Advertisement

Ugadi: ಯುಗಾದಿ ಮರಳಿ ಬರುತಿದೆ…

10:00 AM Apr 09, 2024 | Team Udayavani |

ಭಾರತದಲ್ಲಿ ಹಬ್ಬಗಳಿಗೆ ಬರವೇ? ಹಬ್ಬಗಳ ರಾಜ ದೀಪಾವಳಿಯಿಂದ ಹಿಡಿದು ಸಂಕಷ್ಟಿಯವರೆಗೆ ಹಬ್ಬಗಳ ಪಟ್ಟಿ ಹಿಡಿದರೆ ವರ್ಷದಲ್ಲಿ ಒಂದು ಇನ್ನೂರು ದಿನಗಳಾದರೂ ಹಬ್ಬಗಳೇ ಇದ್ದಾವು. ಯಾರೋ ಅತ್ತೆ ಹೇಳುತ್ತಿದ್ದಳಂತೆ:” ಅಯ್ಯೋ ನನ್ನ ಸೊಸೆಯನ್ನ ನಾನು ಎಷ್ಟು ಚೆನ್ನಾಗಿ ನೋಡಿಕೊಳೆ¤àನೆ ಅಂದ್ರೆ, ಉಗಾದ್ದೀವಳಿಗೆ ಉಗಾದ್ದೀವಳಿಗೆ (ಉಗಾದಿ-ದೀವಳಿಗೆ) ಎಣ್ಣೆ ನೀರು ಹಾಕ್ತೇನೆ. ನನ್ನ ಮಗಳಿಗೇ ಅಷ್ಟಿಲ್ಲ ಪಾಪ, ಮಂಗಳವಾರಾ-ಶುಕ್ರವಾರಾ, ಮಂಗಳವಾರಾ-ಶುಕ್ರವಾರ – ಆಕೆ ಸೊಸೆಗೆ ಜಾಸ್ತಿ ನೀರು ಹಾಕಿದಳ್ಳೋ ಮಗಳಿಗೆ ಜಾಸ್ತಿ ಹಾಕಿದಳ್ಳೋ ಅದು ಬೇರೆ ವಿಷಯ, ಉಗಾದಿ -ದೀವಳಿಗೆ ನಮ್ಮ ಬಹುಮುಖ್ಯ ಹಬ್ಬಗಳು ಎನ್ನುವುದು ಮುಖ್ಯ. ಹಾಗೇ ನಾವು ಮನಸ್ಸು ಮಾಡಿದರೆ ಶುಕ್ರವಾರ ಮಂಗಳವಾರಗಳೂ ಹಬ್ಬವಾಗುತ್ತವೆ ಎನ್ನುವುದೂ ಮುಖ್ಯ. ನಮ್ಮ ಅಂತಸ್ಸತ್ವವೇ ಅಂಥದ್ದು-ಹಸಿವಿನಲ್ಲೂ ಹಬ್ಟಾನೇ, ದಿನವು ನಿತ್ಯ ಉಗಾದಿನೇ-ಮನಸ್ಸಿನಲ್ಲಿ ಪ್ರೀತಿಯೊಂದಿದ್ದರೆ.

Advertisement

ಹಬ್ಬಗಳಲ್ಲೆಲ್ಲಾ ಯುಗಾದಿಗೆ ಪ್ರಥಮ ಸ್ಥಾನ, ಏಕೆಂದರೆ, ಅದು ವರ್ಷದ ಮೊದಲ ಹಬ್ಬ. ಹೊಸ ಹಬ್ಬ, ಹೊಸತನದ ಹಬ್ಬ. ಋತುಗಳ ರಾಜ ವಸಂತನ ಆಗಮನವನ್ನು ಸಾರಿ ಹೇಳುವ ಹಬ್ಬ.ಆದ್ದರಿಂದ, ಯುಗಾದಿಯನ್ನು ಕೇವಲ ನಾವಷ್ಟೇ ಆಚರಿಸುವುದಲ್ಲ, ಇಡೀ ಪ್ರಕೃತಿಯೇ ಸಂಭ್ರಮಿಸುತ್ತದೆ.

