Advertisement

ಎಲ್ಲೆಲ್ಲೂ ಹಬ್ಬಾ ಹಬ್ಬ…ವಿಭಿನ್ನ ಯುಗಾದಿಯ ಬೆರಗುಗಳು ಇಲ್ಲಿವೆ

10:58 AM Mar 17, 2018 | |

 ಯುಗಾದಿ ಹಬ್ಬದ ಸಂಭ್ರಮ ಬೇವು, ಬೆಲ್ಲ, ಒಬ್ಬಟ್ಟು ತಿಂದು, ಹೊಸ ಬಟ್ಟೆ ಧರಿಸುವುದಷ್ಟೇ ಅಲ್ಲ. ಇದು ಒಂದೊಂದು ಊರಲ್ಲಿ ಒಂದೊಂದು ರೀತಿ ಇರುತ್ತದೆ. ವೈವಿಧ್ಯರೀತಿಯಲ್ಲಿ ಹಬ್ಬವನ್ನು ಆಚರಿಸುವ ಸಂಪ್ರದಾಯ ನಮ್ಮಲ್ಲಿದೆ. ಇಂಥ, ಒಂದಷ್ಟು ವಿಭಿನ್ನವಾಗಿ ಯುಗಾದಿ ಆಚರಿಸುವ ಬೆರಗುಗಳು ಇಲ್ಲಿವೆ. 

Advertisement

ಹೋಳಿಯೇ ಯುಗಾದಿ

ಹೋಳಿ ಹಬ್ಬದಲ್ಲಿ ಬಣ್ಣದಾಟವಾಡುವುದನ್ನು ನೋಡಿದ್ದೀರಿ, ಆದರೆ ಯಾದಗಿರಿಯ, ಶಹಾಪುರ ತಾಲೂಕಿನ ಹಯ್ನಾಳ ಸುತ್ತಮುತ್ತಲಿರುವ  ಯಕ್ಷಂತಿ, ಹಯ್ನಾಳ, ಮದರಕಲ್‌, ಕೊಲ್ಲೂರು, ಗೊ ಡೂರು, ಅನಪುರ, ಐಕೂರ, ಮುನಮುಟಗಿ ಸೇರಿದಂತೆ 32 ಹಳ್ಳಿಗಳಲ್ಲಿ  ಯುಗಾದಿ ಹಬ್ಬದ ಮಾರನೆ ದಿನ (ಕರಿ ದಿನ)ದಂದು ಗ್ರಾಮಸ್ಥರು ರಂಗಿನಾಟವಾಡುವ ಮೂಲಕ ಯುಗಾದಿ ಹಬ್ಬ ಆಚರಿಸುತ್ತಾರೆ. 

 ಯುಗಾದಿ, ವರ್ಷದ ಮೊದಲ ಹಬ್ಬ. ಜೋಳದ ರಾಶಿ ಸಹ ಮುಗಿದಿರುತ್ತದೆ ಈ ಹಿನ್ನೆಲೆಯಲ್ಲಿ ರೈತರು ತಮ್ಮ ಸಂಬಂಧಿಕರು, ಸ್ನೇಹಿತರಿಗೆ ಹಬ್ಬದ ದಿನದಂದು ಮನೆಗೆ ಕರೆದುಕೊಂಡು ಹೋಗಿ ಬೇವು ಕೊಟ್ಟು, ಹೋಳಿಗೆ ಊಟ ಹಾಕಿಸುತ್ತಾರೆ.  ಮರು ದಿನ ಗ್ರಾಮಸ್ಥರು ಒಬ್ಬರಿಗೊಬ್ಬರು ಬಣ್ಣದಾಟವಾಗಿ ಸಂಭ್ರಮಪಡುತ್ತಾರೆ. ಸಂಜೆ ಸಮಯ ದಲ್ಲಿ ಕೆರೆಗೆ ಹೋಗಿ ಸ್ನಾನ ಮಾಡುತ್ತಾರೆ. 
ವಿಶೇಷ ಎಂದರೆ ಹೋಳಿ ಹಬ್ಬದಂದು ಈ ಹಳ್ಳಿಗಳಲ್ಲಿ ಯಾರೂ ಬಣ್ಣದಾಟವಾಡುವದಿಲ್ಲ. ಯುಗಾದಿ ಹಬ್ಬದ ಕರಿ ದಿನದ‌ಂದು ಬಣ್ಣ ದಾಟವಾಡಿ ಸಂಭ್ರಮಿಸುತ್ತೇವೆ. ಇದು ನಮ್ಮ ಪೂರ್ವಜರ ಕಾಲದಿಂದ ಬಂದ ರೂಢಿ ಯಾಗಿದ್ದು, ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ ಹಯ್ನಾಳ ಗ್ರಾಮದ ಶರಣಪ್ಪ. ಈ ಭಾಗದಲ್ಲಿ ಬೇವು ಬೆಲ್ಲ ವಿತರಿಸುವುದಿಲ್ಲ. ಬೇವು-ಬೆಲ್ಲ, ವಿವಿಧ ಹಣ್ಣುಗಳನ್ನು ಸೇರಿಸಿ ತಯಾರಿಸಿದ ಬೇವಿನ ರಸವನ್ನು ಕುಡಿಸುತ್ತಾರೆ. 

