Advertisement

Udupi: ಶ್ರೀಕೃಷ ಮಠಕ್ಕೆ ದಾರಿ ಯಾವುದಯ್ಯ? ದಾರಿ ತಪ್ಪಿಸುವ ಗೂಗಲ್‌ ಮ್ಯಾಪ್!

05:01 PM Jan 12, 2024 | Team Udayavani |

ಉಡುಪಿ: ವರ್ಷಾಂತ್ಯ ಹಾಗೂ ಪರ್ಯಾಯೋತ್ಸವಕ್ಕೆ ದಿನಗಣನೆ ಆರಂಭ ಗೊಂಡಿದೆ. ವರ್ಷಾಂತ್ಯಕ್ಕೆ ಉಡುಪಿಗೆ ಪ್ರವಾಸಕ್ಕೆ
ಆಗಮಿಸುವವರು ದಾರಿ ತಪ್ಪುವ ಜತೆಗೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ವಾಹನಗಳ ದಟ್ಟಣೆಗೆ ಕಾರಣವಾಗುತ್ತಿದೆ.

Advertisement

ನಗರದಲ್ಲಿ ಶ್ರೀಕೃಷ್ಣ ಮಠಕ್ಕೆ ಹೋಗುವ ದಾರಿ ಎಲ್ಲಿ ಎಂಬುದೇ ಪ್ರವಾಸಿಗರ ಪ್ರಶ್ನೆಯಾಗಿದೆ. ಮಂಗಳೂರು ಭಾಗದಿಂದ ಗೂಗಲ್‌ ಮ್ಯಾಪ್‌ ಹಾಕಿಕೊಂಡು ಬರುವ ಪ್ರವಾಸಿಗರು ಹಳೆ ಡಯಾನ ಡಯಾನ ಸರ್ಕಲ್‌ ಬಳಿಕ ಗೊಂದಲಕ್ಕೆ ಈಡಾಗುತ್ತಾರೆ.

ಯಾಕೆಂದರೆ ಹಲವಾರು ಮಾರ್ಗಗಳು ಶ್ರೀಕೃಷ್ಣ ದೇವಸ್ಥಾನದತ್ತ ತೋರಿಸುವುದು ಇದಕ್ಕೆ ಕಾರಣ.  ಕಲ್ಪನಾ ಟಾಕೀಸ್‌ನಿಂದ ತೆಂಕಪೇಟೆ ಮಾರ್ಗ, ಚಿತ್ತರಂಜನ್‌ ಸರ್ಕಲ್‌ನಿಂದ ವುಡ್‌ಲ್ಯಾಂಡ್‌ ಹೊಟೇಲ್‌ ಸಂಪರ್ಕಿಸುವ ರಸ್ತೆ, ಸಂಸ್ಕೃತ ಕಾಲೇಜು ಬಳಿ, ಸರ್ವಿಸ್‌ ಬಸ್‌ ನಿಲ್ದಾಣದಿಂದ ಮಸೀದಿ ಭಾಗದತ್ತ ತೆರಳುವ ರಸ್ತೆ, ಸಿಟಿಯಿಂದ ಬಲಕ್ಕೆ ತಿರುಗಿ ಒಳಮಾರ್ಗದಲ್ಲಿ ಮಠ ತಲುಪುವುದು, ಕಲ್ಸಂಕ ಮಾರ್ಗವಾಗಿ ಮಠಕ್ಕೆ ತಲುಪುವುದು ಹೀಗೆ ವಿವಿಧ ಮಾರ್ಗಗಳು ಪ್ರವಾಸಿಗರನ್ನು ದಾರಿ ತಪ್ಪಿಸುತ್ತಿವೆ. ಮಣಿಪಾಲ ಭಾಗದಿಂದ ಆಗಮಿಸುವವರು ದಾರಿ ತಪ್ಪಿ ಬಡಗುಪೇಟೆ ಮಾರ್ಗದತ್ತ ಹೋಗುವುದೂ ಇದೆ.

