Advertisement

Udupi: ಉಡುಪಿ ತಾಲೂಕು ಗ್ರಾ.ಪಂ. ಗಾದಿ; ಬಹುಮತವಿದ್ದಲ್ಲಿ ಪಕ್ಷದೊಳಗೇ ಪೈಪೋಟಿ

06:48 PM Aug 08, 2023 | Team Udayavani |

ಉಡುಪಿ/ಮಲ್ಪೆ: ಉಡುಪಿ ತಾಲೂಕಿನ 16 ಗ್ರಾ. ಪಂ.ಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ಗ್ರಾ.ಪಂ.ಗಳಲ್ಲಿ ಪ್ರಾಬಲ್ಯ ಸಾಧಿಸಲು ತಂತ್ರಗಾರಿಕೆ ಹೆಣೆಯುತ್ತಿವೆ. ಉದ್ಯಾವರ ಗ್ರಾ.ಪಂ. 30 ಸದಸ್ಯ ಬಲವಿದ್ದು, ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ, ಹಿಂದುಳಿದ ವರ್ಗ ಎ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬಂದಿದೆ. ಕಾಂಗ್ರೆಸ್‌ -ಬಿಜೆಪಿ ತನ್ನ ಬೆಂಬಲಿಗರಿಗೆ ಅಧಿಕಾರ ನೀಡಲು ಲೆಕ್ಕಾಚಾರದಲ್ಲಿ ಮುಳುಗಿದೆ.

Advertisement

ಮಣಿಪುರ ಗ್ರಾ. ಪಂ. 16 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್‌ ಬಹುಮತ (10 ಸ್ಥಾನ) ಹೊಂದಿದೆ. ಹಿಂದುಳಿದ ವರ್ಗ ಬಿ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಲಭಿಸಿದೆ. ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಮತ್ತೂಮ್ಮೆ ಅಧಿಕಾರ ಪಡೆಯಲು ಸಜ್ಜಾಗಿದ್ದಾರೆ. ಬೈರಂಪಳ್ಳಿ ಗ್ರಾ. ಪಂ. 16 ಸ್ಥಾನದಲ್ಲಿ ಬಿಜೆಪಿ 13, ಕಾಂಗ್ರೆಸ್‌ ಬೆಂಬಲಿತ 3 ಸದಸ್ಯರು, ಬೊಮ್ಮರಬೆಟ್ಟು ಗ್ರಾ. ಪಂ. 21 ಸ್ಥಾನದಲ್ಲಿ 11 ಬಿಜೆಪಿ, 10 ಕಾಂಗ್ರೆಸ್‌ ಬೆಂಬಲಿತ ಸದಸ್ಯರು, ಕೊಡಿಬೆಟ್ಟುವಿನಲ್ಲಿ 19 ಸ್ಥಾನದಲ್ಲಿ 14 ಬಿಜೆಪಿ ಬೆಂಬಲಿತ ಸದಸ್ಯರು, ಕುಕ್ಕೆಹಳ್ಳಿ ಗ್ರಾ. ಪಂ.ನ 14 ಸ್ಥಾನದಲ್ಲಿ ಕಾಂಗ್ರೆಸ್‌ 5, ಬಿಜೆಪಿಯ 9 ಬೆಂಬಲಿತ ಸದಸ್ಯರು, ಆತ್ರಾಡಿ ಗ್ರಾ. ಪಂ.ನಲ್ಲಿ 8 ಬಿಜೆಪಿ, 6 ಕಾಂಗ್ರೆಸ್‌ ಬೆಂಬಲಿತ ಸದಸ್ಯರಿದ್ದಾರೆ.

ಮೀಸಲಾತಿ ಆಧಾರದಲ್ಲಿ ಯಾರಿಗೆ ಪಟ್ಟ ಒಲಿಯಲಿದೆ ಎಂಬ ಲೆಕ್ಕಾಚಾರ ಜೋರಾಗಿದ್ದು, ಅಧಿಕಾರಕ್ಕಾಗಿ ಬಿಜೆಪಿ-ಕಾಂಗ್ರೆಸ್‌
ತಂತ್ರಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಹಿಂದಿನ ಅವಧಿ ಈ ಹಿಂದಿನ ಅವಧಿಯಲ್ಲಿ ಕಡೆಕಾರು, ಕೆಮ್ಮಣ್ಣು ಗ್ರಾ.ಪಂ.ನಲ್ಲಿ ಕಾಂಗ್ರೆಸ್‌ ಬೆಂಬಲಿತರು ಆಡಳಿತ ನಡೆಸಿದ್ದರೆ, ತೆಂಕನಿಡಿಯೂರು, ಬಡಾನಿಡಿಯೂರು, ಅಂಬಲಪಾಡಿ, ಕಲ್ಯಾಣಪುರ ಗ್ರಾ. ಪಂ.ನಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಮಾಡಿತ್ತು. ಕಡೆಕಾರು ಗ್ರಾ.ಪಂ.ನಲ್ಲಿ ಕಾಂಗ್ರೆಸ್‌ನ 13, ಬಿಜೆಪಿ 8 ಸದಸ್ಯರ ಪೈಕಿ ಕಳೆದ ವರ್ಷ ಕಾಂಗ್ರೆಸ್‌ನ ಓರ್ವ ಸದಸ್ಯ ಬಿಜೆಪಿಗೆ ಹೋಗಿದ್ದರೂ ಕಾಂಗ್ರೆಸ್‌ಗೆ ಆಡಳಿತ ನಡೆಸಲು ಸಂಖ್ಯಾಬಲದಲ್ಲಿ ಸಮಸ್ಯೆಯೂ ಇಲ್ಲ.