ರಾಜೇಶ ಪಾಟೀಲ್‌ ಯಡ್ಡಳ್ಳಿ

Advertisement

ಬರೀ ಬೇವು, ಬೆಲ್ಲ ಇಲ್ಲ

 ಯುಗಾದಿ ಅಂದರೆ ಸಡಗರ, ಸಂತೋಷ. ಆದರೆ ಈ ಕಲಬುರಗಿಯ ಚಿಂಚೋಳಿ ತಾಲೂಕಿನ ಸುಲೇಪೇಟೆ ಪಟ್ಟಣ, ಸುತ್ತಮುತ್ತಲಿನ 40 ಹಳ್ಳಿಗಳಲ್ಲಿ ಒಂದು ತಿಂಗಳ ಕಾಲ ಯಾವ ಶುಭ ಕಾರ್ಯ ಮಾಡೋಲ್ಲ. ಯುಗಾದಿ ಹಬ್ಬದ ದಿನದಿಂದ ಬರುವ ಅಕ್ಷಯ ತದಿಗೆ ಅಮಾವಾಸ್ಯೆವರೆಗೂ ಮದುವೆ, ಮುಂಜಿ, ಜಾವುಳ ತೆಗೆಯುವುದು, ನಿಶ್ಚಿತಾರ್ಥ ಇನ್ನಿತರ ಶುಭ ಕಾರ್ಯಗಳೂ ನಡೆಯುವುದಿಲ್ಲ. 

ಅಷ್ಟೂ ದಿನ ಶುಭ ಕಾರ್ಯಗಳನ್ನು ನಿಲ್ಲಿಸುವುದು ಮಾತ್ರವಲ್ಲ. ರೈತರು ತಿಪ್ಪೆ ಗೊಬ್ಬರವನ್ನು ಸಹ ಈ ಸಮಯದಲ್ಲಿ ಹೊಲಕ್ಕೆ ಹಾಕುವುದಿಲ್ಲ. ಈ ಅವಧಿಯಲ್ಲಿ ಹೊಸ ಬಟ್ಟೆಯನ್ನೂ ಸಹ ಧರಿಸುವುದಿಲ್ಲ.ಒಂದು ಪಕ್ಷ  ಶುಭ ಕಾರ್ಯ ಕೈಗೊಂಡರೆ ಅಪಯಶಸ್ಸು, ವೀರಭದ್ರೇಶ್ವರ ಸ್ವಾಮಿ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆ ಎನ್ನುವ ನಂಬಿಕೆ ಇದೆ ಎನ್ನುತ್ತಾರೆ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಹಾರುದ್ರಪ್ಪ ದೇಸಾಯಿ.  

