Advertisement

ಏಕಕಾಲಕ್ಕೆ ಅವಳಿ ಪದವಿ! ಪ್ರಸಕ್ತ ಶಿಕ್ಷಣ ವರ್ಷದಿಂದಲೇ ಜಾರಿ

09:06 PM Apr 12, 2022 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಪದವಿಗಳನ್ನು ಪಡೆಯಬಹುದು. 2022-23ನೇ ಶೈಕ್ಷಣಿಕ ವರ್ಷದಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಯುಜಿಸಿ ಮಂಗಳವಾರ ಪ್ರಕಟಿಸಿದೆ.

Advertisement

ಒಂದು ಪದವಿಯನ್ನು ಒಂದು ವಿ.ವಿ.ಯಿಂದ, ಮತ್ತೂಂದು ಪದವಿಯನ್ನು ಇನ್ನೊಂದು ವಿ.ವಿ.ಯಿಂದಲೂ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಯುಜಿಸಿ ಅಧ್ಯಕ್ಷ ಪ್ರೊ| ಎಂ. ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರವಾಗಿ ಹೊಸ ನಿರ್ಧಾರ ಜಾರಿಗೊಳ್ಳುತ್ತಿದೆ. 2020ರಲ್ಲಿಯೇ ಏಕಕಾಲದಲ್ಲಿ ಎರಡು ಪದವಿಗಳಿಗೆ ನೋಂದಣಿ ಮಾಡಿಕೊಳ್ಳುವ ಅವಕಾಶ ಜಾರಿಗೊಳಿಸಲು ಉದ್ದೇಶಿಸಲಾಗಿದ್ದರೂ ಅದು ಜಾರಿಯಾಗಿರಲಿಲ್ಲ.

ಹೇಗಿರಲಿದೆ ಹೊಸ ನಿಯಮ?
ಯಾವನೇ ಒಬ್ಬ ವಿದ್ಯಾರ್ಥಿಗೆ ಎರಡು ಪದವಿ, ಎರಡು ಸ್ನಾತಕೋತ್ತರ, ಎರಡು ಡಿಪ್ಲೊಮಾ ಕೋರ್ಸ್‌ಗಳಿಗೆ ನೋದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಒಂದಕ್ಕೆ ತರಗತಿಗೆ ಹಾಜರಾಗಿ, ಮತ್ತೂಂದನ್ನು ಆನ್‌ಲೈನ್‌ ಮೂಲಕ ಅಥವಾ ಎರಡು ಕೋರ್ಸ್‌ಗಳನ್ನು ಆನ್‌ಲೈನ್‌ ಮೂಲಕ -ಹೀಗೆ ಎರಡೂ ಕೋರ್ಸ್‌ಗಳನ್ನು ಪೂರ್ತಿಗೊಳಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌ ಹೇಳಿದ್ದಾರೆ.

ತಾಂತ್ರಿಕ ಕೋರ್ಸ್‌ಗಳಿಗೆ ಇಲ್ಲ
ಸದ್ಯ ಏಕಕಾಲದಲ್ಲಿ ಪದವಿ ಪಡೆಯುವ ಅವಕಾಶವನ್ನು ಕೇವಲ ತಾಂತ್ರಿಕೇತರ ಕೋರ್ಸ್‌ಗಳಿಗೆ ನೀಡಲಾಗಿದೆ. ಮಾನವಿಕ, ವಿಜ್ಞಾನ ಮತ್ತು ವಾಣಿಜ್ಯ ನಿಕಾಯಗಳ ಯಾವುದೇ ವಿಷಯಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ವಿದ್ಯಾರ್ಥಿಗೆ ಆಯ್ಕೆ ಮಾಡಿ ಅಧ್ಯಯನ ಮಾಡಬಹುದು. ವಿದ್ಯಾರ್ಥಿ ಹೊಂದಿರುವ ಶೈಕ್ಷಣಿಕ ಅರ್ಹತೆ ಮತ್ತು ಆಯಾ ಕಾಲೇಜು ಅಥವಾ ವಿ.ವಿ.ಗಳಲ್ಲಿ ಲಭ್ಯವಿರುವ ಕೋರ್ಸ್‌ಗಳ ಆಧಾರದಲ್ಲಿ ಪ್ರವೇಶ ನೀಡಲಾಗುತ್ತದೆ. ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್‌ಗಳನ್ನು ಸಮ್ಮಿಳನಗೊಳಿಸಿ ಏಕಕಾಲಕ್ಕೆ ಪದವಿ ಪಡೆಯುವುದು ಅಸಾಧ್ಯ ಎಂದು ಯುಜಿಸಿ ಅಧ್ಯಕ್ಷರು ಹೇಳಿದ್ದಾರೆ.

