Advertisement
ಅಂದು ಕಾಂಗ್ರೆಸ್ ಮತ್ತು ಬಿಜೆಪಿ ಸಾವಿರಾರು ಜನರ ಮೂಲಕ ಮೆರವಣಿಗೆ ನಡೆಸಿದ್ದು ಹೊರತುಪಡಿಸಿದರೆ ಉಳಿದಂತೆ ಕ್ಷೇತ್ರದಲ್ಲಿ ಪ್ರಚಾರದ ಕಾವು ಅಷ್ಟಾಗಿ ಏರಿಲ್ಲ. ಬಿಜೆಪಿ ಪರವಾಗಿ ಸೂಲಿಬೆಲೆ ಚಕ್ರವರ್ತಿ, ಕೇಂದ್ರ ಸಚಿವ ಸ್ಮತಿ ಇರಾನಿ, ಸಿ.ಟಿ.ರವಿ, ಅರವಿಂದ ಲಿಂಬಾವಳಿ ಪ್ರಚಾರ ಸಭೆಗಳನ್ನು ನಡೆಸಿ ಹೋಗಿದ್ದಾರೆ.
Related Articles
Advertisement
ಇದೀಗ ಸೋಮವಾರದಿಂದ ಪ್ರಚಾರವನ್ನು ಮತ್ತೂಂದು ಹಂತಕ್ಕೇರಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಸನ್ನದ್ಧವಾಗುತ್ತಿದೆ. ಇದುವರೆಗೂ ಮುಖಂಡರು ಹಾಗೂ ಕಾರ್ಯಕರ್ತರ ಮಟ್ಟದಲ್ಲಿದ್ದ ಪ್ರಚಾರವನ್ನು ಇನ್ನು ಮುಂದೆ ಜನಸಾಮಾನ್ಯರ ನಡುವಿಗೆ ತೆಗೆದುಕೊಂಡು ಹೋಗಲು ಎರಡೂ ಪಕ್ಷಗಳಲ್ಲಿ ತಯಾರಿ ನಡೆಯುತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ತಂಡಗಳನ್ನು ರಚಿಸುವ ಮೂಲಕ ಆಯಾ ಪ್ರಾಂತ್ಯದಲ್ಲಿ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಮನೆ ಮನೆಗೆ ಕರಪತ್ರಗಳನ್ನು ತಲುಪಿಸುವ ಕಾರ್ಯಕ್ರಮ ಇನ್ನು ಆರಂಭವಾಗಲಿದೆ. ಇನ್ನು ಉಳಿದಿರುವ ಹತ್ತು ದಿನಗಳಲ್ಲಿ ಅದಷ್ಟು ಜನರನ್ನು ತಲುಪುವ ಉದ್ದೇಶ ಕಾಂಗ್ರೆಸ್ ಬಿಜೆಪಿಗೆ ಇದೆ.
ಆದರೆ, ಕಾಂಗ್ರೆಸ್ ಪಕ್ಷಕ್ಕೆ ಇನ್ನು ಆಂತರಿಕ ಭಿನ್ನಮತ ಬಗೆಹರಿದಿಲ್ಲ. ಬಿಜೆಪಿಯು ಕಾಂಗ್ರೆಸ್ ಜೆಡಿಎಸ್ ಮುಖಂಡರನ್ನು ನೆಚ್ಚಿಕೊಂಡೇ ಪ್ರಚಾರವನ್ನು ಚುರುಕುಗೊಳಿಸಬೇಕಾಗಿದೆ. ಕಾಂಗ್ರೆಸ್ ಎದುರಿಸುತ್ತಿರುವ ಭಿನ್ನಮತ ಮತ್ತು ಇದೇ ಭಿನ್ನಮತೀಯರನ್ನು ಬಿಜೆಪಿ ನಂಬಿಕೊಂಡಿರುವುದರಿಂದ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಬಹಿರಂಗವಾಗಿ ಚುರುಕುಗೊಂಡಿಲ್ಲ.
