Advertisement
ಆರೋಗ್ಯ ನಿರ್ವಹಣಾ ಮಾಹಿತಿ ವರದಿಯಿಂದ 0-6 ವರ್ಷ ವಯಸ್ಸಿನ ಹೆಣ್ಣು ಹಾಗೂ ಗಂಡು ಮಕ್ಕಳ ಲಿಂಗನುಪಾತ ನೋಡಿದರೆ ಭಾರೀ ಪ್ರಮಾಣದ ವ್ಯತ್ಯಾಸ ಕಂಡು ಬರುತ್ತಿದೆ. ಲಿಂಗನುಪಾತ ವರದಿ ಪ್ರಕಾರ ರಾಜ್ಯದಲ್ಲಿ ಕರಾವಳಿಯ ಎರಡು ಜಿಲ್ಲೆಗಳೇ ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಬುದ್ಧಿವಂತರ ಜಿಲ್ಲೆಗಳೆಂದು ಕರೆಯಲ್ಪಡುವ ಉಡುಪಿ ಹಾಗೂ ದ.ಕ.ದಲ್ಲಿ ಮಾತ್ರ ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುತ್ತಿರುವ ಬೆಳವಣಿಗೆ ಆತಂಕ ಮೂಡಿಸಿದೆ.
ಉಡುಪಿ ಜಿಲ್ಲೆಯ ಕಳೆದ 10 ವರ್ಷಗಳ ಲಿಂಗಾನುಪಾತ ಪ್ರಮಾಣ ನೋಡಿದರೆ 2007-08ರಲ್ಲಿ 1,000 ಗಂಡು ಮಕ್ಕಳಿಗೆ 913 ಹೆಣ್ಣುಮಕ್ಕಳಿದ್ದರು; 2012-13ರಲ್ಲಿ 980ಕ್ಕೆ ಏರಿತ್ತು. ಅದರ ಮುಂದಿನ ವರ್ಷ ಅಂದರೆ 2013-14ರಲ್ಲಿ ಅದು 938ಕ್ಕೆ ಕುಸಿತ ಕಂಡಿತ್ತು. ಆ ಬಳಿಕ 2015ರಲ್ಲಿ 963ಕ್ಕೆ ಏರಿಕೆ ಕಂಡಿತ್ತು. 2016- 17ರ ಮಾರ್ಚ್‌ವರೆಗೆ ಜಿಲ್ಲಾ ಆರೋಗ್ಯ ಇಲಾಖೆ ವರದಿ ಪ್ರಕಾರ ಜಿಲ್ಲೆಯಲ್ಲಿ 1,000 ಗಂಡು ಮಕ್ಕಳಿಗೆ 954 ಮಂದಿ ಹೆಣ್ಣು ಮಕ್ಕಳಿದ್ದಾರೆ.
ಕುಸಿತಕ್ಕೆ ಕಾರಣಗಳೇನು?
ಹೆಣ್ಣು ಮಕ್ಕಳ ಸಂಖ್ಯೆ ಗಣನೀಯ ವಾಗಿ ಇಳಿಕೆಯಾಗಲು ಕಾರಣ ಕಡಿಮೆಯಾಗುತ್ತಿರುವ ಜನನ ದರ ಪ್ರಮಾಣ, ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕಾನೂನು ಬಾಹಿರವಾಗಿ ಭ್ರೂಣಲಿಂಗ ಪತ್ತೆ, ಒಂದಕ್ಕಿಂತ ಹೆಚ್ಚಿನ ಮಗು ಬಯಸದೆ ಇರುವುದು, ಗಂಡುಮಕ್ಕಳ ಮೇಲಿನ ಮೋಹದಿಂದ ಹೆಣ್ಣು ಭ್ರೂಣ ಹತ್ಯೆ, ಈ ಎಲ್ಲ ಕಾರಣಗಳಿಂದ ಹೆಣ್ಣುಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದಾಗಿ ಇತ್ತೀಚೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವರದಿಯೂ ಹೇಳಿತ್ತು. ಜನನ ದರ ಪ್ರಮಾಣವೂ ಕುಸಿತ
ಉಡುಪಿ ಜಿಲ್ಲೆಯಲ್ಲಿ ಕೇವಲ ಹೆಣ್ಣು ಮಕ್ಕಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿರುವುದಲ್ಲ. ಒಟ್ಟಾರೆ ಗಂಡು ಅಥವಾ ಹೆಣ್ಣು ಮಕ್ಕಳ ಜನನ ದರ ಪ್ರಮಾಣವೂ ಕಡಿಮೆಯಾಗುತ್ತಿರುವುದೂ ಆತಂಕಕಾರಿ ಬೆಳವಣಿಗೆ. ಅಂದರೆ 5 ವರ್ಷಗಳ ಹಿಂದೆ ಶೇ. 17ರಷ್ಟಿದ್ದ ಜನನ ದರ ಪ್ರಮಾಣ ಈಗ ಶೇ. 11ಕ್ಕೆ ಕುಸಿದಿದೆ. ಇದಕ್ಕೆ ಕಾರಣವೂ ಇದೆ ಕರಾವಳಿ ಭಾಗದಲ್ಲಿ ತಡವಾಗಿ ಮದುವೆಯಾಗುತ್ತಿರುವುದು, ಪತಿ-ಪತ್ನಿ ಇಬ್ಬರೂ ಉದ್ಯೋಗಿಗಳಾಗಿದ್ದರೆ ಮಗು ಪಡೆಯುವ ಬಗ್ಗೆ ನಿರಾಸಕ್ತಿ, ಒಂದೇ ಮಗು ಸಾಕೆನ್ನುವ ಭಾವನೆ ಈ ಎಲ್ಲ ಕಾರಣಗಳಿಂದ ಜನನ ದರ ಪ್ರಮಾಣ ಕುಸಿಯುತ್ತಿದೆ. ಒಂದು ರೀತಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಲು ಇದು ಕೂಡ ಒಂದು ಕಾರಣ ಎನ್ನಲಾಗುತ್ತಿದೆ.
