Advertisement

ಉಡುಪಿ: ರೈತ ಸಂತೆಗೆ ಬಂದದ್ದು ಒಂದೇ ಅರ್ಜಿ!

10:47 AM Aug 08, 2018 | Team Udayavani |

ಉಡುಪಿ: ಕೃಷಿ ಕ್ಷೀಣಿಸುತ್ತ ಬಂದಿರುವುದು ಸರಕಾರದ ಧೋರಣೆಯಿಂದಲೇ. ಇದು ಕೃಷಿಕರ ನಿರುತ್ಸಾಹಕ್ಕೂ ಕಾರಣವಾಗಿದ್ದು, ಇದು ಎಷ್ಟು ಶಿಥಿಲಾವಸ್ಥೆಗೆ ತಲುಪಿದೆ ಎಂದರೆ ಸರಕಾರ ಪ್ರೋತ್ಸಾಹ ಕೊಡುವ ಕ್ರಮಕ್ಕೆ ಮುಂದಾದರೂ ಅದನ್ನು ಕೇಳಿಸಿಕೊಳ್ಳದಷ್ಟು! 

Advertisement

ಉಡುಪಿಯಲ್ಲಿ ಜಿಲ್ಲಾಡಳಿತ ಆರಂಭಿಸಲು ಉದ್ದೇಶಿಸಿದ ರೈತ ಸಂತೆ ಇದಕ್ಕೊಂದು ಉತ್ತಮ ಉದಾಹರಣೆ. ರೈತರು ಬೆಳೆಸಿದ ತರಕಾರಿ ಮಾರಾಟಕ್ಕೆ ರೈತ ಸಂತೆ ಆರಂಭಿಸಲಾಗುವುದು. ಇದರಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ರೈತರೇ ನೇರ ಮಾರಾಟ ಮಾಡಬಹುದು ಎಂದು ಕೆಲವು ತಿಂಗಳ ಹಿಂದೆ ತೋಟಗಾರಿಕೆ ಇಲಾಖೆ ಪ್ರಕಟನೆ ನೀಡಿತು. 
ಆದರೆ ಪ್ರತಿಸ್ಪಂದನೆ ಶೂನ್ಯ. ಮತ್ತೂಮ್ಮೆ  ಪ್ರಕಟನೆ ಕೊಟ್ಟರೂ ಹೆಸರು ನೋಂದಣಿಗೆ ಕೊನೆಯ ದಿನ ಜು. 31 ಆಗಿತ್ತು. ಆದರೆ ಬಂದ ಅರ್ಜಿ ಒಂದೇ ಒಂದು! 

ಓರ್ವ ರೈತನ ಸ್ಪಂದನೆ 
ಯಾವುದೇ ಜಿಲ್ಲೆಯಲ್ಲಿ ತರಕಾರಿ ಬೆಳೆದ ರೈತರು ಮಧ್ಯವರ್ತಿಗಳ ಹಾವಳಿ ಇಲ್ಲದೆ ಗ್ರಾಹಕರಿಗೆ ಮಾರಾಟ ಮಾಡಲು ರೈತ ಸಂತೆಯಲ್ಲಿ ಅವಕಾಶ ಇತ್ತು. ಉಡುಪಿ ಜಿಲ್ಲೆಯ ವಿವಿಧೆಡೆ ತರಕಾರಿ ಬೆಳೆಯುವ ಕೃಷಿಕರು ಇಂದಿಗೂ ಇದ್ದಾರೆ. ಆದರೆ ತೋಟಗಾರಿಕೆ ಇಲಾಖೆಯ ಹೊಸ ಉಪಕ್ರಮಕ್ಕೆ ಒಬ್ಬರು ಮಾತ್ರ ಸ್ಪಂದಿಸಿದ್ದಾರೆ. 

ಒಬ್ಬೊಬ್ಬರೇ ತಂದು ತರಕಾರಿ ಮಾರಾಟಕ್ಕೆ ವೆಚ್ಚದ ಹೊರೆ ಬೀಳಬಹುದು. ಈ ಕಾರಣ ಐದಾರು ರೈತರು ಸೇರಿ ತರಬಹುದು ಎಂಬ ಆಲೋಚನೆಯೂ ಅಧಿಕಾರಿಗಳಿಗೆ ಇತ್ತು. ಈ ಬಗ್ಗೆ ಕೃಷಿಕ ಮುಂದಾಳುಗಳ, ಬೆನಗಲ್‌ ಬೆಳೆಗಾರರ ಸಂಘದವರ ಉಪಸ್ಥಿತಿಯಲ್ಲಿ ಸಭೆ ನಡೆಸಿಯೇ ನಿರ್ಧಾರ ತಳೆದಿದ್ದರೂ ಫ‌ಲಿತಾಂಶ ಸಿಕ್ಕಿಲ್ಲ. 

