Advertisement

ಉನ್ನತ ಶಿಕ್ಷಣ ಸಂಸ್ಥೆ, ವಿವಿಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ನಿಷೇಧ

08:24 AM May 20, 2018 | |

ಹೊಸದಿಲ್ಲಿ: ಇನ್ನು ಮುಂದೆ ದೇಶದ ಯಾವುದೇ ವಿಶ್ವವಿದ್ಯಾನಿಲಯ ಹಾಗೂ ಕ್ಯಾಂಪಸ್‌ಗಳಲ್ಲಿ ಪ್ಲಾಸ್ಟಿಕ್‌ನ ವಸ್ತುಗಳನ್ನು ಬಳಸುವಂತಿಲ್ಲ. ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಇಂತಹದೊಂದು ನಿರ್ದೇಶನ ವನ್ನು ಯುಜಿಸಿ ನೀಡಿದೆ. ಪ್ಲಾಸ್ಟಿಕ್‌ ಬಾಟಲ್‌ಗ‌ಳು, ಕಪ್‌ಗಳು, ಆಹಾರ ಸಾಮಗ್ರಿ ಕಟ್ಟಿ ತರುವ ಪ್ಲಾಸ್ಟಿಕ್‌ ಲಕೋಟೆಗಳು, ಸ್ಟ್ರಾ, ಬಾಟಲಿ ಗಳನ್ನು ಬಳಕೆ ಮಾಡದಂತೆ ನಿಷೇಧ ಹೇರಲು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ನಿರ್ದೇಶನ ನೀಡಿದೆ.

Advertisement

ವಿಶ್ವ ಪರಿಸರ ದಿನ ಆಚರಿಸುವ ಬಗ್ಗೆ ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿರುವ ನಿರ್ದೇಶನವನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷ ಭಾರತದಲ್ಲಿಯೇ ವಿಶ್ವಸಂಸ್ಥೆ ನೇತೃತ್ವದಲ್ಲಿ ವಿಶ್ವ ಪರಿಸರ ದಿನ ಆಚರಿಸುವ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅದಕ್ಕೆ “ಪ್ಲಾಸ್ಟಿಕ್‌ ಮಾಲಿನ್ಯ ತಡೆಯಿರಿ’ ಎಂಬ ಘೋಷ ವಾಕ್ಯ ರೂಪಿಸಲಾಗಿದೆ. ಅದಕ್ಕೆ ಅನುಸಾರವಾಗಿ ಪ್ಲಾಸ್ಟಿಕ್‌ ಕಾಫಿ ಕಪ್‌, ಮಗ್‌, ಕೈಚೀಲ, ಆಹಾರ ಪೊಟ್ಟಣಗಳ ಬಳಕೆ ಮೇಲೆ ನಿಷೇಧ ಹೇರಬೇಕು ಎಂದು ಯುಜಿಸಿ ಎಲ್ಲ ಉನ್ನತ ಶಿಕ್ಷಣ ಮತ್ತು ವಿವಿಗಳಿಗೆ ನಿರ್ದೇಶನ ನೀಡಿದೆ. ಜತೆಗೆ, ಸ್ವತ್ಛತೆ ಕಾಪಾಡುವ ಹಾಗೂ ತ್ಯಾಜ್ಯ ವಿಲೇವಾರಿಯ ಕುರಿತು ಜಾಗೃತಿ ಮೂಡಿಸುವಂತೆಯೂ ಸೂಚಿಸಿದೆ.

ಏಕಕಾಲಕ್ಕೆ ಬಳಸುವ ಎಲ್ಲ ರೀತಿಯ ಪ್ಲಾಸ್ಟಿಕ್‌, ಪಾಲಿಸ್ಟರ್‌ ಫೋಮ್‌ ವಸ್ತುಗಳ ಬಳಕೆಯನ್ನು ಪೂರ್ತಿಯಾಗಿ ನಿಲ್ಲಿಸಬೇಕು. ಸ್ವತ್ಛ ಭಾರತ ಅಭಿಯಾನದಡಿ ಪ್ಲಾಸ್ಟಿಕ್‌ ನಿರ್ಮೂಲನೆಯ ಜಾಗೃತಿ ಮೂಡಿಸಬೇಕು. ಸಾರ್ವಜನಿಕರಿಗೆ ಮಾಹಿತಿ ನೀಡಲು ವಿವಿಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕು ಎಂದೂ ನಿರ್ದೇಶನದಲ್ಲಿ ತಿಳಿಸಲಾಗಿದೆ. ಶಾಲೆಗಳ ಪರಿಸರದಲ್ಲಿಯೂ ಪ್ಲಾಸ್ಟಿಕ್‌ ನಿಷೇಧಿಸುವ ಕುರಿತಂತೆ ಕ್ರಮ ವಹಿಸಬೇಕೆಂದು ಸಚಿವಾಲಯ ಸೂಚಿಸಿದೆ.

ನದಿ ಬದಿ ಸ್ವಚ್ಛತೆಗೆ ತಂಡ
ದೇಶದಲ್ಲಿನ ಬೀಚ್‌, ನದಿ ಮತ್ತು ಕೆರೆಗಳ ಸ್ವಚ್ಛತೆಗೂ ಪರಿಸರ ಸಚಿವಾಲಯ ನಿರ್ಧರಿಸಿದ್ದು, ಅದರ ಜಾರಿಗಾಗಿ ತಂಡ ರಚಿಸಿದೆ. ಮಲಿನಗೊಂಡಿರುವ ದೇಶದ 24 ಬೀಚ್‌ ಹಾಗೂ 24 ನದಿ ಮತ್ತು ಕೆರೆಗಳ ಸ್ವತ್ಛತೆಗಾಗಿ 19 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳ ನೇತೃತ್ವದಲ್ಲಿ ಇಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next