Advertisement

ಬೇವು,ಬೆಲ್ಲ ಸವಿದು ನವ ಸಂವತ್ಸರವ ಸ್ವಾಗತಿಸುವ ಹೇಮಲಂಬಿಗೆ ಸುಸ್ವಾಗತ

10:15 PM Mar 28, 2017 | Team Udayavani |

ಯುಗಾದಿ ಹಬ್ಬವು ಕೇವಲ ಆಧ್ಯಾತ್ಮಿಕ ಮಾತ್ರವಲ್ಲದೆ ಸಾಂಸ್ಕೃತಿಕ, ಸಾಮಾಜಿಕ ಪ್ರಾಧಾನ್ಯದ ಆಯಾಮವನ್ನೂ ಹೊಂದಿದೆ ಎನ್ನುವುದಕ್ಕೆ ಈ ಹಬ್ಬದ ಪ್ರಯುಕ್ತ ಜನರು ತೊಡಗಿಸಿಕೊಳ್ಳುವ ಹಲವಾರು ಜಾನಪದ ಮತ್ತು ಸಾಹಸ ಕ್ರೀಡೆಗಳು, ತಯಾರಿಸುವ ವೈವಿಧ್ಯಮಯ ಖಾದ್ಯಗಳು ಮತ್ತು ಮರುದಿನ ನಡೆಯುವ ವರ್ಷ ಆಚರಣೆಗಳೇ ಸಾಕ್ಷಿ.

Advertisement

ಋತುಗಳ ರಾಜ ವಸಂತ ಕಾಲಿಟ್ಟನೆಂದರೆ ಎಲ್ಲೆಲ್ಲೂ ಜೀವಕಳೆಯ ಸಂಭ್ರಮ ಪಲ್ಲವಿಸುತ್ತದೆ. ಹಳೆಬೇರಿನ ಆಧಾರದ ಮೇಲೆ ಹೊಸ ಚಿಗುರು ಬಿರಿಯುವ ಈ ಕಾಲ ಪ್ರಕೃತಿಯ ನಿರಂತರ ಚಲನಶೀಲತೆಯ ಮಹಾನ್‌ ದ್ಯೋತಕವೂ ಹೌದು; ಮಾನವನ ಬದುಕಿನ ಏರಿಳಿತಗಳನ್ನು ಪ್ರತಿಬಿಂಬಿಸುವ ಅರ್ಥಪೂರ್ಣ ರೂಪಕವೂ ಹೌದು. ಹೊಸ ಟಿಸಿಲಿನ ಲವಲವಿಕೆ ಹಾಗೂ ತಾಜಾತನಗಳಂತಹ ಪ್ರಕೃತಿದತ್ತ ಪ್ರಭಾವಳಿಯೊಂದಿಗೆ ಸಂಭ್ರಮದಿಂದ ಆಚರಿಸಲ್ಪಡುವ ಮಹಾಪರ್ವವೇ ಯುಗಾದಿ. ಮಾನವ ಮತ್ತು ಪ್ರಕೃತಿಯ ಸಹಸಂಬಂಧವನ್ನು ಪೋಷಿಸುವ ಮಹತ್ವದ ಹಬ್ಬವಿದು. ವೃಕ್ಷಸಂಕುಲದ ಹಸಿರ ನವ ಕುಡಿಗಳಂತೆಯೇ ಹೊಸ ವರ್ಷ, ಋತು, ಮಾಸ, ಪಕ್ಷಗಳೆಲ್ಲದರ ಆರಂಭವೂ ಈ ಹಬ್ಬದ ಮೂಲಕವೇ ಎಂಬಲ್ಲಿಗೆ ಇದು ಮುಂಬರುವ ಪೂರ್ಣ ಸಂವತ್ಸರವೊಂದಕ್ಕೆ ಪೀಠಿಕೆಯಿದ್ದಂತೆ.

