ಪಿರಿಯಾಪಟ್ಟಣ: ಹಿಂದೂಗಳ ಹೊಸ ವರ್ಷವೆಂದೇ ಕರೆಯಲ್ಪಡುವ ಚಂದ್ರಮಾನ ಯುಗಾದಿ ಹಬ್ಬವು ಶನಿವಾರ ಎಲ್ಲೆಡೆ ಸಂಭ್ರಮ, ಸಡಗರದಿಂದ ನಡೆಯಿತು.
ಪಟ್ಟಣದ ಶ್ರೀ ಮಸಣಿಕಮ್ಮ, ಕನ್ನಂಬಾಡಿ ಅಮ್ಮ, ಮಹಾಲಕ್ಷ್ಮಿ ದೇವಾಲಯಗಳು ಸೇರಿದಂತೆ ತಾಲ್ಲೂಕಿನಾಧ್ಯಂತ ಮಹಿಳೆಯರು ಮತ್ತು ಮಕ್ಕಳು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಬೇವುಬೆಲ್ಲ ಸವಿದು ಸಂಭ್ರಮದಲ್ಲಿ ತೊಡಗಿದ್ದರೆ, ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ರೈತರು ತಲ ತಲಾಂತರದಿಂದಲೂ ಯುಗಾದಿ ಹಬ್ಬದ ದಿನ ಹೊನ್ನಾರು ಉಳುಮೆಯ ಜಾನಪದೀಯ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬರುತ್ತಿರುವ ದೃಶ್ಯಗಳು ಕಂಡುಬಂತು.
ಯುಗಾದಿ ಹಬ್ಬದಂದು ಸಾಮಾನ್ಯವಾಗಿ ತಾಲ್ಲೂಕಿನಾಧ್ಯಂತ ಹೊನ್ನಾರು ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ನಮ್ಮ ಪೂರ್ವಿಕರು ಜಾನಪದೀಯ ವಿಶಿಷ್ಟ್ಯ ಹಾಗೂ ಸಂಪ್ರದಾಯಿಕವಾಗಿ ಹೊನ್ನಾರು ಪೂಜೆ ನಡೆಸಿಕೊಂಡಿದ್ದಾರೆ.
ಹೊನ್ನಾರು ಉತ್ಸವ:
ಜನಪದ ಸಂಸ್ಕೃತಿಯಲ್ಲಿ ಮಹತ್ವ ಪಡೆದುಕೊಂಡಿರುವ ‘ಹೊನ್ನಾರು ಉತ್ಸವ’ ರೈತರ ಪಾಲಿಗೆ ಸಂಭ್ರಮದ ದಿನ. ರೈತರ ಜಮೀನಿನಲ್ಲಿ ಮಾಡುವ ಮೊದಲ ಉಳುಮೆಯನ್ನು ಚಿನ್ನದ ಉಳುಮೆ ಅಥವಾ ಹೊನ್ನಾರು ಎಂದು ರೈತರು ಭಾವಿಸುತ್ತಾರೆ. ವರ್ಷದ ಮೊದಲು ಕೃಷಿ ಚಟುವಟಿಕೆ ಆರಂಭದ ಸೂಚಕವಾಗಿ ಪ್ರತಿ ವರ್ಷ ಯುಗಾದಿಯ ದಿನದಂದು ತಾಲ್ಲೂಕಿನಾಧ್ಯಂತ ಹೊನ್ನಾರು ಜಾನಪದ ಆಚರಣೆ ನಡೆಯುತ್ತದೆ. ಹೊಸ ಪಂಚಾಂಗದ ಪ್ರಕಾರ ಯಾರ ಹೆಸರಿನಲ್ಲಿ ಹೊನ್ನಾರು ಹೂಡಲು ಬರುತ್ತದೆಯೋ ಆ ಹೆಸರಿನ ರೈತನೇ ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ಹೊನ್ನಾರು ಹೂಡಿ ವರ್ಷದ ಉಳುಮೆ ಆರಂಭಿಸುವ ಪದ್ಧತಿ ಸಾಂಪ್ರದಾಯಿಕವಾಗಿ ನಡೆದುಬಂದಿದೆ.
