Advertisement

ಮಲೆನಾಡು- ಬೆಂಗಾಲಿ ಬೆರೆತರೆ ಯುಗಾದಿ

11:51 AM Apr 08, 2019 | mahesh |

ಬೆಂಗಾಲಿಯಲ್ಲಿ ಶುಭೊ ನಬಬರ್ಷೋ ಎಂದರೆ ಹ್ಯಾಪಿ ನ್ಯೂ ಇಯರ್‌! ಮೊದಲ ಯುಗಾದಿ ಆಚರಿಸಿಕೊಳ್ಳುತ್ತಿರುವ ದಿಗಂತ್‌- ಐಂದ್ರಿತಾ ಉತ್ಸುಕರಾಗಿದ್ದಾರೆ. ದಿಗಂತ್‌ ತಮ್ಮ ಮೊದಲ ಯುಗಾದಿ ಆಚರಣೆಯ ಕುರಿತು ಇಲ್ಲಿ ಮಾತನಾಡಿದ್ದಾರೆ. ಜತೆಗೆ ಅವರಿಷ್ಟದ ಖಾದ್ಯದ ರೆಸಿಪಿಯನ್ನೂ ನೀಡಿದ್ದೇವೆ…

Advertisement

ಹೊಸ ವರ್ಷವನ್ನು ಸ್ನೇಹಿತರೊಡಗೂಡಿ ಧಾಂಧೂಂ ಎಂದು ಆಚರಿಸುತ್ತೇವೆ. ಈ ವಿಚಾರದಲ್ಲಿ ಪಾಶ್ಚಾತ್ಯರಿಗೆ ಹೋಲಿಸಿದರೆ ಭಾರತೀಯರು ಅದೃಷ್ಟವಂತರೇ ಸರಿ. ಅದೇಕೆ ಎಂದರೆ ವಿದೇಶಿಯರು ಡಿಸೆಂಬರ್‌ ತಿಂಗಳ 31ನೇ ತಾರೀಖು ರಾತ್ರಿ ಮಾತ್ರ ಆಚರಿಸಿಕೊಳ್ಳುತ್ತಾರೆ. ಆದರೆ, ನಾವು ಎರಡೆರಡು ಬಾರಿ ಆಚರಿಸಿಕೊಳ್ಳುತ್ತೇವೆ. ಡಿಸೆಂಬರ್‌ನ ಕಡೆಯ ದಿನ ಮನೆ ಮಂದಿ ಜತೆ ಕೇಕ್‌ ಕಟ್‌ ಮಾಡಿಯೋ, ಅಥವಾ ಸ್ನೇಹಿತರ ಜತೆ ಪಾರ್ಟಿ ಮಾಡುತ್ತಲೋ ಆಚರಿಸುತ್ತೇವೆ. ನಂತರ ಇನ್ನೊಂದು ಬಾರಿ ಯುಗಾದಿ ಹಬ್ಬದಂದು ಹೊಸವರ್ಷವನ್ನು ಆಚರಿಸುತ್ತೇವೆ. ಮೊದಲನೆಯದ್ದು ಪಾಶ್ಚಾತ್ಯ ಪ್ರಕಾರವಾದರೆ, ಎರಡನೆಯದ್ದು ಶಾಸ್ತ್ರಪ್ರಕಾರವಾಗಿ! ಯುಗಾದಿ ಎಲ್ಲರಿಗೂ ಸಂಭ್ರಮ ಸಡಗರದ ಹಬ್ಬವೇನೋ ಹೌದು, ಅದರಲ್ಲೂ ಮೊದಲ ಬಾರಿ ಯುಗಾದಿಯನ್ನು ಗಂಡನ ಮನೆಯಲ್ಲಿ ಆಚರಿಸುತ್ತಿರುವ ಪತ್ನಿಯ ಸಂಭ್ರಮ ಅದಕ್ಕೂ ಮಿಗಿಲಾದದ್ದು. ಅದಕ್ಕೆ ಕಾರಣ ಮೊದಲ ಬಾರಿಯ ತವಕ ತಲ್ಲಣ, ಕಾತರತೆ. ಹಾಗೆ ಮದುವೆ ನಂತರ ಮೊದಲ ಯುಗಾದಿ ಆಚರಿಸಿಕೊಳ್ಳುತ್ತಿರುವ ಸೆಲೆಬ್ರಿಟಿಗಳಲ್ಲಿ ದಿಗಂತ್‌- ಐಂದ್ರಿತಾ ದಂಪತಿಯೂ ಇದ್ದಾರೆ.