ಹಬ್ಬಗಳ ರಾಜ ಯುಗಾದಿ
ಹಬ್ಬಗಳ ಸಾಮ್ರಾಟ ಎಂದೇ ಪರಿಗಣಿಸಲ್ಪಡುವ ಯುಗಾದಿಯು ಶಾಸ್ತ್ರ, ಸಂಪ್ರದಾಯ ಮತ್ತು ಜನರ ನಂಬಿಕೆ, ವಾಡಿಕೆಗಳ ದೃಷ್ಟಿಯಿಂದಲೂ ಬಹು ಪ್ರಾಮುಖ್ಯವನ್ನು ಪಡೆದುಕೊಂಡಿದೆ. ಚಾಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಇದರ ಎರಡು ವಿಧಗಳು. ಪ್ರತಿ ಸಂವತ್ಸರ ಮತ್ತು ಚೈತ್ರ ಮಾಸದ ಪ್ರಪಥಮ ಹಬ್ಬ ಯುಗಾದಿ.

ಚಾಂದ್ರಮಾನ ಯುಗಾದಿಯು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯ ತಿಥಿಯಂದು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ. ಇಲ್ಲಿ ಚಂದ್ರನ ಚಲನೆಯನ್ನಾಧರಿಸಿ ಮಾಸ, ಪಕ್ಷಗಳ ಲೆಕ್ಕಾಚಾರ ನಡೆಯುತ್ತದೆ.  ಸೌರಮಾನ ಯುಗಾದಿಯು ಸೂರ್ಯನ ಚಲನೆಯನ್ನಾಧರಿಸಿದ್ದು, ಇದನ್ನು ಮೇಷ ರಾಶಿಯ ಮೊದಲ ದಿನದಂದು ಆಚರಿಸಲಾಗುತ್ತದೆ. ನಾವು ಬಳಸುವ ಇಂಗ್ಲಿಷ್‌ ಕ್ಯಾಲೆಂಡರ್‌ಗೆ ಅನುಗುಣವಾಗಿ ಹೇಳುವುದಾದರೆ ಚಾಂದ್ರಮಾನ ಯುಗಾದಿಯು ಸಾಮಾನ್ಯವಾಗಿ ಮಾರ್ಚ್‌ 14ರಿಂದ ಏಪ್ರಿಲ್‌ 13ರ ನಡುವಿನ ಅವಧಿಯಲ್ಲಿ ಬರುತ್ತದೆ.

ಈ ಬಾರಿಯ ಯುಗಾದಿಯು 30ನೇ ಸಂವತ್ಸರವಾದ ದುರ್ಮುಖೀಯಿಂದ 31ನೆಯದಾದ ಹೇಮಲಂಬಿಗೆ ಪಲ್ಲಟವಾಗುವ ಕಾಲ. ನೂತನ ಸಂವತ್ಸರವೊಂದರ ಆರಂಭ. ಅಲ್ಲದೇ, ಪ್ರಭಾವದಿಂದ ಆರಂಭವಾಗಿ ಅಕ್ಷಯ/ಕ್ಷಯಕ್ಕೆ ಮುಕ್ತಾಯವಾಗುವ ಒಟ್ಟು ಅರುವತ್ತು ಸಂವತ್ಸರಗಳ ಒಂದು ಪೂರ್ಣ ಆವೃತ್ತಿಯಲ್ಲಿ 30 ಸಂವತ್ಸರಗಳು ಕಳೆದು 31ನೆಯ ಸಂವತ್ಸರ ಅಂದರೆ ಆ ಆವೃತ್ತಿಯ ದ್ವಿತೀಯಾರ್ಧದ ಅಧಿಕೃತ ಶುಭಾರಂಭ. ಭಾರತೀಯರಿಗೆ ಯುಗಾದಿಯೇ ನವ ವರುಷದ ಆರಂಭ ಎನ್ನುವುದು ಈ ನೆಲೆಗಟ್ಟಿನಲ್ಲಿಯೇ ಹೊರತು ಯಾವುದೇ ಆಧಾರರಹಿತ ವಾದಸರಣಿಯಿಂದಲ್ಲ.

