Advertisement

ಯುಗಾದಿ ಸ್ಪೆಷಲ್‌

08:59 PM Apr 04, 2019 | mahesh |

ಯುಗಾದಿ ಹಬ್ಬ ಮತ್ತೆ ಬಂದಿದೆ. ಯುಗಾದಿ ಹಬ್ಬದೂಟಕ್ಕೆ ತಯಾರಿಸಬಹುದಾದ ಕೆಲವು ವಿಶೇಷ ಅಡುಗೆಗಳು ಇಲ್ಲಿವೆ.

Advertisement

ಮೂಟೆ ಕೊಟ್ಟಿಗೆ
ಬೇಕಾಗುವ ಸಾಮಗ್ರಿ: 1 ಕಪ್‌ ಬೆಳ್ತಿಗೆ ಅಕ್ಕಿ, 2 ಕಪ್‌ ಕುಚ್ಚಲಕ್ಕಿ, ಒಂದೂವರೆ ಕಪ್‌ ಉದ್ದಿನಬೇಳೆ, ರುಚಿಗೆ ತಕ್ಕಷ್ಟು ಉಪ್ಪು , 10-12 ಬಾಳೆಲೆ.

ತಯಾರಿಸುವ ವಿಧಾನ: ಬೆಳ್ತಿಗೆ ಅಕ್ಕಿ, ಕುಚ್ಚಲಕ್ಕಿ 6 ಗಂಟೆ ನೆನೆಸಿ. ಉದ್ದಿನಬೇಳೆ ಪ್ರತ್ಯೇಕವಾಗಿ ನೆನೆಸಿ. ನಂತರ ಉದ್ದಿನಬೇಳೆ ತೊಳೆದು ನುಣ್ಣಗೆ ರುಬ್ಬಿ. ಬೆಳ್ತಿಗೆ ಅಕ್ಕಿ, ಕುಚ್ಚಲಕ್ಕಿ ತೊಳೆದು ಸ್ವಲ್ಪ ನೀರು ಸೇರಿಸಿ ತರಿ ತರಿಯಾಗಿ ರುಬ್ಬಿ. ನಂತರ ರುಬ್ಬಿದ ಅಕ್ಕಿ ಮಿಶ್ರಣ, ಉದ್ದಿನಹಿಟ್ಟು ಬೆರೆಸಿ ಉಪ್ಪು ಹಾಕಿ ಕಲಸಿ ಮುಚ್ಚಿಡಿ. ಹಿಟ್ಟು ಇಡ್ಲಿ ಹಿಟ್ಟಿನ ಹದಕ್ಕಿರಲಿ. ಮಾರನೆ ದಿನ ಬಾಡಿಸಿ ಸುರುಳಿಯಾಗಿ ಸುತ್ತಿದ ಬಾಳೆಲೆಯಲ್ಲಿ ಹಿಟ್ಟು ಹಾಕಿ ಮೇಲಿನ ತುದಿಯನ್ನು ಬಾಳೆನಾರಿನಿಂದ ಬಿಗಿದು ಕಟ್ಟಿ ಉಗಿ ಪಾತ್ರೆಯಲ್ಲಿಟ್ಟು ಒಂದು ಗಂಟೆ ಬೇಯಿಸಿ. ಬಾಳೆಲೆಯಲ್ಲಿ ಮಾಡುವುದರಿಂದ ಪರಿಮಳ ಮತ್ತು ಸ್ವಾದ ಚೆನ್ನಾಗಿರುತ್ತದೆ. ತೆಂಗಿನಕಾಯಿ ಚಟ್ನಿ, ಮೆಂತೆಕಾಳು ಸಾಂಬಾರಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

ಹಸಿ ಗೇರುಬೀಜದ ಪಾಯಸ
ಬೇಕಾಗುವ ಸಾಮಗ್ರಿ: 2 ಕಪ್‌ ಸಿಪ್ಪೆ ತೆಗೆದ ಎಳೆ ಗೇರುಬೀಜ, 1/4 ಕೆಜಿ ಬೆಲ್ಲ, 1/2 ಕಪ್‌ ಅಕ್ಕಿಹಿಟ್ಟು , 1 ಚಮಚ ಏಲಕ್ಕಿ ಪುಡಿ, 1 ತೆಂಗಿನಕಾಯಿ ಹಾಲು, ಚಿಟಿಕೆ ಉಪ್ಪು.