ಎಂದ ಮೇಲೆ ಅದು ತರುವ ಹಿಗ್ಗಿನ ಸುಗ್ಗಿಗೆ ಎಣೆಯುಂಟೇ? ಹೂವರಳಿದ ಮರಗಳು, ತಾವರೆಯರಳಿದ ಕೊಳಗಳು, ಒಲವು ತುಂಬಿದ ಹೆಂಗಳು, ಕಂಪು ಸೂಸುವ ತಂಗಾಳಿ, ಹಿತವಾದ ಸಂಜೆಗಳು, ರಮ್ಯವಾದ ಹಗಲುಗಳು… ಹೀಗೆ ವಸಂತಕಾಲದಲ್ಲಿ ಎಲ್ಲವೂ ಪ್ರಿಯವೇ ಎನ್ನುತ್ತಾನೆ ಕವಿಕುಲಗುರು ಕಾಳಿದಾಸ. ಯುಗಾದಿಯನ್ನು, ಅದು ತರುವ ವಸಂತಕಾಲದ ಸೊಬಗನ್ನು ಹಾಡಿ ಹೊಗಳದ ಕವಿಯಿಲ್ಲ.

ಎಲ್ಲವೂ ಹೊಸತಾಗುವ ಮಧುರ ಕ್ಷಣ

ಅದುವರೆಗೆ ಚಳಿಗೆ ಮರಗಟ್ಟಿದ್ದ ಪ್ರಕೃತಿ ಆಗಷ್ಟೇ ಮೈ ಕೊಡವಿ ಎದ್ದಿದೆ. ಕೆಲದಿನಗಳ ಹಿಂದಷ್ಟೇ ಶಿವರಾತ್ರಿಯ ಹೊತ್ತಿಗೆ ಚಳಿ “ಶಿವಶಿವಾ’ ಎಂದು ಓಡಿದೆ. ಬಿಸಿಲೇರತೊಡಗಿದೆ. ಚಳಿಗೆ ಎಲೆಯುದುರಿಸಿ ಬೋಳಾಗಿ ನಿಂತ ಗಿಡಮರಗಳಲ್ಲಿ ಚಿಗುರೊಡೆದಿದೆ. ಆ ನವಪಲ್ಲವವನ್ನುಂಡು ಹಾಡುವ ಕೋಗಿಲೆಗಳ ಸಂಭ್ರಮ ಆರಂಭವಾಗಿದೆ. ಮಾವು, ಬೇವು, ಹೊಂಗೆಗಳು ಹೂವು ಕಚ್ಚಿವೆ. ಅವನ್ನು ಹೀರಿ ಮಧು ಸಂಗ್ರಹಿಸುವ ದುಂಬಿಗಳ ಗುಂಜಾರವವೇ ಬೇರೊಂದು ಸಂಗೀತಮೇಳ ಹಿಡಿದಿದೆ. ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತಕೇಲಿ ಮತ್ತೆ ಕೇಳಿ ಬರುತಿದೆ ಎನ್ನುತ್ತಾರೆ ಕವಿ ಬೇಂದ್ರೆ. ಆದರೆ, ಹೀಗೆ ಸಂಭ್ರಮಿಸುವುದು ಕೇವಲ ದುಂಬಿಗಳಷ್ಟೇ ಅಲ್ಲ – ಸುಗ್ಗಿ ಸುಗ್ಗಿ ಸುಗ್ಗಿಯೆಂದು ಹಿಗ್ಗಿ ಗಿಳಿಯ ಸಾಲು ಸಾಲು ತೋರಣದೊಲು ಕೋದಿದೆ… ಹಬ್ಬಕ್ಕೆ ನಾವು ಮಾವಿನ ತೋರಣವನ್ನು ಕಟ್ಟಿದರೆ, ಪ್ರಕೃತಿಯ ಹಬ್ಬಕ್ಕೆ ಗಿಳಿಗಳು ತಾವೇ ತೋರಣವಾಗಿವೆ. ಯುಗಾದಿಯಲ್ಲಿ ವರ್ಷದಿಂದ ಹಿಡಿದು, ಋತುವಿನಿಂದ ಹಿಡಿದು, ಕಾಲದಿಂದ ಹಿಡಿದು ಎಲ್ಲವೂ ಹೊಸತು-ಪ್ರಕೃತಿ ತನ್ನನ್ನು ತಾನೇ ನವೀಕರಿಸಿಕೊಳ್ಳುವ ಸಮಯವಿದು- ವರುಷಕೊಂದು ಹೊಸತು ಜನ್ಮ  ಹರುಷಕೊಂದು ಹೊಸತು ನೆಲೆಯು ಅಖೀಲ ಜೀವಜಾತಕೆ. ಆದರೆ, ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ, ಒಂದೆ ಹರಯ ನಮಗದಷ್ಟೇ ಏತಕೋ ಎಂದು ನಾವೇನು ಮುದುಡಿ ಕುಳ್ಳಿರುವುದಿಲ್ಲ. ಹಾಗೆ ಕುಳ್ಳಿರಬೇಡಿರೆಂಬುದೇ ಪ್ರಕೃತಿಯ ಸಂದೇಶ. ನಾವು ಅದಕ್ಕೆ ತಕ್ಕಂತೆಯೇ ಸ್ಪಂದಿಸುತ್ತೇವೆ. ಬದುಕನ್ನು ಹೊಸದಾಗಿ ಕಾಣಲು ಯತ್ನಿಸುತ್ತೇವೆ. ಹೊಸ ಬಟ್ಟೆ ಧರಿಸುತ್ತ ಹೊಸಬರಾಗುತ್ತೇವೆ. ಹೊಸ ಪ್ರತಿಜ್ಞೆಗಳನ್ನು ಮಾಡುತ್ತೇವೆ! ಅದನ್ನು ನಡೆಸುತ್ತೇವೋ ಎನ್ನುವುದು ಬೇರೆಯ ವಿಷಯ).