Related Articles
ನಿಯಮ ಉಲ್ಲಂ ಸುವ ವೈದ್ಯರಿಗೆ 3 ವರ್ಷ ಜೈಲು ಹಾಗೂ 10,000 ರೂ. ದಂಡ, 2ನೇ ಬಾರಿ ಅಪರಾಧ ಸಾಬೀತಾದರೆ ಮತ್ತೆ 5 ವರ್ಷ ಹಾಗೂ 50,000 ರೂ. ದಂಡ ವಿಧಿಸಲಾಗುತ್ತದೆ. ಭ್ರೂಣಹತ್ಯೆ ನಡೆಸಿದರೆ ಅಂತಹ ಕುಟುಂಬದವರಿಗೂ ಕನಿಷ್ಠ 3 ವರ್ಷ ಜೈಲು ಶಿಕ್ಷೆಯಾಗಲಿದೆ.ಅನಧಿಕೃತ ಸ್ಕ್ಯಾನಿಂಗ್ ಸೆಂಟರ್, ಭ್ರೂಣಲಿಂಗ ಪತ್ತೆ ಕಂಡುಬಂದಲ್ಲಿ ಸಾರ್ವಜನಿಕರೂ ಕೂಡ www.pepndtkar.in/index.php/complaint ಈ ವೆಬ್‌ಸೈಟ್ ಅಥವಾ ಜಿಲ್ಲಾಸ್ಪತ್ರೆಯ 0820 – 2527499ಕ್ಕೆ ದೂರು ನೀಡಬಹುದು.
Advertisement
ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಕಣ್ಣುಹೆಚ್ಚುತ್ತಿರುವ ಸ್ಕ್ಯಾನಿಂಗ್ ಸೆಂಟರ್‌ಗಳಿಂದಾಗಿ ಲಿಂಗಾನುಪಾತ ಕುಸಿಯುತ್ತಿದೆ ಎನ್ನುವ ವರದಿಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸೆಂಟರ್‌ಗಳ ಕಾರ್ಯದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೀವ್ರ ನಿಗಾ ಇರಿಸಿದೆ. ಅದಕ್ಕಾಗಿಯೇ ಪ್ರತ್ಯೇಕ ಸಮಿತಿ ರಚಿಸಿ ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲೆಯಲ್ಲಿರುವ ಒಟ್ಟು 72 ಸ್ಕ್ಯಾನಿಂಗ್ (ಉಡುಪಿ- 40, ಕಾರ್ಕಳ- 11, ಕುಂದಾಪುರ- 21) ಸೆಂಟರ್‌ಗಳಿಗೂ ಆ ತಂಡ ಭೇಟಿ ನೀಡಿ ಭ್ರೂಣಲಿಂಗ ಪತ್ತೆ ನಿಷೇಧ ಫಲಕ ಅಳವಡಿಸಿರುವುದನ್ನು ಮತ್ತು ಭ್ರೂಣಲಿಂಗ ಪತ್ತೆ ಮಾಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದೆ. ಗರ್ಭಪಾತ ಆಗಿದ್ದರೆ ಯಾವ ಕಾರಣಕ್ಕೆ ಎನ್ನುವ ವರದಿಯನ್ನು ಪರಿಶೀಲಿಸಿ ತಪಾಸಣೆ ನಡೆಸುವುದು ಈ ಸಮಿತಿಯ ಜವಾಬ್ದಾರಿಯಾಗಿರುತ್ತದೆ. ನಿರ್ದಾಕ್ಷಿಣ್ಯ ಕ್ರಮ
ಯಾವುದೇ ಆಸ್ಪತ್ರೆ ಅಥವಾ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಭ್ರೂಣ ಲಿಂಗ ಪತ್ತೆ ಹಚ್ಚುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಅಂತಹ ದೂರುಗಳು ಬಂದಲ್ಲಿ ತನಿಖೆ ನಡೆಸಿ, ಕೃತ್ಯ ನಡೆದಿರುವುದು ಸಾಬೀತಾದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ.
– ಡಾ| ರೋಹಿಣಿ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