Advertisement

ಕೇವಲ ವೈದಿಕ ಸಂಪ್ರದಾಯವಷ್ಟೇ ಅಲ್ಲದೆ ಇರಾನಿಗರೂ ಕೂಡ ತಮ್ಮ ವರ್ಷದ ಆರಂಭವನ್ನು ಈ ದಿನದಿಂದಲೇ ಮಾಡುತ್ತಾರೆ. ಅವರು ಅದನ್ನು “ನೌರೋಜ್‌’ ಎಂದು ಕರೆಯುತ್ತಾರೆ. ಯುಗಾದಿಗೆ ಪ್ರಾದೇಶಿಕವಾಗಿ ಬೇರೆ ಬೇರೆ ನಾಮಾಂಕಿತಗಳಿವೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ಗೋವಾಗಳಲ್ಲಿ ಯುಗಾದಿ ಎಂದು ಕರೆದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ವ, ಗೋವಾದ ಹಿಂದೂ ಕೊಂಕಣಿಗರು ಸಂವತ್ಸರ ಪಾಡ್ವೊ ಅನ್ನುತ್ತಾರೆ, ಸಿಂಧಿಗಳಿಗೆ ಚೀತಿ ಚಾಂದ್‌, ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ವರ್ಷ ಸಂವತ್‌ ಎಂಬ ಹೆಸರುಗಳಿಂದ ಆಚರಿಸಲಾಗುತ್ತದೆ. ಸೌರಮಾನ ಯುಗಾದಿಯನ್ನು ಬಿಸು, ವಿಷು, ಪಿರಪ್ಪು, ಬೈಸಾಕಿ, ಪುಥಾಂದು ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. 

ಪೌರಾಣಿಕ ಪ್ರತಿಪಾದನೆಗಳು
ಯುಗಾದಿಯ ಹಿನ್ನೆಲೆಗೆ ಸಂಬಂಧಿಸಿದಂತೆ ಹಲವಾರು ಪೌರಾಣಿಕ ಪ್ರತಿಪಾದನೆಗಳು ಹಾಗೂ ಧರ್ಮಗ್ರಂಥಗಳ ಉಲ್ಲೇಖಗಳ ಆಧಾರವಿದೆ. ಅವುಗಳಲ್ಲಿ ಕೆಲವೊಂದಷ್ಟನ್ನು ಪ್ರಸ್ತಾಪಿಸುವುದಾದರೆ, ಮೊದಲನೆಯದು ಮಹಾಜಲಪ್ರಳಯದ ಅನಂತರ ಪ್ರಜಾಪತಿಯಾದ ಬ್ರಹ್ಮನು ಈ ದಿನ ಅಂದರೆ ಚೈತ್ರಮಾಸದ, ಶುಕ್ಲ ಪಕ್ಷದ ಮೊದಲ ದಿನದ ಸೂರ್ಯೋದಯ ಸಮಯದಲ್ಲಿ ಹೊಸದಾಗಿ ಲೋಕವನ್ನು ಸೃಷ್ಟಿಸುವ ಮಹಾನ್‌ ಕೈಂಕರ್ಯವನ್ನು ಆರಂಭಿಸಿದ; ಕಾಲಗಣನೆಗೆ ಗ್ರಹ, ನಕ್ಷತ್ರ, ಋತು ಮಾಸ, ತಿಥಿ ಇತ್ಯಾದಿಗಳನ್ನು ನಿಯೋಜಿಸಿದ ಎನ್ನುವುದು ಬ್ರಹ್ಮ ಪುರಾಣದಲ್ಲಿ ಬರುವ ಉಲ್ಲೇಖ. ಸ್ಥಿತಿಕರ್ತನಾದ ವಿಷ್ಣುವು ಮತ್ಸಾ Âವತಾರ ಎತ್ತಿದ ದಿನ, ವಾಲ್ಮೀಕಿ ಮಹರ್ಷಿಯ ರಾಮಾಯಣದ ಪ್ರಕಾರ ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ವನವಾಸದಿಂದ ಹಿಂದಿರುಗಿದ ದಿನ, ರಾವಣ ವಧೆಯನ್ನು ಕೊಂಡಾಡುತ್ತಾ ಉತ್ಸವ ಮಾಡಿದ ದಿನ, ಇಂದ್ರನು ವಸುವೆಂಬ ರಾಜನಿಗೆ ವಸ್ತ್ರ ಅಲಂಕಾರಗಳನ್ನು ದಯಪಾಲಿಸಿದ್ದು ಈ ದಿನ ಎನ್ನಲಾಗಿದೆ. ಚರಿತ್ರೆಯ ಪುಟಗಳಲ್ಲಿ ಅಡಕವಾಗಿರುವಂತೆ ಇದು ಶಾಲಿವಾಹನನು ವಿಕ್ರಮಾದಿತ್ಯನ ವಿರುದ್ಧ ಜಯಿಸಿ ಶಾಲಿವಾಹನ ಶಕೆಯು ಪ್ರಾರಂಭವಾದ ದಿನವೂ ಹೌದು. 

