Advertisement
ಹಬ್ಬ ಎಂದರೆ ಮೊದಲಿಗೆ ನೆನಪಿಗೆ ಬರುವುದೆ ಸಿಹಿ ಖಾದ್ಯಗಳು ಅಂದರೆ ಹೋಳಿಗೆ, ಲಡ್ಡು, ಕಜ್ಜಾಯ, ಪಾಯಸ, ಇನ್ನಿತರ ಸಿಹಿ ತಿನಿಸುಗಳು… ಈ ಬಾರಿಯ ಯುಗಾದಿಗೆ ನೀವೂ ಕೂಡಾ ಮನೆಯಲ್ಲಿ ಸಿಹಿ ಮಾಡಬೇಕೆಂದುಕೊಂಡಿದ್ದೀರಾ ಹಾಗಾದರೆ ನಾವು ನಿಮಗಾಗಿ ಕೆಲವೊಂದು ರೆಸಿಪಿಗಳನ್ನು ಮಾಡುವುದು ಹೇಗೆ ಎಂಬುದನ್ನು ವಿವರವಾಗಿ ಹೇಳಿಕೊಡುತ್ತೇವೆ. ಅದರಂತೆ ನೀವು ಮನೆಯಲ್ಲಿ ಸಿಹಿ ತಯಾರಿಸಿ ಮನೆಮಂದಿಯೊಂದಿಗೆ ಯುಗಾದಿ ಹಬ್ಬ ಆಚರಿಸಿ ಸಂಭ್ರಮಿಸಿರಿ…
ಬೇಕಾಗುವ ಸಾಮಗ್ರಿಗಳು
ಕಡ್ಲೆಬೇಳೆ -2ಕಪ್, ಮೈದಾಹಿಟ್ಟು-1ಕಪ್, ಅರಿಶಿನ ಪುಡಿ-ಅರ್ಧ ಚಮಚ, ಏಲಕ್ಕಿ ಪುಡಿ-ಸ್ವಲ್ಪ, ಬೆಲ್ಲ-1ಕಪ್, ಎಣ್ಣೆ, ತುಪ್ಪ, ಉಪ್ಪು-ಸ್ವಲ್ಪ.
-ಮೊದಲಿಗೆ ಕಡ್ಲೆಬೇಳೆಯನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಿ. ನಂತರ ಬೇಯಿಸಿದ ಬೇಳೆಯ ನೀರನ್ನು ಬಸಿದು ಬೆಲ್ಲ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
– ನಂತರ ನೀರು ಮುಟ್ಟಿಸದೆ ಬೇಳೆಯನ್ನು ನುಣ್ಣಗೆ ರುಬ್ಬಿಕೊಂಡು ಹೂರ್ಣ ಮಾಡಿಕೊಳ್ಳಿ.
– ಆಮೇಲೆ ಜರಡಿ ಹಿಡಿದಿಟ್ಟ ಮೈದಾಹಿಟ್ಟಿಗೆ ಅರಿಶಿನ ಪುಡಿ,ಸ್ವಲ್ಪ ಉಪ್ಪು ಮತ್ತು ಎಣ್ಣೆ ಹಾಕಿ ಚೆನ್ನಾಗಿ ಕಲಸಿ ಸುಮಾರು ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಿ.
-ತದನಂತರ ಚಿಕ್ಕ ಗಾತ್ರದ ಹೂರಣದುಂಡೆಗಳನ್ನೂ ಅಷ್ಟೇ ಗಾತ್ರದ ಮೈದಾಹಿಟ್ಟಿನ (ಕಣಕ)ಉಂಡೆಗಳನ್ನು ಮಾಡಿಕೊಳ್ಳಿ.
-ಕಣಕದ ಉಂಡೆಯನ್ನು ಪೂರಿಯ ಹದಕ್ಕೆ ಲಟ್ಟಿಸಿಕೊಂಡು ಅಥವಾ ಕೈಯಲ್ಲೇ ತಟ್ಟಿ ಅದರೊಳಗೆ ಮಾಡಿಟ್ಟ ಹೂರಣವನ್ನು ಇಟ್ಟು ಲಟ್ಟಿಸಿಕೊಳ್ಳಿ.
