ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಶುಕ್ರವಾರ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು, ಯುವಜನರಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗಲು ಪ್ರಕೃತಿ ನಾಶದಿಂದ ಸಂಸ್ಕೃತಿ ಸ್ಥಿತ್ಯಂತರಗೊಳ್ಳುತ್ತಿರುವುದು ಪ್ರಧಾನ ಕಾರಣ ಎಂದರು.
Advertisement
ನಗರೀಕರಣ, ಕೈಗಾರಿಕೀಕರಣದಿಂದ ಪ್ರಕೃತಿ, ಸಂಸ್ಕೃತಿಯು ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಔದ್ಯೋಗಿಕ ಕ್ಷೇತ್ರದಲ್ಲಿಯೂ ಕನ್ನಡ ಭಾಷೆ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ಬ್ಯಾಂಕುಗಳಲ್ಲಿ ಕಂಡುಬರುತ್ತಿದೆ. ಔದ್ಯೋಗಿಕ ಕ್ಷೇತ್ರಕ್ಕೆ ಸಂಬಂಧಿಸಿ ಸರೋಜಿನಿ ಮಹಿಷಿ ವರದಿಯನ್ನು ಕೂಡಲೇ ಜಾರಿಗೆ ತರುವುದು ಅಗತ್ಯ ಎಂದು ಒತ್ತಾಯಿಸಿದರು.
ಮೂಲ ಸೌಕರ್ಯ ಅಗತ್ಯ
ಸರಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಮೊದಲು ಸರಕಾರಿ ಮತ್ತು ಅನುದಾನಿತ ಶಾಲೆಗಳ ಮೂಲಭೂತ ಸೌಕರ್ಯದ ಕಡೆಗೆ ಗಮನ ಕೊಡಬೇಕು. ಇಂಗ್ಲಿಷ್ ಮಾಧ್ಯಮ ಶಾಲೆಗಳು ಸೌಲಭ್ಯ ಮತ್ತು ಪರಿಸರದಿಂದ ಉತ್ತಮವೆಂದು ಕಂಡುಬರುತ್ತಿದೆ ವಿನಾ ಮಾಧ್ಯಮದಿಂದಲ್ಲ. ಉತ್ತಮ ಸೌಲಭ್ಯ ಕಲ್ಪಿಸಿದ ಉತ್ತಮ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಸರಾದ ಅನೇಕ ಶಾಲೆಗಳು ಉಡುಪಿ ತಾಲೂಕಿನಲ್ಲಿಯೇ ಬಹಳಷ್ಟು ಇವೆ. ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಕಾಲೇಜುಗಳಲ್ಲಿ ಐಚ್ಛಿಕ ಬೋಧನೆಯನ್ನು ನಿಲ್ಲಿಸಲಾಗಿದೆ. ಪದವಿಯಲ್ಲಿ ಕನ್ನಡದೊಂದಿಗೆ ಇತರ ಎರಡು ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡುವ ಅವಕಾಶವಿರುವುದರಿಂದ ಕನ್ನಡದ ಆಯ್ಕೆಗೆ ತೊಂದರೆಯಾಗುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕಾಗಿದೆ ಎಂದು ಡಾ|ಎಕ್ಕಾರು ಅಭಿಪ್ರಾಯಪಟ್ಟರು. ವೈಚಾರಿಕ, ವೈಜ್ಞಾನಿಕ ಚಿಂತನೆಗಳು ಅಗತ್ಯ. ವಚನ-ದಾಸ ಚಳವಳಿಗಳು ಸಮಾಜದ ಕೆಟ್ಟ ಸಂಪ್ರದಾಯ, ದುಷ್ಟ ಆಚರಣೆಗಳನ್ನು ಪ್ರಶ್ನಿಸಿವೆ. ಇದರ ಮುಂದುವರಿದ ಭಾಗವೇ ನವೋ ದಯ, ನವ್ಯ ಸಾಹಿತ್ಯ, ದಲಿತ- ಸಮ್ಮಿಶ್ರ ಸಾಹಿತ್ಯಗಳು, ಕುವೆಂಪು- ಕಾರಂತರ ಸಾಹಿತ್ಯಗಳು. ಉಡುಪಿಯಲ್ಲಿ ಸ್ವಾಮೀಜಿ ಯವರು ಮಡೆ-ಎಡೆ ಸ್ನಾನ ವನ್ನು ನಿಲ್ಲಿಸಿರುವುದು ಅಭಿನಂದನೀಯ. ಉಡುಪಿಯು ಹಿಂದಿನಿಂದಲೂ ಸಾಮರಸ್ಯಕ್ಕೆ ಹೆಸರಾಗಿದ್ದು ಈಗಲೂ ಮುಂದುವರಿದು ಕೊಂಡು ಬರುತ್ತಿದೆ. ಇದು ಮುಂದುವರಿಯಬೇಕು ಎಂದು ಎಕ್ಕಾರು ಹೇಳಿದರು.
Related Articles
ದೃಶ್ಯ ಮಾಧ್ಯಮಗಳು ಇತ್ತೀಚಿಗೆ ಟಿಆರ್‌ಪಿ ಬೆನ್ನು ಬಿದ್ದು ಭಿನ್ನ ಹಾದಿ ತುಳಿಯುತ್ತಿರುವುದು ಕರ್ನಾಟಕದಲ್ಲಿ ಕಂಡುಬರುವ ಕಹಿ ಸತ್ಯ. ಸಾಹಿತ್ಯ, ಸಂಸ್ಕೃತಿ ಬೆಳವಣಿಗೆ ಹಿನ್ನೆಲೆಯಲ್ಲಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಿಗೆ ಕನ್ನಡಿಗರು ಹಕ್ಕೊತ್ತಾಯ ಮಾಡುವ ಅಗತ್ಯವಿದೆ.
– ಡಾ| ಗಣನಾಥ ಎಕ್ಕಾರು
Advertisement