ಹೊಸದಿಲ್ಲಿ: ಖಾದಿ ಬಟ್ಟೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೋದ ಕಡೆಗಳಲ್ಲೆಲ್ಲ ಪ್ರಚಾರ ನಡೆಸುತ್ತಿರುವಂತೆಯೇ, ಇದೇ ನಡೆಯನ್ನು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ)ಯೂ ಆಯ್ಕೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಅದು ದೇಶದ ಎಲ್ಲ ವಿಶ್ವವಿದ್ಯಾಲಯಗಳಿಗೆ, ಕಾಲೇಜುಗಳಿಗೆ ಪತ್ರವೊಂದನ್ನು ಬರೆದಿದ್ದು, ವಿಶೇಷವಾಗಿ ಘಟಿಕೋತ್ಸವಗಳು, ಕಾರ್ಯಕ್ರಮಗಳಲ್ಲಿ ಖಾದಿ, ಕೈಮಗ್ಗದ ಬಟ್ಟೆಗಳನ್ನು ಎಲ್ಲರೂ ಆದಷ್ಟೂ ಬಳಸುವಂತೆ ಮನವಿ ಮಾಡಿದೆ.
ಈ ಕುರಿತು ಹೆಸರು ಹೇಳಲಿಚ್ಛಿಸದ ಪ್ರಾಧ್ಯಾಪಕರೊಬ್ಬರು ಪ್ರತಿಕ್ರಿಯಿಸಿದ್ದು, ಈ ಸುತ್ತೋಲೆಯ ಭಾಷೆ ಕುತೂಹಲಕರವಾಗಿದೆ. ಸುತ್ತೋಲೆಯಲ್ಲಿ ಎಲ್ಲೂ ಕಡ್ಡಾಯ ಎಂದು ಹೇಳಿಲ್ಲ. ಬದಲಿಗೆ ಮನವಿಯನ್ನಷ್ಟೇ ಮಾಡಲಾಗಿದೆ. ಈ ಮೂಲಕ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಕಾರ್ಯಕ್ರಮಗಳು ಸಂದಭ ಖಾದಿ ಬಟ್ಟೆಗಳನ್ನು ಧರಿಸುವಂತೆ ಕ್ರಮಕೈಗೊಳ್ಳಬೇಕು ಎಂಬ ಇಂಗಿತ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದೀಚೆಗೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿದೇಶಿ ಶೈಲಿಯ ಉಡುಗೆಗಳನ್ನು ಉಡುವುದನ್ನು ತ್ಯಜಿಸಲಾಗಿದ್ದು, ಕರ್ನಾಟಕದ ಕೆಲವು ವಿವಿಗಳಲ್ಲೂ ಸಾಮಾನ್ಯ ಉಡುಗೆ ಮತ್ತು ಮೈಸೂರು ಪೇಟ ತೊಟ್ಟು ಪದವಿ ಪ್ರದಾನಗಳನ್ನು ನಡೆಸಲಾಗಿತ್ತು. ಜತೆಗೆ ವಿವಿಧ ಐಐಟಿಗಳಲ್ಲಿ ಖಾದಿ ಉಡುಗೆಗಳನ್ನು ತೊಟ್ಟು ಪದವಿಗಳನ್ನು ನೀಡಲಾಗಿತ್ತ. ಐಐಟಿ ಮದರಾಸು, ಐಐಟಿ ಬಾಂಬೆ, ಐಐಟಿ ಹಮೀರ್‌ಪುರ, ಹಿಮಾಚಲ ಪ್ರದೇಶ, ಗುಜರಾತ್ ವಿವಿಗಳಲ್ಲಿ ಹೀಗೆ ಮಾಡಲಾಗಿತ್ತು.
ಇನ್ನು 2017ರಲ್ಲಿ ಪ್ರಧಾನಿ ಮೋದಿ ಅವರು ಮನ್‌ಕೀ ಬಾತ್‌ನಲ್ಲಿ ಖಾದಿ ಪರವಾಗಿ ಮಾತನಾಡಿದ್ದು, ಎಲ್ಲರೂ ಖಾದಿಯನ್ನೇ ಧರಿಸಿ ನೇಕಾರರಿಗೆ ನೆರವು ನೀಡಬೇಕೆಂದು ಕೇಳಿಕೊಂಡಿದ್ದರು.