Advertisement

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

03:19 PM Nov 26, 2024 | Team Udayavani |

ಉಡುಪಿ: ಉತ್ತರಾಖಂಡದ ಯುವಕರೊಬ್ಬರು ಬಾಲ ಕಾರ್ಮಿಕ ಪದ್ಧತಿ, ಅಪೌಷ್ಟಿಕತೆ, ಭಿಕ್ಷಾಟನೆ ವಿರುದ್ಧ ಮತ್ತು ಮಕ್ಕಳ ಶಿಕ್ಷಣ ಹಕ್ಕಿಗಾಗಿ 10 ವರ್ಷಗಳಿಂದ ಬರಿಗಾಲಿನಲ್ಲಿ ದೇಶ ಸಂಚಾರ ಮಾಡುತ್ತಿದ್ದಾರೆ. ಅಜಯ್‌ ಒಲಿ ಎಂಬ 32 ವರ್ಷದ ಈ ಯುವಕ ಇತ್ತೀಚೆಗೆ ಉಡುಪಿಯಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಂವಾದ ನಡೆಸಿದರು.

Advertisement

2015ರ ಸೆಪ್ಟಂಬರ್‌ 29ರಂದು ಉತ್ತರಾಖಂಡ ರಾಜ್ಯದ ಪಿಥೋರಘರ್‌ ಜಿಲ್ಲೆಯಿಂದ ಬರಿಗಾಲಿನಲ್ಲಿ ದೇಶ ಸುತ್ತುವ ಒಲಿ ಅಭಿಯಾನಕ್ಕೆ ಚಾಲನೆ ದೊರೆತಿದೆ. ಈವರೆಗೆ ದೇಶದ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುತ್ತಾಡಿದ್ದಾರೆ. ರಾಷ್ಟ್ರದ 4,50,000ಕ್ಕೂ ಹೆಚ್ಚು ಮಕ್ಕಳು/ಯುವ ಜನತೆಯೊಂದಿಗೆ ಉತ್ತರ ಭಾರತದಲ್ಲಿ 120ಕ್ಕೂ ಹೆಚ್ಚು ನಗರಗಳಲ್ಲಿ ಬಾಲ ಕಾರ್ಮಿಕ ಮತ್ತು ಭಿಕ್ಷಾಟನೆ ವಿರುದ್ಧ ಅಭಿಯಾನ ನಡೆಸಿದ್ದಾರೆ. ವಿಶೇಷವಾಗಿ 17,000ಕ್ಕೂ ಹೆಚ್ಚು ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತಂದಿದ್ದಾಗಿ ಅವರು ಹೇಳುತ್ತಾರೆ.

ಘನ್‌ಶ್ಯಾಮ್‌ ಓಲಿ ಎಂಬ ಎನ್‌ಜಿಒ ಮೂಲಕ ಮಕ್ಕಳ ಕಲ್ಯಾಣ ಸಂಘ ನಡೆಸುತ್ತಿರುವ ಇವರು ಅದರ ಮೂಲಕ ಹಿಂದುಳಿದ ಮಕ್ಕಳಿಗೆ ಶಿಕ್ಷಣ, ಊಟ ಮತ್ತು ಇತರ ಅಗತ್ಯಗಳನ್ನು ಒದಗಿಸುತ್ತಿದ್ದಾರೆ.

