Advertisement

ಎರಡು ವರ್ಷ ಕಳೆದರೂ ಮುಗಿಯದ ಸೇತುವೆ ಕೆಲಸ

12:50 AM Mar 03, 2020 | Sriram |

ಉದ್ಯಾವರ: ಇಲ್ಲಿನ ಜನರ ಬಹುಬೇಡಿಕೆಯಾದ ಸಂಪರ್ಕ ಸೇತುವೆ ಕಾಮಗಾರಿ ಇದೀಗ ಮೂರನೇ ಮಳೆಗಾಲ ಸಮೀಪಿಸುತ್ತಿದ್ದರೂ ಇನ್ನೂ ಮುಗಿದಿಲ್ಲ ಉದ್ಯಾವರ ಗ್ರಾ.ಪಂ. ವ್ಯಾಪ್ತಿಯ ಪಿತ್ರೋಡಿ -ಜಾರುಕುದ್ರು ಸಂಪರ್ಕ ಸೇತುವೆ ನಮ್ಮ ರಸ್ತೆ ಯೋಜನೆ ಯಡಿ 6 ಕೋಟಿ 54 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಮುಗಿಯಬೇಕಿತ್ತು. ಆದರೆ 2019ರ ಮೇ ಯಲ್ಲೇ ಮಳೆಗಾಲ ನೆಪದಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು ಬಳಿಕ ಕುಂಟುತ್ತಿದೆ.
ಜನವರಿ ಒಳಗೆ ಕಾಮಗಾರಿ ಮುಕ್ತಾಯಕ್ಕೆ ಯೋಜನೆಯಡಿ ಕಾಲಾವಕಾಶ ಇದೆ ಎಂದು ಯೋಜನಾ ವಿಭಾಗದ ಅಧಿಕಾರಿ ರಮೇಶ್‌ ಹೆಚ್‌.ವಿ. ಭರವಸೆ ನೀಡಿದ್ದರು. ಆದರೆ ಕಾಮಗಾರಿ ಪಿಲ್ಲರ್‌ ಹಂತದಿಂದ ಮೇಲೇಳುವುದೂ ನಿಧಾನವಾಗಿದೆ.

Advertisement

ಬವಣೆಗೆ ಮುಕ್ತಿ ಎಂದು ?
ಪಾಪನಾಶಿನಿ ಹೊಳೆಗೆ ಅಡ್ಡಲಾಗಿ ಜಾರುಕುದ್ರುಗೆ ಸಂಪರ್ಕವನ್ನು ಕಲ್ಪಿಸಲು 175 ಮೀಟರ್‌ ಉದ್ದ ಮತ್ತು 7.5 ಮೀಟರ್‌ ಅಗಲದ ಈ ಸೇತುವೆ ನಿರ್ಮಾಣವಾಗುತ್ತಿದೆ. ಈಗ ಅರೆಬರೆ ಕಾಮಗಾರಿಯಿಂದ ಜನರು ಆತಂಕಿತರಾಗಿದ್ದಾರೆ.

ತಾಂತ್ರಿಕ ತೊಂದರೆಗಳಿಂದ ಕಾಮಗಾರಿಗೆ ಅಡ್ಡಿ
ಸೇತುವೆಗೆ ತಲಾ 25 ಮೀಟರ್‌ ಅಂತರದಲ್ಲಿ 6 ಪಿಲ್ಲರ್‌ ಮತ್ತು 2 ಅಪ್ಟಿಟ್ಯೂ ಅಳವಡಿಸಿ, ರಸ್ತೆ ಸಂಪರ್ಕವನ್ನು ಕಲ್ಪಿಸಬೇಕಿತ್ತು. ಪಿಲ್ಲರ್‌ ಅಳವಡಿಸಲು ನದಿಯಾಳದಲ್ಲಿ ಬಂಡೆ ಸಿಗದೆ ತೊಂದರೆ ಅನುಭವಿಸುವಂತಾಗಿತ್ತು. ಮತ್ತೆ ತಂತ್ರಜ್ಞರ ತಾಂತ್ರಿಕ ಸಲಹೆಯಂತೆ ಫೌಂಡೇಶನ್‌ನ್ನು ವೆಲ್‌ಸಿಂಕಿಂಗ್‌ ಮಾದರಿಯಲ್ಲಿ ಪೂರ್ಣಗೊಳಿಸಲಾಗಿದೆ. ಉಳಿದಂತೆ ಗರ್ಡರ್‌ ಮಾಡಿ, ಸ್ಲಾ Âಬ್‌ ಅಳವಡಿಸಿ ಸೇತುವೆಯ ಬಾಕಿ ಉಳಿದ ಕಾರ್ಯ ನಡೆಸಲಾಗುತ್ತದೆ ಎನ್ನಲಾಗಿದೆ.