Advertisement

ಸದಾಶಯದ ಸಂದೇಶ:

ಒಂದೊಂದು ಹಬ್ಬಕ್ಕೆ ಎದ್ದು ಕಾಣುವ ಒಂದೊಂದು ಗುರುತು-ದೀಪಾವಳಿಗೆ ಪಟಾಕಿ(ದೀಪಗಳ ಸಾಲೂ); ಸಂಕ್ರಾಂತಿಗೆ ಎಳ್ಳು- ಬೆಲ್ಲ (ದನಗಳಿಗೆ ಕಿಚ್ಚು ಹಾಯಿಸುವುದೂ), ಗೌರಿ ಗಣೇಶನ ಹಬ್ಬಕ್ಕೆ ಸ್ವತಃ ಗೌರೀಗಣೇಶರು (ಜೊತೆಗೆ ಕಡುಬು ಮೋದಕಗಳು). ಹಾಗೇ ಯುಗಾದಿಗೆ ಬೇವು-ಬೆಲ್ಲ (ಜೊತೆಗೆ ಮಾವು ಬೇವಿನ ತೋರಣ, ಒಬ್ಬಟ್ಟು ಹೋಳಿಗೆ, ಜೊತೆಗೆ ಮಾಂಸಾಹಾರದ ಪದ್ಧತಿಯಿರುವ ಮನೆಗಳಲ್ಲಿ ಯುಗಾದಿಯ ಮರುದಿನದ ಹೊಸತೊಡಕಿನಂದು ಗಮ್ಮತ್ತಿನ ಬಾಡೂಟ ಬೇರೆ).ಬೇವು ಬೆಲ್ಲಕ್ಕೆ ಸಂಬಂಧಿಸಿದಂತೆ, ಜೀವನದಲ್ಲಿ ಸಿಹಿಯಂತೆಯೇ ಕಹಿಯನ್ನೂ ಸಮನಾಗಿ ಸ್ವೀಕರಿಸಬೇಕು ಎಂಬುದೊಂದು ಆಶಯವಾಕ್ಯ. ಅದು ಯಾವಾಗಿನಿಂದ ಹುಟ್ಟಿತೋ ಗೊತ್ತಿಲ್ಲ. ಆಶಯವೇನೋ ಒಳ್ಳೆಯದೇ, ಇದ್ದರೆ ತಪ್ಪೇನಿಲ್ಲ. ಆದರೆ, ಈ “ಕಹಿ’ಯಾದರೂ ಎಂಥದ್ದು ಎಂಬುದು ನಮ್ಮ ಗಮನದಿಂದ ಜಾರಿ ಹೋಗಿದೆಯೆಂದೇ ನನ್ನ ಅನಿಸಿಕೆ. ಸಿಹಿ ಕಹಿಗಳೆರಡೂ ಸಮಾನವಾಗಿರಬೇಕು. ಹೌದು, ಹಾಗೆಂದು ಬೆಲ್ಲದ ಜೊತೆ ಬಿಲ್ವದ ಎಲೆಯನ್ನೋ, ಹಾಗಲಕಾಯನ್ನೋ, ಬಲಿತ ಬೇವಿನೆಲೆಯನ್ನೋ ತಿನ್ನುವುದಿಲ್ಲ-ಎಳಸಾದ ಹೊಂಬಣ್ಣದ ಬೇವಿನ ಹೊಸ ಚಿಗುರನ್ನು ಸೇವಿಸುತ್ತೇವೆ, ಅದೇ ಕ್ರಮ. ಬೇವು ಬೆಲ್ಲವನ್ನು ಸೇವಿಸುವಾಗ ಹಿರಿಯರೋ ಪುರೋಹಿತರೋ ಈ ಶ್ಲೋಕವನ್ನು ತಪ್ಪದೇ ಹೇಳುತ್ತಾರೆ-

ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚ

ಸರ್ವಾರಿಷ್ಟವಿನಾಶಾಯ ನಿಂಬಕನ್ಧಲಭಕ್ಷಣಂ

(ನೂರ್ಕಾಲ ಬದುಕುವುದಕ್ಕಾಗಿ, ಸಕಲಸಂಪತ್ತಿನ ಪ್ರಾಪ್ತಿಗಾಗಿ, ಎಲ್ಲ ವಿಪತ್ತುಗಳೂ ಹೋಗುವುದಕ್ಕಾಗಿ – ನಿಂಬಕಂದಲವನ್ನು (ಬೇವಿನ ಚಿಗುರು) ತಿನ್ನುವುದು).

