Advertisement
ಹೌದು, ಇನ್ನೇನು ಕೆಲವೇ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಹೊಸ ವರ್ಷ ಎಂದು ಆಚರಣೆ ಮಾಡುವ ಯುಗಾದಿ ಹಬ್ಬ ಬರಲಿದೆ. ಪ್ರಭವ ನಾಮ ಸಂವತ್ಸರದಲ್ಲಿ ಆರಂಭವಾಗುವ ಯುಗಾದಿ ಮುಂದಿನ ಅರವತ್ತು ಸಂವತ್ಸರಗಳವರೆಗೂ ತಿರುತಿರುಗಿ, ಸುತ್ತು ಹಾಕಿ ಕ್ಷಯ ನಾಮ ಸಂವತ್ಸರದಲ್ಲಿ ಕೊನೆಗೊಂಡು ಮತ್ತೆ ಪ್ರಭವದಿಂದಲೇ ಹೊಸ ಚಕ್ರವನ್ನು ಆರಂಭಿಸುತ್ತದೆ. ಪ್ರತೀ ಸಂವತ್ಸರವೂ ಹೊಸತೇ. ಆದರೆ ಈ ಹೊಸತು ನಾವು ಕಾಣುವ ನೋಟದಲ್ಲಿ, ಬದುಕುವ ರೀತಿಯಲ್ಲಿ, ಆಡುವ ಮಾತಿನಲ್ಲಿ ಹುಟ್ಟುವುದು, ಬೆಳೆಯುವುದು, ವಿಸ್ತಾರಗೊಳ್ಳುವುದು.
Related Articles
Advertisement
ಸಂತಸ, ನೆಮ್ಮದಿಯನ್ನು ತರುವ ಹಬ್ಬಗಳ ಆಚರಣೆಯು ಬದುಕಿನೊಂದಿಗೆ ಅವಿನಾಭಾವ ಸಂಬಂ ಧವನ್ನು ಹೊಂದಿದೆ. ಇಂತಹ ಹಬ್ಬಗಳಲ್ಲಿ ಯುಗಾದಿ ಹಿಂದೂ ಸಂಪ್ರದಾಯದ ಮೊದಲ ಹಬ್ಬವಾಗಿದೆ. ಬದುಕಿನ ಹಳೆಯ ನೋವುಗಳನ್ನು ಮನಸ್ಸಿನಿಂದ ತೊಡೆದು ಹಾಕಿ ನವೋಲ್ಲಾಸದಿಂದ ಹೊಸ ವರ್ಷವನ್ನು ಹೊಸ ಉತ್ಸಾಹದಿಂದ ಸ್ವಾಗತಿಸುವಸುವ ದಿನ ಇದಾಗಿದೆ. ಎಲೆಗಳನ್ನು ಕಳಚಿಕೊಂಡು ಮತ್ತೆ ಚಿಗೊರೆಡೆದು ಮರುಜೀವ ಪಡೆಯುವ ಮರಗಳು ಪ್ರಕೃತಿಗೆ ಮತ್ತೆ ಹೊಸ ರೂಪ, ನವೋತ್ಸಾಹ ತರುವ ಕಾಲವಾದರೆ, ಚೈತ್ರ-ವಸಂತರ ಆಗಮನದಿಂದ ಪ್ರಕೃತಿ ಹೊಸ ರೂಪವನ್ನು ತಂದು ಎಲ್ಲೆಡೆ ಸಂಭ್ರಮ ಉಲ್ಲಾಸವನ್ನು ತರುವ ಹಬ್ಬವೂ ಹೌದು.
