Advertisement

Udupi video case ತಿಂಗಳು 6 ಕಳೆದರೂ ಬಾರದ ಎಫ್ಎಸ್‌ಎಲ್‌ ವರದಿ

12:25 AM Dec 12, 2023 | Team Udayavani |

ಉಡುಪಿ: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ಸಹಪಾಠಿ ವಿದ್ಯಾರ್ಥಿನಿಯ ವೀಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೊಬೈಲ್‌ ರಿಟ್ರೈವ್‌ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಘಟನೆ ನಡೆದು 6 ತಿಂಗಳುಗಳು ಕಳೆದರೂ ಎಫ್ಎಸ್‌ಎಲ್‌ (ವಿಧಿವಿಜ್ಞಾನ ಪ್ರಯೋಗಾಲಯ) ವರದಿ ಇನ್ನೂ ಪೊಲೀಸರ ಕೈಸೇರಿಲ್ಲ. ವರದಿ ಬಾರದಿರುವುದು ತನಿಖೆಗೂ ತೊಡಕಾಗಿ ಪರಿಣಮಿಸಿದೆ.

Advertisement

ಜು. 18ರಂದು ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜು. 22ರಂದು ಬೆಳಕಿಗೆ ಬಂದಿತ್ತು. ಬಳಿಕ ಎಬಿವಿಪಿ ಸಂಘಟನೆ ಈ ಬಗ್ಗೆ ಪ್ರತಿಭಟನೆ ನಡೆಸಿತ್ತು. ಕಾಲೇಜಿನ ನಿರ್ದೇಶಕಿ ರಶ್ಮಿಕೃಷ್ಣ ಪ್ರಸಾದ್‌ ಪತ್ರಿಕಾಗೋಷ್ಠಿ ನಡೆಸಿ, ಘಟನೆ ನಡೆದಿರುವ ಬಗ್ಗೆ ನಮ್ಮ ಗಮನಕ್ಕೆ ಬಂದ ಕೂಡಲೇ ಪ್ರಾಥಮಿಕ ಪರಿಶೀಲನೆ ನಡೆಸಿದ್ದೇವೆ. ಮರುದಿನ ಮೂವರು ವಿದ್ಯಾರ್ಥಿಗಳು ತಪ್ಪೊಪ್ಪಿಗೆ ಕೊಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಮೊಬೈಲ್‌ ಒಪ್ಪಿಸಿದ್ದೇವೆ. ಅಲ್ಲದೇ ಕೂಡಲೇ ಮೂವರನ್ನು ವಿದ್ಯಾರ್ಥಿಗಳನ್ನು ಅಮಾನತು ಗೊಳಿಸಿ ಕ್ರಮ ಕೈಗೊಂಡಿದ್ದೇವೆ ಎಂದಿದ್ದರು.

“ತಮಾಷೆಗಾಗಿ ಮಾಡಿದ ವೀಡಿಯೋ’ ಎಂದು ವಿದ್ಯಾರ್ಥಿನಿಯರು ಹೇಳಿರುವ ಕಾರಣ ಕಾಲೇಜಿನಲ್ಲೇ ಪ್ರಕರಣ ಇತ್ಯರ್ಥಪಡಿಸಲಾಗಿತ್ತು. ಘಟನೆಯ ಬಗ್ಗೆ ಹಿಂದೂ ಕಾರ್ಯಕರ್ತೆಯೊಬ್ಬರು ಟ್ವೀಟ್‌ ಮಾಡಿದ ಬಳಿಕ ಭಾರೀ ಚರ್ಚೆಗೆ ಗ್ರಾಸವಾಯಿತು. ಅನಂತರ ಮಲ್ಪೆ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಯಿತು.

ಮಲ್ಪೆ ಠಾಣೆಯ ಇನ್‌ಸ್ಪೆಕ್ಟರ್‌ ಮಂಜುನಾಥ ಗೌಡ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಯಿತು. ತನಿಖಾಧಿಕಾರಿಯನ್ನು ಬದಲಾಯಿಸಬೇಕೆಂಬ ಬಗ್ಗೆ ಎಬಿವಿಪಿ ಹಾಗೂ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಜು.29ರಂದು ತನಿಖಾಧಿಕಾರಿಯನ್ನು ಬದಲಾಯಿಸಿ ಬೆಳ್ಳಿಯಪ್ಪ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಯಿತು. ಜು. 27ರಂದು ಘಟನೆ ನಡೆದಿದೆ ಎನ್ನಲಾದ ಕಾಲೇಜಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್‌ ಭೇಟಿ ನೀಡಿ ಸುದೀರ್ಘ‌ ವಿಚಾರಣೆ ನಡೆಸಿದ್ದರು. ಜು. 31ಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಆರ್‌.ಹಿತೇಂದ್ರ ಅವರು ಆಗಮಿಸಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದರು.

