Advertisement

Udupi: ಜಲಜೀವನ್‌ ಮಿಷನ್‌ಗೆ ಜೀವ ಬರುವುದು ಯಾವಾಗ?

01:57 AM Dec 07, 2024 | Team Udayavani |

ಉಡುಪಿ: ಮಳೆಗಾಲ ಮುಗಿದು ಚಳಿ ಕಾಲಿರಿಸಿದ್ದರೂ ಕರಾವಳಿಯಲ್ಲಿ ಜಲಜೀವನ್‌ ಮಿಷನ್‌ ಕಾಮಗಾರಿ ಮಾತ್ರ ಪುನರಾರಂಭ ಆಗಿಲ್ಲ. ಮಳೆಗಾಲಕ್ಕೆ ಪೂರ್ವದಲ್ಲಿ ಉಭಯ ಜಿಲ್ಲೆಯ ವಿವಿಧೆಡೆ ಈ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಈವರೆಗೂ ಮರಳಿ ಚಾಲನೆ ಸಿಕ್ಕಿಲ್ಲ. ಒಟ್ಟಿನಲ್ಲಿ ಜಲಜೀವನ್‌ ಮಿಷನ್‌ಗೆ ಜೀವ ಇಲ್ಲದಂತಾಗಿದೆ.

Advertisement

ಮನೆ ಮನೆಗೆ ಶುದ್ಧ ಕುಡಿಯುವ ನೀರನ್ನು ನಲ್ಲಿಯ ಮೂಲಕ ಪೂರೈಸುವ ಕೇಂದ್ರ ಸರಕಾರದ ಯೋಜನೆ ಇದು. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಯೋಜನೆಗೆ ವೇಗ ಸಿಕ್ಕಿತ್ತಾದರೂ ಅನಂತರ ನಿರೀಕ್ಷಿತ ಪ್ರಮಾಣದಲ್ಲಿ ಕಾಮಗಾರಿ ಸಾಗಲಿಲ್ಲ. ಕಳೆದ ಎಪ್ರಿಲ್‌ನಲ್ಲಿ ಗ್ರಾಮೀಣ ಭಾಗದಲ್ಲಿ ಪೈಪ್‌ಲೈನ್‌ ಅಳವಡಿಸುವ ಕಾರ್ಯ ನಡೆದಿತ್ತು. ಹಲವು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮನೆಗಳ ಆವರಣದಲ್ಲಿ ನಲ್ಲಿ ನೀರು ಹಿಡಿಯಲು ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ನಲ್ಲಿ ಮೂಲಕ ನೀರು ಪೂರೈಸುವ ಪ್ರಕ್ರಿಯೆ ಎಲ್ಲಿಯೂ ಆರಂಭವಾಗಿಲ್ಲ.

ದ.ಕ. ಜಿಲ್ಲೆಯ 3,34,185 ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಸುವ ಯೋಜನೆಯಿದ್ದು, ಈವರೆಗೆ 2,94,409 ಮನೆಗಳಿಗೆ ನಲ್ಲಿಯ ಸಂಪರ್ಕ ಕಲ್ಪಿಸಲಾಗಿದೆ. ಜಿಲ್ಲೆಯ 230 ಪಂಚಾಯತ್‌ಗಳ ಪೈಕಿ 49 ಪಂಚಾಯತ್‌ಗಳ ಎಲ್ಲ ಮನೆ, ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಹಾಗೂ ಒಟ್ಟು 366 ಹಳ್ಳಿಗಳ ಪೈಕಿ 95 ಹಳ್ಳಿಗಳ ಎಲ್ಲ ಮನೆ, ಅಂಗನವಾಡಿ, ಶಾಲೆಗಳಿಗೆ ನಲ್ಲಿ ಸಂಪರ್ಕ ಪೂರ್ಣಗೊಂಡಿದೆ.

ಉಡುಪಿ ಜಿಲ್ಲೆಯಲ್ಲಿ 2,47,190 ಮನೆಗಳು ಯೋಜನೆಗೆ ಅರ್ಹವಾಗಿದ್ದು, 2,05,807 ಮನೆಗಳಿಗೆ ನಲ್ಲಿಯ ಸಂಪರ್ಕ ನೀಡಲಾಗಿದೆ. ಜಿಲ್ಲೆಯ 155 ಪಂಚಾಯತ್‌ಗಳ ಪೈಕಿ 14 ಪಂಚಾಯತ್‌ಗಳ ಎಲ್ಲ ಮನೆ, ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಹಾಗೂ ಒಟ್ಟು 246 ಹಳ್ಳಿಗಳ ಪೈಕಿ 29 ಹಳ್ಳಿಗಳ ಎಲ್ಲ ಮನೆ, ಅಂಗನವಾಡಿ, ಶಾಲೆಗಳಿಗೆ ನಲ್ಲಿ ಸಂಪರ್ಕ ಪೂರ್ಣಗೊಂಡಿದೆ.

ಪೈಪ್‌ಲೈನ್‌ ಆಗಿದೆ; ನೀರು ಬಂದಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯ 127 ಹಳ್ಳಿಗಳಲ್ಲಿ ಶತ ಪ್ರತಿಶತ ಕಾಮಗಾರಿ ನಡೆದಿದೆ. 239 ಹಳ್ಳಿಗಳಲ್ಲಿ ಕಾಮಗಾರಿ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ಉಡುಪಿಯ 73 ಹಳ್ಳಿಗಳಲ್ಲಿ ಶತ ಪ್ರತಿ ಶತ ಕಾಮಗಾರಿ ಮುಗಿದಿದೆ. 173 ಹಳ್ಳಿಗಳಲ್ಲಿ ಕಾಮಗಾರಿ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ಬಹುತೇಕ ಗ್ರಾಮಗಳಲ್ಲಿ ಪೈಪ್‌ಲೈನ್‌ ಹಾಗೂ ನಲ್ಲಿ ಅಳವಡಿಸುವ ಕಾರ್ಯ ಪೂರ್ಣ ಗೊಂಡಿದೆ. ನೀರು ಮಾತ್ರ ಮನೆ ಮನೆಗೆ ಇನ್ನೂ ಆರಂಭವಾಗಿಲ್ಲ.