ಬೇವಿಲ್ಲದೆ ಬಾಳಿಲ್ಲ…

ನೋಡಿ, ಇಲ್ಲಿ ಬೆಲ್ಲದ ಮಾತೇ ಇಲ್ಲ. ಬೇವಿನ ಅಷ್ಟಾದರೂ ಕಹಿಯುಣ್ಣದ ನಾಲಿಗೆಗಾಗಿ ಬೇವಿನ ಜೊತೆ ಬೆಲ್ಲದ ಲಂಚವಷ್ಟೇ-ಮಕ್ಕಳಿಗೆ ಕಹಿ ಔಷಧಿ ಕೊಟ್ಟ ಕೂಡಲೇ ಸಕ್ಕರೆ ಕೊಡುತ್ತೇವಲ್ಲ, ಅದೇ ಅಭ್ಯಾಸ ನಮಗೂ. ಬೇವು ಹಲವು ರೋಗಗಳಿಗೆ ಸಿದೌœಷಧ, ಏನಿಲ್ಲದಿದ್ದರೂ ರೋಗ ನಿರೋಧಕವಾಗಿ ಬೇವಿನ ಪಾತ್ರ ಬಲು ದೊಡ್ಡದು. ಆರೋಗ್ಯವಿದ್ದರೆ ಬಲಿಷ್ಠವಾದ ದೇಹ, ನೂರ್ಕಾಲದ ಬದುಕು, ದೃಢಕಾಯದಿಂದ ಸಂಪತ್ತು. ಒಂದು ಬೇವಿನ ಚಿಗುರನ್ನು ತಿಂದುಬಿಟ್ಟರೆ ಇವೆಲ್ಲ ಬಂದುಬಿಡುತ್ತದೆಂದಲ್ಲ, ಆದರೆ, ಬೇವಿನ ಹೊಸ ಚಿಗುರು, ಆಯುರಾರೋಗ್ಯಗಳನ್ನು ಹೊಸತಾಗಿಸುವುದರ ಸಂಕೇತ. ಬೆಲ್ಲ ಜೀವನದ ಭೋಗಗಳ ಸಂಕೇತವಾದರೆ, ಬೇವಿನ ಚಿಗುರು ಆ ಭೋಗಗಳಿಂದ ಲಡ್ಡು ಬೀಳುವ ದೇಹಕ್ಕೆ ಅಗತ್ಯವಿರುವ ಕಾಯಕಲ್ಪದ ಸಂಕೇತ. ಅನ್ನಕ್ಕೆ ತಕ್ಕ ಔಷಧಿಗಳನ್ನು, ಭೋಗಕ್ಕೆ ತಕ್ಕ ಯೋಗವನ್ನು, ಜೀವನಶೈಲಿಯ ಸಮತೋಲನವನ್ನು ಸದಾ ಕಾಯ್ದುಕೊಳ್ಳಬೇಕೆಂಬ ಎಚ್ಚರದ ಸಂಕೇತ, ಈ ಬೇವು ಬೆಲ್ಲ. ಹಾಗೆಯೇ ಬದುಕಿನಲ್ಲಿ ಸುಖದೊಂದಿಗೇ ಬರುವ ಕಷ್ಟಗಳೂ, ಔಷಧದಂತೆಯೇ ಬದುಕನ್ನು ಹೇಗೆ ಗಟ್ಟಿಗೊಳಿಸುತ್ತದೆಂಬುದರ ಸಂಕೇತವೂ ಹೌದು. ನಾವೇನೋ ಸಣ್ಣವರಿದ್ದಾಗ ಬೇವು ಬೆಲ್ಲ ಕೊಟ್ಟರೆ ಬೇವನ್ನು ಪಕ್ಕಕ್ಕಿಟ್ಟು ಬೆಲ್ಲವನ್ನೇ ತಿನ್ನುತ್ತಿದ್ದುದೇ ಹೆಚ್ಚು .ಅಥವಾ ಅವನಿಗೆ ಬೆಲ್ಲ ಹೆಚ್ಚಾಯಿತೆಂದೋ ನಮಗೆ ಬೇವು ಹೆಚ್ಚಾಯಿತೆಂದೋ ಜಗಳವಾಡುತ್ತಿದ್ದುದೂ ಹೆಚ್ಚು. ಇವೆಲ್ಲ ಯುಗಾದಿಗೆ ತಪ್ಪದೇ ಬರುವ ನೆನಪು.