 ಯುಗಾದಿ ಅಂದರೆ ಹೊಸದಿನ, ಯುಗಾದಿ ಅಂದರೆ ಹೊಸತನ ಎಂದೆಲ್ಲಾ ನಾಡೇ ನಂಬಿದ್ದರೂ, ಇರುವ ಇಲ್ಲಿನ ಸಂಪ್ರದಾಯ ನಿಜಕ್ಕೂ ಅಪರೂಪವೇ ಸರಿ.  
ಹಣಮಂತರಾವ ಭೈರಾಮಡಗಿ

ಮಳೆ-ಬೆಳೆಯ ಕ್ಯಾಲೆಂಡರ್‌

 “ಯುಗಾದಿ ಫಲಪ್ರದರ್ಶನ’ವನ್ನು ತಿಳಿದುಕೊಳ್ಳುವುದಕ್ಕಾಗಿಯೇ ಯುಗಾದಿಫಲದರ್ಶನ, ಯುಗಾಧಿ ಫಲ ಎಂಬ ಹೆಸರಿನ ಜಾನಪದ ಸೊಗಡಿನ ವಿಶಿಷ್ಠ ಆಚರಣೆಯೊಂದು ಧಾರವಾಡ ಜಿಲ್ಲೆಯ ಮೊರಬ, ಹನುಮನಕೊಪ್ಪ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ನಡೆಯುತ್ತದೆ. 

 ಜಾಡರ ಸಮುದಾಯದವರು ನಡೆಸುವ ಈ ಆಚರಣೆಯನ್ನು  ಗ್ರಾಮದ ಪಂಚರು, ಹಿರಿಯರು ಯುಗಾದಿ ಫಲದರ್ಶನದ  ತಯಾರಿ ಕುರಿತು ಚರ್ಚಿಸುತ್ತಾರೆ. ನಂತರ ಗ್ರಾಮದ ಚಿದಾನಂದ ಹೂಲಿ ಅವರು ಇದನ್ನು ತಯಾರಿಸುತ್ತಾರೆ. ಯುಗಾದಿ ಫಲದರ್ಶನ ತಯಾರಿಸಲು 10 ಚದರ ಅಡಿ ಜಾಗವನ್ನು ಸ್ವತ್ಛಗೊಳಿಸಿ ಸುತ್ತಲೂ ಕೋಟೆಯಂತೆ ಕಿರಿದಾದ ಒಡ್ಡನ್ನು ನಿರ್ಮಿಸಲಾಗುತ್ತದೆ. ಪಶ್ಚಿಮ ಒಡ್ಡಿನ ನಡುವೆ ಪೂರ್ವಾಭಿಮುಖವಾಗಿ ಶ್ರೀ ಸಿದ್ದಿವಿನಾಯಕನ ಮೃತ್ರಿಕಾ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ನಾಲ್ಕು ಮೂಲೆಗಳಿಗೆ ಅಶ್ವದಳ, ಗಜದಳ, ಕಾಲ್ದಳದ ಮಣ್ಣಿನ ಗೊಂಬೆಗಳನ್ನು ತಯಾರಿಸಿ ಇಡುತ್ತಾರೆ. ಬೇರೆ ಬೇರೆ ದಿಕ್ಕುಗಳಿಗೆ ಮುಖ ಮಾಡಿ ನಿಂತಿರುವ ಈ ದಳವು ದೇಶದ ರಕ್ಷಣೆಯ ಪ್ರತೀಕವಂತೆ. 

ಯುಗಾದಿ ಫಲದರ್ಶನದ ಪೂರ್ವದ ಭಾಗಕ್ಕೆ ಮಣ್ಣಿನಿಂದ ರೈತನ ಗೊಂಬೆ, ಕಾರ್ಮಿಕನ ಗೊಂಬೆಗಳು, ಎತ್ತು-ಆಕಳುಗಳ ಗೊಂಬೆ ಮಾಡಿ ನಿಲ್ಲಿಸಲಾಗುತ್ತದೆ. ಇದಾದ ಬಳಿಕ ಎಕ್ಕೆಯ ಗಿಡದ ಎಲೆಗಳನ್ನು ಸಾಲಾಗಿ ಇಟ್ಟು,  ಜೋಳ, ಗೋಧಿ, ತೊಗರಿ, ಕಡಲೆ, ಹೆಸರು, ಕುಸುಬೆ ಸೇರಿದಂತೆ ಧಾನ್ಯಗಳ ಕಾಳುಗಳನ್ನು ಎಣಿಕೆ ಮಾಡಿ ಒಂದೊಂದು ಎಕ್ಕೆಯ ಎಲೆಯಲ್ಲಿ ಇಟ್ಟು ಅದರ ಮೇಲೆ ಅದೇ ಗ್ರಾತ್ರದ ಎಲೆಯನ್ನು ಬೋರಲು ಮಾಡಿ ಇಡಲಾಗುತ್ತದೆ.

