Advertisement

ವರುಣ ಕೃಪೆ: ಉಡುಪಿಗೆ ಸದ್ಯಕ್ಕಿಲ್ಲ ನೀರಿನ ಕೊರತೆ

06:15 AM May 18, 2018 | Team Udayavani |

ಉಡುಪಿ: ಕರಾವಳಿ ಯಾದ್ಯಂತ ಮುಂಗಾರು ಪೂರ್ವ ಮಳೆಯಾಗುತ್ತಿರುವ ಪರಿಣಾಮ ಈ ಬಾರಿ ಉಡುಪಿ ನಗರಕ್ಕೆ ನೀರಿನ ಕೊರತೆ ಕಾಡದು. ಕಾರಣ, ಇಲ್ಲಿಗೆ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಮಳೆಗಾಲದ ಆರಂಭದವರೆಗೆ ನೀರು ಪೂರೈಕೆಗೆ ಯಾವುದೇ ಸಮಸ್ಯೆಯಿಲ್ಲ ಎನ್ನಲಾಗಿದೆ. 

Advertisement

ಹೆಚ್ಚಿದ ನೀರಿನ ಒಳ ಹರಿವು
ಬಜೆ ಅಣೆಕಟ್ಟೆಯಿಂದ ಸುಮಾರು 27 ಕಿ.ಮೀ. ದೂರ ಇರುವ ಕಾರ್ಕಳ ಮುಂಡ್ಲಿ ಅಣೆಕಟ್ಟು ಮೇ 10ಗೆ ತುಂಬಿದ್ದು, ನೀರಿನ ಹೊರ ಹರಿವು ಆರಂಭವಾಗಿದೆ. ಇದರಿಂದ ಮೇ 14ರಿಂದ ಬಜೆ ಅಣೆಕಟ್ಟೆಗೆ ನೀರಿನ ಒಳಹರಿವು ಶುರುವಾಗಿ ಗುರುವಾರದ ವೇಳೆಗೆ ಅಣೆಕಟ್ಟಿನ ನೀರಿನ ಮಟ್ಟ 3.85 ಮೀ. ಆಗಿದೆ.  

ದಿನಕ್ಕೆ 35-38 ಎಂಎಲ್‌ಡಿ ಅಗತ್ಯ
ನಗರದಲ್ಲಿ ಸಾಮಾನ್ಯವಾಗಿ 35ರಿಂದ 38 ಎಂಎಲ್‌ಡಿ ನೀರಿನ ಅವಶ್ಯಕತೆ ಇದ್ದು, ಬೇಡಿಕೆ ತಕ್ಕಂತೆ ಪೂರೈಸಲಾಗುತ್ತದೆ. ಈ ಬಾರಿ ಕುಡಿಯುವ ನೀರಿಗೆ ಯಾವುದೇ ಕೊರತೆ ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಡ್ರಜ್ಜಿಂಗ್‌, ಟ್ಯಾಂಕರ್‌ ಪೂರೈಕೆ ಇಲ್ಲ
ಕಳೆದ ವರ್ಷ ಡ್ರಜ್ಜಿಂಗ್‌, ಟ್ಯಾಂಕರ್‌ ನೀರಿಗಾಗಿ ನಗರಸಭೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡ ಬೇಕಾಗಿ ಬಂದಿತ್ತು. ಈ ಬಾರಿ ಡ್ರಜ್ಜಿಂಗ್‌ಗೆ ಒಮ್ಮೆ ಟೆಂಡರ್‌ ಕರೆಯಲಾಗಿತ್ತಾದರೂ ಯಾರೂ ಕೂಡ ಟೆಂಡರ್‌ ಹಾಕಿಲ್ಲ. ಈ ನಡುವೆ ಚುನಾವಣೆಯೂ ಬಂದು ಟೆಂಡರ್‌ ಪ್ರಕ್ರಿಯೆ ವಿಳಂಬವಾಗಿತ್ತು. ಆದ್ದರಿಂದ ಟ್ಯಾಂಕರ್‌ ನೀರು ಪೂರೈಸಲು 
ನಗರಸಭೆ ಸಿದ್ಧತೆ ಮಾಡಿಕೊಂಡಿತ್ತು. 

ಆದರೆ ಅಷ್ಟರಲ್ಲೇ ಪ.ಘಟ್ಟ ತಪ್ಪಲು ಪ್ರದೇಶಗಳಾದ ಕುದುರೆ ಮುಖ ಆಸುಪಾಸು, ಶಿರ್ಲಾಲು, ವರಂಗ ಮೊದಲಾದೆಡೆ ಮಳೆಯಾಗಿ ಸ್ವಲ್ಪ ಸಮಾಧಾನ ಮೂಡಿಸಿದೆ.  

Advertisement

ಜೂನ್‌ ವರೆಗೆ ಕೊರತೆಯಾಗದು
ಜೂನ್‌ ಮೊದಲ ವಾರದವರೆಗೆ ಪ್ರತಿ ದಿನ 7 ಸೆಂ.ಮೀ.ನಷ್ಟು ನೀರು ಅಣೆಕಟ್ಟಿನಲ್ಲಿ ಕಡಿಮೆಯಾದರೂ ಯಾವುದೇ ತೊಂದರೆಯಾಗದು. ಈಗ ಪ್ರಶರ್‌ನಲ್ಲಿಯೇ ನೀರು ಪೂರೈಸಲಾಗುತ್ತಿದೆ. ನೀರಿನ ಸಮಸ್ಯೆ ಕುರಿತು ದೂರುಗಳಿಲ್ಲ. ಮಳೆ ಬಿದ್ದ ಕೂಡಲೇ ಕೆಲವು ಪ್ರದೇಶಗಳಲ್ಲಿ ನೀರಿನ ಬೇಡಿಕೆಯೂ ಸ್ವಲ್ಪ ಕಡಿಮೆಯಾಗಿದೆ. ಇನ್ನು ಕೆಲವು ನಿವಾಸಿಗಳು ಮನೆಯ ಗಾರ್ಡನ್‌ಗಳಿಗೆ ನಗರಸಭೆ ನೀರು ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಇಂತಹವರ ಮೇಲೆ ನಗರಸಭೆ ಈಗಾಗಲೇ ನಿಗಾ ಇಟ್ಟಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಗಾರ್ಡ್‌ನ್‌ ಬಳಕೆಗೆ ನಿಷೇಧ
ಮೇ 16ರಂದು ಒಂದೇ ದಿನ 20 ಸೆಂ.ಮೀನಷ್ಟು ಎತ್ತರಕ್ಕೆ ನೀರು ಸಂಗ್ರಹವಾಗಿದೆ. ಇನ್ನು 15-20 ದಿನಗಳ ಕಾಲ ಮಳೆ ಬರದಿದ್ದರೂ ತೊಂದರೆಯಾಗದು. ಗಾರ್ಡನ್‌ಗಳಿಗೆ ನಗರಸಭೆ ನೀರು ಬಳಕೆ ಮಾಡದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ನಗರಸಭೆ ಚಿಂತನೆ ನಡೆಸಿದೆ.
 
– ಜನಾರ್ದನ್‌, 
ಆಯುಕ್ತರು, ನಗರಸಭೆ

ಚಿತ್ರ: ಆಸ್ಟ್ರೋ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next