ಮಕ್ಕಳ ಕಲ್ಯಾಣ, ಜಾಗೃತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಯುವ ಪ್ರಶಸ್ತಿ ಪಡೆದಿದ್ದಾರೆ. ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಇವರ ಹೆಸರಿನಲ್ಲಿದೆ. ಉನ್ಮುಕ್ತಿ, ಎಜುಕೇಶನ್‌ ಆನ್‌ ವ್ಹೀಲ್‌, ಮೇರಿ ಸಹೇಲಿ ಮೊದಲಾದ ಸ್ವಯಂ ನಿಧಿ ಯೋಜನೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಅಭಿಯಾನ ಆರಂಭವಾಗಿದ್ದು ಹೀಗೆ….
ಶೈಕ್ಷಣಿಕ ಉದ್ದೇಶಕ್ಕೆ ದತ್ತು ಪಡೆದ ಮಗುವೊಂದು ಅಪೌಷ್ಟಿಕತೆಯಿಂದ ಸಾವನ್ನಪ್ಪಿದ್ದರಿಂದ ಬೇಸರಗೊಂಡ ಅವರು, ದೇಶಾದ್ಯಂತ ಬರಿಗಾಲಿನಲ್ಲಿ ಸಂಚರಿಸಿ ಭಿಕ್ಷಾಟನೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರಯತ್ನಿಸುವ ಸಂಕಲ್ಪ ಮಾಡಿದರು. ಅಲ್ಲಲ್ಲಿ ನಿತ್ಯ ಸಭೆ ನಡೆಸುವುದು, ಒಂದಿಷ್ಟು ಚರ್ಚೆ, ಸಂವಾದ, ಶಾಲಾ ಕಾಲೇಜುಗಳಿಗೆ ಭೇಟಿ, ಯುವ ಜತೆಯೊಂದಿಗೆ ಮಾತುಕತೆ ಇವೆ ಅಜಯ್‌ ಓಲಿ ದಿನಚರಿ. ಅವರು ಒಂದು ಊರಿಗೆ ಹೋದರೆ ಅಲ್ಲಿ 15-20 ಕಿ.ಮೀ. ಬರಿಗಾಲಲ್ಲಿ ಓಡಾಡುತ್ತಾರೆ. ಪ್ರವಾಸೋದ್ಯಮ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಇವರು ಮಾನಸಿಕ ಆರೋಗ್ಯ ಮತ್ತು ವೃತ್ತಿ ಕೌಶಲ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 7 ಗ್ರಂಥಾಲಯ ಮತ್ತು ಶಿಕ್ಷಣ ಕೇಂದ್ರ ನಡೆಸುತ್ತಿದ್ದಾರೆ.

Advertisement

ಭಿಕ್ಷಾಟನೆ, ಬಾಲಕಾರ್ಮಿಕ ಪದ್ಧತಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಜನ ಜಾಗೃತಿ ರೂಪಿಸಬೇಕು ಎಂಬ ಉದ್ದೇಶದಿಂದ 2015ರಲ್ಲಿ ಅಭಿಯಾನ ಶುರು ಮಾಡಿದೆ. ಜನಜಾಗೃತಿಯ ಭಾಗವಾಗಿ ಉಡುಪಿಗೆ ಭೇಟಿ ನೀಡಿದ್ದೇನೆ. ಉಡುಪಿ ಮತ್ತು ಮಣಿಪಾಲದಲ್ಲಿನ ಅಭಿಯಾನದ ಅನುಭವ ಸ್ಮರಣೀಯವಾಗಿದೆ.
– ಅಜಯ್‌ ಓಲಿ

ಕರ್ನಾಟಕದಲ್ಲಿ ಒಲಿ ಓಡಾಟ
ವಿಜಯನಗರ ಜಿಲ್ಲೆಗೆ ಬಂದಿದ್ದ ಒಲಿ ಅವರು ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಕಾಸರಗೋಡು ಸುತ್ತಾಡಿ ಉಡುಪಿಗೆ ಬಂದಿದ್ದರು. ಉಡುಪಿಯಲ್ಲಿ ಬಾಲಕಿಯರ ಪದವಿಪೂರ್ವ ಕಾಲೇಜು ಮತ್ತು ಸಿಲಾಸ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ಗ‌ಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಜತೆಗೆ ರಥಬೀದಿ, ನಗರಸಭೆ, ಬಸ್‌ ನಿಲ್ದಾಣ ಮೊದಲಾದ ಕಡೆಗಳಲ್ಲಿ ನಡಿಗೆಯ ಮೂಲಕ ಜನಜಾಗೃತಿ ಮೂಡಿಸಿದರು. ಇಲ್ಲಿಂದ ಅಂಕೋಲಾ, ಗೋವಾ ಮತ್ತು ಹಿಮಾಚಲಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇವರ ಓಡಾಟಕ್ಕೆ ಎಜುಕೇಶನ್‌ ಆನ್‌ ವ್ಹೀಲ್‌ ಎಂದು ಹೆಸರು.

-ದಿವ್ಯಾ ನಾಯ್ಕನಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next