ದೂದ್‌ಪೇಡಾ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ದಿಗಂತ್‌ ಮಲೆನಾಡಿನ ಹುಡುಗ, ಐಂದ್ರಿತಾ ಬೆಂಗಾಲಿ ಹುಡುಗಿ. ಪೂರ್ವ ಮತ್ತು ದಕ್ಷಿಣ ಎರಡೂ ಮಿಳಿತಗೊಂಡಿರುವ ಈ ಸಂಬಂಧದಲ್ಲಿ ನಿಜವಾದ ಸಾಂಸ್ಕೃತಿಕ ವಿನಿಮಯಕ್ಕೆ ಈ ಬಾರಿಯ ಯುಗಾದಿ ನಾಂದಿ ಹಾಡುತ್ತಿರುವುದು ವಿಶೇಷ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಬೆಂಗಾಲಿಯರಲ್ಲಿ ಹಬ್ಬದ ಆಚರಣೆಗಳ ಕುರಿತು ಹೆಚ್ಚಿನದ್ದೇನನ್ನೂ ಹೇಳುವ ಅಗತ್ಯವಿಲ್ಲ. ಅಲ್ಲಿ ದುರ್ಗಾ ಪೂಜೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎನ್ನುವುದು ಬಹುತೇಕರಿಗೆ ತಿಳಿದೇ ಇರುತ್ತದೆ. ನಾವು ಯುಗಾದಿ ಆಚರಿಸುವ ಸಂದರ್ಭದಲ್ಲಿ ಬೆಂಗಾಲಿಯರು ಯಾವುದೇ ಹಬ್ಬವನ್ನು ಆಚರಿಸುವುದಿಲ್ಲವಾದರೂ ಏಪ್ರಿಲ್‌ 14ರಂದು “ಪಾಹೆಲಾ ಬೈಶಾಖ್‌’ ಎಂಬ ಹಬ್ಬವನ್ನು ಆಚರಿಸುತ್ತಾರೆ. ಅವರಿಗೆ ಅದೇ ಯುಗಾದಿ. ಆ ದಿನದಂದು ಬೆಂಗಾಲಿಯರು “ಶುಭೊ ನಬಬರ್ಷೋ’ ಎಂದು ಒಬ್ಬರಿಗೊಬ್ಬರು ಶುಭಾಶಯ ಕೋರುತ್ತಾರೆ. ಅದರರ್ಥ “ಹ್ಯಾಪಿ ನ್ಯೂ ಇಯರ್‌’ ಎಂದು.

ದಿಗಂತ್‌ ಯುಗಾದಿ ಹಬ್ಬ ಆಚರಿಸುವುದು ಸಾಗರದ ಅಜ್ಜನ ಮನೆಯಲ್ಲಿ. ನೆಂಟರಿಷ್ಟರೆಲ್ಲಾ ಎಂದಿನಿಂದಲೂ ಯುಗಾದಿಯನ್ನು ಅಲ್ಲಿಯೇ ಆಚರಿಸುವುದು ವಾಡಿಕೆಯಂತೆ. ಈಗ ಅಜ್ಜ ಇಲ್ಲ, ಯುಗಾದಿ ಆಚರಣೆ ಮಾತ್ರ ತಪ್ಪದೆ ನಡೆದುಕೊಂಡು ಬಂದಿದೆ. ಆಚರಣೆ. ಈ ಚಿಕ್ಕಪ್ಪ, ದೊಡ್ಡಪ್ಪಂದಿರು, ಅತ್ತಿಗೆಯರು, ಸಹೋದರರು ಹೀಗೆ ಒಂದಿಡೀ ಬಳಗವೇ ಅಲ್ಲಿ ನೆರೆಯುತ್ತದೆ. ದಿಗಂತ್‌ ಈ ಬಾರಿ ಪತ್ನಿಯೊಂದಿಗೆ ಹಾಜರಾಗುತ್ತಿರುವುದರಿಂದ ಅಜ್ಜನ ಮನೆಯ ಯುಗಾದಿಗೆ ಈ ಬಾರಿ ಕಳೆ ಹೆಚ್ಚಿದೆ.

