ಕಲಬುರಗಿ: ಶ್ರೀ ಹೇವಿಳಂಬಿನಾಮ ಸಂವತ್ಸರ ಯುಗಾದಿ ಪಾಡ್ಯದಂದು ಮಾ. 29ರಂದು ಬೆಳಗ್ಗೆ 10:00ಕ್ಕೆ ಡಾ| ಪಿ.ಎಸ್. ಶಂಕರ ಪ್ರತಿಷ್ಠಾನದ ವತಿಯಿಂದ ಜನಪದ ಗೀತೆ, ತಬಲಾ, ಚಿತ್ರಕಲೆ ಹಾಗೂ ರಂಗೋಲಿ ಪ್ರದರ್ಶನದ ಚೈತ್ರೋತ್ಸವ – 2017 ಕಾರ್ಯಕ್ರಮ ನಗರದ ರೋಟರಿ ಕ್ಲಬ್‌ನ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ| ನರೇಂದ್ರ ಬಡಶೇಷಿ ತಿಳಿಸಿದ್ದಾರೆ.
ಕಿರುತೆರೆ ಹಾಗೂ ಚಲನಚಿತ್ರ ನಟಿ ಚಿತ್ಕಲಾ ಬಿರಾದಾರ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುವರು. ಪ್ರತಿಷ್ಠಾನದ ಅಧ್ಯಕ್ಷೆ ಅಂಬಿಕಾ ಶಂಕರ ಅಧ್ಯಕ್ಷತೆ ವಹಿಸುವರು. ಕಲಬುರಗಿ ರೋಟರಿ ಕ್ಲಬ್ ಅಧ್ಯಕ್ಷ ಸಂಜುಕುಮಾರ ಬುಸ್ಸಾ ಹಾಗೂ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ಭಾಗವಹಿಸಲಿದ್ದಾರೆ.
ಜನಪದ ಗೀತೆ ಗಾಯಕಿ ಆಳಂದ ತಾಲೂಕು ತಡಕಲ್‌ದ ಮೇಘಾ ವಿಲಾಸ ಚಿತಕೋಟಿ, ರಂಗೋಲಿ ಕಲಾವಿದೆ ಆಳಂದ ತಾಲೂಕು ನರೋಣಾದ ನಿವಾಸಿ ಶೃತಿ ಜಿ. ಹೀರಾ, ತಬಲಾ ಕಲಾವಿದ ಕುಮಾರ ವಿಷ್ಣು ಬಡಶೇಷಿ ಕಲಬುರಗಿ ಹಾಗೂ ಚಿತ್ರ ಕಲಾವಿದ ಕುಮಾರ ಕಾರ್ತಿಕ ಅಮೃತ ಸಾಹು ಕಲಬುರಗಿ ಅವರಿಗೆ 2017ನೇ ಸಾಲಿನ ಡಾ| ಪಿ. ಎಸ್.ಶಂಕರ ಚಿಗುರು ಚಿನ್ಮಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.
ಪುರಸ್ಕಾರ 1111 ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಫಲ-ತಾಂಬೂಲ ಒಳಗೊಂಡಿದೆ. 2003ರಿಂದ 2016ರ ವರೆಗೆ ಒಟ್ಟು 50 ಜನ ಬಾಲ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಡಾ| ಪಿ.ಎಸ್. ಶಂಕರ ಚಿಗುರು ಚಿನ್ಮಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಈ ವರ್ಷದ ಒಂದು ವಿಶೇಷತೆ ಎಂದರೆ ಆಳಂದ ತಾಲೂಕಿನ ನೆಲ್ಲೂರ, ಚಿತ್ತಾಪುರ ತಾಲೂಕಿನ ಬೆಳಗೇರಾ, ಕರದಾಳ, ಶೆಳ್ಳಗಿ ಹಾಗೂ ಕಲಬುರಗಿ ನಗರದ ಕೆಎಸ್‌ಆರ್‌ಪಿ ಕಾಲೋನಿಯ ಸರ್ಕಾರಿ ಪ್ರೌಢಶಾಲೆಗಳಿಗೆ ತಲಾ ಒಂದು ನೂರು ಪುಸ್ತಕಗಳನ್ನು ಡಾ| ಪಿ.ಎಸ್. ಶಂಕರ ಪ್ರತಿಷ್ಠಾನದಿಂದ ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಡಾ| ಪಿ.ಎಸ್. ಶಂಕರ ಪ್ರತಿಷ್ಠಾನ, ರೋಟರಿ ಕ್ಲಬ್ ,ದಕ್ಷಿಣ ಕನ್ನಡ ಸಂಘ ಹಾಗೂ ಶ್ರೀಗುರು ಪುಟ್ಟರಾಜ ಸಂಗೀತ ವಿದ್ಯಾಲಯ ಕಲಬುರಗಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕಲಾಸಕ್ತರು ಭಾಗವಹಿಸಿ ವಿವಿಧ ಕಲೆಗಳಲ್ಲಿ ಅರಳುತ್ತಿರುವ ಬಾಲ ಪ್ರತಿಭೆಗಳ ಕಲಾ ಪ್ರದರ್ಶನ ವೀಕ್ಷಿಸಿ ಪ್ರೋತ್ಸಾಹಿಸಬೇಕು. ಅಲ್ಲದೇ ಸಾವಿತ್ರಿ ಬಸವರಾಜ ಸಗರ ಅವರು ಅಭಿಮಾನದಿಂದ ಸಿದ್ದಪಡಿಸಿಕೊಂಡು ತರುವ “ಬೇವು-ಬೆಲ್ಲ’ದ ಪಾನಕ ಸ್ವೀಕರಿಸುವಂತೆ ಅವರು ಮನವಿ ಮಾಡಿದ್ದಾರೆ.