ್ತೆಯನ್ನೇ ಪುನಃ ಅಗೆದು ಪೈಪ್‌ ಲೈನ್‌ ಹಾಕಿದ್ದಾರೆ. ಈಗ ಮತ್ತೊಮ್ಮೆ ಈ ರಸ್ತೆಗೆ ಮರಂ ಹಾಕಿ, ಸಮತಟ್ಟು ಮಾಡಿ ಸಿ.ಸಿ ರಸ್ತೆ ಕೆಲಸ ಕೈಗೆತ್ತಿಕೊಳ್ಳಬೇಕಿದೆ.

ಸಿ.ಸಿ ರಸ್ತೆ ಕೆಲಸಕ್ಕೆ ಯುಜಿಡಿ ಲೈನ್‌ನಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಸಂಬಂಧಿಸಿದ ಇಲಾಖೆಗೆ ತಿಳಿಸಲಾಗಿದೆ. ನೀರು ಬರುವುದನ್ನು ತಡೆಗಟ್ಟಿದರೆ, ಸಿ.ಸಿ ರಸ್ತೆ ಕೆಲಸ ತ್ವರಿತವಾಗಿ ಮುಗಿಸಬಹುದು. -ಶಿವಪ್ಪ, ಜೆಇ, ಲೋಕೋಪಯೋಗಿ ಇಲಾಖೆ, ಸಿಂಧನೂರು

Advertisement

Udayavani is now on Telegram. Click here to join our channel and stay updated with the latest news.

Next