Advertisement

Udupi: ಅಪಾರ್ಟ್‌ಮೆಂಟ್‌ಗೆ ಕನ್ನ; 9 ಲಕ್ಷ ರೂ. ಮೌಲ್ಯದ ಸೊತ್ತು ಕಳವು

12:06 AM Oct 01, 2024 | Team Udayavani |

ಉಡುಪಿ: ನಗರದಲ್ಲಿ ಕಳ್ಳರ ಉಪಟಳ ಹೆಚ್ಚಿದ್ದು, ಈ ಬಾರಿ ಸರಕಾರಿ ನೌಕರರನ್ನೇ ತಮ್ಮ ಗುರಿ ಆಗಿಸಿದ್ದಾರೆ. 31ನೇ ಬೈಲೂರು ವಾರ್ಡ್‌ನಲ್ಲಿ ಕಂದಾಯ ಇಲಾಖೆಯ ವಸತಿ ಗೃಹಗಳಿಗೆ ನುಗ್ಗಿ ಸುಮಾರು 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.

Advertisement

ಒಟ್ಟು 6 ಮನೆಗಳಿಗೆ ನುಗ್ಗಿದ್ದು, ಎರಡರಲ್ಲಿ ನಗದು, ಚಿನ್ನಾಭರಣ ಕದ್ದಿದ್ದು, ನಾಲ್ಕರಲ್ಲಿ ಮಹತ್ವದ ವಸ್ತುಗಳು ಸಿಕ್ಕಿಲ್ಲ. ಇಲ್ಲಿ ವಾಸವಿದ್ದ ಫ್ಲೇವಿಯಾ ಡಿ’ಸೋಜಾ ಅವರು ಸೆ.28ರಂದು ಸಂಜೆ ಮನೆಗೆ ಬೀಗ ಹಾಕಿ ಕಡೆಕಾರ್‌ನಲ್ಲಿರುವ ಸ್ನೇಹಿತೆಯ ಮನೆಗೆ ಹೋಗಿದ್ದರು. ಸೆ.30ರಂದು ಬೆಳಗ್ಗೆ ವಾಪಸು ಮನೆಗೆ ಬಂದಾಗ ಬೀಗ ಮುರಿದದ್ದು ತಿಳಿಯಿತು. ಒಳಗೆ ನೋಡಿದಾಗ ಬೀರುವಿನ ಬೀಗ ಒಡೆದು ಅಲ್ಲಿದ್ದ 20,000 ನಗದು ಮತ್ತು ಅಂದಾಜು 126 ಗ್ರಾಂ ತೂಕದ 8,82,000 ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದು ತಿಳಿದು ಬಂದಿತು.

ಇದೇ ರೀತಿ ವಾಸುದೇವ ಅವರೂ ತಮ್ಮ ಮನೆಗೆ ಸೆ.28ರಂದು ಸಂಜೆ ಬೀಗ ಹಾಕಿ ಸ್ವಂತ ಊರಾದ ಕೆಂಚನೂರಿಗೆ ಹೋಗಿದ್ದರು. ಸೆ.30ರಂದು ನೆರೆಮನೆಯವರಾದ ಫ್ಲೆವಿಯಾ ಡಿ’ಸೋಜಾ ಕರೆಮಾಡಿ ಮನೆಯ ಬೀಗ ತುಂಡಾದ ಸ್ಥಿತಿಯಲ್ಲಿದ್ದ ಬಗ್ಗೆ ಮಾಹಿತಿ ನೀಡಿದ್ದರು. ಅವರು ಬಂದು ನೋಡಿದಾಗ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಬೆಡ್‌ರೂಮಿನ ಗೋಡ್ರೇಜ್‌ ಮೇಲ್ಭಾಗದಲ್ಲಿರಿಸಿದ್ದ ಬೀಗದ ಕೀ ಯನ್ನು ಬಳಸಿ ಅದರಲ್ಲಿಟ್ಟಿದ್ದ 25,000 ರೂ. ಕಳವು ಮಾಡಿದ್ದರು. ನಿವೃತ್ತ ಸೈನಿಕರೊಬ್ಬರು ವಾಸವಾಗಿದ್ದ ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟನ್ನು ಒಡೆದಿದ್ದರೂ ಅವರಿಗೆ ಅಲ್ಲಿ ಏನೂ ಸಿಗಲಿಲ್ಲ.

ಬಾಗಿಲು ಹಾಕಿ ಬೀಗ ಸಿಕ್ಕಿಸಿದ್ದರು!: ಕಳ್ಳತನಕ್ಕೆ ಯತ್ನಿಸಿದ ಮನೆಯ ಮುಂಭಾಗದ ಚಿಲಕವನ್ನು ಯಾರಿಗೂ ಅನುಮಾನ ಬರ ಬಾರದು ಎಂದು ಮತ್ತೆ ಅದೇ ರೀತಿ ಬೀಗ ಸಿಕ್ಕಿಸಿ ಹೋಗಿದ್ದರುಕಳ್ಳರು. ಈ ಕಟ್ಟಡದ ಎದುರಿನಲ್ಲಿ ಹಲವು ಅಂಗಡಿಗಳಿವೆ. ತಡರಾತ್ರಿಯವರೆಗೂ ಇಲ್ಲಿ ಜನಸಂಚಾರವಿದೆ. ಅನತಿ ದೂರದಲ್ಲೇ ಪೊಲೀಸ್‌ ಠಾಣೆಯೂ ಇರುವ ಕಾರಣ ಇದುವರೆಗೂ ಕಳ್ಳತನ ಇಲ್ಲಿ ನಡೆದಿರಲಿಲ್ಲ.