ಪ್ರತೀ ವರ್ಷ ಯುಗಾದಿಯಂದೂ ನಾವು ಬೇವು ಬೆಲ್ಲ ತಿನ್ನುವ ಸಮಯದಲ್ಲಿ ಬಾಯೆಲ್ಲ ಒಗರಾಗಿ, ನಾಲಿಗೆಗೆ ಅಪ್ರಿಯವಾಗುವ ಬೇವು ನಮಗೆ ಸದಾ ಬೇಡವಾಗಿರುತ್ತದೆ. ಮನಸ್ಸಿಗೆ ಅಹಿತ, ದೇಹಕ್ಕೆ ಹಿತ ವಾಗಿರುವುದು ಯಾರಿಗೆ ಸುಲಭದಲ್ಲಿ ಬೇಕೆನ್ನಿಸುತ್ತದೆ? ಅದರಲ್ಲೂ ಮಕ್ಕಳಾದ ನಮಗಂತೂ ದೊಡ್ಡ ದೊಡ್ಡ ಬೆಲ್ಲದ ತುಂಡನ್ನು ಆರಿಸಿ ಮೆಲ್ಲುವುದೆಂದರೆ ಪರಮ ಖುಷಿಯ ಸಂಗತಿ. ಅದೇನೋ ಎಂತೋ ಸಾಮಾನ್ಯ ದಿನಗಳಲ್ಲೂ ಬೇಕೆನಿಸಿದಾಗೆಲ್ಲ ಬೆಲ್ಲವನ್ನು ತಿನ್ನಬಹುದಾಗಿದ್ದರೂ ಯುಗಾದಿಯ ದಿನದಂದೇ ಬೇವಿನ ನಡುವೆ ಹುದುಗಿ ಅಡಗಿರುವ ಬೆಲ್ಲದ ತುಣುಕುಗಳನ್ನು ಆಯ್ದು ತಿನ್ನುವುದರಲ್ಲಿ ಒಂದು ರೀತಿ ಬೇರೆಯೇ ತೃಪ್ತಿ ಅಲ್ಲವೇ!?
ಜೀವನ ಎಂಬುದು ಕೇವಲ ಸುಖದ ಕಲ್ಪನೆಯಲ್ಲ. ಹಾಗಂತ ಕಷ್ಟದ ಕೋಟಲೆಯೂ ಅಲ್ಲ. ಹಗಲು-ರಾತ್ರಿಗಳಂತೆ, ಗಿಡದಲ್ಲಿರುವ ಹೂವು ಮುಳ್ಳುಗಳಂತೆ ಮನುಷ್ಯನ ಬದುಕು ನೋವು ನಲಿವುಗಳ ಸಂಗಮ ಎನ್ನುವುದನ್ನು ಎಷ್ಟೋ ವರ್ಷಗಳ ಹಿಂದೆ ಜನರು ಅರಿತಿದ್ದರು. ಜೀವನದಲ್ಲಿ ಸುಖ ಬಂದಾಗ ಹಿಗ್ಗದೇ, ಕಷ್ಟ ಬಂದಾಗ ಕುಗ್ಗದೇ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದಾಗ ಬದುಕು ಸುಂದರವಾಗಲು ಸಾಧ್ಯ. ಈ ಅಂಶವನ್ನು ಜನರಿಗೆ ಸಾರಲೆಂದೇ ಯುಗಾದಿಯಂದು ಬೆಲ್ಲವನ್ನು ಹಂಚಲಾಗುತ್ತದೆ ಎನ್ನುವುದು ಬಲ್ಲವರ ಅನಿಸಿಕೆ. ಯುಗಾದಿ ಮತ್ತೆ ಬಂದಿದೆ. ಈ ಹಬ್ಬದ ಬೇವು-ಬೆಲ್ಲ ಸಮರಸದ ಬದುಕಿಗೆ ಬುನಾದಿಯಾಗಲಿ ಈ ದಿನದಲ್ಲಿ ಹೊಸಭರವಸೆಯ ಕನಸುಗಳು ನನಸಾಗಲಿ ಎನ್ನುವುದು ನಮ್ಮ ಹಾರೈಕೆ.
–ಮಿಥುನಾ ಭಂಡಾರ್ಕಾರ್ ಕಾಲೇಜು ಕುಂದಾಪುರ