ತಯಾರಿಸುವ ವಿಧಾನ: ಗೇರುಬೀಜವನ್ನು ಕುದಿಯುವ ಬಿಸಿನೀರಲ್ಲಿ ಹಾಕಿ ಮುಚ್ಚಿಟ್ಟು , ನಂತರ ಸಿಪ್ಪೆ ತೆಗೆಯಿರಿ. ನಂತರ ನೀರು ಹಾಕಿ ಗೇರುಬೀಜವನ್ನು ಮೆತ್ತಗೆ ಬೇಯಿಸಿ. ನಂತರ ಬೆಲ್ಲ ಹಾಕಿ. ಬೆಲ್ಲ ಕರಗಿದ ನಂತರ ಕಾಯಿಹಾಲನ್ನು ಹಾಕಿ ಕುದಿಸಿ. ನಂತರ ರುಬ್ಬಿಟ್ಟ ಅಕ್ಕಿಹಿಟ್ಟನ್ನು ಹಾಕಿ ಮಗುಚಿ. ಇದು ಪಾಯಸದ ಹದಕ್ಕೆ ಬರುವಾಗ ಬೇಕಷ್ಟು ದಪ್ಪ ಕಾಯಿಹಾಲು, ಏಲಕ್ಕಿ ಪುಡಿ ಹಾಕಿ ಸರಿಯಾಗಿ ತೊಳಸಿ ಒಲೆಯಿಂದ ಕೆಳಗಿಳಿಸಿ. ಈ ಪಾಯಸ ತಿನ್ನಲು ತುಂಬಾ ರುಚಿಯಾಗಿರುತ್ತದೆ.

Advertisement

ತೆಂಗಿನಹಾಲಿನ ಮೈಸೂರುಪಾಕ್‌
ಬೇಕಾಗುವ ಸಾಮಗ್ರಿ: 3 ಕಪ್‌ ನುಣ್ಣಗೆ ರುಬ್ಬಿ ಸೋಸಿದ ತೆಂಗಿನಹಾಲು, ಒಂದೂವರೆ ಕಪ್‌ ಹುರಿದ ಕಡಲೆಹಿಟ್ಟು , 3 ಕಪ್‌ ಸಕ್ಕರೆ, 1 ಚಮಚ ತುಪ್ಪ.

ತಯಾರಿಸುವ ವಿಧಾನ: ಒಲೆಯ ಮೇಲೆ ಒಂದು ಪಾತ್ರೆಯಿಟ್ಟು ತೆಂಗಿನಹಾಲು ಹಾಕಿ ಕುದಿಸಿ. ಹಾಲು ಸ್ವಲ್ಪ ಗಟ್ಟಿಯಾಗಿರಲಿ. ಬೇರೆ ಪಾತ್ರೆಯಲ್ಲಿ ಸಕ್ಕರೆ, ನೀರು ಸ್ವಲ್ಪ ಹಾಕಿ ಕರಗಿಸಿ. ಸಕ್ಕರೆ ಕರಗಿ ಎಳೆ ಪಾಕವಾದಾಗ ತೆಂಗಿನ ಹಾಲು ಹಾಕಿ ಸ್ವಲ್ಪ ತೊಳಸಿ. ನಂತರ ಹುರಿದ ಕಡ್ಲೆಹಿಟ್ಟು ಹಾಕಿ ತೊಳಸಿ. ಮಿಶ್ರಣ ಗಟ್ಟಿಗೊಳ್ಳುತ್ತ ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ. ಬಿಸಿಯಿರುವಾಗಲೇ ತುಂಡು ಮಾಡಿ. ತುಪ್ಪ ಇಲ್ಲದೆ ಮಾಡುವ ರುಚಿಯಾದ ಮೈಸೂರುಪಾಕ್‌ ಈಗ ಸವಿಯಲು ಸಿದ್ಧ.