ಅಂದಹಾಗೆ, ದಿಗಂತ್‌ ಅಜ್ಜನ ಮನೆಗೆ ಹೋಗುವುದನ್ನೇ ಇದಿರು ನೋಡುತ್ತಿರುವುದಕ್ಕೆ ಹಬ್ಬ ಮಾತ್ರವೇ ಕಾರಣವಲ್ಲ, ಅಲ್ಲಿ ತಯಾರಾಗುವ ಮಲೆನಾಡಿನ ಸ್ವಾದಿಷ್ಟಕರ ತಿನಿಸುಗಳೂ ಕಾರಣ. ಅವರ ಫೇವರಿಟ್‌ ಸಿಹಿತಿನಿಸು “ತೊಡದೇವು’. ಅದನ್ನು ಸವಿಯಲಷ್ಟೇ ಅಲ್ಲ, ಅದರ ತಯಾರಿಯನ್ನು ನೋಡುವುದೇ ಒಂದು ಸೊಗಸು. ಹಿಂದೆಲ್ಲಾ ಕಟ್ಟಿಗೆ ಒಲೆಯಲ್ಲಿ ಮಣ್ಣಿನ ಮಡಕೆಯನ್ನು ಉಲ್ಟಾ ಮಾಡಿ ಅದರ ಮೇಲ್ಗಡೆ ಹಿಟ್ಟು ಹುಯ್ಯಲಾಗುತ್ತಿತ್ತು. ನೀರುದೋಸೆಯಂತಾಗುತ್ತಿದ್ದ ಹಿಟ್ಟನ್ನು ನಿದಾನವಾಗಿ ಎರೆದು ಎತ್ತುತ್ತಿದ್ದರು. ಇದರ ತಯಾರಿಗೆ ಕಬ್ಬಿನ ಹಾಲು ಅಥವಾ ಬೆಲ್ಲವನ್ನು ಬಳಸಲಾಗುತ್ತದೆ. ಈಗ ತೊಡದೆವು ತಯಾರಿಸಲು ಪಾತ್ರೆಗಳಿವೆ. ಸ್ಟವ್‌ ಉರಿಯಲ್ಲೇ ತಯಾರಿಸುವ ವ್ಯವಸ್ಥೆಯೂ ಬಂದಿದೆ.

Advertisement

ದಿಗಂತ್‌ರ ಅಡುಗೆಮನೆಯಲ್ಲಿ ಎರಡು ಪ್ರಯೋಗಶಾಲೆಗಳು ಪ್ರಾರಂಭವಾಗಿವೆ. ಒಂದರಲ್ಲಿ ದಿಗಂತ್‌ ತಾಯಿ ಬೆಂಗಾಲಿ ಅಡುಗೆಯನ್ನು ಕಲಿಯುತ್ತಿದ್ದರೆ, ಇನ್ನಂದು ಪ್ರಯೋಗಶಾಲೆಯಲ್ಲಿ ಐಂದ್ರಿತಾ ಮಲೆನಾಡಿನ ಅಡುಗೆಯನ್ನು ಕಲಿಯುತ್ತಿದ್ದಾರೆ. ಒಟ್ಟಿನಲ್ಲಿ ಆದಷ್ಟು ಬೇಗನೆ ದಿಗಂತ್‌ಗೆ ಎರಡೂ ಶೈಲಿಯ ಖಾದ್ಯಗಳನ್ನು ಸವಿಯುವ ಯೋಗಾಯೋಗ! ಪ್ರಾಯೋಗಿಕ ಹಂತದಲ್ಲಿರುವುದರಿಂದ ಈಗಲೇ ಹಬ್ಬದ ಅಡುಗೆಯನ್ನು ಮಾಡಲು ಹೇಳಿದರೆ ಐಂದ್ರಿತಾಗೂ ಮಾಡುವುದು ಕಷ್ಟ ಎನ್ನುವುದು ಅವರ ಕಾಳಜಿಯ ಮಾತು.

