Advertisement

ಉಡುಪಿ: ಸರಕಾರಿ ಕೆರೆಗಳ ಸಮೀಕ್ಷೆಗೂ ಕಾಣದ ಆಸಕ್ತಿ

09:02 AM May 23, 2019 | sudhir |

ಉಡುಪಿ: ಬೇಸಗೆಯಲ್ಲಿ ನೀರಿನ ಕೊರತೆಯಿಂದ ಬಸವಳಿವ ನಗರಕ್ಕೆ ಪರ್ಯಾಯ ಜಲಮೂಲಗಳನ್ನಾಗಿ ಕೆರೆಗಳನ್ನು ಅಭಿವೃದ್ಧಿಪಡಿಸಿ ಬಳಸಿಕೊಳ್ಳುವತ್ತ ನಗರಸಭೆಯಾಗಲೀ, ನಗರಾಭಿವೃದ್ಧಿ ಪ್ರಾಧಿಕಾರವಾಗಲೀ ಹೆಚ್ಚು ಗಮನಹರಿಸದ ಸಂಗತಿ ಬೆಳಕಿಗೆ ಬಂದಿದೆ.

Advertisement

ನಗರ ವ್ಯಾಪ್ತಿಯಲ್ಲಿ 32 ಕೆರೆಗಳಿದ್ದರೂ ಅವುಗಳ ನಿರ್ವಹಣೆ ಕೊರತೆಯಿಂದ ತನ್ನ ಸಂಗ್ರಹ ಸಾಮರ್ಥ್ಯ ಕಳೆದುಕೊಂಡಿವೆ. ನಗರಾಭಿವೃದ್ಧಿ ಪ್ರಾಧಿಕಾರವು ಒಂದು ವರ್ಷದಿಂದ ಸರಕಾರಿ ಕೆರೆಗಳಲ್ಲಿನ ಹೂಳೆತ್ತ ದಿರುವ ಕಾರಣ ಸುತ್ತಮುತ್ತಲಿನ ಪ್ರದೇಶಗಳ ಬೋರ್‌ವೆಲ್‌ ಹಾಗೂ ಬಾವಿ ನೀರಿನ ಮಟ್ಟ ಗಣನೀಯವಾಗಿ ಕುಸಿತ ಕಂಡಿದೆ.

ಕೆಲವು ಕೆರೆಗಳನ್ನು ಈ ಹಿಂದೆ ಅಭಿವೃದ್ಧಿಪಡಿಸಿದರೂ ಸಮರ್ಪಕ ನಿರ್ವಹಣೆ ಮಾಡದಿರುವ ಕಾರಣ, ಪುನಃ ತ್ಯಾಜ್ಯ ತುಂಬಿಕೊಂಡಿದೆ. ಇನ್ನೂ ಕೆಲವು ಕೆರೆಗಳು ಹೂಳೆತ್ತದೆ ಅವನತಿ ಹಾದಿ ತುಳಿದಿವೆ.

ಸರಕಾರಿ ಕೆರೆಗಳ ಸಮೀಕ್ಷೆ ನಡೆದಿಲ್ಲ
ನಗರ ವ್ಯಾಪ್ತಿಯಲ್ಲಿ ಗುರುತಿಸಲ್ಪಡದ ನೂರಾರು ಸರಕಾರಿ ಕೆರೆಗಳು ಅಳಿವಿನಂಚಿ ನಲ್ಲಿವೆ. ಆದರೆ ನಗರಸಭೆಯಾಗಲೀ, ನಗರಾ ಭಿವೃದ್ಧಿ ಪ್ರಾಧಿಕಾರವಾಗಲೀ ಇದುವರೆಗೆ ಸರಕಾರಿ ಕೆರೆಗಳು ಎಷ್ಟಿವೆ ಎಂದು ಸಮೀಕ್ಷೆ ನಡೆಸಿಲ್ಲ. ಹಾಗಾಗಿ ಪ್ರಾಧಿಕಾರದ ಬಳಿ ಮಾಹಿತಿಯೇ ಇಲ್ಲ. ಒಮ್ಮೆ ಸಮೀಕ್ಷೆಯಾದರೆ ಒತ್ತುವರಿಯಾದ ಕೆರೆಗಳನ್ನು ಪತ್ತೆಹಚ್ಚಬಹು ದೆಂಬುದು ಸಾರ್ವಜನಿಕರ ಅಭಿಪ್ರಾಯ.