ಎಳ್ಳಿನ ಒಬ್ಬಟ್ಟು
ಬೇಕಾಗುವ ಸಾಮಗ್ರಿ: 1 ಕಪ್‌ ಬಿಳಿ ಎಳ್ಳು , 1/4 ಕಪ್‌ ತೆಂಗಿನತುರಿ, 1/2 ಕಪ್‌ ಬೆಲ್ಲ, 2-3 ಚಮಚ ಹುರಿಗಡಲೆ ಹಿಟ್ಟು, 2 ಚಮಚ ಅಕ್ಕಿಹಿಟ್ಟು , 1 ಕಪ್‌ ಮೈದಾ, 1/4 ಕಪ್‌ ಚಿರೋಟಿ ರವೆ, 2-3 ಚಮಚ ಎಣ್ಣೆ.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಎಳ್ಳು ಹಾಕಿ ಹದವಾಗಿ ಹುರಿಯಿರಿ. ಹುರಿದ ಎಳ್ಳನ್ನು ಮಿಕ್ಸಿಗೆ ಹಾಕಿ ಸ್ವಲ್ಪ ರುಬ್ಬಿ. ಅರ್ಧ ನುಣ್ಣಗಾದ ನಂತರ ಕಾಯಿತುರಿ ಹಾಕಿ ಇನ್ನೊಮ್ಮೆ ತಿರುಗಿಸಿ. ಒಲೆಯ ಮೇಲೆ ಪಾತ್ರೆಯಿಟ್ಟು ಬೆಲ್ಲ, ಸ್ವಲ್ಪ ನೀರು ಸೇರಿಸಿ ಎಳೆಪಾಕ ಮಾಡಿ. ಪಾಕ ಸ್ವಲ್ಪ ಅಂಟು ಬಂದಾಗ ಅದಕ್ಕೆ ರುಬ್ಬಿದ ಎಳ್ಳುಕಾಯಿ ಮಿಶ್ರಣ ಹಾಕಿ ತೊಳಸಿ. ನಂತರ ಕೆಳಗಿಳಿಸಿ ಉಂಡೆ ಮಾಡಿ. ಮೈದಾಹಿಟ್ಟು , ಚಿರೋಟಿ ರವೆ, ಎಣ್ಣೆ , ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿಗಿಂತ ತೆಳ್ಳಗೆ ಕಲಸಿ 2 ಗಂಟೆ ಇಡಿ. ನಂತರ ಉಂಡೆ ಮಾಡಿ ಸ್ವಲ್ಪ ಲಟ್ಟಿಸಿ ಎಳ್ಳಿನ ಮಿಶ್ರಣ ಇಟ್ಟು ಮುಚ್ಚಿ ಲಟ್ಟಿಸಿ. ನಂತರ ತವಾಕ್ಕೆ ಸ್ವಲ್ಪ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಈಗ ಆರೋಗ್ಯಕರ ಎಳ್ಳಿನ ಒಬ್ಬಟ್ಟು ಸವಿಯಲು ಸಿದ್ಧ.

ಕಾರ್ನ್ಪ್ಲೇಕಸ್‌ ಲಾಡು
ಬೇಕಾಗುವ ಸಾಮಗ್ರಿ: 1 ಕಪ್‌ ಕಾರ್ನ್ಪ್ಲೇಕಸ್‌, 1/2 ಕಪ್‌ ಗೋಧಿಹಿಟ್ಟು , 1/2 ಕಪ್‌ ಕಡಲೆಹಿಟ್ಟು , 1/2 ಕಪ್‌ ತುಪ್ಪ , 1/2 ಕಪ್‌ ಕೊಬ್ಬರಿ ತುರಿ, ಒಂದೂವರೆ ಕಪ್‌ ಸಕ್ಕರೆ ಪುಡಿ, 8-10 ಗೋಡಂಬಿ, 10-12 ಒಣದ್ರಾಕ್ಷೆ , 1/4 ಚಮಚ ಏಲಕ್ಕಿ ಪುಡಿ.

ತಯಾರಿಸುವ ವಿಧಾನ: ಸಕ್ಕರೆ, ಏಲಕ್ಕಿ ಪುಡಿ ಮಾಡಿ. ಕಾರ್ನ್ಪ್ಲೇಕಸ್‌ ಸ್ವಲ್ಪ ಹುರಿದು ತರಿ ತರಿಯಾಗಿ ಪುಡಿ ಮಾಡಿ. ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಕೊಬ್ಬರಿ ತುರಿ, ಗೋಡಂಬಿ, ದ್ರಾಕ್ಷೆ ಇವನ್ನು ಬೇರೆ ಬೇರೆ ಹುರಿದು ಕೆಳಗಿಳಿಸಿ. ನಂತರ ಇದೇ ಬಾಣಲೆಗೆ ತುಪ್ಪ ಹಾಕಿ. ಬಿಸಿಯಾದಾಗ ಗೋಧಿಪುಡಿ, ಕಡಲೆಹಿಟ್ಟು ಬೇರೆ ಬೇರೆಯಾಗಿ ಹಸಿ ವಾಸನೆ ಹೋಗುವವರೆಗೆ ಹುರಿದಿಡಿ. ನಂತರ ಒಂದು ಪಾತ್ರೆಗೆ ಈ ಎಲ್ಲಾ ಮಿಶ್ರಣ ಹಾಕಿ ಚೆನ್ನಾಗಿ ಬೆರೆಸಿ. ನಂತರ ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಕಲಸಿ. ಸ್ವಲ್ಪ ತುಪ್ಪ ಸೇರಿಸಿ ಉಂಡೆ ಕಟ್ಟಿ. ಈಗ ರುಚಿಯಾದ ಲಾಡು ಸವಿಯಲು ಸಿದ್ಧ.

ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next