ಸಿಐಡಿಗೆ ಹಸ್ತಾಂತರ
ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರಕಾರ ಆ. 8ರಂದು ಆದೇಶಿಸಿತ್ತು. ಆ. 9ರಂದು ಸಿಐಡಿ ಡಿವೈಎಸ್‌ಪಿ ಅಂಜುಮಾಲಿ ನಾಯಕ್‌ ನೇತೃತ್ವದ ತಂಡ ಉಡುಪಿಗೆ ಆಗಮಿಸಿತ್ತು. ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ ಸಹಿತ ಡಿವೈಎಸ್‌ಪಿ ಹಾಗೂ ತನಿಖಾಧಿಕಾರಿ ಅಂಜುಮಾಲಾ ನಾಯಕ್‌ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಬೆಂಗಳೂರಿನಿಂದ ನ್ಯಾಯ ವಿಜ್ಞಾನ ಪ್ರಯೋಗಾಲಯ ಮೊಬೈಲ್‌ ವಿಜ್ಞಾನ ಪ್ರಯೋಗಾಲಯ (ಮೊಬೈಲ್‌ ಫಾರೆನ್ಸಿಕ್‌ ಸೈನ್ಸ್‌ ಲ್ಯಾಬೊರೇಟರಿ) ವಾಹನ ಆಗಮಿಸಿ ಎಲ್ಲ ರೀತಿಯ ಮಾಹಿತಿ, ಪುರಾವೆಗಳನ್ನು ಸಂಗ್ರಹಿಸಿತ್ತು. ಆ. 10ರಂದು ಸಿಐಡಿ ಎಡಿಜಿಪಿ ಮನೀಷ್‌ ಕಬೀರ್ಕರ್‌ ಅವರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ಘಟನೆ ಸಂಬಂಧಿಸಿ ಎಫ್ಎಸ್‌ಎಲ್‌ ವರದಿ ನಿರೀಕ್ಷೆಯಲ್ಲಿದ್ದು, ಮೂರು ಮೊಬೈಲ್‌ಗ‌ಳ ಎಫ್ಎಸ್‌ಎಲ್‌ ವರದಿ ತನಿಖೆಯ ಒಂದು ಭಾಗವಾಗಿ ನಾವು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದರು.

Advertisement

ವರದಿ ನಿರೀಕ್ಷೆ
ತನಿಖೆ ಪ್ರಗತಿಯಲ್ಲಿದೆ. ಎಫ್ಎಸ್‌ಎಲ್‌ ವರದಿಯ ನಿರೀಕ್ಷೆಯಲ್ಲಿದ್ದೇವೆ. ಇದುವರೆಗೂ ಕೈಸೇರಿಲ್ಲ. ಈ ಬಗ್ಗೆ ಶೀಘ್ರದಲ್ಲಿಯೇ ಸವಿವರವಾದ ಮಾಹಿತಿ ನೀಡಲಾಗುವುದು.
– ಅಂಜುಮಾಲಾ ನಾಯಕ್‌, ಡಿವೈಎಸ್‌ಪಿ
(ತನಿಖಾಧಿಕಾರಿ)

ಲ್ಯಾಬ್‌ಗಳ ಕೊರತೆಯಿಂದ ವಿಳಂಬ
ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರೆ 90 ದಿನಗಳ ಒಳಗಡೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಬೇಕು. ಇಲ್ಲಿ ಆರೋಪಿಗಳು ಭೇಲ್‌ನಲ್ಲಿದ್ದಾರೆ. ಪೋಕ್ಸೋ ಪ್ರಕರಣದಂತೆ ತ್ವರಿತಗತಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಬೇಕೆಂದೇನಿಲ್ಲ. ವರ್ಷದೊಳಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಸೈಬರ್‌ ಕ್ರೈಂಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಫೋರೆನ್ಸಿಕ್‌ ಲ್ಯಾಬ್‌ಗಳು ವಿರಳವಾಗಿವೆ. ಈ ಕಾರಣದಿಂದ ಫೋರೆನ್ಸಿಕ್‌ ವರದಿ ಬರಲು ವಿಳಂಬವಾಗುತ್ತಿದೆ. ಪೊಲೀಸರು ಫಾಲೋಅಪ್‌ನಲ್ಲಿರುತ್ತಾರೆ. ವರದಿ ಬಾರದೆ ಚಾರ್ಜ್‌ಶೀಟ್‌ ಸಲ್ಲಿಸಿದರೆ ಅದು ಅಪೂರ್ಣವಾಗುತ್ತದೆ. ಫೋರೆನ್ಸಿಕ್‌ ಲ್ಯಾಬ್‌ಗಳ ಕೊರತೆಯಿಂದಲೇ ಇಂತಹ ಪ್ರಕರಣಗಳ ವಿಳಂಬಕ್ಕೆ ಮುಖ್ಯ ಕಾರಣವಾಗಿದೆ. ಸರಕಾರ ಈ ಬಗ್ಗೆ ಗಮನಹರಿಸಬೇಕಿದೆ.
– ರವಿಕಿರಣ್‌ ಮುರ್ಡೇಶ್ವರ್‌
ಹಿರಿಯ ವಕೀಲರು

-ಪುನೀತ್‌ ಸಾಲ್ಯಾನ್‌ ಸಸಿಹಿತ್ಲು

Advertisement

Udayavani is now on Telegram. Click here to join our channel and stay updated with the latest news.

Next