ಪ್ರತಿಯೊಂದು ಹಬ್ಬದ ಆಚರಣೆಗೂ ಅದರದೇ ಆದ ನಿರ್ದಿಷ್ಟ ವಿಧಿ ವಿಧಾನಗಳಿರುತ್ತವೆ. ಆಚರಣಾ ಕ್ರಮಗಳು, ಅಗತ್ಯ ದ್ರವ್ಯಗಳು ಹಬ್ಬದಿಂದ ಹಬ್ಬಕ್ಕೆ ಬದಲಾಗುತ್ತವೆ. ಹಿಂದೂ ಧರ್ಮ ಗ್ರಂಥಗಳಲ್ಲಿ ಹೇಳಿರುವಂತೆ ಯುಗಾದಿ ಹಬ್ಬದ ಆಚರಣೆಯಲ್ಲಿ ತೈಲಾಭ್ಯಂಜನ, ದೇವತಾ ಸ್ತುತಿ, ಧರ್ಮ ಧ್ವಜಾರೋಹಣ, ನಿಂಬಕಂದಳ ಭಕ್ಷಣ (ಬೇವು- ಬೆಲ್ಲ ಸೇವನೆ) ಮತ್ತು ಪಂಚಾಂಗ ಶ್ರವಣ ಎಂಬ ಈ ಐದು ವಿಧಿಗಳು ಪ್ರಮುಖವಾದವುಗಳು. ಪಂಚಾಂಗ ಶ್ರವಣವನ್ನು ಸಾಮೂಹಿಕವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ನಡೆಸಲಾಗುತ್ತದೆ. ಇದರಲ್ಲಿ ಜಾತಿ, ಮತ ಹಾಗೂ ಪಂಥಗಳ ಭೇದವಿಲ್ಲದೆ ಎಲ್ಲರೂ ಜತೆಯಾಗಿ ಪಾಲ್ಗೊಳ್ಳಬಹುದು. ಈ ಹಬ್ಬದಂದು ಗೃಹಾಲಂಕಾರವೂ ಪ್ರಧಾನವಾದುದು. ಮನೆಯ ಪರಿಸರವನ್ನು ಸ್ವತ್ಛಗೊಳಿಸಿ ತಳಿರುತೋರಣಗಳಿಂದ ಸಿಂಗರಿಸಲಾಗುತ್ತದೆ. ಮಾವಿನ ಚಿಗುರೆಲೆ, ಬೇವಿನ ಸೊಪು, 
ಮತ್ತು ಶುಭ ಸಂಕೇತವಾದ ಕೆಂಪು ಹೂಗಳನ್ನು ತೋರಣಕ್ಕೆ ಬಳಸುವುದು ಅವಶ್ಯ. 