-ಒಂದು ತವಾಗೆ ಎಣ್ಣೆ ಅಥವಾ ತುಪ್ಪ ಹಾಕಿ ಕಾದಮೇಲೆ ಹೋಳಿಗೆ ಹಾಕಿ ಎರಡೂ ಬದಿಗಳನ್ನು ಹದವಾಗಿ ಕಾಯಿಸಿದರೆ ಬಿಸಿ-ಬಿಸಿಯಾದ ಕಡ್ಲೆಬೇಳೆ ಹೋಳಿಗೆ /ಒಬ್ಬಟ್ಟು ಸವಿಯಲು ಸಿದ್ಧ.
ಇದನ್ನು ತುಪ್ಪ ಜೊತೆಗೆ ತಿನ್ನಲು ಬಹಳ ರುಚಿಯಾಗಿರುತ್ತದೆ.
Related Articles
ಬೇಕಾಗುವ ಸಾಮಗ್ರಿಗಳು
ಕಡ್ಲೆಬೇಳೆ-1ಕಪ್, ಬೆಲ್ಲ-ಅರ್ಧ ಕಪ್, ಏಲಕ್ಕಿ ಪುಡಿ-ಸ್ವಲ್ಪ, ಮೈದಾ ಹಿಟ್ಟು- ಅರ್ಧ ಕಪ್, ಬೆಳ್ತಿಗೆ ಅಕ್ಕಿ-ಅರ್ಧ ಕಪ್, ಅರಿಶಿನ ಪುಡಿ-ಅರ್ಧ ಟೀಸ್ಪೂನ್, ಉಪ್ಪು-ಸ್ವಲ್ಪ, ಕರಿಯಲು ಎಣ್ಣೆ .
Advertisement
ತಯಾರಿಸುವ ವಿಧಾನ-ಕಡ್ಲೆಬೇಳೆಯನ್ನು ತೊಳೆದು ಬೇಯಿಸಿರಿ. ಚೆನ್ನಾಗಿ ಬೆಂದ ಮೇಲೆ ಇದರಲ್ಲಿರುವ ನೀರನ್ನು ಬಸಿದುಕೊಳ್ಳಿ.
-ಬೆಂದ ಬೇಳೆಗೆ ಬೆಲ್ಲ ಹಾಕಿ, ಚೆನ್ನಾಗಿ ಮುದ್ದೆಗಟ್ಟುವವರೆಗೆ ಮಗುಚುತ್ತಾ ಇರಬೇಕು. ಆಮೇಲೆ ಬೇಳೆ ಮತ್ತು ಏಲಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ನೀರು ಮುಚ್ಚಿಸದೆ ನುಣ್ಣಗೆ ರುಬ್ಬಿರಿ ಇಟ್ಟುಕೊಳ್ಳಿ.
-ನಂತರ ಅರ್ಧ ಕಪ್ ಅಕ್ಕಿ, ಸ್ವಲ್ಪ ಉಪ್ಪು,ಅರಿಶಿನ ಪುಡಿ,ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ ಅದಕ್ಕೆ ಮೈದಾ ಹಿಟ್ಟನ್ನು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ.
– ಕಡ್ಲೆಬೇಳೆ ಮಿಶ್ರಣವನ್ನು ಉಂಡೆಗಳಾಗಿ ಮಾಡಿಕೊಳ್ಳಿ.
– ನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದಮೇಲೆ ಒಂದೊಂದೇ ಉಂಡೆಯನ್ನು ಕಲಸಿಟ್ಟ ಅಕ್ಕಿ ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಗೆ ಹಾಕಿ ಗರಿ-ಗರಿಯಾಗುವವರೆಗೆ ಸಣ್ಣ ಉರಿಯಲ್ಲಿ ಕರಿದು ತೆಗೆದರೆ ರುಚಿಕರವಾದ ಸುಕ್ರುಂಡೆ /ಸುಕ್ಕಿನುಂಡೆ ಸವಿಯಲು ಸಿದ್ಧ. ಕಜ್ಜಾಯ
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ-2ಕಪ್, ಬೆಲ್ಲ-1ಕಪ್, ಏಲಕ್ಕಿ -ಸ್ವಲ್ಪ, ಬಿಳಿ ಎಳ್ಳು-1ಚಮಚ, ಗಸಗಸೆ-1 ಚಮಚ, ತೆಂಗಿನ ತುರಿ(ಕೊಬ್ಬರಿ)-4 ಚಮಚ, ಕರಿಯಲು ಎಣ್ಣೆ.