Advertisement

ಇಲ್ಲಿನ ನಿವಾಸಿ ಸುರೇಶ್‌, ರಾತ್ರಿ 1 ಗಂಟೆಯ ಅನಂತರ ಬೀದಿನಾ ಯಿಗಳು ಬೊಗಳುತ್ತಿದ್ದವು. ಆದರೆ ಮಾಮೂಲಿ ಎಂದು ಸುಮ್ಮನಾದೆವು ಎಂದಿದ್ದಾರೆ. ಈ ಕಾಂಪೌಂಡ್‌ನ‌ಲ್ಲಿ 6 ಅಪಾರ್ಟ್‌ಮೆಂಟ್‌ಗಳಿದ್ದು, ಒಟ್ಟು 34 ಮನೆಗಳಿವೆ. 100ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ.

ವಿವಿಧೆಡೆ ತಪಾಸಣೆ: ಪೊಲೀಸರು ಶ್ವಾನದಳದ ಮೂಲಕ ವಿವಿಧೆಡೆ ತಪಾಸಣೆ ನಡೆಸಿದರು. ಶ್ವಾನವು ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ನಿಂದ ಬೈಲೂರು ರಸ್ತೆಯವರೆಗೆ ಹೋಗಿ ಮತ್ತೆ ವಾಪಸ್‌ ಬಂದಿದೆ. ಈ ನಡುವೆ ಬೆರಳಚ್ಚು ತಜ್ಞರು ಆಗಮಿಸಿ ಸೂಕ್ತ ಪರಿಶೀಲನೆ ನಡೆಸಿದ್ದಾರೆ. ಘಟನ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಎಸ್‌.ಟಿ. ಸಿದ್ದಲಿಂಗಪ್ಪ, ಪಿ.ಎ. ಹೆಗಡೆ, ಉಡುಪಿ ಡಿವೈಎಸ್‌ಪಿ ಪ್ರಭು ಡಿ.ಟಿ., ಪ್ರೊಬೆಷನರಿ ಡಿವೈಎಸ್‌ಪಿ ಗೀತಾ ಪಾಟೀಲ್‌ ಸಹಿತ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಲೈಟ್‌ ಅಳವಡಿಕೆ: ಕಳ್ಳತನ ನಡೆದ ಬಳಿಕ ಸೋಮವಾರ ಬೆಳಗ್ಗೆ ನಗರಸಭೆಯ ಮೂಲಕ ತ್ವರಿತವಾಗಿ ಲೈಟ್‌ ಅಳವಡಿಕೆ ಮಾಡಲಾಯಿತು. ಮುಂದಿನ ದಿನಗಲ್ಲಿ ಸರಕಾರಿ ವಸತಿ ಗೃಹಗಳಿಗೆ ಸಿಸಿಟಿವಿ ಅಳವಡಿಸುವುದಾಗಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಕಳ್ಳರು ಮೊದಲೇ ಪರಿಶೀಲನೆ ನಡೆಸಿದ್ದರೇ?
ಇಷ್ಟೊಂದು ಮನೆಗಳಿರುವ ಅಪಾರ್ಟ್‌ಮೆಂಟ್‌ಗೆ ಕಳ್ಳರು ನುಗ್ಗ ಬೇಕಾದರೆ ಮೊದಲೇ ಇಲ್ಲಿಗೆ ಬಂದು ಪರಿಶೀಲಿಸಿರಬೇಕು. ಎಂಬ ಸಂಶಯ ಕಾಣಿಸುತ್ತಿದೆ. ಇಲ್ಲಿನ ಎಲ್ಲ ಮನೆಗಳಿಗೂ ಹೊರಭಾಗ ದಿಂದಲೇ ಚಿಲಕ ಹಾಕಿ ಬೀಗ ಹಾಕಬೇಕು. ಇದರಿಂದ ಯಾವ ಮನೆಯಲ್ಲಿ ಜನ ಇದ್ದಾರೆ, ಯಾವುದರಲ್ಲಿ ಇಲ್ಲ ಎಂಬುದು ಗೊತ್ತಾ ಗುತ್ತದೆ. ನಾಲ್ಕನೇ ಶನಿವಾರ ಹಾಗೂ ರವಿವಾರ ಆದ ಕಾರಣ ಸರಕಾರಿ ನೌಕರರು ಊರಿಗೆ ಹೋಗುವುದು ವಾಡಿಕೆ. ಇದನ್ನೆಲ್ಲ ತಿಳಿದೇ ಕಳ್ಳರು ನುಗ್ಗಿರುವ ಸಾಧ್ಯತೆ ಕಾಣಿಸುತ್ತಿದೆ.

