Advertisement
ಆಂಧ್ರಪ್ರದೇಶ ಮತ್ತು ಕೇರಳ ಮೂಲದ ಈ ವಿದ್ಯಾರ್ಥಿಗಳು ಅಮೆರಿಕ ಮತ್ತು ಮಲೇಶ್ಯಾಕ್ಕೆ ಹೋಗಿ ಮಣಿಪಾಲಕ್ಕೆ ಆಗಮಿಸಿದ್ದರು. ಅವರಿಗೆ ಕಾಯಿಲೆಯ ಲಕ್ಷಣಗಳು ಕಂಡು ಬಂದಾಗ ಗಂಟಲು ದ್ರವ ಮತ್ತು ರಕ್ತ ಪರೀಕ್ಷೆಯನ್ನು ಶಿವಮೊಗ್ಗಕ್ಕೆ ಕಳುಹಿಸಲಾಯಿತು. ಇದೀಗ ಸೋಂಕು ಇಲ್ಲ ಎಂದು ವರದಿ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ದುಬಾೖ ಮೂಲದ ವಿದ್ಯಾರ್ಥಿಯೊಬ್ಬರಿಗೆ ಶುಕ್ರವಾರ ಅನಾರೋಗ್ಯ ಕಂಡು ಬಂದ ಕಾರಣ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಗಂಟಲು ದ್ರವ ಮತ್ತು ರಕ್ತ ಪರೀಕ್ಷೆಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಶನಿವಾರ ವರದಿ ಕೈಸೇರಲಿದೆ ಎಂದು ಡಾ| ಸೂಡ ತಿಳಿಸಿದ್ದಾರೆ. ಮತ್ತೆ ಪರೀಕ್ಷೆ
ಸಾಗರ ತಾಲೂಕು ಆನಂದಪುರದ 68ರ ಹರೆಯದ ಮಹಿಳೆಗೆ ಕೊರೊನಾ ಸೋಂಕು ಇಲ್ಲ ಎಂದು ವರದಿ ಬಂದಿದ್ದರೂ ಆರೋಗ್ಯ ಸುಧಾರಣೆಯಾಗದ ಕಾರಣ ಮತ್ತೂಮ್ಮೆ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ಡಾ| ಸೂಡ ತಿಳಿಸಿದ್ದಾರೆ. ಮಹಿಳೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
ಶಿರ್ವ ಮೂಲದ 37 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಉಡುಪಿ ಜಿಲ್ಲಾಸ್ಪತ್ರೆಯ ವಿಶೇಷ ವಾರ್ಡ್‌ಗೆ ದಾಖಲಾಗಿದ್ದಾರೆ. ಅವರು ಕೊರೊನಾ ಹರಡುತ್ತಿದ್ದಾಗ ಜಪಾನ್ ಹಡಗಿನಲ್ಲಿದ್ದರು. ಅವರನ್ನು ಹಾಂಕಾಂಗ್‌ನಲ್ಲಿ 14 ದಿನ ಪರೀಕ್ಷೆಗೆ ಒಳಪಡಿಸಿ ಬಿಡುಗಡೆಗೊಳಿಸಲಾಗಿತ್ತು. ಊರಿಗೆ ಬಂದ ಬಳಿಕ ಕೆಮ್ಮು, ಶೀತ, ಜ್ವರ ಇಲ್ಲದಿದ್ದರೂ ಭೇದಿ ಮತ್ತು ಹೊಟ್ಟೆ ನೋವು, ಸ್ವಲ್ಪ ಉಸಿರಾಟದ ಸಮಸ್ಯೆ ತಲೆದೋರಿ ಆಸ್ಪತ್ರೆಗೆ ದಾಖಲಾದರು. ಇವರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
Advertisement
ಮಣಿಪಾಲದಲ್ಲಿ ಕಾರ್ಯಕ್ರಮ ರದ್ದುಮಣಿಪಾಲ ವಿ.ವಿ.ಯಲ್ಲಿ ಮಾ. 12ರಿಂದ ನಿಗದಿತವಾದ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಇದು ಎಷ್ಟು ದಿನವೆಂದು ನಿಗದಿಪಡಿಸಿಲ್ಲ ಎಂದು ವಿ.ವಿ. ಕುಲಸಚಿವ ಡಾ| ನಾರಾಯಣ ಸಭಾಹಿತ್ ತಿಳಿಸಿದ್ದಾರೆ. ಸಮ್ಮೇಳನಗಳು ರದ್ದು
ಹಂಗಾರಕಟ್ಟೆಯಲ್ಲಿ ಮಾ. 14-15ರಂದು ನಡೆಯಬೇಕಾದ ಸಾಹಿತ್ಯ ಸಮ್ಮೇಳನ, ಮಾ. 14ರಂದು ಬ್ರಹ್ಮಾವರ ಬಂಟರ ಭವನದಲ್ಲಿ ನಡೆಯಬೇಕಾಗಿದ್ದ “ಬಾಂಧವ್ಯ’ ಕಾರ್ಯಕ್ರಮ, ಕಾರ್ಕಳದಲ್ಲಿ ಮಾ. 15ರಂದು ನಡೆಯಬೇಕಾದ ಮೊಗೇರ ಸಮ್ಮೇಳನವನ್ನು ಮುಂದೂಡಲಾಗಿದೆ. ಸರಳ ಜಾತ್ರೆ
ಒಂದು ವಾರ ಜಾತ್ರೆ, ಉತ್ಸವಗಳನ್ನು ರದ್ದುಗೊಳಿಸಲು ಸರಕಾರ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜಾತ್ರೆ, ಉತ್ಸವಗಳನ್ನು ಸರಳವಾಗಿ ಆಚರಿಸಲು ತಿಳಿಸುವುದಾಗಿ ಧಾರ್ಮಿಕ ದತ್ತಿ ಇಲಾಖೆ ಮೂಲಗಳು ತಿಳಿಸಿವೆ. ಸದ್ಯ ಕೊಲ್ಲೂರು, ಪೆರ್ಡೂರು, ಪಡುಬಿದ್ರಿ, ನಂದಿಕೂರು ಮೊದಲಾದ ದೇವಸ್ಥಾನಗಳಲ್ಲಿ ಜಾತ್ರೆ ನಿಗದಿಯಾಗಿದೆ.