ಹೊನ್ನಾರು ಹೂಡುವ ಮೊದಲು ರೈತರು ಕೃಷಿ ಸಲಕರಣೆಗಳಾದ ನೇಗಿಲು, ನೊಗ, ಜಾನುವಾರುಗಳು ಹಾಗೂ ಇತರ ಸಲಕರಣೆಗಳನ್ನು ತೊಳೆದು, ನಂತರ ಊರ ಮುಂಭಾಗದ ದೇವಾಲಯದಲ್ಲಿ ಒಟ್ಟು ಸೇರುತ್ತಾರೆ. ಜಾನುವಾರು ಮತ್ತು ಕಥಷಿ ಸಲಕರಣೆಗಳನ್ನು ಗವುಸುಗಳಿಂದ ಅಲಂಕರಿಸಿ, ಹೋಳಿಗೆ ಮತ್ತಿತರ ಭಕ್ಷ್ಯ ಭೋಜನ ತಿನ್ನಿಸಿ ಸಂಭ್ರಮಿಸುತ್ತಾರೆ. ನಂತರ ಜಾನುವಾರುಗಳು ಮತ್ತು ಕೃಷಿ ಸಲಕರಣೆಗಳಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸಿ ದೇವಾಲಯಕ್ಕೆ ಸೇರಿದ ಭೂಮಿಯಲ್ಲಿ ಮೊದಲ ಉಳುಮೆ ಮಾಡಿ, ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ನಂತರ ರೈತರು ತಮ್ಮ ತಮ್ಮ ಜಮೀನಿನಲ್ಲಿ ಚಿನ್ನದ ಮೊದಲ ಉಳುಮೆ ಮಾಡುತ್ತಾರೆ. ಉತ್ತಮ ಮಳೆ – ಬೆಳೆ ಆಗಲಿ, ಎಲ್ಲರಿಗೂ ಒಳ್ಳೆಯ ಆರೋಗ್ಯ ,ಸುಖ – ಸಮೃದ್ಧಿ ಸಿಗಲಿ ಎಂದು ಭೂ ತಾಯಿ, ಪ್ರಕೃತಿಗೆ ನಮಿಸಿ ಪ್ರಾರ್ಥಿಸುತ್ತಾರೆ.
ಸಾಂಪ್ರದಾಯಿಕ ಆಚರಣೆ: ಇಲ್ಲಿ ಹೊನ್ನಾರಿಗೆ ಸಂಬಂಧಿಸದಂತೆ ಪ್ರತಿಯೊಂದು ಆಚರಣೆಯನ್ನೂ ಶಾಸ್ತ್ರೋಕ್ತವಾಗಿ ಬಹಳ ಕ್ರಮಬದ್ಧವಾಗಿ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಪೂಜ್ಯ ಭಾವನೆಯಿಂದ ನಡೆಸಲಾಗುತ್ತದೆ. ಭೂತಾಯಿಗೆ ನೇಗಿಲನ್ನೂ ತಾಗಿಸುವ ಮೊದಲು ದೇವಿಯ ಕ್ಷಮೆ ಕೋರಲಾಗುತ್ತದೆ. ಕೃಷಿ ಹಂಗಾಮಿನ ಕೊನೆಗೆ ಸಮೃದ್ಧಿಯನ್ನು ಕರುಣಿಸುವಂತೆ ಸಾಮೂಹಿಕವಾಗಿ ಕೋರಲಾಗುತ್ತದೆ. ಈ ಸಂದರ್ಭದಲ್ಲಿ ಊರಿನ ರೈತರಲ್ಲದೆ ಅವರ ಬಂಧುಗಳು ಕೂಡ ಹಾಜರಿದ್ದು, ಹೊನ್ನಾರು ಆಚರಣೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಸರ್ವರಿಗೂ ಒಳಿತಾಗಲಿ ಎಂದು ಹಾರೈಸಿ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರ ಜೊತೆ ಬೇವುಬೆಲ್ಲ ಸವಿದು ಯುಗಾದಿ ಆಚರಣೆಯಲ್ಲಿ ತೊಡಗಿಸಿಕೊಳ್ಳುವುದು ಇಲ್ಲಿಯ ಸಂಪ್ರದಾಯವಾಗಿದೆ.
-ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