ಉಡುಪಿ: ಇಲ್ಲಿನ ಖಾಸಗಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ವೀಡಿಯೋ ಚಿತ್ರೀಕರಣ ಪ್ರಕರಣವನ್ನು ತರಾ ತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಆರೋಪಿಸಿದ್ದಾರೆ.
ರಾಜ್ಯಾದ್ಯಂತ ಈ ಪ್ರಕರಣದ ಬಗ್ಗೆ ತೀವ್ರ ಜನಾಕ್ರೋಶ, ಪ್ರತಿ ಭಟನೆಗೆ ಮಣಿದ ಸರಕಾರ ಈ ಹಿಂದೆ ತನಿಖಾಧಿಕಾರಿಯನ್ನು ಬದಲಾಯಿಸಿದ ಬಳಿಕ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತನಿಖೆ ತೀವ್ರಗೊಳಿಸಿ ಪ್ರಕರಣದ ಸಂತ್ರಸ್ತರು ಹಾಗೂ ಆರೋಪಿ ವಿದ್ಯಾರ್ಥಿನಿಯರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೇಳಿಕೆ ಪಡೆಯುವ ಮೂಲಕ ಹಲವು ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿತ್ತು.
ಮಾತ್ರವಲ್ಲದೆ ಆರೋಪಿ ವಿದ್ಯಾರ್ಥಿನಿಯ ತಂದೆ ನಿಷೇಧಿತ ಪಿಎಫ್ ಐ ಸಂಘಟನೆಯ ಸಕ್ರಿಯ ಸದಸ್ಯ ಎಂಬ ಮಾಹಿತಿಗಳು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಈಗ ಜಿಲ್ಲಾ ಪೊಲೀಸರ ತನಿಖೆ ಪೂರ್ಣಗೊಳ್ಳುವ ಮುನ್ನವೇ ತರಾತುರಿಯಲ್ಲಿ ಸಿಐಡಿಗೆ ವರ್ಗಾ ಯಿಸುವ ಮೂಲಕ ರಾಜ್ಯ ಸರಕಾರದ ನಡೆ ಮತ್ತೊಮ್ಮೆ ಗೊಂದಲ ಸೃಷ್ಟಿಸಿದೆ.
ಪ್ರಕರಣದ ಆರಂಭದ ದಿನದಿಂದಲೂ ಪೊಲೀಸ್ ಇಲಾಖೆಗೆ ಪ್ರತೀ ಹಂತದಲ್ಲೂ ಪ್ರಭಾವ ಬೀರುವ ಯತ್ನ ಮಾಡಿದ್ದ ಸರಕಾರ ಈಗ ಆರೋಪಿಗಳನ್ನು ರಕ್ಷಿಸುವ ಸಲುವಾಗಿಯೇ ಸಿಐಡಿಗೆ ವರ್ಗಾಯಿಸಿದೆ ಎಂದು ಆರೋಪಿಸಿದ್ದಾರೆ.