ಸಿಹಿ – ಕಹಿ; ಕಷ್ಟ – ಸುಖ
ಯುಗಾದಿ ಹಬ್ಬವೆಂದರೆ ಅಲ್ಲಿ ಬೇವು-ಬೆಲ್ಲಕ್ಕೆ ವಿಶೇಷವಾದ ಪ್ರಾಮುಖ್ಯವಿದೆ. ಈ ಹಬ್ಬದ ಆಚರಣೆಯ ಅಂಗವಾಗಿ ಪರಸ್ಪರ ಬೇವು ಬೆಲ್ಲವನ್ನು ಹಂಚಿ ಅದನ್ನು ಸೇವಿಸುತ್ತಾರೆ. ಕಹಿಬೇವಿನ ಚಿಗುರು, ಅದರ ಹೂವು, ನೆನೆಸಿದ ಕಡಲೆಬೇಳೆ, ಜೀರಿಗೆ ಇಂಗು ಇತ್ಯಾದಿಗಳನ್ನು ಬೆರೆಸಿ ವಿಶೇಷ ನೈವೇದ್ಯವನ್ನೂ ತಯಾರಿಸಲಾಗುತ್ತದೆ ಮತ್ತದು ಪ್ರಜಾಪತಿಯಾದ ಬ್ರಹ್ಮದೇವನಿಗೆ ಅತ್ಯಂತ ಪ್ರಿಯವಾದುದು ಕೂಡ. 

ಬೇವು ಬೆಲ್ಲವನ್ನು ಸೇವಿಸುವಾಗ – 
ಶತಾಯುಃ ವಜ್ರದೇಹಾಯ ಸರ್ವ ಸಂಪತ್ಕರಾಯಚ. 
ಸರ್ವಾರಿಷ್ಠ ವಿನಾಶಾಯ ನಿಂಬಕಂದಳ ಭಕ್ಷಣಂ
ಎಂಬ ಸ್ತೋತ್ರವನ್ನು ಪಠಿಸುವುದರಿಂದ ಬೇವು ಬೆಲ್ಲದ ಭಕ್ಷಣೆಯ ಹಿಂದಿನ ಉದ್ದೇಶಗಳನ್ನು ನಾವು ಪುನರುಚ್ಚರಿಸಿದಂತಾಗುತ್ತದೆ. ಈ ಬೇವು ಬೆಲ್ಲವನ್ನು ಜತೆಯಾಗಿ ಸೇವಿಸುವುದರ ಹಿಂದೆ ಆಧ್ಯಾತ್ಮಿಕ ಕಾರಣಗಳಷ್ಟೇ ಅಲ್ಲದೆ ವೈಜ್ಞಾನಿಕ ಹಾಗೂ ಸಾಮಾಜಿಕ ಕಾರಣಗಳನ್ನೂ ಗುರುತಿಸಬಹುದು. 

ಬೇವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಬೇವನ್ನು ಹಾಗೂ ಬೆಲ್ಲಗಳನ್ನು ಜತೆಯಾಗಿ ತಿನ್ನುವುದರಿಂದ ಬೇವಿನ ಎಲೆಯಲ್ಲಿರುವ ವಾತ ದೋಷವು ಶಮನವಾಗುತ್ತದೆ. ಅಲ್ಲದೆ ಇದಕ್ಕೆ ಸಾಮಾಜಿಕ ಮೌಲ್ಯವೂ ಇಲ್ಲದಿಲ್ಲ. ಬೇವು ಪಾಪ, ಕಷ್ಟ ಹಾಗೂ ದುಃಖಗಳನ್ನು ಪ್ರತಿನಿಧಿಸಿದರೆ, ಬೆಲ್ಲವು ಪುಣ್ಯ ಹಾಗೂ ಸುಖವನ್ನು ಪ್ರತಿನಿಧಿಸುತ್ತದೆ. ಈ ಎರಡನ್ನೂ ಜತೆಯಾಗಿ ಸೇವಿಸುವುದು ಜೀವನವು ಸುಖ, ದುಃಖಗಳ ಸಮ ಮಿಶ್ರಣ ಎಂಬ ಘನತತ್ವವನ್ನು ಸೂಚಿಸುತ್ತದೆ. ಜನಪದರು ಇದನ್ನು ತಮ್ಮ ಆಡು ಮಾತುಗಳಲ್ಲಿ ಅತ್ಯಂತ ಸೊಗಸಾಗಿ ಮತ್ತು ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದಾರೆ. 