 ಧಾನ್ಯಗಳನ್ನು ಇಟ್ಟ ಹಾಗೆಯೇ ಕ್ರಮವಾಗಿ ಮಳೆ ನಕ್ಷತ್ರಗಳಾದ ಅಶ್ವಿ‌ನಿಯಿಂದ ಆರಂಭ ಮಾಡಿ ಸ್ವಾತಿವರೆಗಿನ ಮಳೆಯವರೆಗೆ ಎಲೆಗಳನ್ನು ಇಟ್ಟು ಅದೇ ಗಾತ್ರದ ಎಲೆಗಳನ್ನು ಬೋರಲಾಗಿ ಮಲಗಿಸುತ್ತಾರೆ. ಈ ಎಲ್ಲಾ ಮೇಲಿನ ಎಕ್ಕೆಯ ಎಲೆಗಳಿಗೆ ಹಿಡಿಯಲು ಅನುಕೂಲವಾಗುವಂತೆ ಹಸಿಮಣ್ಣಿನ ಹಿಡಿಕೆಗಳನ್ನು ಇಡುತ್ತಾರೆ. ಯುಗಾದಿ ಫಲದರ್ಶನದ ಸ್ವಲ್ಪ ದೂರದಲ್ಲಿ ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ ದಿಕ್ಕುಗಳಿಗೆ ಮುತ್ತುಗದ ಎಲೆಯಲ್ಲಿ ಅನ್ನ ಇಡುತ್ತಾರೆ. ಯುಗಾದಿ ಪಾಡ್ಯದ ದಿನದಂದು ಸೂರ್ಯೋದಯಕ್ಕೂ ಮುನ್ನವೇ ಗ್ರಾಮದ ಹಿರಿಯರು ಪೂಜಾ ಸಾಮಗ್ರಿಗಳೊಂದಿಗೆ ಫಲದರ್ಶನ ಬರೆಯುವ ಪುಸ್ತಕದೊಂದಿಗೆ ಅಲ್ಲಿಗೆ ತೆರಳುತ್ತಾರೆ. 

