ಬೆಂಗಳೂರು: ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜುಲೈ 15 ರಂದು ಸಿನಿಮಾ ತೆರೆ ಕಾಣಲಿದೆ. ಸಿನಿಮಾ ತಂಡದಿಂದ ವಿಶೆಷ ಮಾಹಿತಿಯೊಂದು ಹೊರ ಬಿದ್ದಿದೆ. ಅದು ಸಿನಿಮಾ ವಿತರಣೆಯ ವಿಚಾರವಾಗಿ. ಯುಎಫ್ಓ ಚೇಸ್ ಸಿನಿಮಾವನ್ನು ವಿತರಿಸುವ ಜವಾಬ್ದಾರಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಒಂದು ಸಿನಿಮಾ ಕೆಲವೊಂದು ವಿಚಾರಗಳಿಂದ ಪ್ರಚಾರ ಪಡೆದುಕೊಳ್ಳುತ್ತದೆ. ಒಂದು ನಿರ್ದೇಶಕ ಯಾರು ಎಂಬ ವಿಚಾರಕ್ಕೆ, ಸಿನಿಮಾಗೆ ಬಂಡವಾಳ ಹೂಡಿದ್ದು ಯಾವ ಸಂಸ್ಥೆ ಎಂಬುದರ ಮೇಲೆ ನಿರೀಕ್ಷೆಯನ್ನು ಹೆಚ್ಚಿಸಿದರೆ ಮತ್ತೊಂದು ವಿತರಣೆ ಹಕ್ಕನ್ನು ಯಾರು ಪಡೆದರು ಎಂಬ ಕಾರಣಕ್ಕೂ ಸಿನಿಮಾ ಬಗೆಗಿನ ಕೌತುಕತೆ ಹೆಚ್ಚಾಗಲು ಕಾರಣವಾಗುತ್ತದೆ.
ಯಾಕೆಂದರೆ ಸಿನಿಮಾ ಮಾಡುವುದು ಒಂದು ಸವಾಲಿನ ಕೆಲಸವಾದರೆ ಅದನ್ನು ವಿತರಿಸುವುದು ಕೂಡ ಮತ್ತೊಂದು ಸವಾಲಿನ ಕೆಲಸವಾಗಿರುತ್ತದೆ. ಆದರೆ ಕಥೆಯಲ್ಲಿನ ಗಡಸುತನ, ಜನತೆಗೆ ಇಷ್ಟವಾಗುವಂತ ಕಂಟೆಂಟ್ ಇದ್ದರೆ ವಿತರಣಾ ಸಂಸ್ಥೆಯೇ ಮುಂದೆ ಬರುತ್ತದೆ. ಅಂಥದ್ದೊಂದು ಸದಾವಕಾಶ ಒಲಿದಿರುವುದು ಚೇಸ್ ಸಿನಿಮಾಗೆ.
ಯುಎಫ್ಓ ಸಂಸ್ಥೆ ಸ್ಟ್ರೀಮಿಂಗ್ ಹಾಗೂ ಡಿಸ್ಟ್ರಿಬ್ಯೂಷನ್ ನಲ್ಲಿ ಸಾಕಷ್ಟು ಫೇಮಸ್ ಆಗಿರುವಂತ ಸಂಸ್ಥೆ. ಈ ಸಂಸ್ಥೆ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೂ ಪದಾರ್ಪಣೆ ಮಾಡಿದ್ದು, ಚೇಸ್ ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿದೆ. ಇದು ಕೇವಲ ಚಿತ್ರತಂಡಕ್ಕೆ ಮಾತ್ರವಲ್ಲ, ಕನ್ನಡ ಚಿತ್ರರಂಗದ ಪಾಲಿಗೂ ಖುಷಿಯ ವಿಚಾರವಾಗಿದೆ. ಈ ಮೂಲಕ ಕೆಜಿಎಫ್ ಸರಣಿ ಮತ್ತು ಚಾರ್ಲಿಯ ಬಳಿಕ ವಿತರಣೆಯಲ್ಲಿ ಪ್ಯಾನ್ ಇಂಡಿಯಾ ಮಾನ್ಯತೆ ಪಡೆದುಕೊಳ್ಳುವಲ್ಲಿ ಚೇಸ್ ಯಶಸ್ವಿಯಾಗುವ ನಿರೀಕ್ಷೆ ಹುಟ್ಟಿಸಿದೆ.
ಚೇಸ್ ಸಿನಿಮಾವನ್ನು ವಿಲೋಕ್ ಶೆಟ್ಟಿ ನಿರ್ದೇಶನ ಮಾಡಿದ್ದು, ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ರಾವ್, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ಬೃಹತ್ ತಾರಾಗಣವಿದೆ. ಮ್ಯಾಕ್ಸ್ ಎಂಬ ಶ್ವಾನ ಕೂಡ ಈ ಸಿನಿಮಾದಲ್ಲಿ ಒಂದೊಳ್ಳೆ ಪಾತ್ರದಲ್ಲಿ ನಟಿಸಿದೆ.
ಉಳಿದಂತೆ ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.