ಬೇವೇನೋ ಬೆಲ್ಲವೇನೋ? ಎಲ್ಲಾನೂ ಒಂದೇನೆ
ಬೇವೂ ಇರ್ಬೇಕೋ, ಬಾಳ್ನಾ$Âಗೆ, ಯುಗಾದೀಗೆ
ಬೇವು ನುಂಗಿ ಬೆಲ್ಲ ತಿನ್ನೋ… ಓಓ ಜಾಣ|
ಅಂದರೆ ಜೀವನದಲ್ಲಿ ಕಹಿಯನ್ನು ಹಾಗೆಯೇ ನುಂಗಿಕೊಂಡು ಬದುಕಿನ ಸಿಹಿಯನ್ನು ಮಾತ್ರ ಸವಿಯಬೇಕು ಎಂಬರ್ಥ. 
ಈ ಹಬ್ಬವು ಕೇವಲ ಆಧ್ಯಾತ್ಮಿಕ ಮಾತ್ರವಲ್ಲದೆ ಸಾಂಸ್ಕೃತಿಕ, ಸಾಮಾಜಿಕ ಪ್ರಾಧಾನ್ಯದ ಮಜಲನ್ನೂ ಹೊಂದಿದೆ ಎನ್ನುವುದಕ್ಕೆ ಈ ಹಬ್ಬದ ಪ್ರಯುಕ್ತ ಜನರು ತೊಡಗಿಸಿಕೊಳ್ಳುವ ಹಲವಾರು ಜಾನಪದ ಮತ್ತು ಸಾಹಸ ಕ್ರೀಡೆಗಳು, ತಯಾರಿಸುವ ವೈವಿಧ್ಯಮಯ ಖಾದ್ಯಗಳು ಮತ್ತು ಮರುದಿನ ನಡೆಯುವ ವರ್ಷ ತಡುಕುವಿನಂತಹ ಆಚರಣೆಗಳೇ ಸಾಕ್ಷಿ. ಹೀಗೆ ಆಚರಿಸಲ್ಪಡುವ ಯುಗಾದಿ ಹಬ್ಬವು ನವೋಲ್ಲಾಸದ ಚೈತನ್ಯವನ್ನು ಪಸರಿಸುವುದರೊಂದಿಗೆ ಮುಂಬರುವ ಸಂವತ್ಸರಕ್ಕೆ ಅನುವಾಗುವ ಮಾನಸಿಕ ಸಂಕಲ್ಪವನ್ನು ರೂಪಿಸುತ್ತದೆ. 

ಮನೆ ಹಾಗೂ ಮನಸ್ಸಿಗೆ ನವ ಹುರುಪಿನ ತೋರಣವನ್ನು ಕಟ್ಟುವುದರೊಂದಿಗೆ ದುರ್ಮುಖೀ ಸಂವತ್ಸರಕ್ಕೆ ವಿದಾಯ ಹೇಳಿ ಹೇಮಲಂಬಿ ಸಂವತ್ಸರವನ್ನು ಬರಮಾಡಿಕೊಳ್ಳೋಣ.  

-ಸಂದೇಶ್‌ ಎಚ್‌. ನಾಯ್ಕ ಹಕ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next