ಈಗ ಮತ್ತೆ ಸಭೆ ನಡೆಸಿ ನಿರ್ಣಯ ತಳೆದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಅವರು ಸಮ್ಮತಿಸಿದರೆ ಮತ್ತೂಂದು ಬಾರಿ ಪ್ರಕಟನೆ ಕೊಡುತ್ತೇವೆ. ಈಗ ಮಳೆಗಾಲ, ತರಕಾರಿ ಬೆಳೆ ಕಡಿಮೆ. ರೈತರು, ರೈತ ಸಂಘ ಟನೆಗಳು ಜಾಗೃತರಾಗಿ ಆಸಕ್ತಿ ತೋರಿದರೆ ಸೆಪ್ಟಂಬರ್‌ನಲ್ಲಿ ಇದು ಆರಂಭವಾಗಬಹುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ. 

Advertisement

ಸದ್ಯಕ್ಕೆ ಸಾವಯವ ಸಂತೆಯೂ ಇಲ್ಲ
ಈ ನಡುವೆ ಉಡುಪಿ ದೊಡ್ಡಣಗುಡ್ಡೆ ತೋಟಗಾರಿಕಾ ಕೇಂದ್ರದಲ್ಲಿ ರವಿವಾರ ನಡೆಯುತ್ತಿದ್ದ ಸಾವಯವ ಸಂತೆಯೂ ಸದ್ಯ ನಿಂತಿದೆ. ಮಳೆಯಿಂದ ಸ್ಥಳೀಯ ಉತ್ಪಾದನೆ ಇಲ್ಲದಿರುವುದು ಕಾರಣ. ದೂರದಿಂದ ಕೃಷ್ಯುತ್ಪನ್ನ ತರುವುದು ವೆಚ್ಚದಾಯಕ. ಸೆಪ್ಟೆಂಬರ್‌ನಲ್ಲಿ ಉತ್ಪಾದನೆ ಹೆಚ್ಚಳವಾಗುತ್ತದೆ. ಹೀಗಾಗಿ ಆ ಬಳಿಕ ಆರಂಭಿಸುವುದಾಗಿ ಸಾವಯವ ಕೃಷಿಕರ ಒಕ್ಕೂಟದ ನಿರ್ದೇಶಕ ದೇವದಾಸ್‌ ಹೆಬ್ಟಾರ್‌ ತಿಳಿಸಿದ್ದಾರೆ. 

ಆಗ ವಿಚಾರಿಸಿದವರು ಈಗೆಲ್ಲಿ?
ರವಿವಾರ ಸಾವಯವ ಸಂತೆ ಆರಂಭಿಸಿದಾಗ ಅನೇಕ ತೋಟಗಾರಿಕೆ ಬೆಳೆಗಾರರು ಸಂಪರ್ಕಿಸಿದ್ದರು. ಅದು ಸಾವಯವ ಸಂತೆಯಾದ್ದರಿಂದ ಸಾವಯವ ಅಲ್ಲದ ಬೆಳೆ ತರುವಂತಿಲ್ಲ. ಹೀಗಾಗಿ ಗುರುವಾರ ರೈತ ಸಂತೆ ಆರಂಭಿಸಲು ಚಿಂತನೆ ನಡೆಸಿದೆವು. ಈಗ ಹೆಸರು ನೋಂದಣಿಯಾದದ್ದು  ಒಂದು.  ಆಗ ವಿಚಾರಿಸಿದವರು ಆಸಕ್ತಿ ತಾಳಿದ್ದರೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿತ್ತು. ಮಧ್ಯವರ್ತಿಗಳಿಲ್ಲದೇ ರೈತರಿಗೆ ಪ್ರಯೋಜನ ದೊರಕುತ್ತಿತ್ತು. 
– ಗುರುಪ್ರಸಾದ್‌, ಸಹಾಯಕ ತೋಟಗಾರಿಕಾ ಅಧಿಕಾರಿ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next