ಕೇವಲ 32 ಕೆರೆಗಳು ಮಾತ್ರ!
ನಗರಸಭೆ ವ್ಯಾಪ್ತಿಯಲ್ಲಿ ವಿಷ್ಣುಮೂರ್ತಿ ದೇವಸ್ಥಾನ, ದುರ್ಗಾಪರಮೇಶ್ವರಿ, ವೆಂಕಟರಮಣ ತೆಂಕಪೇಟೆ, ಕರಂಬಳ್ಳಿ ವೆಂಕಟರಮಣ, ಇಂದ್ರಾಳಿ, ಉಮಾಮಹೇಶ್ವರಿ, ಕಡಿಯಾಳಿ, ಮಣ್ಣಪಳ್ಳ, ನಾಯರ್‌ಕೆರೆ, ದೊಡ್ಡಣಗುಡ್ಡೆ ಮಸೀದಿ ಕರೆ, ಗುಂಡಿಬೈಲು ವಿಷ್ಣುಮೂರ್ತಿ ದೇವಳ ಕೆರೆ, ಹೆರ್ಗ, ಮಹಾಲಿಂಗೇಶ್ವರ ಕರೆ, ಗ್ಯಾಟ್ಸನ್‌ ಕೆರೆ, ನರಸಿಂಗೆ ಕೆರೆ, ಬಲರಾಮ ವಡಭಾಂಡೇಶ್ವರ ಕೆರೆ, ಕಾನಂಗಿ ಕೆರೆ, ಕೊಡವೂರು ದೇಗುಲ ಕೆರೆ, ಕೆರೆಮಠ ಮೂಡುಬೆಟ್ಟು ಕೆರೆ, ಮಾಯಾಗುಂಡಿ ಸುಬ್ರಹ್ಮಣ್ಯನಗರ ಕೆರೆ, ಕಂಗೂರು ಮಠ ಕೆರೆ, ಪಲ್ಲಮಾರು ಮೂಡಬೆಟ್ಟು, ಶ್ರೀನಿವಾಸ ದೇವಸ್ಥಾನ ಬೈಲೂರು ಕೆರೆ, ಬೈಲೂರು ಪಾರ್ಕ್‌ ಕೆರೆ, ಮೂಚುÉಕೋಡು ದೇವಸ್ಥಾನ ಕರೆ, ಅಗ್ರಹಾರ ಮುಖ್ಯಪ್ರಾಣ ದೇವಸ್ಥಾನ ಕೆರೆ, ಶಿವಪಾಡಿ ದೇವಸ್ಥಾನ ಕೆರೆ, ಶಿವಪಾಡಿ ಕೆರೆ, ಪಾಂಡವರ ಕೆರೆ ಸೇರಿಂದತೆ ಒಟ್ಟು 32 ಕೆರೆಗಳನ್ನು ಮಾತ್ರ ನಗರಾಭಿವೃದ್ಧಿ ಪ್ರಾಧಿಕಾರ ಗುರುತಿಸಿದೆ.

Advertisement

ಅಧ್ಯಕ್ಷರ ನೇಮಕವಾಗಿಲ್ಲ
ಅತ್ತ ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಅಧಿಕಾರವನ್ನೂ ಸ್ವೀಕರಿಸಿಲ್ಲ, ಇತ್ತ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇಮಕವಾಗಿಲ್ಲ. ಈಗ ಏನಿದ್ದರೂ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ಹಿಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆರೆಗಳ ಅಭಿವೃದ್ಧಿ ಬಗ್ಗೆ ಯಾವುದೇ ಪ್ರಸ್ತಾಪವಾಗಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಈ ವರ್ಷ ಯಾವುದೇ ಕೆರೆಯ ಹೂಳೆತ್ತುವ ಕಾರ್ಯ ಆಗಿಲ್ಲ.

