ಪಣಜಿ: ಗೋವಾದಲ್ಲಿ ಕನ್ನಡಿಗರು ಕಳೆದ ಅನೇಕ ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಹೊರ ರಾಜ್ಯದಲ್ಲಿ ಬಂದು ಇಲ್ಲಿ ಕನ್ನಡಿಗರು ತಮ್ಮ ಕನ್ನಡತನವನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಇಲ್ಲಿನ ಕನ್ನಡಿಗರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗೋವಾ ಕನ್ನಡಿಗರ ಪರ ನಾವು ಸದಾ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ ಹೇಳಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಗೋವಾ ಇವರ ಸಂಯುಕ್ತ ಆಶ್ರಯದಲ್ಲಿ ವಾಸ್ಕೊದ ಎಂಪಿಟಿ ಸಭಾಗೃಹದಲ್ಲಿ ಆಯೋಜಿಸಿದ್ದ “ಯುಗಾದಿ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮ” ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕನ್ನಡಿಗರ ಅನುಕೂಲಕ್ಕಾಗಿ ವಾಸ್ಕೊ-ಸೊಲ್ಲಾಪುರ ಲಿಂಕ್ ಎಕ್ಸಪ್ರೆಸ್ ಆರಂಭಕ್ಕೆ ಪ್ರಯತ್ನ ನಡೆಸುತ್ತೇನೆ, ಇಷ್ಟೇ ಅಲ್ಲದೆಯೇ ವಾಸ್ಕೊ-ಸಿಂಧಗಿ-ಮುದ್ದೇಬಿಹಾಳ ಮಾರ್ಗಕ್ಕೆ ಕೆ.ಎಸ್.ಆರ್.ಟಿ.ಸಿ ಸ್ಲೀಪರ್ ಬಸ್ ಸಂಚಾರ ಆರಂಭಕ್ಕೆ ಕೂಡ ವ್ಯವಸ್ಥೆ ಮಾಡುತ್ತೇನೆ. ಇಲ್ಲಿನ ಕನ್ನಡಿಗರೊಂದಿಗೆ ನಾವು ಸದಾ ಇದ್ದೇವೆ ಎಂದು ಪ್ರವೀಣಕುಮಾರ್ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ವಾಸ್ಕೊ ಕ್ಷೇತ್ರದ ಶಾಸಕ ದಾಜಿ ಸಾಲ್ಕರ್ ಮಾತನಾಡಿ- ಇಲ್ಲಿನ ಕನ್ನಡಿಗರೊಂದಿಗೆ ನಾನು ಸದಾ ಸಂಪರ್ಕದಲ್ಲಿದ್ದು, ಯಾವುದೇ ರೀತಿಯ ಸಹಾಯ ಸಹಕಾರಕ್ಕೂ ನಾನು ಸಿದ್ಧ ಎಂದರು.
ವೇದಿಕೆಯ ಮೇಲೆ ಶಾಸಕ ಸಂಕಲ್ಪ ಅಮೋಣಕರ್, ಮುರಗಾಂವ ನಗರಸಭೆಯ ಉಪಾಧ್ಯಕ್ಷ ಅಮಯ ಚೋಪಡೇಕರ್, ಕೌನ್ಸಿಲರ್ ಶೃದ್ಧಾ ಅಮೋಣಕರ್, ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟಿಕರ್, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಗೋವಾದ ವಿವಿಧ ಕನ್ನಡ ಸಂಘಗಳ ಪದಾಧಿಕಾರಿಗಳು, ಕನ್ನಡಿಗರು ಉಪಸ್ಥಿತರಿದ್ದರು. ಕರವೇ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಮಹಾಂತೇಶ ಕರಗಿರಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು, ಶಿವಾನಂದ ಮಶಿಗ್ನಾಳ ಕಾರ್ಯಕ್ರಮ ನಿರೂಪಿಸಿದರು. ಮುರಗಾಂವ ತಾಲೂಕಾ ಕರವೇ ಅಧ್ಯಕ್ಷ ದಿಲೀಪ ಭಜಂತ್ರಿ ವಂದನಾರ್ಪಣೆಗೈದರು. ಕರವೇ ಜಿಲ್ಲಾ, ತಾಲೂಕಾ ಘಟಕದ ನೂತನ ಪದಾಧಿಕಾರಿಗಳಿಗೆ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ನೀಡಲಾಯಿತ
ಸಭಾ ಕಾರ್ಯಕ್ರಮದ ನಂತರ ಜೂ.ಉಪೇಂದ್ರ ತಂಡದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.