Advertisement

ಕಾಮಗಾರಿ ಕಿರಿಕಿರಿ
ಗ್ರಾಮೀಣ ಭಾಗದಲ್ಲಿ ಜಲಜೀವನ್‌ ಮಿಷನ್‌ ಕಾಮಗಾರಿಗಾಗಿ ಅಲ್ಲಲ್ಲಿ ಪೈಪ್‌ಲೈನ್‌ ಅಳವಡಿಸಲು ರಸ್ತೆ ಅಂಚಿನಲ್ಲಿ ಅಗೆಯಲಾಗಿದೆ. ಕೆಲವು ಕಡೆ ಪೈಪ್‌ಲೈನ್‌ ಅಳವಡಿಸಿ ಅರ್ಧಂಬರ್ಧ ಮಣ್ಣು ತುಂಬಿದ್ದಾರೆ. ಇನ್ನು ಕೆಲವು ಕಡೆ ಪೈಪ್‌ಲೈನ್‌ ಪೂರ್ತಿಯಾಗಿ ಅಳವಡಿಸಿಯೇ ಇಲ್ಲ. ಹೀಗಾಗಿ ಸಾರ್ವಜನಿಕರಿಗೆ ನಿತ್ಯ ಸಂಚಾರಕ್ಕೂ ಅನಾನುಕೂಲವಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಪುನರ್‌ ಆರಂಭಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ನೀರಿನ ಮೂಲದ ಹುಡುಕಾಟ
ಅನೇಕ ಗ್ರಾಮಗಳಲ್ಲಿ ಪೈಪ್‌ಲೈನ್‌ ಅಳವಡಿಸಿಯಾಗಿದೆ. ಆದರೆ ಮನೆ ಮನೆಗೆ ನೀರು ಪೂರೈಸಲು ಬೇಕಾದಷ್ಟು ನೀರಿನ ಮೂಲ ಇಲ್ಲ. ಇನ್ನು ಕೆಲವಡೆ ಓವರ್‌ಹೆಡ್‌ ಟ್ಯಾಂಕ್‌ಗಳ ನಿರ್ಮಾಣವೂ ಆಗಿದೆ. ಆದರೆ ನೀರಿನ ಮೂಲ ಯಾವುದು ಎಂಬ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟತೆಯಿಲ್ಲ. ದಿನದ 24 ತಾಸು ಕೂಡ ನೀರು ಪೂರೈಸಲು ಬೇಕಾದಷ್ಟು ನೀರಿನ ಸಂಗ್ರಹವೂ ಅಗತ್ಯವಿದೆ. ಅದಕ್ಕೆ ನೀರಿನ ಮೂಲವೂ ಚೆನ್ನಾಗಿರಬೇಕಾಗುತ್ತದೆ. ಯೋಜನೆಯ ಅನುಷ್ಠಾನದ ಅನಂತರ ಮೂಲ ಹುಡುಕಿದರೆ ಸಮಸ್ಯೆ ಪರಿಹಾರವೂ ಕಷ್ಟವೇ ಆಗಬಹುದು ಎನ್ನುತ್ತಾರೆ ಪಂಚಾಯತ್‌ ಅಧಿಕಾರಿಗಳು.

ಜಲ್‌ಜೀವನ್‌ ಮಿಷನ್‌ ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಅಧಿಕಾರಿಗಳಿಂದ ಈ ಬಗ್ಗೆ ಪರಿಶೀಲನ ವರದಿಯನ್ನು ಪಡೆಯುತ್ತಿದ್ದೇವೆ.
-ಕೋಟ ಶ್ರೀನಿವಾಸ ಪೂಜಾರಿ, ಸಂಸದರು.

ಜಲಜೀವನ್‌ ಮಿಷನ್‌ ಕಾಮಗಾರಿಗೆ ಸಂಬಂಧಿಸಿ ಒಂದು ಮತ್ತು 2ನೇ ಹಂತದ ಕಾಮಗಾರಿ ಬಹುಪಾಲು ಪೂರ್ಣಗೊಂಡಿದೆ. 3ನೇ ಹಂತದ ಕಾಮಗಾರಿ ನಡೆಯುತ್ತಿದೆ. ಮನೆ ಮನೆಗೆ ನಲ್ಲಿ ಸಂಪರ್ಕ ಪೂರ್ಣಗೊಂಡಿದೆ. ಕೆಲವು ಕಡೆಗಳಲ್ಲಿ ನೀರಿನ ಮೂಲದ ಸಮಸ್ಯೆ ಇದೆ. ಟ್ಯಾಂಕ್‌ ನಿರ್ಮಾಣ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಈಗ ಇರುವ ನೀರಿನ ಮೂಲದಿಂದಲೇ ನೀರು ಪೂರೈಕೆ ಮಾಡಲಾಗುತ್ತಿದೆ.
– ಪ್ರತೀಕ್‌ ಬಾಯಲ್‌, ಡಾ| ಕೆ. ಆನಂದ್‌
ಉಡುಪಿ, ದ.ಕನ್ನಡ ಜಿ.ಪಂ. ಸಿಇಒ.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next