ನಿಜಕ್ಕೂ ದಾರಿ ಯಾವುದು?
ವಾಹನಗಳಲ್ಲಿ ಆಗಮಿಸುವವರು ಕಲ್ಸಂಕಕ್ಕೆ ಬಂದು ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸುವುದೇ ಉತ್ತಮ. ಸಾಮಾನ್ಯ ಬಸ್‌ಗಳಲ್ಲಿ ಆಗಮಿಸುವವರು ಬಸ್‌ನಿಲ್ದಾಣದಿಂದ ಒಳರಸ್ತೆಯ ಮೂಲಕ ನಡೆದುಕೊಂಡು ಕೂಡ ಬರಬಹುದು. ಶ್ರೀಕೃಷ್ಣ ಮಠದ ರಥಬೀದಿಗೆ ನಾಲ್ದಿಕ್ಕುಗಳಿಂದಲೂ ಪ್ರವೇಶ ವಿದೆಯಾದರೂ ಗೂಗಲ್‌ ಮ್ಯಾಪ್‌ ಮೂಲಕ ಹೋದರೆ ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ.

ಈಗ ಆಗುತ್ತಿರುವುದು ಕೂಡ ಅದುವೇ. ಟೂರಿಸ್ಟ್‌ ಬಸ್‌ಗಳು ಒಳರಸ್ತೆಯಲ್ಲಿ ಹೋಗುವುದರಿಂದ ಇತರ ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದೆ. ಬೃಹತ್‌ ಗಾತ್ರದ ವಾಹನಗಳನ್ನು ರಸ್ತೆಯ ಇಕ್ಕೆಲಗಳಲ್ಲಿಯೇ ಪಾರ್ಕಿಂಗ್‌ ಮಾಡುವುದು ಕೂಡ
ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ. ನಗರದ ಒಳರಸ್ತೆಯಲ್ಲಿ ಇಂತಹ ಸಮಸ್ಯೆ ಉದ್ಭವಿಸಿದರೆ ಅದರ ಪರಿಣಾಮ ಕಲ್ಸಂಕ ಸಹಿತ ಇಡೀ ನಗರದಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ.

Advertisement

ಗ್ರಾಹಕರಿಗಷ್ಟೇ ಪಾರ್ಕಿಂಗ್‌!
ಕೆಲವು ಅಂಗಡಿ-ಮುಂಗಟ್ಟುಗಳ ಎದುರು ಪಾರ್ಕಿಂಗ್‌ ಫಾರ್‌ ಕಸ್ಟಮರ್ಸ್‌ ಓನ್ಲಿ (ಗ್ರಾಹಕರಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ) ಎಂದು ಫ‌ಲಕ ಅಳವಡಿಸಿರುವುದು ಕಂಡುಬರುತ್ತಿದೆ. ಆದರೆ ಸಾರ್ವಜನಿಕ ರಸ್ತೆಯ ಬದಿಯಲ್ಲಿಯೂ ವಾಹನ ನಿಲ್ಲಿಸದಂತೆ ಎಚ್ಚರಿಕೆ ನೀಡುತ್ತಾರೆ. ಅದೇ ಗ್ರಾಹಕರಾದರೆ ನಿಲ್ಲಿಸಬಹುದು. ಇಂತಹ ನಿಯಾಮವಳಿಗಳಿಂದಾಗಿ ವಾಹನ ಸವಾರರು -ಅಂಗಡಿ ಮಾಲಕರೊಂದಿಗೆ ವಾಗ್ವಾದಕ್ಕೆ ಕಾರಣ ವಾಗುತ್ತಿದೆ. ಅಲ್ಲದೆ ಬಡಗುಪೇಟೆ, ತೆಂಕಪೇಟೆ
ಯಂತಹ ಕಿರಿದಾದ ರಸ್ತೆಯ ಎರಡೂ ಮಗ್ಗುಲಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದು ಕೂಡ ದಟ್ಟಣೆಗೆ ಪ್ರಮುಖ ಕಾರಣವಾಗಿ ಪರಿಣಮಿಸುತ್ತಿದೆ.

