ದೇವನಹಳ್ಳಿ: ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿತ್ತು. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಕಳೆಗುಂದಿದ್ದ ಹಬ್ಬಕ್ಕೆ ಈ ಬಾರಿ ಹೊಸ ಜೀವಕಳೆ ಬಂದಿದ್ದು, ಜಿಲ್ಲಾದ್ಯಂತ ಯುಗಾದಿ ಹಬ್ಬ ಆಚರಣೆಗೆ ಭರ್ಜರಿ ಜೋಷ್‌ನಲ್ಲಿ ನಾಗರಿಕರು ಖರೀದಿ ಮಾಡುತ್ತಿದ್ದಾರೆ.
ಜಿಲ್ಲೆಯ ನಾಲ್ಕು ತಾಲೂಕಿನ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾರುಕಟ್ಟೆಗಳಲ್ಲಿ ಕಾಲು ಇಡಲಾಗದ ಪರಿಸ್ಥಿತಿಯಲ್ಲಿ ತುಂಬಿ ತುಳುಕುತ್ತಿದೆ. ಹಣ್ಣು, ತರಕಾರಿ, ಹೂವು, ಬಟ್ಟೆ, ದಿನಸಿ ಪದಾರ್ಥಗಳು ಸೇರಿ ವಿವಿಧ ವಸ್ತುಗಳನ್ನು ಕೊಳ್ಳಲು ಜನ ದಾಂಗುಡಿ ಇಟ್ಟಿದ್ದಾರೆ. ವಿಶೇಷವಾಗಿ ಯುಗಾದಿ ಹಬ್ಬಕ್ಕೆ ಅಗತ್ಯವಾದ ಮಾವು, ಬೇವು, ತುಳಸಿಕೊಳ್ಳಲು ಜನ ಮುಗಿಬಿದ್ದಿದ್ದು, ಯುಗಾದಿ ಹಬ್ಬಕ್ಕೆ ಹೊಸಬಟ್ಟೆ ಧರಿಸುವುದು ವಾಡಿಕೆ. ಹಾಗಾಗಿ, ಎಲ್ಲ ಬಟ್ಟೆ ಅಂಗಡಿಗಳಲ್ಲಿ ಖರೀದಿಸುವವರು ಹೆಚ್ಚಾಗಿ ಕಂಡುಬಂದಿತು.
ಗಗನಕ್ಕೇರಿದ ವಸ್ತುಗಳ ಬೆಲೆ: ಬೆಲೆ ಏರಿಕೆ ಹೆಚ್ಚಾಗಿರುವುದರಿಂದ ಪ್ರತಿಯೊಂದು ಪದಾರ್ಥಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಆಗುತ್ತಿರುವುದರಿಂದ ಮಾರುಕಟ್ಟೆಗಳಲ್ಲಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ವ್ಯಾಪಾರಸ್ಥರು ಮತ್ತು ರೈತರು ವಾಹನ ಸಾಕಾಣಿಕೆಯಲ್ಲಿ ತಮ್ಮ ವಸ್ತುಗಳನ್ನು ರಫ್ತು ಮಾಡಲು ಹೆಚ್ಚಿನ ಬೆಲೆಯನ್ನು ತೆತ್ತಬೇಕಾಗಿದೆ. ದಿನಸಿ ಪದಾರ್ಥಗಳು ಸಹ ಹೆಚ್ಚಾಗಿದೆ. ಸನ್ ಪ್ಯೂರ್, ಗೋಲ್ಡ್ ವಿನ್ನರ್ ಇತರೆ ಅಡುಗೆ ಎಣ್ಣೆಗಳು 200 ರೂ. ಗಡಿದಾಟಿದೆ.
ಮಾರುಕಟ್ಟೆಯಲ್ಲಿ ಕನಕಾಂಬರ ಹೂವಿಗೆ ಒಂದು ಕೆ.ಜಿ.ಗೆ 600 ರೂ., ಮಲ್ಲಿಗೆ .600 ರೂ., ಕಾಕಡ 400 ರೂ., ಸೇವಂತಿಗೆ 200 ರೂ., ರೋಜ್ 120 ರೂ., ಚೆಂಡು ಹೂವು 60 ರೂ.,. ಸೇಬು ಕೆ.ಜಿ.ಗೆ 180 ರೂ., ದಾಳಿಂಬೆ ಕೆ.ಜಿ.ಗೆ 150.ರೂ., ಸಪೋಟ ಮತ್ತು ದ್ರಾಕ್ಷಿ 80 ರೂ.,, ಕಿತ್ತಳೆ 140, ಪಚ್ಚಬಾಳೆ 30, ಯಾಲಕ್ಕಿ ಬಾಳೆ 70 ರೂ., ಇರುವುದು ಕಂಡುಬಂತು.
ಎಷ್ಟೇ ಬೆಲೆಯಾದರೂ ವರ್ಷಕ್ಕೆ ಒಂದು ಬಾರಿ ಬರುವ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಹಿಂದೂ ಗಳಿಗೆ ಯುಗಾದಿ ವರ್ಷದ ಮೊದಲ ಹಬ್ಬವಾಗಿದೆ. ಮನೆ ಮಂದಿ ಹೊಸಬಟ್ಟೆ ಧರಿಸಿ ಬೇವು, ಬೆಲ್ಲ ತಿಂದು ಹಬ್ಬವನ್ನು ಸಂಪ್ರದಾಯವಾಗಿ ಆಚರಿಸುತ್ತಿದ್ದೇವೆ.
-ಸುಧಾ, ಗ್ರಾಹಕಿ
ಪೆಟ್ರೋಲ್, ಡೀಸೆಲ್ ಅಗತ್ಯವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಒಂದೊಂದು ವಸ್ತುಗಳ ಬೆಲೆ ಹೆಚ್ಚಳ ಆಗಿದ್ದು, ಹೆಚ್ಚು ಹಣ ಕೊಟ್ಟು ಸಾಮಗ್ರಿ ಖರೀದಿ ಮಾಡಿಕೊಂಡು ವ್ಯಾಪಾರ, ವಹಿವಾಟು ಮಾಡುತ್ತಿದ್ದೇವೆ. –
ನಾಗರಾಜ್ , ವ್ಯಾಪಾರಸ್ಥ