ಕಾಪು: ಕರ್ನಾಟಕದ ಕೊಲ್ಹಾಪುರ ಖ್ಯಾತಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗುತ್ತಿರುವ ಉಡುಪಿ ಉಚ್ಚಿಲ ದಸರಾ ಉತ್ಸವ 2024ರ ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ನವದುರ್ಗೆಯರು ಮತ್ತು ಶಾರದಾಮಾತೆಯ ವಿಗ್ರಹಗಳ ಜಲಸ್ತಂಭನಾ ಶೋಭಾಯಾತ್ರೆಯು ಸಂಜೆ 3 ಗಂಟೆಗೆ ಆರಂಭಗೊಳ್ಳಲಿದ್ದು, ಶೋಭಾಯಾತ್ರೆ ಸಹಿತ ಜಲಸ್ತಂಭನ ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ಲಕ್ಷಾಂತರ ಭಕ್ತರ ಆಗಮನದ ನಿರೀಕ್ಷೆ: ಉಚ್ಚಿಲ ದಸರಾ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳಲು ಉಚ್ಚಿಲದತ್ತ ಜನಸಾಗರ ಹರಿದು ಬರುತ್ತಿದ್ದು ಈಗಗಾಲೇ ಲಕ್ಷೋಪಲಕ್ಷ ಜನ ಕ್ಷೇತ್ರ ಮಾತೆ ಮಹಾಲಕ್ಷ್ಮೀ ದೇವಿ, ಶಾರದೆ ಮತ್ತು ನವದುರ್ಗೆಯರ ದರ್ಶನ ಪಡೆದಿದ್ದಾರೆ. ಶನಿವಾರ ಒಂದೇ ದಿನ ಮೂರು ಲಕ್ಷಕ್ಕೂ ಅಧಿಕ ಮಂದಿ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದ್ದು ಶೋಭಾಯಾತ್ರೆಯಲ್ಲಿ 1 ಲಕ್ಷಕ್ಕೂ ಮಿಕ್ಕಿದ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಲಸ್ಥಂಭನದ ಸಂದರ್ಭದಲ್ಲೂ 30 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
ಮೆರವಣಿಗೆ ಸಾಗುವ ಹಾದಿ: ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಪೂಜೆ ನಡೆದು, 3 ಗಂಟೆಗೆ ಶೋಭಾ ಯಾತ್ರೆ ಪ್ರಾರಂಭಗೊಳ್ಳಲಿದೆ. ಮಹಾಲಕ್ಷ್ಮೀ ದ್ವಾರದ ಬಳಿ ಶಾರದಾ ಮಾತೆ ಮತ್ತು ನವದುರ್ಗೆಯರಿಗೆ ಪುಷ್ಪಾರ್ಚನೆಗೈದು ನಾಡೋಜ ಡಾ| ಜಿ. ಶಂಕರ್ ಸಹಿತ ಗಣ್ಯರು ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಳಿಕ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಿಂದ ಎರ್ಮಾಳ್-ಉಚ್ಚಿಲ- ಮೂಳೂರು-ಕೊಪ್ಪಲಂಗಡಿ ಮಾರ್ಗವಾಗಿ ಕಾಪು ಬೀಚ್ (ದೀಪಸ್ತಂಭದ ಬಳಿ) ಗೆ ತಲುಪಲಿದೆ. ಈ ಸಂದರ್ಭ ಕಾಪು ಬೀಚ್‌ನಲ್ಲಿ ಮ್ಯೂಸಿಕಲ್ ನೈಟ್ ಆಯೋಜಿಸಲಾಗಿದೆ.
ಬೃಹತ್ ಗಂಗಾರತಿ: ನವದುರ್ಗೆಯರು ಮತ್ತು ಶಾರದಾ ಮೂರ್ತಿಯ ಮೆರವಣಿಗೆಯು ಕಾಪು ಬೀಚ್ ತಲುಪಿದ ಬಳಿಕ ಕಾಶಿ ಗಂಗಾರತಿ ಮಾದರಿಯಲ್ಲಿ 10 ಬೃಹತ್ ಆರತಿಗಳೊಂದಿಗೆ ಮಹಾ ಮಂಗಳಾರತಿ ನಡೆಯಲಿದೆ. ವಿಗ್ರಹಗಳ ವಿಸರ್ಜನಾ ಪೂರ್ವದಲ್ಲಿ 10 ಸಾವಿರ ಸುಮಂಗಲೆಯರಿಂದ ಸಾಮೂಹಿಕ ಮಹಾ ಮಂಗಳಾರತಿ ನೆರವೇರಲಿದೆ. ಬಳಿಕ ಸಮುದ್ರ ಮಧ್ಯದಲ್ಲಿ ಶಾರದಾ ಮಾತೆ ಮತ್ತು ನವದುರ್ಗೆಯರ ವಿಗ್ರಹಳನ್ನು ಜಲಸ್ತಂಭನಗೊಳಿಸಲಾಗುವುದು. ಈ ವೇಳೆ ಲೈಟ್‌ಹೌಸ್ ಪಕ್ಕದ ಸಮುದ್ರ ಮಧ್ಯದಲ್ಲಿ ನೂರಾರು ದೋಣಿಗಳಿಂದ ಕೃತಕ ದ್ವೀಪ ಸೃಷ್ಟಿ ಮತ್ತು ಸುಡುಮದ್ದು ಪ್ರದರ್ಶನ ನಡೆಯಲಿದೆ.