ಬಿ.ಕಾಂ.ಗೆ ನೋಂದಣಿ ಮಾಡಿರುವ ವಿದ್ಯಾರ್ಥಿ ಗಣಿತದಲ್ಲಿಯೂ ಪದವಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಆತನಿಗೆ ಅದಕ್ಕೆ ಅರ್ಹತೆ ಇರಬೇಕು. ವಿದ್ಯಾರ್ಥಿಗಳಿಗೆ ಸುಲಭ ರೀತಿಯಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ಅವಕಾಶ ಮಾಡಿಕೊಡುವುದೇ ಈ ಯೋಜನೆಯ ಉದ್ದೇಶ ಎಂದು ಪ್ರೊ| ಜಗದೀಶ್‌ ಕುಮಾರ್‌ ಹೇಳಿದ್ದಾರೆ. ಈ ಬಗ್ಗೆ ಸಮಗ್ರ ನಿಯಮಗಳನ್ನು ಬುಧವಾರ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.

Advertisement

ಕಡ್ಡಾಯವಲ್ಲ
ಏಕಕಾಲದಲ್ಲಿ ಪದವಿ ಪಡೆಯುವ ವಿಚಾರದಲ್ಲಿ ಯುಜಿಸಿ ಹೊರಡಿಸುವ ನಿಯಮಗಳನ್ನು ವಿ.ವಿ.ಗಳು ಅಥವಾ ಶಿಕ್ಷಣ ಸಂಸ್ಥೆ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿಲ್ಲ. ಆದರೆ ದೇಶದ ಹೆಚ್ಚಿನ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಎರಡು ಕೋರ್ಸ್‌ಗಳನ್ನು ಪೂರ್ತಿಗೊಳಿಸಲು ಅವಕಾಶ ನೀಡುವ ವಿಶ್ವಾಸ ಇದೆ ಎಂದರು. ಪ್ರತಿ ವಿವಿ ಮತ್ತು ಶಿಕ್ಷಣ ಸಂಸ್ಥೆ ಪದವಿಗೆ ಅರ್ಹತೆ ನಿಗದಿ ಮಾಡುವ ಅಧಿಕಾರ ಹೊಂದಿದೆ ಎಂದು ಪ್ರೊ| ಜಗದೀಶ್‌ ಕುಮಾರ್‌ ಹೇಳಿದ್ದಾರೆ. ಒಂದು ವೇಳೆ ವಿ.ವಿ.ಗಳಲ್ಲಿ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಕಾಮನ್‌ ಯುನಿವರ್ಸಿಟಿ ಎಂಟ್ರೆನ್ಸ್‌ ಟೆಸ್ಟ್‌ ಬರೆಯಬೇಕು ಎಂಬ ನಿಯಮ ರೂಪಿಸುವುದಿದ್ದರೆ, ಅದಕ್ಕೆ ವಿದ್ಯಾರ್ಥಿಗಳು ಉತ್ತರಿಸಬೇಕಾಗುತ್ತದೆ ಎಂದು ಪ್ರೊ| ಜಗದೀಶ್‌ ಕುಮಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next