Advertisement

ಉಡುಪಿ ಭಾಗಶಃ ಲಾಕ್‌ಡೌನ್‌ : ನಿಯಮ ಉಲ್ಲಂಘಿಸಿದವರಿಗೆ ಲಾಠಿ ಏಟಿನ ಬಿಸಿ

06:42 PM Apr 24, 2021 | Team Udayavani |

ಉಡುಪಿ: ಉಡುಪಿ ನಗರದಾದ್ಯಂತ ವಾರಾಂತ್ಯ ಕರ್ಫ್ಯೂನ ಮೊದಲ ಶನಿವಾರ ಯಶಸ್ವಿಯಾಯಿತು. ಬೆಳಗ್ಗಿನ ಹೊತ್ತು ಕೆಲವು ಮಂದಿ ಮನೆಯಿಂದ ಹೊರಬಂದು ಓಡಾಡುತ್ತಿದ್ದರು. ವಿನಾ ಕಾರಣ ಓಡಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಅನಂತರ ಮತ್ತೆ ಮನೆಸೇರಿಕೊಂಡ ಘಟನೆ ನಡೆಯಿತು.

Advertisement

ನಗರದ ಕೆಲವೆಡೆ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳಾದ ತರಕಾರಿ, ದಿನಸಿ ಅಂಗಡಿಗಳು ತೆರೆದಿದ್ದವು. ಖಾಸಗಿ ಬಸ್ಸು ಸಂಚಾರ ಸಂಪೂರ್ಣವಾಗಿ ಸ್ತಬ್ದಗೊಂಡಿತ್ತು. ಸರಕಾರಿ ಬಸ್ಸುಗಳು ಸೀಮಿತ ಸಂಖ್ಯೆಯಲ್ಲಿ ಓಡಾಟ ನಡೆಸಿದವು. ಮೈಸೂರು ಹಾಗೂ ಚಿಕ್ಕಮಗಳೂರು ಭಾಗಕ್ಕೆ ಸರಕಾರಿ ಬಸ್ಸು ಓಡಾಟ ನಡೆಸಿದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.

ಪೊಲೀಸರಿಂದ ಲಾಠಿ ರುಚಿ
ನಗರದ ಸಿಟಿ ಬಸ್‌ ನಿಲ್ದಾಣದಲ್ಲಿ ಬೆಳಗ್ಗಿನ ಹೊತ್ತು ಮಲಗಿದ್ದವರಿಗೆ ಪೊಲೀಸರು ಲಾಠಿಯ ರುಚಿ ತೋರಿಸಿದರು. ಸಂತೆಕಟ್ಟೆ ಜಂಕ್ಷನ್‌, ಸಿಂಡಿಕೇಟ್‌ ಸರ್ಕಲ್‌, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಕಲ್ಸಂಕ ವೃತ್ತದ ಬಳಿ ಬೆಳಗ್ಗಿನ ಹೊತ್ತು ಪೊಲೀಸರು ಬಿಗು ತಪಾಸಣೆ ನಡೆಸಿದರು.

ದಾಖಲೆ ಪರಿಶೀಲನೆ
ವಿನಾ ಕಾರಣ ಓಡಾಟ ನಡೆಸುವವರನ್ನು ತಡೆದು ನಿಲ್ಲಿಸಿದ ಪೊಲೀಸರು ದಾಖಲೆಗಳನ್ನು ನೀಡುವಂತೆ ತಿಳಿಸುತ್ತಿದ್ದರು. ಸಮರ್ಪಕ ದಾಖಲೆ ಇಲ್ಲದವರಿಂದಲೂ ದಂಡ ವಸೂಲು ಮಾಡಲಾಯಿತು. ಕೆಲವೆಡೆ ದ್ವಿಚಕ್ರ ವಾಹನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರೂ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ ಘಟನೆ ನಡೆಯಿತು.

Advertisement

ಅಸಹಾಯಕರಿಗೆ ಊಟ ವಿತರಣೆ
ವಾರಾಂತ್ಯ ಕರ್ಫ್ಯೂ ಇದ್ದ ಕಾರಣ ತೀರಾ ಅಸಹಾಯಕರಿಗೆ, ಅನಾರೋಗ್ಯ ಪೀಡಿತರಿಗೆ, ವೃದ್ದರು,ಅಂಗವಿಕಲರು, ಮಾನಸಿಕ ಅಸ್ವಸ್ಥರಿಗೆ, ಊಟ ಸಿಗದವರಿಗೆ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು 100 ಊಟವನ್ನು ವಿತರಿಸಿದರು.

ಆದಿಉಡುಪಿ, ಪಂದುಬೆಟ್ಟು, ಕರಾವಳಿ ಬೈಪಾಸ್‌,ಶಿರಿಬೀಡು, ರಥಬೀದಿ, ರಾಜಾಂಗಣ ವಾಹನ ನಿಲುಗಡೆ ಸ್ಥಳ, ಕಿನ್ನಿಮುಲ್ಕಿ, ಬಲಾಯಿಪಾದೆ, ರೈಲ್ವೇನಿಲ್ದಾಣ, ನಗರದ ಮುಖ್ಯ ನಾಲ್ಕು ಬಸ್ಸು ನಿಲ್ದಾಣದಲ್ಲಿ ಆಹಾರದ ವಿತರಣೆ ನಡೆಯಿತು. ಪಾರ್ಸೆಲು ಊಟ ಪಡೆಯಲು ಹೋಟೆಲಿನಲ್ಲಿ ಅವಕಾಶವಿದ್ದರೂ ಬಹುತೇಕ ಹೋಟೆಲುಗಳು ಮುಚ್ಚಿರುವುದರಿಂದ ನಗರ ಪ್ರದೇಶದಲ್ಲಿ ಬದುಕುವ ವಲಸೆ ಕಾರ್ಮಿಕ ವರ್ಗದವರಿಗೆ ಬಹಳಷ್ಟು ಅನಾನುಕೂಲವಾಗಿತ್ತು. ನಾಳೆಯ ದಿನವು ಇಂತಹ ಅಸಹಾಯಕರಿಗೆ ಊಟ ವಿತರಿಸುವ ಕಾರ್ಯ ನಡೆಯಲಿದೆ ಎಂದು ವಿಶು ಶೆಟ್ಟಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next