ಪಡುಕರೆ ಕನಕೋಡದವರಿಗೂ ಸಮಸ್ಯೆ
ಸೇತುವೆ ಪೂರ್ಣಗೊಳ್ಳದ್ದರಿಂದ ಪಡುಕರೆ-ಕನಕೋಡದವರಿಗೂ ಆತಂಕವಿದೆ. ಸಮುದ್ರ-ನದಿ ಮಧ್ಯೆ ಇಲ್ಲಿನ ನಿವಾಸಿಗಳಿದ್ದು ಹಾಕಿದ ಮಣ್ಣಿನಿಂದಾಗಿ ಮಳೆಗಾಲದಲ್ಲಿ ನದಿ ಕೊರೆತದ ಭೀತಿ ಇದೆ. ನದಿ ಪಡುಕರೆ ಭಾಗಕ್ಕೆ ರಭಸವಾಗಿ ಹರಿದು ಮಟ್ಟು ಭಾಗದಿಂದ ಹರಿದು ಬರುವ ಪಿನಾಕಿನಿ ನದಿ ಜತೆ ಸೇರಿ ಹೆಚ್ಚಿನ ಕೊರೆತ ಸಂಭವಿಸುತ್ತದೆ ಎಂದು ನಿವಾಸಿಗಳು ಹೇಳುತ್ತಾರೆ. ಆದರೆ ಸೇತುವೆ ಪೂರ್ಣಗೊಳಿಸದೆ ಮಣ್ಣು ತೆರವು ಮಾಡಿದರೆ ಕುದ್ರುವಿಗೆ ಸಂಪರ್ಕವೇ ಕಡಿಯುವ ಭೀತಿ ಇದೆ.

ಶೀಘ್ರ ನಿರ್ಮಾಣ
ಸಂಪರ್ಕ ಸೇತುವೆ ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕೆಂದು ಶಾಸಕರು, ಎಂಜಿನಿಯರ್‌ ಗಮನಕ್ಕೆ ತರಲಾಗಿದೆ. ತಾಂತ್ರಿಕ ತೊಂದರೆಯನ್ನು ಬಗೆ ಹರಿಸಿಕೊಂಡು ಸೇತುವೆ ಶೀಘ್ರದಲ್ಲಿ ನಿರ್ಮಿಸುವಂತೆ ಸ್ಥಳಕ್ಕೆ ತೆರಳಿ ಪುನಃ ಪರಿಶೀಲನೆಯನ್ನು ನಡೆಸಲಾಗುತ್ತದೆ
-ದಿನಕರ ಬಾಬು, ಅಧ್ಯಕ್ಷ, ಉಡುಪಿ ಜಿ.ಪಂ.

Advertisement

ಗುತ್ತಿಗೆದಾರರಿಗೆ ಸೂಚನೆ
ತಾಂತ್ರಿಕ ತೊಂದರೆಯಿಂದ ಯೋಜನೆಯು ಪೂರ್ಣಗೊಳ್ಳುವಲ್ಲಿ ವಿಳಂಬವಾಗಿದೆ. ಜೂನ್‌ ತಿಂಗಳೊಳಗಾಗಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
-ಸೂರ್ಯನಾರಾಯಣ ಭಟ್‌, ಯೋಜನಾ ವಿಭಾಗದ ತಾಂತ್ರಿಕ ಸಹಾಯಕ

Advertisement

Udayavani is now on Telegram. Click here to join our channel and stay updated with the latest news.

Next