ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 2006ರ ಜ.1ರ ಬಳಿಕ ನಿವೃತ್ತರಾದ ಬೋಧಕ ವರ್ಗದವರಿಗಷ್ಟೇ ಯುಜಿಸಿ ವೇತನ ಶ್ರೇಣಿಯನ್ವಯ ಪಿಂಚಣಿ ಸೌಲಭ್ಯ ಒದಗಿಸುವ ಸಂಬಂಧ ಕರ್ನಾಟಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನ (ನಿಯಂತ್ರಣ) ಮಸೂದೆಗೆ ಮಂಗಳವಾರ ಒಪ್ಪಿಗೆ ನೀಡಲಾಯಿತು.
ಜತೆಗೆ ಈ ಮಸೂದೆಯನ್ವಯ 2006ರ ಜ.1ರ ಮೊದಲು ನಿವೃತ್ತ ರು ಮತ್ತು ಉಳಿದ ಸರಕಾರಿ ನೌಕರರಿಗೂ ಇದೇ ರೀತಿಯ ಪಿಂಚಣಿ ಸೌಲಭ್ಯ ನೀಡುವುದನ್ನು ನಿರಾಕರಿಸಲಾಗುತ್ತದೆ.
ಮಂಗಳವಾರ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ. ಮಾಧು ಸ್ವಾಮಿ, 2006ರ ಜ.1ರ ಬಳಿಕ ನಿವೃತ್ತರಾದವರಿಗೆ ಯುಜಿಸಿ ವೇತನ ಶ್ರೇಣಿಯನ್ವಯ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ 2006ರ ಜ.1ಕ್ಕೆ ಮೊದಲು ನಿವೃತ್ತರಾದವರಿಗೂ ಈ ಸೌಲಭ್ಯ ಕಲ್ಪಿಸಬೇಕೆಂದು ಕೋರಿ ಕೆಲವರು ಕೋರ್ಟ್ ಮೊರೆ ಹೊಕ್ಕಿದ್ದರು. ಅದರಂತೆ ನ್ಯಾಯಾಲಯ ಅವರಿಗೂ ಯುಜಿಸಿ ವೇತನ ಶ್ರೇಣಿಯಂತೆ ಪಿಂಚಣಿ ನೀಡುವಂತೆ ಸೂಚಿಸಿತ್ತು. ಇದನ್ನು ಜಾರಿಗೊಳಿಸಲು ಸಾಧ್ಯವಾಗದ ಕಾರಣ ಅಧ್ಯಾದೇಶ ಹೊರಡಿಸುವ ಮೂಲಕ 2006ರ ಜ.1ಕ್ಕೆ ಮೊದಲು ನಿವೃತ್ತರಾದವರಿಗೆ ಯುಜಿಸಿ ವೇತನ ಶ್ರೇಣಿಯಂತೆ ಪಿಂಚಣಿ ಸೌಲಭ್ಯ ಕಲ್ಪಿಸುವುದನ್ನು ರದ್ದುಪಡಿಸಲಾಗಿತ್ತು. ಅದಕ್ಕೆ ಪೂರಕವಾಗಿ ಮಸೂದೆ ಮಂಡನೆಯಾಗಿದೆ ಎಂದರು.
1,000 ಕೋ.ರೂ. ಹೊರೆ
ಡಿಸಿಎಂ ಡಾ| ಅಶ್ವತ್ಥ ನಾರಾಯಣ ಮಾತನಾಡಿ, ಎಲ್ಲ ಪ್ರಾಧ್ಯಾಪಕರಿಗೂ ಯುಜಿಸಿ ವೇತನ ಶ್ರೇಣಿಯಂತೆ ಪಿಂಚಣಿ ನೀಡಿದರೆ ಸರಕಾರಕ್ಕೆ ವಾರ್ಷಿಕ 1,000 ಕೋ.ರೂ.ಗಳಷ್ಟು ಹೊರೆಯಾಗಲಿದೆ ಎಂದಿದ್ದಾರೆ.