ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ 19 ಸಂಬಂಧ ಶುಕ್ರವಾರ ಇಬ್ಬರು ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇಬ್ಬರೂ ಮಹಿಳೆಯರಾಗಿದ್ದು ಉಸಿರಾಟ ಸಮಸ್ಯೆ ಹೊಂದಿದ್ದಾರೆ. ಕೋವಿಡ್ 19 ಶಂಕೆಯಿಂದ ಯಾರೊಬ್ಬರೂ ದಾಖಲಾಗಿಲ್ಲ.
ಶುಕ್ರವಾರ ಒಟ್ಟು ನೋಂದಣಿ ಮಾಡಿಕೊಂಡ ವರು 68 ಮಂದಿ. ಇದುವರೆಗೆ ಒಟ್ಟು 1,956 ಮಂದಿ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ ಪ್ರಯಾಣಿಕರು, ತೀವ್ರ ಉಸಿರಾಟದ ಸಮಸ್ಯೆ ಇರುವವರು ಕೊರೊನಾ ಪಾಸಿಟಿವ್ ಸಂಪರ್ಕದಲ್ಲಿದ್ದವರು ಸೇರಿದ್ದಾರೆ.
ಒಟ್ಟು ನೋಂದಣಿ ಮಾಡಿಕೊಂಡವರಲ್ಲಿ ಶುಕ್ರವಾರ 28 ದಿನಗಳ ನಿಗಾ ಮುಗಿಸಿದವರು 15 ಮಂದಿ, ಒಟ್ಟು 157 ಮಂದಿ. ಶುಕ್ರವಾರ 14 ದಿನಗಳ ನಿಗಾ ಮುಗಿಸಿದವರು 124 ಮಂದಿ, ಒಟ್ಟು 957 ಮಂದಿ. ಹೋಮ್ ಕ್ವಾರಂಟೈನ್‌ನಲ್ಲಿರುವವರು ಒಟ್ಟು 825. ಆಸ್ಪತ್ರೆ ಕ್ವಾರಂಟೈನ್‌ನಲ್ಲಿರುವವರು (ಲೋರಿಸ್ಕ್ ಮತ್ತು ಹೈರಿಸ್ಕ್ನವರು) 166 ಮಂದಿ. ಐಸೋಲೇಶನ್ ವಾರ್ಡ್‌ನಲ್ಲಿ ಒಟ್ಟು 19 ಮಂದಿ ಇದ್ದಾರೆ.
ಶುಕ್ರವಾರ ಐಸೋಲೇಶನ್ ವಾರ್ಡ್‌ನಿಂದ ಹತ್ತು ಮಂದಿ ಬಿಡುಗಡೆಗೊಂಡಿದ್ದು ಇದುವರೆಗೆ ಒಟ್ಟು 130 ಮಂದಿ ಬಿಡುಗಡೆಗೊಂಡಿದ್ದಾರೆ. ಕೋವಿಡ್ 19 ಶಂಕಿತರ ಸಂಪರ್ಕಕೆ ಒಳಗಾದ 11 ಮಂದಿಯ ಮಾದರಿಯನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ಇದುವರೆಗೆ 192 ಜನರ ಗಂಟಲುದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಶುಕ್ರವಾರ ಸ್ವೀಕರಿಸಿದ ವರದಿಗಳಲ್ಲಿ 16 ನೆಗೆಟಿವ್ ಬಂದಿದೆ. ಇದುವರೆಗೆ 177 ಜನರ ವರದಿಗಳು ಬಂದಿವೆ. ಇವರಲ್ಲಿ 174 ಜನರ ವರದಿಗಳು ನೆಗೆಟಿವ್ ಆಗಿದ್ದು ಮೂವರು ಸೋಂಕಿತರಾಗಿದ್ದಾರೆ. 15 ಜನರ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
ತರಬೇತಿ
ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಝೂಮ್ ಕಾಲ್ ಮೂಲಕ ತರಬೇತಿ ಮಾರ್ಗದರ್ಶನ ನೀಡಲಾಯಿತು. ಮನೆಗಳಲ್ಲಿ ನಿಗಾ ಇರುವವರ ಮನೆಗಳಿಗೆ ಹೋಗಿ ಆರೋಗ್ಯ ಕಾರ್ಯಕರ್ತರು ವಿಚಾರಿಸುತ್ತಿದ್ದಾರೆ. ಅದೇ ರೀತಿ ವಲಸೆ ಕಾರ್ಮಿಕರ ಶಿಬಿರಗಳಿಗೆ ತೆರಳಿ ಕಾರ್ಯಕರ್ತರು ಜಾಗೃತಿ ಮೂಡಿಸುತ್ತಿದ್ದಾರೆ.