Advertisement

ಪ್ಲವ ಸಂವತ್ಸರದ ಸ್ವಾಗತಕ್ಕೆ ಸಜ್ಜಾದ ಜನತೆ

02:40 AM Apr 13, 2021 | Team Udayavani |

ಕುಂದಾಪುರ: ಕುಂದ ಗನ್ನಡಿಗರಿಗೆ ಯುಗಾದಿ ಅಂದರೆ ಅದೇ “ಆರೋಡ್‌ ಹಬ್ಬ’!
ಆರೋಡ್‌ ಹಬ್ಬ ಕುಂದಾಪ್ರ ಕೃಷಿ ಸಮುದಾಯದ ಮೊದಲ ಹಬ್ಬ. ಮನೆ ಹತ್ತಿರದ ತಮ್ಮ ಒಂದು ಗದ್ದೆಗೆ ಕೋಣ ಯಾ ಎತ್ತು ಅಥ ವಾ ಹೋರಿಗೆ ನೇಗಿಲು (ಹೂಡು) ಕಟ್ಟಿ ಆರು ಸುತ್ತು ಹೂಡಿ (ಉಳುಮೆ ಮಾಡಿ) ಹೊಟ್ಟು (ಹುಲ್ಲು) ಸುಟ್ಟು, ನಮ್ಮ ಗದ್ದೆಗೆಲ್ಲ ಹೊಟ್ಟು ಸುಟ್ಟು, ಈ ವರ್ಷ ಒಳ್ಳೆಯ ಬೆಳೆಯಾಗಲಿ ಎಂದು ಪ್ರಾರ್ಥಿಸಿ ಬರುತ್ತಿದ್ದರು.

Advertisement

ಗೇಣಿ ಸಾಗುವಳಿ ಮಾಡುವವರು ಗೇಣಿಯ ಮಾತುಕತೆ ಒಪ್ಪಂದವನ್ನು ಈ ಹಬ್ಬದೊಳಗೆ ಮಾಡಿಕೊಳ್ಳಬೇಕಿತ್ತು. ಹೊಟ್ಟು ಸುಟ್ಟರೆಂದರೆ, ಯಾರು ಹೊಟ್ಟು ಸುಟ್ಟಿದ್ದಾರೋ ಅವರೇ ಆ ವರ್ಷದ ಬೇಸಾಯ ಮಾಡುತ್ತಿದ್ದರು. ಈ ವರ್ಷ ಈ ಗದ್ದೆ (ದೊಡ್ಡ ಹಿಡುವಳಿದಾದರೂ ಬೇರೆ ಬೇರೆಯವರಿಗೆ ಗೇಣಿ ಕೊಡುತ್ತಿದ್ದರು) ಯಾರು ಬೇಸಾಯ ಮಾಡುತ್ತಾರೆ ಎಂದು ಹೊಟ್ಟು ಸುಡುವ ದಿನ ಊರವರಿಗೆ ತಿಳಿಯುತ್ತಿತ್ತು.

ಜತೆಗೆ ಆ ದಿನದಿಂದ ಹತ್ತು ದಿನದ ಅನಂತರ “ಹತ್ರೋದಿ ಹಬ್ಬ’ ಆಚರಣೆ ಮಾಡುತ್ತಾರೆ. ಅಂದರೆ ಭತ್ತವನ್ನೇ ಹೆಚ್ಚಾಗಿ ಬೆಳೆಯುತ್ತಿದ್ದರು ಬೀಜ ಮುಹೂರ್ತ ಮಾಡುವ ದಿನ. ಆ ದಿನದ ವಿಶೇಷವೆಂದರೆ ಹೆಚ್ಚಾಗಿ ಅಮಾವಾಸ್ಯೆ, ಹುಣ್ಣಿಮೆ, ಅಮಾವಾಸ್ಯೆ ಬೂದಿ, ಹುಣ್ಣಿಮೆ ಪಾಡ್ಯ, ಕರಿ ನಂಬುವ, ಆ ದಿನಗಳು ಕೆಟ್ಟ ದಿನಗಳು ಒಳ್ಳೆಯ ಕೆಲಸ ಮಾಡಬಾರದು ಎನ್ನುವ ರೈತಾಪಿವರ್ಗ, “ಹತ್ರೋದಿ ಹಬ್ಬ’ ಯಾವ ದಿನ ಬಂದರು ಅವತ್ತೇ ಬೀಜ ಮುಹೂರ್ತ ಮಾಡುತ್ತಿದ್ದರು. ಮಾಡಲು ಬೇರೆ ಏನಾದರೂ ಅನನುಕೂಲವಾದರೆ ಕೊನೆ ಪಕ್ಷ ಶಾಸ್ತ್ರವಾದರೂ ಮಾಡುತ್ತಿದ್ದರು.