ಸಿಸಿ ಕೆಮರಾ ಇಲ್ಲ
ಆ ಅಪಾರ್ಟ್‌ಮೆಂಟ್‌ಗಳಲ್ಲಿ ಎಲ್ಲಿಯೂ ಸಿಸಿ ಕೆಮರಾ ಇಲ್ಲದಿರುವುದರಿಂದ ಆರೋಪಿಗಳ ಪತ್ತೆ ಕಾರ್ಯ ಪೊಲೀಸರಿಗೆ ಜಟಿಲವಾಗಿ ಪರಿಣಮಿಸಿದೆ. ಭದ್ರತಾ ಸಿಬಂದಿಯೂ ಇಲ್ಲ. ಘಟನೆ ನಡೆದ ಬಳಿಕ ಪೊಲೀಸರು ವಿವಿಧ ಅಂಗಡಿ-ಮನೆ, ಅಪಾರ್ಟ್‌ಮೆಂಟ್‌ಗಳ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕಳ್ಳರು ಬೈಲೂರು ಮಾರ್ಗದತ್ತ ತೆರಳಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ತನಿಖೆಗಾಗಿ 2 ತಂಡಗಳನ್ನು ರಚಿಸಲಾಗಿದೆ. ಸ್ಥಳೀಯ ಸೊಸೈಟಿಯೊಂದರ ಸಿಸಿಟಿವಿಯಲ್ಲಿ ಓರ್ವ ಶಂಕಿತ ವ್ಯಕ್ತಿ ರಾತ್ರಿ 1 ಗಂಟೆಯ ಬಳಿಕ ಕಂಡುಬಂದಿದ್ದು, ಅದು ಯಾರೆಂಬುದು ತಿಳಿದಿಲ್ಲ.

ಮಾಹಿತಿ ನೀಡುವವರಾರು?
ನಗರದಲ್ಲಿ ಮುಖ್ಯವಾಗಿ ಖಾಲಿ ಮನೆಗಳು, ಅಪಾರ್ಟ್‌ಮೆಂಟ್‌ಗಳನ್ನೇ ಗುರಿಯಾಗಿರಿಸಿಕೊಂಡು ಕಳ್ಳತನ ನಡೆಸಲಾಗುತ್ತಿದೆ. ಖಾಲಿ ಮನೆ ಅಥವಾ ಮನೆ ಮಂದಿ ಬೀಗ ಹಾಕಿ ಹೋಗುವ ಮಾಹಿತಿಯನ್ನು ಕಳ್ಳರಿಗೆ ನೀಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ತುಕ್ಕು ಹಿಡಿದ ಬೀಗಗಳು!
ಕಟ್ಟಡದ ಬೀಗಗಳೂ ತುಕ್ಕು ಹಿಡಿದಿವೆ. ಇದರಿಂದಾಗಿ ಕಳ್ಳರು ಸುಲಭವಾಗಿ ಮುರಿಯಹುದು. ಇಲ್ಲಿನ ನಿವಾಸಿಗಳಿಗೆ 5 ವರ್ಷ ಮಾತ್ರ ಉಳಿಯಲು ಅವಕಾಶ ಇದ್ದು, ವ್ಯವಸ್ಥೆ ಆಗಬೇಕಿದೆ.

ಖಾಲಿ ಮನೆಗಳಿಗೆ ಕನ್ನ
ನಗರ ಭಾಗದಲ್ಲಿ ಈ ವರ್ಷ ನಡೆದ ಕಳ್ಳತನ ಪ್ರಕರಣಗಳಲ್ಲಿ ಮುಖ್ಯವಾಗಿ ಖಾಲಿ ಮನೆಗಳನ್ನೇ ಕೇಂದ್ರೀಕರಿಸಿಕೊಂಡಿದ್ದೇ ಹೆಚ್ಚು. ಬ್ರಹ್ಮಗಿರಿಯ ಬಳಿ 3 ಅಪಾರ್ಟ್‌ಮೆಂಟ್‌, ಕಾಡಬೆಟ್ಟುವಿನ ಮನೆ, ಎಂಜಿಎಂ ಬಳಿ 1 ಮನೆ ಹೀಗೆ ಖಾಲಿ ಮನೆಗಳನ್ನೇ ಗುರಿಯಾಗಿ ಟ್ಟುಕೊಂಡು ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದರೂ ಇದುವರೆಗೆ ಪತ್ತೆಯಾಗಿದ್ದು ಕಾಡಬೆಟ್ಟುವಿನಲ್ಲಿ ಮನೆಕಳ್ಳತನದ ಆರೋಪಿ ಮಾತ್ರ. 2017ರಲ್ಲಿ ಮಣಿಪಾಲ ಪೊಲೀಸ್‌ ಕ್ವಾಟ್ರಸ್‌ನಲ್ಲಿ ನಡೆದ ಕಳ್ಳರ ಪತ್ತೆ ಕಾರ್ಯ ಕೂಡ ನಡೆದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next