Advertisement

ಇಂದು, ನಾಳೆ ಉದ್ಯೋಗ ಮೇಳ: ಸಜ್ಜಾಗಿದೆ ಉಡುಪಿ

12:30 AM Jan 19, 2019 | |

ಉಡುಪಿ: ಸಂಚಲನ ಆಶ್ರಯದಲ್ಲಿ ಉನ್ನತಿ ಕ್ಯಾರಿಯರ್‌ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಜ. 19 ಮತ್ತು 20ರಂದು ನಡೆಯಲಿರುವ “ಉಡುಪಿ ಉದ್ಯೋಗ ಮೇಳ 2019’ರ ಸಿದ್ಧತೆ ಈಗಾಗಲೇ ಪ್ರಾರಂಭಗೊಂಡಿದೆ. 

Advertisement

ಜಿಲ್ಲೆಯ ಸುಮಾರು 10,000ಕ್ಕೂ ಅಧಿಕ ವಿದ್ಯಾರ್ಥಿಗಳು, ಯುವಕ-ಯುವತಿಯರು ಈವರೆಗೆ ನೋಂದಣಿ ಮಾಡಿದ್ದು, ಸುಮಾರು 100ಕ್ಕೂ ಹೆಚ್ಚಿನ ಕಂಪೆನಿಗಳು ಭಾಗವಹಿಸುವಿಕೆಯನ್ನು ಖಾತ್ರಿ ಪಡಿಸಿವೆ. ವಿವಿಧ ಕ್ಷೇತ್ರಗಳಲ್ಲಿ 8,500ಕ್ಕೂ ಹೆಚ್ಚಿನ ಉದ್ಯೋಗವಕಾಶಗಳು ಈ ಮೇಳದಲ್ಲಿ ಲಭ್ಯವಿದ್ದು, ನೋಂದಣಿ ಮಾಡಿರುವ ಪ್ರತಿ ಅಭ್ಯರ್ಥಿಗಳಿಗೂ 3 ಸಂದರ್ಶನದ ಅವಕಾಶ ಕಲ್ಪಿಸಲಾಗಿದೆ. ಜ.12ರಂದು ಕೃಷ್ಣಮಠದ ರಾಜಾಂಗಣದಲ್ಲಿ ಸಂಚಲನ ಸಂಸ್ಥೆ ವತಿಯಿಂದ ಸುಮಾರು 2500ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಸಂದರ್ಶನ ಎದುರಿಸುವ ಬಗ್ಗೆ ತರಬೇತಿ ನೀಡಲಾಗಿತ್ತು.

ಮಾಹಿತಿ
ಜ.19ರಂದು ಪದವೀಧರರು ಹಾಗೂ ಅದಕ್ಕಿಂತ ಮೇಲ್ಪಟ್ಟ ಅರ್ಹತೆಯ ಟೋಕನ್‌ ನಂಬರ್‌ 001ರಿಂದ 5,000ವರೆಗಿನ ಅಭ್ಯರ್ಥಿಗಳಿಗೆ ಹಾಗೂ ಜ.20ರಂದು ಪದವಿ/ ಪದವಿಗಿಂತ ಕಡಿಮೆ ಅರ್ಹತೆಯುಳ್ಳ ಟೋಕನ್‌ ನಂಬರ್‌ 5001ರಿಂದ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಸಂದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. 

ಅಭ್ಯರ್ಥಿಗಳೆಲ್ಲರಿಗೂ ನೋಂದಣಿ ಸಂಖ್ಯೆಯ ಸರದಿಯಲ್ಲಿ ಅವಕಾಶ ಒದಗಿಸಲಾಗುವುದು. ಅಭ್ಯರ್ಥಿಗಳು ಮೇಳಕ್ಕೆ ತಮ್ಮ ನೋಂದಣಿ ಟೋಕನ್‌ನೊಂದಿಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾದರಿಯ ಬಯೋಡೇಟಾಗಳನ್ನು ಭರ್ತಿಗೊಳಿಸಿ 5 ಪ್ರತಿಗಳಲ್ಲಿ ತರಬೇಕು, ಶೈಕ್ಷಣಿಕ ಅರ್ಹತೆಯ ಪ್ರತಿಗಳು, ಸರಕಾರಿ ಗುರುತಿನ ಕಾರ್ಡ್‌/ಆಧಾರ್‌ ಕಾರ್ಡ್‌ ತರುವುದು ಕಡ್ಡಾಯ.

ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಿದ್ದು, ನೋಂದಣಿ, ದಾಖಲಾತಿಗಳ ಪರಿಶೀಲನೆ ಎಲ್ಲವೂ ಅಲ್ಲಿಯೇ ನಡೆಯಲಿದೆ. ಕಂಪೆನಿಗಳು ಸಂದರ್ಶನವನ್ನು ಡಾ| ಜಿ. ಶಂಕರ್‌ ಸರಕಾರಿ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಕೇಂದ್ರದ ಕಟ್ಟಡದಲ್ಲಿ ನಡೆಸಲಿವೆ. ಯಾವ ಕೊಠಡಿಯಲ್ಲಿ ಯಾವ ಕಂಪೆನಿ, ಅವರಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ ಇತ್ಯಾದಿ ಮಾಹಿತಿಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಿರುವ ಎಲ್‌ಇಡಿ ವ್ಯವಸ್ಥೆಯಲ್ಲಿ ನೋಡಬಹುದಾಗಿದೆ.

Advertisement

ಅಭ್ಯರ್ಥಿಗಳ ಅನುಕೂಲಕ್ಕೆ ಕ್ಯಾಂಟೀನ್‌ ವ್ಯವಸ್ಥೆ ಮತ್ತು ಜೆರಾಕ್ಸ್‌ ವ್ಯವಸ್ಥೆಯನ್ನು ಕ್ರೀಡಾಂಗಣದ ಪಕ್ಕದಲ್ಲೇ ಮಾಡಲಾಗಿದೆ. ಅಭ್ಯರ್ಥಿಗಳಿಗೆ ಮೇಳಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿ ಒದಗಿಸಲು ಸಹಾಯ ಕೇಂದ್ರವನ್ನೂ ಜಿಲ್ಲಾ ಕ್ರೀಡಾಂಗಣದಲ್ಲಿ ಒದಗಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆ ಜ.19ರಂದು ಬೆಳಗ್ಗೆ 9.30ಕ್ಕೆ ಹಾಗೂ ಸಮಾರೋಪ ಜ.20ರ ಸಂಜೆ 6ಕ್ಕೆ ನಡೆಯಲಿದೆ.

ಪಾರ್ಕಿಂಗ್‌
ಅಭ್ಯರ್ಥಿಗಳ ದ್ವಿಚಕ್ರ ವಾಹನ ಪಾರ್ಕಿಂಗ್‌ ವ್ಯವಸ್ಥೆಯನ್ನು ಗೋವಿಂದ ಕಲ್ಯಾಣ ಮಂಟಪದ ಕಡೆಯಿಂದ ವಿವೇಕಾನಂದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಮಾಡಲಾಗಿದೆ. ಚತುಶ್ಚಕ್ರ ವಾಹನಗಳಿಗೆ ಭುಜಂಗ ಪಾರ್ಕ್‌ ಬಳಿಯ ಹುತಾತ್ಮರ ಸ್ಮಾರಕ ಕಡೆಯಲ್ಲಿ ಮಾಡಲಾಗಿದೆ. ಕಂಪೆನಿಗಳ ಪ್ರತಿನಿಧಿಗಳಿಗೆ ಜಿಲ್ಲಾ ಒಳಾಂಗಣದ ಬಳಿ, ಅತಿಥಿ ಗಣ್ಯರಿಗೆ ಜಿಲ್ಲಾ ಕ್ರೀಡಾಂಗಣದ ಹೊರಗಡೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಅವಕಾಶದ ವೇದಿಕೆ
ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಗುಣಮಟ್ಟ ಹೊಂದಿದ್ದು, ಅವರಿಗೆ ಉದ್ಯೋಗ ದೊರಕಿಸಿಕೊಳ್ಳಲು ಸಂಚಲನ ಸಂಸ್ಥೆ ಈ ಮೇಳದ ಮೂಲಕ ವೇದಿಕೆಯನ್ನು ಕಲ್ಪಿಸಿದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ, ಸಂವಹನ ಕೌಶಲ, ಪ್ರತಿಭೆ ಹಾಗೂ ಸಂದರ್ಶನದಲ್ಲಿ ತೋರುವ ಪ್ರದರ್ಶನದಿಂದ ಅವಕಾಶವನ್ನು ಪಡೆಯಲು ತಯಾರಾಗಬೇಕಿದೆ. ಈ ಮೇಳವು ಅಭ್ಯರ್ಥಿಗಳಿಗೆ ಒಂದು ರೀತಿಯಲ್ಲಿ ಅನುಭವ ಹಾಗೂ ಅವಕಾಶದ ವೇದಿಕೆಯಾಗಲಿದೆ.
– ಪ್ರೇಮ್‌ ಪ್ರಸಾದ್‌ ಶೆಟ್ಟಿ, ಮೇಳದ ಆಯೋಜಕ, ಸಂಚಲನ ಸಂಸ್ಥೆಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next