-ಮೊದಲಿಗೆ ಅಕ್ಕಿಯನ್ನು ಸುಮಾರು 8ರಿಂದ 10ಗಂಟೆಗಳ ಕಾಲ ನೆನೆಸಿರಿ. ಪ್ರತಿ ಗಂಟೆಗಳಿಗೊಮ್ಮೆ ನೀರನ್ನು ಬದಲಾಯಿಸಿರಿ(ರಾತ್ರಿಯಿಡೀ ನೆನೆಸಿದರೆ ಉತ್ತಮ).
-ನಂತರ ಮರುದಿನ ನೀರನ್ನು ತೆಗೆದು ಕಾಟನ್ ಬಟ್ಟೆಯ ಮೇಲೆ ಅಕ್ಕಿಯನ್ನು ಹರಡಿ ನೀರಿನಾಂಶ ಒಣಗಿಸಲು ಬಿಡಿ. ಆ ಬಳಿಕ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ.ನಂತರ ಜರಡಿ ಸಹಾಯದಿಂದ ಅಕ್ಕಿ ಹಿಟ್ಟನ್ನು ಸೋಸಿಕೊಳ್ಳಿ.
-ತದನಂತರ ಒಂದು ತವಾಕ್ಕೆ ಬಿಳಿ ಎಳ್ಳು ಮತ್ತು ಗಸಗಸೆ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.
-ನಂತರ ಮಿಕ್ಸಿ ಜಾರಿಗೆ ಕೊಬ್ಬರಿ ತುರಿ ಹಾಗೂ ಏಲಕ್ಕಿ ಹಾಕಿ ಪುಡಿ ಮಾಡಿಕೊಳ್ಳಿ.
-ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಬೆಲ್ಲ ಮತ್ತು ನೀರನ್ನು ಹಾಕಿ ಬೆಲ್ಲ ಕರಗುವವರೆಗೂ ಕೈಯಾಡಿಸಿ ಬೆಲ್ಲದ ಪಾಕವನ್ನು 15 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಸಿಕೊಳ್ಳಿ.
-ನಂತರ ನಿಧಾನಗತಿಯಲ್ಲಿ ಅಕ್ಕಿ ಹಿಟ್ಟನ್ನು ಸೇರಿಸಿ ಉಂಡೆಗಳಿಲ್ಲದಂತೆ ಕೈಯಾಡಿಸಿಕೊಳ್ಳಿ. ಆ ಬಳಿಕ ಹುರಿದಿಟ್ಟ ಎಳ್ಳು ,ಗಸಗಸೆ ಮತ್ತು ಪುಡಿ ಮಾಡಿಟ್ಟ ಕೊಬ್ಬರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
-ಅಕ್ಕಿ ಹಿಟ್ಟಿನಲ್ಲಿ ತೇವಾಂಶ ಇರುವುದರಿಂದ ಮಿಶ್ರಣ ನೀರಾಗಿರುತ್ತದೆ.ಈ ಮಿಶ್ರಣವು ಒಂದು ರಾತ್ರಿ ಹಾಗೇ ಬಿಡಿ, ನಿಧಾನಗತಿಯಲ್ಲಿ ಮಿಶ್ರಣ ಗಟ್ಟಿಯಾಗುತ್ತದೆ.
– ಮರುದಿನ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದಮೇಲೆ ಒಂದೊಂದೇ ಉಂಡೆಗಳನ್ನಾಗಿ ಮಾಡಿ ಕಜ್ಜಾಯದ ಆಕಾರದಲ್ಲಿ ತಟ್ಟಿ ಎಣ್ಣೆಗೆ ಹಾಕಿ ಎರಡೂ ಬದಿಯಲ್ಲೂ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಕಜ್ಜಾಯ ಸವಿಯಲು ಸಿದ್ಧ. -ಶ್ರೀರಾಮ್ ಜಿ . ನಾಯಕ್