ಆದರೆ ಜಗತ್ತು ಅಧುನಿಕತೆಗೆ ತೆರೆದು ಕೊಂಡಂತೆ, ಕೃಷಿಯಲ್ಲಿಯೂ ಸಾಕಷ್ಟು ಬದಲಾವಣೆಯಾಯಿತು. ಹೋರಿ ಎತ್ತಿನ ಜಾಗಕ್ಕೆ ಟಿಲ್ಲರ್‌ ಬಂದಿದೆ, ಸಾಲು ನಟ್ಟಿ, ಬೇರೆ ಬೇರೆ ವಿಧಾನದಲ್ಲಿ ನಟ್ಟಿ ಪದ್ಧತಿ ಬಂದ ಕಾರಣ ಆ ಸಂಪ್ರದಾಯಗಳು ಬಹುತೇಕ ಮರೆಯಾಗಿದೆ. ಗೇಣಿ ಮಾಡುವವರು ಬಹುತೇಕ ಕಡಿಮೆಯಾಗಿದೆ. ಉದ್ಯೋಗ ನಿಮಿತ್ತ ಊರು ಬಿಟ್ಟ ಯುವಜನತೆ “ಆ ಸಾಗÌಳ್ಳಿ ಮಾಡಿ ಎಂಥ ಸಿಕ್ಕತ್ತ್, ಮಾಡುಕೇ ಆಯಿದೀರೆ ಹಡುಹಾಕಿ’ ಎನ್ನುವವರಿದ್ದಾರೆ. ಕೊಚ್ಚಕ್ಕಿ ಜಾಗಕ್ಕೆ “ಸೋನ ಮಸೂರಿ’ ಬರುತ್ತಿದೆ. ಆರೋಡ್‌ ಹಬ್ಬಕ್ಕೆ ಆರು ಬಗೆಯ ಪಲ್ಯ, ಹತ್ರೋದಿ ಹಬ್ಬಕ್ಕೆ ಹತ್ತು ಬಗೆಯ ಪಲ್ಯ ಎನ್ನುವುದು ನೆನಪಿಗಷ್ಟೇ ಸೀಮಿತವಾಗುತ್ತಿದೆ.
ಕಳೆದ ಸಂವತ್ಸರವನ್ನು ಪೂರ್ತಿಯಾಗಿ ಕೊರೊನಾ ಎಂಬ ಮಹಾಮಾರಿ ನುಂಗಿ ಹಾಕಿದ್ದು ಯುಗಾದಿಯ ಬೇವು ಬೆಲ್ಲದಲ್ಲಿ ವರ್ಷಪೂರ್ತಿ ಬೇವನ್ನಷ್ಟೇ ನೀಡಿದೆ. ಈ ಬಾರಿಯೂ ಆರಂಭದಲ್ಲೇ ಕೊರೊನಾ ಭೀತಿ ಇದ್ದು ಹಬ್ಬದ ಆಚರಣೆಗೆ ಕರಿಮೋಡ ಆವರಿಸಿದಂತಾಗಿದೆ. ಇದರ ಪ್ರತಿಫ‌ಲನ ಮಾರುಕಟ್ಟೆ ಸೇರಿದಂತೆ ಎಲ್ಲ ಕಡೆಯೂ ಗೋಚರವಾಗುತ್ತಿದೆ. ಇನ್ನೇನು ಒಂದು ವಾರದಲ್ಲಿ ಶುಭ ಸಮಾರಂಭಗಳ ಸರಣಿ ಆರಂಭವಾಗುತ್ತದೆ. ಆದರೆ ಸರಕಾರದ ಕಠಿನ ನಿರ್ಧಾರಗಳಿಂದಾಗಿ ಸಮಾರಂಭ ಮಾಡುವವರೆಲ್ಲ ಮುಂದಾಲೋಚನೆ ಮಾಡುವಂತಾಗಿದೆ. ಮಾರುಕಟ್ಟೆಯಲ್ಲಿ ಖರೀದಿಗೂ ಅಬ್ಬರ ತೋರಿಸುತ್ತಿಲ್ಲ. ಲೆಕ್ಕಾಚಾರದ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಇಷ್ಟೆಲ್ಲದರ ನಡುವೆ ಮುಂಬರುವ ಪ್ಲವ ಸಂವತ್ಸರದ ಸ್ವಾಗತಕ್ಕೆ ಜನತೆ ಸಜ್ಜಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next