ಉಡುಪಿ: ನೇಕಾರಿಕೆಯ ಸೊಬಗು ಈ ನೆಲದ ಸಂಸ್ಕೃತಿಯ ಪ್ರತೀಕವಾಗಿದೆ. ನೇಕಾರಿಕೆ ವೃತ್ತಿ ಮೂಲಕ ಎಲ್ಲ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಬದುಕು ರೂಪಿಸಿಕೊಂಡ ಪದ್ಮಶಾಲಿ ಸಮುದಾಯ ಸಮಾಜದಲ್ಲಿ ಮಾದರಿ ಸಮುದಾಯವಾಗಿ ಗುರುತಿಸಿಕೊಂಡಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ವತಿಯಿಂದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ಜರಗಿದ ಕೈಮಗ್ಗ ಉತ್ಸವ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.
ನಾವಿಂದು ತಾಂತ್ರಿಕತೆಯ ಅಂಗಳದಲ್ಲಿದ್ದು, ಅದಕ್ಕೆ ಪೂರಕವಾಗಿ ನೇಕಾರಿಕೆಯಲ್ಲಿ ತೊಡಗಿಸಿಕೊಂಡು, ಎಲ್ಲ ಸಮುದಾಯವು ನೇಕಾರಿಕೆ ಉತ್ಪನ್ನವನ್ನು ಖರೀದಿಸಿ ಪ್ರೋತ್ಸಾಹಿಸಬೇಕು. ಸರಕಾರದ ಯೋಜನೆಗಳನ್ನು ಸಮುದಾಯವು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ, ಪ್ರಮುಖರಾದ ತೋನ್ಸೆ ಮನೋಹರ್ ಶೆಟ್ಟಿ, ಮಾಯಾ ಕಾಮತ್, ಜಯರಾಮ ಶೆಟ್ಟಿಗಾರ್ ಮಂಗಳೂರು, ರೋಬೊಸಾಫ್ಟ್ ಸಂಸ್ಥೆ ಪ್ರಮುಖರಾದ ಶ್ಯಾಮ್‌ರಾಜ್, ಆಯೋಜನ ಸಮಿತಿ ಅಧ್ಯಕ್ಷ ಚಂದನ್ ಶೆಟ್ಟಿಗಾರ್ ಪದ್ಮಶಾಲಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ಮಂಜುನಾಥ್ ಮಣಿಪಾಲ ಸ್ವಾಗತಿಸಿ, ನರೇಂದ್ರ ಶೆಟ್ಟಿಗಾರ್ ವಂದಿಸಿ, ಭರತ್ ನಿರೂಪಿಸಿದರು. ವಿವಿಧ ಸಾಧಕರನ್ನು ಸಮ್ಮಾನಿಸಲಾಯಿತು.