ವಾರ್ಷಿಕ 1.5 ಕೋ.ರೂ. ಸಂಗ್ರಹ
ಮೊದಲು ಒಂದು ಸೆಂಟ್ಸ್‌ ಜಾಗಕ್ಕೆ 1 ಸಾವಿರ ರೂ. ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತಿತ್ತು. ಜನರಿಗೆ ಹೆಚ್ಚಿನ ಹೊರೆಯಾಗಬಾರದೆಂದು 608 ರೂ.ಗೆ ಇಳಿಸಲಾಯಿತು. ಸಂಗ್ರಹಿತ ಶುಲ್ಕವನ್ನು ಕೆರೆಗಳ ಅಭಿವೃದ್ಧಿಗೆ ಬಳಸುತ್ತಿದ್ದು, 2017-18ನೆಯ ಸಾಲಿನಲ್ಲಿ 1 ಕೋ. ರೂ., 2018  -19ರಲ್ಲಿ 1.5 ಕೋ.ರೂ. ಸಂಗ್ರಹವಾಗಿದೆ.

2017ರಲ್ಲಿ ಅಭಿವೃದ್ಧಿಯಾದ ಕೆರೆಗಳು
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ 2017ನೇ ಸಾಲಿನಲ್ಲಿ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಮುಂಭಾಗದ ಕೆರೆ 15 ಲ.ರೂ., 76 ಬಡಗಬೆಟ್ಟು ಗ್ರಾಮದ ಕೆರೆ 25 ಲ.ರೂ., ಕೊಡವೂರು ಬಂಕೇರಕಟ್ಟ ಸಮೀಪದ ಕೆರೆ 25 ಲ.ರೂ., ಉದ್ಯಾವರ ಕೆರೆ 10.30 ಲ.ರೂ., ಕೊರಂಗ್ರಪಾಡಿ ಕೆರೆ 25 ಲ.ರೂ., ಕೊಡವೂರಿನ ಕಂಗೂರು ಮಠ ಸಮೀಪದ ಕೆರೆ 25 ಲ.ರೂ., 76 ಬಡಗಬೆಟ್ಟು ಗ್ರಾಮದ ಕೊಳಂಬೆ ಶಾಂತಿನಗರದಲ್ಲಿರುವ ಕೆರೆ 13.85 ಲ.ರೂ., ಹೆರ್ಗ ಕಟ್ಟಿಂಗೇರಿ ಕೆರೆ 50 ಲ.ರೂ., ಉದ್ಯಾವರ ಬಲಾಯಿಪಾದೆ ಕೆರೆ 30 ಲ.ರೂ., ಕುತ್ಪಾಡಿ ಗರೋಡಿ ಸಮೀಪವಿರುವ ಕೆರೆ 35 ಲ.ರೂ., ಕೋಡಿಕಂಡಾಳ ಬಬ್ಬುಸ್ವಾಮಿ ಕ್ಷೇತ್ರದ ಕೆರೆ 30 ಲ.ರೂ. ಸೇರಿದಂತೆ ಒಟ್ಟು 11 ಕೆರೆಗಳನ್ನು 2.84 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ಕಾಮಗಾರಿ ಪ್ರಗತಿ
ಕಳೆದ ಸಾಲಿನಲ್ಲಿ ಪ್ರಾಧಿಕಾರಕ್ಕೆ 48 ಕೆರೆಗಳ ಅಭಿವೃದ್ಧಿಗೆ ಮನವಿ ಬಂದಿದ್ದು, ಈ ಸಾಲಿನಲ್ಲಿ ಯಾವ ಮನವಿಯೂ ಬಂದಿಲ್ಲ. ಉದ್ಯಾವರ, 76 ಬಡಗಬೆಟ್ಟು, ಹೆರ್ಗ, ಉದ್ಯಾವರದ ಪೆಲಕೆರೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.
– ಜೀತೇಶ್‌, ನಗರ ಯೋಜಕರು, ನಗರಾಭಿವೃದ್ಧಿ ಪ್ರಾಧಿಕಾರ

ಶೀಘ್ರ ಕ್ರಮ
ಕೆರೆಗಳ ಹೂಳೆತ್ತುವ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರವೇ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ.
-ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next