 ಹಿಂದಿನ ದಿನ ನೂರು ಕಾಳುಗಳಂತೆ ಜೋಡಿಸಿ ಇರಿಸಿದ್ದನ್ನು ತೆಗೆದು ಸುತ್ತಲಿದ್ದವರ ಕೈಗೆ ಕೊಟ್ಟು ಕಾಳುಗಳನ್ನು ಎಣಿಸಲು ಹೇಳುತ್ತಾರೆ. ಹೀಗೆ ಇಟ್ಟಿರುವ ಕಾಳುಗಳ ಸಂಖ್ಯೆ ಹೆಚ್ಚಾಗಿದ್ದರೆ ಆ ವರ್ಷ ಆ ಧಾನ್ಯದ ಬೆಳೆ ಚೆನ್ನಾಗಿ ಬರುವುದೆಂದೂ, ಕಡಿಮೆ ಆಗಿದ್ದರೆ ಆ ಬೆಳೆಗೆ ಬಲಕರಣ ಇಲ್ಲವೆಂದೂ ಲೆಕ್ಕ .  ಈ ರೀತಿಯಾಗಿ ಎಲ್ಲ ಧಾನ್ಯಗಳ ವೀಕ್ಷಿಸಿ ಆ ಧಾನ್ಯದ ಲೆಕ್ಕದ ಮೇಲೆ ಇಳುವರಿ ಕುರಿತು ಬರೆದುಕೊಳ್ಳಲಾಗುತ್ತದೆ. ಇದಾದ ಬಳಿಕ ಫಲದರ್ಶನ ಆರಂಭ. ಅಶ್ವಿ‌ನಿ ಮಳೆ ಎಂದು ಗುರುತು ಮಾಡಿ ಇಟ್ಟಿರುವ ಎಕ್ಕೆಯ ಎಲೆ ತೆಗೆದಾಗ ಅದರೊಳಗಿನ ಆದ್ರì ಅಂಶದ ಮೇಲೆ ಮಳೆಯ ಭವಿಷ್ಯ ನಿರ್ಧಾರ ಆಗುತ್ತದೆ.  ಕೆಲ ಎಲೆಯೊಳಗಿನ ನೀರು ಸೋರಿದರೆ ಕೆಲವೊಂದಿಷ್ಟು ಎಲೆಗಳಲ್ಲಿ ಒಂದು ಹನಿಯೂ ನೀರು ಇರದು. ಇದರ ಮೇಲೆ ಆಯಾ ನಕ್ಷತ್ರದ ಮಳೆ ಪ್ರಮಾಣ, ಲಾಭ-ಹಾನಿ ಕುರಿತ ಪಕ್ಷಿನೋಟ ಬೀರಲಾಗುತ್ತದೆ.
ಶಶಿಧರ್‌ ಬುದ್ನಿ 

 ಮುಳ್ಳಿನ ಡ್ಯಾನ್ಸೇ ಯುಗಾದಿ 

ಯುಗಾದಿ ಕೊಪ್ಪಳ ಜಿಲ್ಲೆಗೆ ಮುಳ್ಳಿನ ಹರಕೆಯ ಹಬ್ಬ.  ಭಕ್ತಿಯ ಪರಾಕಾಷ್ಟೆ. ಇಲ್ಲೆಲ್ಲಾ ಯುಗಾದಿ ಹಬ್ಬ ಆರಂಭಕ್ಕೂ ಮುನ್ನವೇ ಮನೆಗೆ ಸುಣ್ಣ, ಬಣ್ಣ ಹಚ್ಚಿ ಶುದ್ದಗೊಳಿಸಿ, ಮನೆಯ ಮುಖ್ಯದ್ವಾರಕ್ಕೆ ಮಾವಿನ ತೋರಣ ಕಟ್ಟಿ ಮನೆ ಅಲಂಕರಿಸುತ್ತಾರೆ. ಬೆಳಗ್ಗೆ ಮನೆಯ ಕುಟುಂಬ ಸದಸ್ಯರೆಲ್ಲ ಬೇವಿನ ಎಲೆ, ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ಪೂಜೆಯಲ್ಲಿ ತೊಡಗುತ್ತಾರೆ. ಮಹಿಳೆಯರಿಗೆ ಸಿಹಿ ತಿನಿಸು, ಭಕ್ಷ್ಯ ಭೋಜನ ಸಿದ್ಧಪಡಿಸುವುದೇ ಒಂದು ಸಂಭ್ರಮ. 

ವಿಶೇಷವಾಗಿ, ಯುಗಾದಿ ಪಾಡ್ಯದ ದಿನದಂದು ಮುಳ್ಳಿನ ಹರಕೆ ಎನ್ನುವ ಪದ್ದತಿ ಆಚರಣೆಯಲ್ಲಿದೆ. ಈ ಆಚರಣೆ ಕೇಳಲು ವಿಚಿತ್ರ ಎಂದೆನಿಸಿದರೂ ಜಿಲ್ಲೆಯ ಜನರಿಗೆ ಅದೊಂದ ಸಡಗರದ ಹಬ್ಬ. 