ಅತ್ಯಾಕರ್ಷಕ ಟ್ಯಾಬ್ಲೋ: ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನೊಳಗೊಂಡ 10 ಟ್ಯಾಬ್ಲೋಗಳ ಸಹಿತವಾಗಿ, ಸಾಮಾಜಿಕ ಜಾಗೃತಿಯ ಸಂದೇಶ ಸಾರುವ ಟ್ಯಾಬ್ಲೋಗಳು, ಭಜನಾ ತಂಡಗಳು, ಥೈಯ್ಯಂ ಸಹಿತ ವಿವಿಧ ವೇಷ ಭೂಷಣಗಳು, ಹುಲಿ ವೇಷ, ಚೆಂಡೆ ಬಳಗ, ನಾದ ಸ್ವರ, ವಾದ್ಯ ಸಹಿತ ನಾಸಿಕ್ ಬ್ಯಾಂಡ್ ತಂಡಗಳು ಹಾಗೂ 50ಕ್ಕೂ ಅಧಿಕ ಟ್ಯಾಬ್ಲೋಗಳನ್ನೊಳಗೊಂಡ ಶೋಭಾಯಾತ್ರೆಯು ಸ್ಮರಣೀಯ ಕಾರ್ಯಕ್ರಮವಾಗಿ ಮೂಡಿಬರಲಿದೆ.
ಹೆಚ್ಚುತ್ತಿರುವ ವಿಜ್ರಂಭಣೆ: ದ. ಕ. ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಕ್ತಾದಿಗಳ ಸಹಯೋಗದೊಂದಿಗೆ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ ಉತ್ಸವದಲ್ಲಿನ ಅಚ್ಚುಕಟ್ಟುತನಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದಸರಾ ರೂವಾರಿ ಡಾ| ಜಿ. ಶಂಕರ್, ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ ಮತ್ತು ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ ಹಾಗೂ ಸರ್ವ ಪದಾಧಿಕಾರಿಗಳ ಶ್ರಮದಿಂದಾಗಿ ವರ್ಷದಿಂದ ವರ್ಷಕ್ಕೆ ಇಲ್ಲಿನ ವಿಜ್ರಂಭಣೆ ಹೆಚ್ಚುತ್ತಿದೆ.
ವಿವಿಧೆಡೆ ಪಾರ್ಕಿಂಗ್ ಸೌಲಭ್ಯ: ಮಧ್ಯಾಹ್ನ ಮಹಾಚಂಡಿಕಾಯಾಗ ಪೂರ್ಣಾಹುತಿಯೊಂದಿಗೆ ಮಹಾ ಅನ್ನಸಂತರ್ಪಣೆ ಪ್ರಾರಂಭಗೊಂಡಿದ್ದು ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ. ರಾತ್ರಿ ಶೋಭಾಯಾತ್ರೆ ಮುಗಿದ ಬಳಿಕ ಕಾಪು ಬೀಚ್‌ನಲ್ಲಿ ಉಪಾಹಾರದ ವ್ಯವಸ್ಥೆಯಿದೆ. ದಸರಾಕ್ಕೆ ಆಗಮಿಸುವ ಭಕ್ತರಿಗಾಗಿ ಉಚ್ಚಿಲ ಸರಸ್ವತಿ ಮಂದಿರ ಶಾಲಾ ಮೈದಾನ, ಉಚ್ಚಿಲ ಮಹಾಲಕ್ಷ್ಮೀ ಶಾಲೆ ಬಳಿಯ ಬಯಲು ಪ್ರದೇಶ, ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದ ಪ್ರದೇಶ, ಮೊಗವೀರ ಭವನದ ಸುತ್ತಮುತ್ತಲಿನಲ್ಲಿ, ಎರ್ಮಾಳು ಜನಾರ್ದನ ದೇವಸ್ಥಾನದ ಬಳಿಯೂ ಪಾರ್ಕಿಂಗ್‌ಗೆ ಜಾಗ ಮೀಸಲಿಡಲಾಗಿದೆ.
ಪರ್ಯಾಯ ರಸ್ತೆ ಬಳಸಿ: ರಾ.ಹೆ. 66ರಲ್ಲಿ ಶೋಭಾಯಾತ್ರೆ ಸಾಗುವುದರಿಂದ ಹೆದ್ದಾರಿ ಸಂಚಾರಕ್ಕೆ ತೊಂದರೆಯಾಗದಂತೆ ವಿವಿಧ ವ್ಯವಸ್ಥೆಗಳನ್ನು ಜೋಡಿಸಲಾಗಿದೆ. ಶೋಭಾಯಾತ್ರೆ ಸಂದರ್ಭದ ಸಂಚಾರದ ಒತ್ತಡವನ್ನು ಕಡಿಮೆ ಮಾಡಲು ಮಂಗಳೂರಿನಿಂದ ಉಡುಪಿಗೆ ತೆರಳುವ ವಾಹನ ಸವಾರರು ಪಡುಬಿದ್ರಿ-ಮುದರಂಗಡಿ-ಶಿರ್ವ-ಕಟಪಾಡಿ ರಸ್ತೆ ಹಾಗೂ ಉಡುಪಿಯಿಂದ ಮಂಗಳೂರಿಗೆ ತೆರಳುವ ಸವಾರರು ಕಟಪಾಡಿ-ಶಿರ್ವ-ಮುದರಂಗಡಿ-ಪಡುಬಿದ್ರಿ ರಸ್ತೆಯಲ್ಲಿ ಸಂಚರಿಸುವ ಮೂಲಕ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ಪೊಲೀಸ್ ಇಲಾಖೆ ಮತ್ತು ದಸರಾ ಸಮಿತಿ ಅಭಿಪ್ರಾಯವಾಗಿದೆ.