ಬದುಕು ಹೊಸತಾಗಲಿ…

ಯುಗಾದಿಯೊಂದಿಗೆ ತಪ್ಪದೇ ನುಗ್ಗಿಬರುವ ಮತ್ತೂಂದು ನೆನಪೆಂದರೆ ಜೂಜಾಟ. ಹಳ್ಳಿಗಳ ಕಡೆ ಇಂದಿಗೂ ಇದನ್ನು ನಡೆಸುತ್ತಾರೆ. ಉಳಿದಂತೆ “ಅಪರಾಧ’ವೆನಿಸಿದ ಈ ಕ್ರೀಡೆಗೆ ಅದೊಂದು ದಿನ “ಮಾಫಿ’. ಮನೆ ಮನೆಗಳಲ್ಲೂ ಜಗುಲಿ ಜಗುಲಿಗಳಲ್ಲೂ ಜೂಜುಕೋರರ ಗುಂಪು-ಬಹಳ ಹಳೆಯ ಕಾಲದವರಾದರೆ ಪಚ್ಚಿಯಾಟ, ಚೌಕಾಭಾರ.ಆಮೇಲಾ ಮೇಲೆ ಇಸ್ಪೀಟು ಆ ಜಾಗವನ್ನು ಆಕ್ರಮಿಸತೊಡಗಿದ ಮೇಲೆ ಮೂರೆಲೆ, ಇಪ್ಪತ್ತೆಂಟು, ಅಂದರ್‌ಬಾಹರ್‌, ಅಪರೂಪಕ್ಕೆ ರಮ್ಮಿ, ಜಾಕ್‌ಪಾಟ್‌ ಇತ್ಯಾದಿ. ಕವಿ ನಿಸಾರರು ಹೇಳುವಂತೆ ನಮ್ಮದೆಲ್ಲಾ ಬಂದರಿಪ್ಪತ್ತು ಹೋದರಿಪ್ಪತ್ತು ನ. ಪೈ. ಲೆಕ್ಕ.  ಆದರೆ ಸಕಲರದೂ ಈ ಬಗೆಯ ಚಿಲ್ಲರೆ ವ್ಯವಹಾರವೇ ಎನ್ನಲು ಬರುವುದಿಲ್ಲ.  ಹೊಸತೊಡಕಿನಂದು ಮನೆ ಮಠ, ತೋಟ ಗ¨ªೆ ಆಸ್ತಿಪಾಸ್ತಿಯನ್ನೆಲ್ಲ ಅಡವಿಟ್ಟು ಅಡವಿಪಾಲಾದ ಆಧುನಿಕ ಧರ್ಮರಾಜರೂ ಇದ್ದಾರೆ. ಈಗ ಹೇಗೋ, ಆದರೆ ಒಂದು ಕಾಲದಲ್ಲಂತೂ ಯುಗಾದಿಯಂದು ನಡೆಯುವ ಜೂಜಾಟಕ್ಕೆ ಪೊಲೀಸರೂ ಅಡ್ಡಬರುತ್ತಿರಲಿಲ್ಲ. ಆದರೆ ಈಗೆಲ್ಲಾ ಆನ್‌ಲೈನ್‌ ಸಟ್ಟಾ ವ್ಯಾಪಾರಗಳು, ಆನ್‌ಲೈನ್‌ ರಮ್ಮಿ ಬಂದು ಮನೆಮನೆಯನ್ನೂ ಹಾಳುಗೆಡಿಸತೊಡಗಿದ ಮೇಲೆ ದಿನವು ನಿತ್ಯ ಉಗಾದಿನೇ ಎಂಬ ಹಾಡಿಗೆ ಹೊಸ ಅರ್ಥ ದೊರಕಿದೆಯೆಂಬುದು ದುಃಖದ ವಿಚಾರ.

ಅದೇನೇ ಇರಲಿ, ಪ್ರತಿವರ್ಷದಂತೆ ಯುಗಾದಿ ಮರಳಿ ಬರುತ್ತಿದೆ – ಕವಿವಾಣಿಯಂತೆ ಬೇವಿನ ಕಹಿ ಬಾಳಿನಲ್ಲಿ ಹೂವಿನ ನರುಗಂಪು ಸೂಸಿ ಜೀವಕಳೆಯ ತರುತಿದೆ! ಹಬ್ಬದಂದು ಹೊಸ ಸಂಭ್ರಮವಿರಲಿ, ಹೊಸಬಟ್ಟೆಯಿರಲಿ, ಬದುಕು ಹೊಸತಾಗಲಿ, ಹೊಸ ಬೇವಿನ ಜೊತೆ ಬೆಲ್ಲವೂ ಇರಲಿ; ಹೊಣೆಯರಿತ ಸಂತಸ ನಮ್ಮದಾಗಲಿ.

-ಮಂಜುನಾಥ,ಕೊಳ್ಳೇಗಾಲ

Advertisement

Udayavani is now on Telegram. Click here to join our channel and stay updated with the latest news.

Next