Advertisement
ಆಡಳಿತರೂಢ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಆಕಾಂಕ್ಷಿಗಳು ಮತದಾರರ ಪಟ್ಟಿ ನೋಂದಣಿಗೆ ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರಮುಖರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಬಿಜೆಪಿಗರು ಪದವೀಧರ ಕ್ಷೇತ್ರವನ್ನು ಪ್ರಮುಖವಾಗಿಟ್ಟುಕೊಂಡು ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದರೆ, ಜೆಡಿಎಸ್ ಶಿಕ್ಷಕರ ಕ್ಷೇತ್ರಕ್ಕೆ ಆದ್ಯತೆ ನೀಡಿ ನೋಂದಣಿ ಮಾಡಿಸುತ್ತಿದ್ದಾರೆ.
ಕಳೆದ ಬಾರಿ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಯ ಸಾಧಿಸಿದ್ದ ಆಯನೂರು ಮಂಜುನಾಥ ಅವರು ಸದ್ಯ ಕಾಂಗ್ರೆಸ್‌ನಲ್ಲಿ ಇರುವುದರಿಂದ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಅವರ ಹೆಸರೂ ಇದೆ. ಕಳೆದಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಪಿ. ದಿನೇಶ್ ಅವರ ಜತೆಗೆ ಉಡುಪಿ ಜಿಲ್ಲೆಯಿಂದ ಡಾ| ಸುದೀಪ್ ಶೆಟ್ಟಿ, ಚಿಕ್ಕಮಗಳೂರಿನ ಪ್ರೊ| ನಂಜೇಶ್ ಕೂಡ ಆಕಾಂಕ್ಷಿಯಾಗಿದ್ದಾರೆ.
Related Articles
Advertisement
ಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳ ಪಟ್ಟಿ ದಿನೇದಿನೆ ಬೆಳೆಯುತ್ತಿರುವುದರಿಂದ ಇನ್ನು ಕೆಲವರ ಹೆಸರು ಹುರಿಯಾಳುಗಳು ಪಟ್ಟಿಗೆ ಸೇರಿಕೊಳ್ಳುವ ಸಾಧ್ಯತೆಯೂ ಇದೆ.
ವಿಶಾಲ ಕ್ಷೇತ್ರನೈಋತ್ಯ ಕ್ಷೇತ್ರವು ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ದಾವಣಗೆರೆಯ ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲೂಕುಗಳನ್ನು ಒಳಗೊಂಡಿದೆ. ಒಟ್ಟು ಆರು ಜಿಲ್ಲೆಗಳಲ್ಲಿ ಲಕ್ಷಾಂತರ ಪದವೀಧರರಿದ್ದಾರೆ. ಅಭ್ಯರ್ಥಿ ಆಕಾಂಕ್ಷಿಗಳು, ಪಕ್ಷ ಪ್ರಮುಖರಿಗೆ ಇಷ್ಟು ದೊಡ್ಡ ವ್ಯಾಪ್ತಿಯ ಮತದಾರರನ್ನು ನೋಂದಾಯಿಸುವುದೂ ಒಂದು ಸವಾಲಾಗಿದೆ. ಕಳೆದ ಬಾರಿಯ ಫಲಿತಾಂಶ
2018ರಲ್ಲಿ ನಡೆದ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಆಯನೂರು ಮಂಜುನಾಥ ಅವರು 25,250 ಮತ ಪಡೆದು ಜಯ ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ದಿನೇಶ್ 12,838 ಮತ ಪಡೆದಿದ್ದರು. ಶಿಕ್ಷಕ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ 8,647 ಮತ ಪಡೆದು ಜಯ ಸಾಧಿಸಿದ್ದರು. ಬಿಜೆಪಿಯ ಕ್ಯಾ| ಗಣೇಶ್ ಕಾರ್ಣಿಕ್ 5,812 ಮತ ಪಡೆದಿದ್ದರು. ಶಿಕ್ಷಣ ಸಂಸ್ಥೆಗಳಿಂದ ಸಂದೇಶ
ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಹಕ್ಕು ಪಡೆಯುವ ಸಂಬಂಧ ಆಯಾ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಅರ್ಹ ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರಿಗೆ ಸಂದೇಶ ರವಾನಿಸಿ ಅಗತ್ಯ ದಾಖಲೆಗಳೊಂದಿಗೆ ಮತದಾನದ ಹಕ್ಕು ಪಡೆಯಲು ನೋಂದಾಯಿಸಿಕೊಳ್ಳಲು ತಿಳಿಸಿವೆ.