ಉಡುಪಿ: ವಿಮಾನಯಾನ ವಿಳಂಬದಿಂದ ಮಾನಸಿಕ ಯಾತನೆ ಅನುಭವಿಸಿದ್ದ ದಂಪತಿ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹಾರ ಪಡೆದ ಭಿನ್ನ ಘಟನೆ ಉಡುಪಿಯಲ್ಲಿ ನಡೆದಿದೆ.
ಬ್ರಹ್ಮಾವರದ ಹಿರಿಯ ನಾಗರಿಕ ದಂಪತಿ ಪ್ರೊ| ಮ್ಯಾಥ್ಯೂ ಸಿ. ನಿನನ್ ಮತ್ತು ಲಾಲಿ ಅಬ್ರಹಾಂ ಅವರು ಬ್ರಿಟಿಷ್ ಏರ್‌ವೇಸ್ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಯುನೈಟೆಡ್ ಕಿಂಗ್‌ಡಂನ ಹೀಥ್ರೋ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಬರಬೇಕಿದ್ದು, ಈ ಯಾನದ ಸಮಯದಲ್ಲಿ ಹೀಥ್ರೋ ನಿಲ್ದಾಣದಲ್ಲಿ 10 ಗಂಟೆ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 7 ಗಂಟೆಗಳಷ್ಟು ವಿಳಂಬವಾಗಿ ತೀವ್ರ ಮಾನಸಿಕ ಹಿಂಸೆ ಅನುಭವಿಸಿದ್ದರು.
ವಿಮಾನಯಾನದ ಅತೀ ವಿಳಂಬದಿಂದ ವಿಮಾನಸಿಕವಾಗಿ ನೊಂದ ದಂಪತಿ ಮುಂಬಯಿಯ ಐಸಿಐಸಿಐ ಲೊಂಬಾರ್ಡ್ ವಿಮಾ ಕಂಪೆನಿ ವಿರುದ್ಧ ಸೇವಾ ನ್ಯೂನತೆಗಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ದೂರು ಸಲ್ಲಿಸಿದ್ದು, ಪ್ರಕರಣದಲ್ಲಿ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗವು ಗ್ರಾಹಕರ ಪರವಾಗಿ ತೀರ್ಪು ನೀಡಿ ಆದೇಶಿಸಿದೆ.
ಪ್ರತಿವಾದಿ ವಿಮಾ ಕಂಪೆನಿಯು ಎರಡು ಪ್ರಕರಣಕ್ಕಾಗಿ 48,000 ರೂ., 16,000 ರೂ. ಶೇ. 8ರ ಬಡ್ಡಿ ಸಹಿತ ಮತ್ತು 5 ಸಾವಿರ ರೂ. ಕೋರ್ಟ್ ವೆಚ್ಚ ಹಾಗೂ ಮಾನಸಿಕ ಯಾತನೆಗಾಗಿ 10,000 ರೂ. ಪರಿಹಾರವನ್ನು 30 ದಿನದೊಳಗೆ ನೀಡುವಂತೆ ಆಯೋಗ ತೀರ್ಪು ನೀಡಿದೆ.
ವಿಮಾನಯಾನ ತಡವಾದ ಹಿನ್ನೆಲೆಯಲ್ಲಿ ಗ್ರಾಹಕರು ಉಡುಪಿಯ ಬಳಕೆದಾರರ ವೇದಿಕೆಯ ಮುಖಾಂತರ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಗ್ರಾಹಕರ ಪರ ನ್ಯಾಯವಾದಿ ಸೆಲೆಸ್ಟಿನ್ ಪುಷ್ಪಾ ವಾದಿಸಿದ್ದರು.