ದಟ್ಟಣೆ ನಿರ್ವಹಿಸಬೇಕಾದ ಸ್ಥಳಗಳು 
ಕಲ್ಸಂಕ, ತೆಂಕಪೇಟೆ, ಬಡಗುಪೇಟೆ, ಮಾರುಥಿ ವೀಥಿಕಾ, ಉಡುಪಿ ನಗರ, ಸರ್ವಿಸ್‌ ಬಸ್‌ ನಿಲ್ದಾಣದ ಬಳಿ, ಹಳೇ ಡಯನ ಸರ್ಕಲ್‌, ಪಿಪಿಸಿ ರಸ್ತೆ ಭಾಗಗಳಲ್ಲಿ ವಿಪರೀತ ದಟ್ಟಣೆ ಕಂಡು ಬರುತ್ತಿದ್ದು, ಇಲ್ಲಿಯೂ ಸಂಚಾರ ಪೊಲೀಸರು ಅಥವಾ ಗೃಹರಕ್ಷಕ ದಳದ ಸಿಬಂದಿಯನ್ನು ನೇಮಕ ಮಾಡಿದರೆ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ಸಾರ್ವಜನಿಕರ ಅನಿಸಿಕೆ. ಹಾಗೆಯೇ ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡುವ ವಾಹನಗಳಿಗೆ ದಂಡ ವಿಧಿಸುವ ಜತೆಗೆ ಲಾಕ್‌ ಮಾಡುವ ಪ್ರಕ್ರಿಯೆ ಆರಂಭಿಸಿದರೆ ಚಾಲಕರಿಗೂ ಸ್ವಯಂ ಜಾಗೃತಿ ಬರಲು ಸಾಧ್ಯವಿದೆ ಎನ್ನುತ್ತಾರೆ ಸ್ಥಳೀಯ ನಾಗರಿಕರು.

ಶೀಘ್ರ ಅಳವಡಿಕೆ
ಶ್ರೀಕೃಷ್ಣ ಮಠಕ್ಕೆ ಹೋಗುವ ಪ್ರವಾಸಿಗರಿಗೆ ಸೂಕ್ತ ನಾಮಫ‌ಲಕ ಇಲ್ಲದ ಕಾರಣ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ.
ಈ ಬಗ್ಗೆ ಶ್ರೀಕೃಷ್ಣ ಮಠದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಆಯಾಕಟ್ಟಿನ ಭಾಗದಲ್ಲಿ ಸೂಚನ ಫ‌ಲಕ ಅಳವಡಿಸಲು ಕ್ರಮ
ತೆಗೆದುಕೊಳ್ಳಲಾಗುವುದು.
-ರಾಯಪ್ಪ, ಪೌರಾಯುಕ್ತರು, ನಗರಸಭೆ

ಸೂಕ್ತ ಕ್ರಮ
ನಗರದ ಆಯಾಕಟ್ಟಿನ ಭಾಗದಲ್ಲಿ ಈಗಾಗಲೇ ಟ್ರಾಫಿಕ್‌ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಣ ಮಾಡುತ್ತಿದ್ದಾರೆ. ಪಾರ್ಕಿಂಗ್‌
ಪ್ರದೇಶ ಹೊರತುಪಡಿಸಿ ಇತರೆಡೆ ವಾಹನ ನಿಲುಗಡೆ ಮಾಡುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಲಿದೆ. ಅಂತಹವರ ವಿರುದ್ಧ ಸಂಚಾರ ನಿಯಮಾವಳಿಯನ್ವಯ ಕ್ರಮ ತೆಗೆದು ಕೊಳ್ಳಲಾಗುವುದು.
-ಡಾ| ಅರುಣ್‌ ಕೆ.,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಅನಧಿಕೃತ ರಿಕ್ಷಾ ನಿಲ್ದಾಣಗಳು
ಸ್ಥಳೀಯಾಡಳಿತದ ಅನುಮತಿ ಪಡೆಯದೆ ಕಾರ್ಯಾಚರಣೆ ಮಾಡುತ್ತಿರುವ ಆಟೋರಿಕ್ಷಾ ನಿಲ್ದಾಣಗಳು ಕೂಡ ನಗರದ
ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ. ಇಲ್ಲಿ ಇತರ ವಾಹನಗಳನ್ನು ನಿಲ್ಲಿಸುವಂತಿಲ್ಲ. ನೋ ಪಾರ್ಕಿಂಗ್‌ ಸ್ಥಳದಲ್ಲೆಲ್ಲ ವಾಹನಗಳ ಸಾಲು ಕಂಡುಬರುತ್ತಿದೆ. ನಗರದಲ್ಲಿ ವಾಹನ ನಿಲ್ಲಿಸುವುದು ಎಲ್ಲಿ ಎಂಬುವುದೇ ಚಾಲಕರಲ್ಲಿ ಗೊಂದಲ ಉಂಟು ಮಾಡುತ್ತಿದೆ. ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಪ್ರಸ್ತಾವನೆಯೂ ನನೆಗುದಿಗೆ ಬಿದ್ದಿದೆ. ಸದ್ಯಕ್ಕೆ ಟ್ರಾಫಿಕ್‌ ಪೊಲೀಸರೇ ಸುಗಮ ಸಂಚಾರಕ್ಕೆ ಆದ್ಯತೆ ನೀಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next