ಐಂದ್ರಿತಾ ನಾನು 9 ವರ್ಷಗಳಿಂದ ಜತೆಯಲ್ಲಿದ್ದೇವೆ. ಇದಕ್ಕೂ ಮುಂಚೆ ಬಹಳಷ್ಟು ಸಾರಿ ನಮ್ಮನೆಯ ಹಬ್ಬಗಳಿಗೆ ಅವಳನ್ನು ಕರೆದುಕೊಂಡು ಹೋಗಿದ್ದೇನೆ. ಹೀಗಾಗಿ, ಅಭ್ಯಾಸ ಪಂದ್ಯ ಮುಗಿದಿದೆ ಎನ್ನಬಹುದು. ಅವಳಿಗೆ ನಮ್ಮ ಕಡೆಯ ನೆಂಟರಿಷ್ಟರೆಲ್ಲಾ ಪರಿಚಯ, ಅವರಿಗೂ ಐಂದ್ರಿತಾ ಪರಿಚಯ. ಹೀಗಾಗಿ ಅವಳಿಗೆ ಈ ಯುಗಾದಿ ಹೊಸತೇನೂ ಅಲ್ಲ. ಆದರೆ, ಎಕ್ಸೆ„ಟ್‌ಮೆಂಟ್‌ ಅಂತೂ ಖಂಡಿತಾ ಇದೆ.
– ದಿಗಂತ್‌

ದಿಗಂತ್‌ ಮೆಚ್ಚಿದ ತೊಡದೇವು ರೆಸಿಪಿ

ಬೇಕಾಗುವ ಸಾಮಗ್ರಿ:
ಅಕ್ಕಿ, ಅರಿಶಿನ, ಬೆಲ್ಲ, ಶೇಂಗಾ ಎಣ್ಣೆ, ತೊಡದೇವು ಎರೆಯುವ ಮಡಕೆ, ಅಡಕೆ ಹಾಳೆಯ ತುಂಡು

ಮಾಡುವ ವಿಧಾನ:
ಹಿಂದಿನ ರಾತ್ರಿಯೇ ಅಕ್ಕಿಯನ್ನು ನೆನೆಸಿಡಿ. ಬೆಳಗ್ಗೆ ಮಿಕ್ಸಿಯಲ್ಲಿ ಹಾಕಿ ಬೆಲ್ಲದ ಜತೆ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಅದಕ್ಕೆ ಮುಕ್ಕಾಲು ಭಾಗದಷ್ಟು ಅಕ್ಕಿ ಹಿಟ್ಟು, ಸ್ವಲ್ಪ ಅರಿಶಿನ ಮಿಶ್ರಣ ಮಾಡಿ ದೋಸೆ ಹಿಟ್ಟಿನಂತೆ ಕಲಸಿಕೊಳ್ಳಬೇಕು.

ಇದನ್ನು ಬೇಯಿಸಲು ವಿಶೇಷ ವ್ಯವಸ್ಥೆ ಅಗತ್ಯ. ಸೌದೆ ಬೆಂಕಿಯ ಮೇಲೆ ತೊಡದೇವು ಮಡಕೆಯನ್ನು ಮಗುಚಿ ಇಡಬೇಕು. ಮೇಲೆ ಮುಖ ಮಾಡಿರುವ ಮಡಕೆಯ ತಳಕ್ಕೆ ಸೇಂಗಾ ಎಣ್ಣೆಯನ್ನು ಸವರಬೇಕು. ಮಡಕೆ ಕಾದ ನಂತರ ತೆಳ್ಳನೆಯ ಹಿಟ್ಟನ್ನು ಬಟ್ಟಲಿಗೆ ಹಾಕಿಕೊಂಡು ತೆಳುವಾದ ಬಟ್ಟೆಯನ್ನು ಕೋಲಿಗೆ ಕಟ್ಟಿಕೊಂಡು ಅದರಲ್ಲಿ ಹಿಟ್ಟನ್ನು ಅದ್ದಿ ಮಡಕೆ ಮೇಲೆ ಎರೆಯಬೇಕು. ಸ್ವಲ್ಪ ಹೊತ್ತಿನ ನಂತರ ತೊಡದೇವು ನೀರುದೋಸೆಯಂತೆ ನಿಧಾನವಾಗಿ ಒಣಗುತ್ತದೆ. ಅಡಕೆ ಹಾಳೆಯನ್ನು ಪುಟ್ಟದಾಗಿ ಕತ್ತರಿಸಿಕೊಂಡು ಅದರ ಸಹಾಯದಿಂದ ಗರಿಗರಿಯಾದ ತೊಡದೇವನ್ನು ಮೇಲೇಳಿಸಬೇಕು. ಆನಂತರ ತ್ರಿಕೋನಾಕೃತಿ ಬರುವಂತೆ ಮಡಚಿರಿ. ತುಪ್ಪ ಹಾಕಿ ತಿನ್ನಲು ಬಲು ರುಚಿ.

ಹವನ

Advertisement

Udayavani is now on Telegram. Click here to join our channel and stay updated with the latest news.

Next