ರಂಗೇರಿಲ್ಲ: ಕಾಂಗ್ರೆಸ್ ಮತ್ತು ಜೆಡಿಎಸ್ ಭಿನ್ನಮತೀಯರು ಸದ್ಯಕ್ಕೆ ಕೆ.ಎಚ್.ಮುನಿಯಪ್ಪರಿಗೆ ಮತ ಹಾಕಬೇಡಿ ಎಂದಷ್ಟೇ ಪ್ರಚಾರ ಮಾಡುತ್ತಿದ್ದಾರೆ, ಆದರೆ, ಈ ಮತವನ್ನು ಬಿಜೆಪಿಗೆ ಹಾಕಿ ಎಂದು ಹೇಳುತ್ತಿಲ್ಲವೆಂಬ ಕೊರಗು ಬಿಜೆಪಿಗಿದೆ.
ಇದೇ ಕಾರಣಕ್ಕಾಗಿ ಕೋಲಾರದ ಪ್ರಚಾರ ಕಣ ಬಹಿರಂಗವಾಗಿ ರಂಗೇರಲು ಸಾಧ್ಯವಾಗುತ್ತಿಲ್ಲ. ಇತರೇ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ಜೆಡಿಎಸ್ ಮುಗಿ ಬಿದ್ದು ಹೇಳಿಕೆ ಪ್ರತಿ ಹೇಳಿಕೆಗಳ ಮೂಲಕ ವ್ಯಾಗುದ್ಧ ನಡೆಯುತ್ತಿದ್ದರೆ,
ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯು ಇತರೇ ಪಕ್ಷದವರನ್ನೇ ನಂಬಿಕೊಂಡಿದ್ದಾರೆ. ಬಿಜೆಪಿಯು ಇತರೇ ಪಕ್ಷಗಳನ್ನೇ ನಂಬಿಕೊಂಡು ಪ್ರಚಾರಕ್ಕಿಳಿದಿರುವುದರಿಂದ ಇಲ್ಲಿ ಪಕ್ಷಾಧಾರಿತ ಪೈಪೋಟಿಯುಕ್ತ ಪ್ರಚಾರ ನಡೆಯುತ್ತಿಲ್ಲ. ಕೇವಲ ವ್ಯಕ್ತಿಗತ ಟೀಕೆಗಳ ಮೂಲಕ ಪ್ರಚಾರ ನಡೆಯುತ್ತಿದೆ.
ಇದುವರೆಗೂ ಕೋಲಾರ ಪ್ರಚಾರ ಕಣದಲ್ಲಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತಾನು ಗೆದ್ದರೆ ಕೋಲಾರ ಕ್ಷೇತ್ರವನ್ನು ಹೀಗೆ ಅಭಿವೃದ್ಧಿ ಮಾಡುತ್ತೇವೆ ಎಂದು ಯಾವುದೇ ಯೋಜನೆಯನ್ನಾಗಲಿ, ಕಾರ್ಯಕ್ರಮಗಳನ್ನಾಗಲಿ ಪ್ರಕಟಿಸಿ ಪ್ರಚಾರ ನಡೆಸುತ್ತಿಲ್ಲ.
ಏಳು ಅವಧಿಯಲ್ಲಿ ಕೆ.ಎಚ್.ಮುನಿಯಪ್ಪ ಮಾಡಿಕೊಂಡಿರುವ ಆಸ್ತಿಎಷ್ಟು, ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಮೇಲಿರುವ ಕ್ರಿಮಿನಲ್ ಮೊಕದ್ದಮೆಗಳೆಷ್ಟು, ಯಾವ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾರೆಂಬ ಕುರಿತೇ ಹೆಚ್ಚು ಪ್ರಚಾರ ನಡೆದಿದೆ.
ಒಟ್ಟಾರೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಯುಗಾದಿ ನಂತರ ಬಿರು ಬೇಸಿಗೆಯಲ್ಲಿಯೇ ಬೆವರು ಹರಿಸಿ ಪ್ರಚಾರ ನಡೆಸಲು ಮುಂದಾಗಿರುವುದರಿಂದ ಮುಂದಿನ ಹತ್ತು ದಿನಗಳ ಕಾಲ ಪ್ರಚಾರ ಭರಾಟೆ ಹೆಚ್ಚಬಹುದು ಎಂದು ನಿರೀಕ್ಷಿಸಲಾಗುತ್ತಿದೆ.