ಪ್ರತಿ ವರ್ಷ ಯುಗಾದಿ ಹಬ್ಬದ ವೇಳೆ ಗ್ರಾಮ ದೇವರ ಮೂರ್ತಿಗಳ ಮೆರವಣಿಗೆ ಮಾಡಲಾಗುತ್ತದೆ. ಮಧ್ಯಾಹ್ನದ ಪಲ್ಲಕ್ಕಿಯೊಂದಿಗೆ ತೆರಳುವ ಗ್ರಾಮಸ್ಥರು ಬೆಳೆದು ನಿಂತಿರುವ ಕಾರಿ ಗಿಡಗಳನ್ನು ಕಿತ್ತು ಹೊತ್ತು ತಂದು ಗ್ರಾಮದ ರಾಜ ಬೀದಿಯಲ್ಲಿ ಹಾಕಿ ಭಾಜಾ ಬಜಂತ್ರಿಗಳೊಂದಿಗೆ ಮೆರವಣಿಗೆ ಮಾಡುತ್ತಾರೆ. 

ಮನುಷ್ಯನ ಜೀವನದಲ್ಲಿ ಸುಖ-ದುಃಖಗಳಿರುವುದು ಸಹಜ. ಜೀವನದ ಜಂಜಾಟದಲ್ಲಿ ಎಂಥ ಮುಳ್ಳಿನ ಹಾದಿ ಬಂದರೂ ಸಹಿತ ಅವೆಲ್ಲವನ್ನೂ ನಿವಾರಣೆ ಮಾಡಿ, ಉತ್ತಮ ಜೀವನದತ್ತ ನಡೆಯುವುದು. ವರ್ಷ ಪೂರ್ತಿ ಏನೇ ತಪ್ಪು ಮಾಡಿದ್ದರೂ ಮುಳ್ಳಿನ ಹರಕೆಯಲ್ಲಿ ಜಿಗಿಯುವ ಮೂಲಕ ತಮ್ಮ ತಪ್ಪುಗಳನ್ನು ಮನ್ನಿಸಿ ಮುಂದೆ ಸದ್ಬುದ್ಧಿ ಕರುಣಿಸು ಎಂದು ಜನರು ದೇವರಲ್ಲಿ ಬೇಡಿಕೊಂಡು ಮುಳ್ಳಿನ ಕುಂಪೆಯಲ್ಲಿ ಜಿಗಿದು ತಮ್ಮ ಹರಕೆ ತೀರಿಸುತ್ತಾರೆ. ಇನ್ನು ಕೆಲವೆಡೆ ಅಗ್ನಿ ಕುಂಡಗಳ ಮಧ್ಯೆ ದೇವರ ಪಲ್ಲಕ್ಕಿಯನ್ನು ಹೊತ್ತು ನಡೆಯುವ ಸಂಪ್ರದಾಯವೂ ಇದೆ.  ಮುಳ್ಳಿನ ರಾಶಿಯನ್ನು ಮೆರವಣಿಗೆ ಮಾಡುತ್ತಾರೆ. ಈ ವೇಳೆ ಡೊಳ್ಳಿನ ಸದ್ದು, ವಾಧ್ಯ ಮೇಳಗಳ ಸದ್ದಿಗೆ ಆವೇಶಭರಿತರಾದ ಜನರು ಏಕಾ ಏಕಿ ಮುಳ್ಳಿನ ಕುಂಪೆಯಲ್ಲಿ ಜಿಗಿಯುವ ಮೂಲಕ ತಮ್ಮ ಭಕ್ತಿಯ ಪರಾಕಾಷ್ಟೆ ತೋರುತ್ತಾರೆ. ಇನ್ನು ಕೆಲವರಂತೂ ಮುಳ್ಳಿನ ಕುಂಪೆಯಲ್ಲೇ ಕುಣಿದು ಕುಪ್ಪಳಿಸುತ್ತಾರೆ. ಅಚ್ಚರಿ ಎಂದರೆ ಹೀಗೆ ಕುಣಿಯುವ ಭಕ್ತರಿಗೆ ಒಂದೇ ಒಂದು ಮುಳ್ಳು ನಾಟುವುದಿಲ್ಲ. ಇದೊಂದು ಭಕ್ತಿಯ ಮಹಿಮೆ ಎಂದು ಜನ ನಂಬಿದ್ದಾರೆ.

ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next