ಅಂಬಲಪಾಡಿ ಗ್ರಾ.ಪ.ನಲ್ಲಿ ಬಿಜೆಪಿ 17, ಕಾಂಗ್ರೆಸ್‌ 2 ಸದಸ್ಯರಿದ್ದು ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬಂಟ ಸಮುದಾಯಕ್ಕೆ ಬಂದಿರುವುದರಿಂದ ಮೂವರು ಬಂಟ ಸದಸ್ಯರು ಇದ್ದಾರೆ.

ತೆಂಕನಿಡಿಯೂರು ಗ್ರಾ.ಪಂ.ನಲ್ಲಿ ಬಿಜೆಪಿ 14, ಕಾಂಗ್ರೆಸ್‌ 12 ಮಂದಿ ಬೆಂಬಲಿತರಿದ್ದು ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಬಂದಿರುವುದರಿಂದ ಬಿಜೆಪಿ ಪಾಲಾಗಲಿದೆ. ಬಡಾನಿಡಿಯೂರು ಗ್ರಾ.ಪಂ.ನಲ್ಲಿ ಬಿಜೆಪಿ 8, ಕಾಂಗ್ರೆಸ್‌ 3 ಸದಸ್ಯರಿದ್ದು, ಕಳೆದ ಅವಧಿಯಲ್ಲಿ ಅಧ್ಯಕ್ಷರು ಅವಿರೋಧ ಆಯ್ಕೆಯಾಗಿದ್ದರು. ಈ ಬಾರಿ ಮೀಸಲಾತಿ ಸಾಮಾನ್ಯ ವರ್ಗ ಎ ಮಹಿಳೆಯಾಗಿದ್ದು ಈ ಬಾರಿಯೂ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ.

Advertisement

ಇನ್ನು ಕೆಮ್ಮಣ್ಣು ಗ್ರಾ.ಪಂ. ನಲ್ಲಿ ಕಾಂಗ್ರೆಸ್‌ 9, ಬಿಜೆಪಿ 6, ವೆಲ್‌ಫೇರ್‌ ಪಾರ್ಟಿ ಆಫ್ ಇಂಡಿಯ 5, ಎಸ್‌ಡಿಪಿಐ ಬೆಂಬಲಿತ ಒಬ್ಬರು ಸದಸ್ಯರಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಮೀಸಲಾತಿ ದೊರಕ್ಕಿದ್ದರಿಂದ ಕಾಂಗ್ರೆಸ್‌ನಲ್ಲಿ ಇಬ್ಬರು ಸದಸ್ಯರಿದ್ದಾರೆ. ಕಲ್ಯಾಣಪುರ ಗ್ರಾ.ಪಂ.ನಲ್ಲಿ ಬಿಜೆಪಿ 14, ಕಾಂಗ್ರೆಸ್‌ನ 6 ಸದಸ್ಯರಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾತಿ ದೊರಕಿದ್ದು ಅಧ್ಯಕ್ಷ ಗಾದಿಗೆ ಇಬ್ಬರು ಆಕಾಂಕ್ಷಿಗಳಿದ್ದಾರೆನ್ನಲಾಗಿದೆ.

ಬಡಗಬೆಟ್ಟು ಗ್ರಾ. ಪಂ.ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಮತ್ತೆ ಗದ್ದುಗೆ ಏರಲು ಸಿದ್ಧತೆ ನಡೆಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಇದ್ದು, ಒಟ್ಟು 24 ಸದಸ್ಯರಲ್ಲಿ 23 ಬಿಜೆಪಿ ಬೆಂಬಲಿತ ಸದಸ್ಯರು ಇರುವುದರಿಂದ ಅಧಿಕಾರ ಸುಲಭವಾಗಿದೆ. ಬಿಜೆಪಿ ಬೆಂಬಲಿತರ ನಡುವೆಯೇ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದೆ.

ಪೆರ್ಡೂರಿನಲ್ಲಿ ಬಿರುಸಿನ ಕಾರ್ಯತಂತ್ರ 
ತಾಲೂಕಿನಲ್ಲಿ ಅತೀ ದೊಡ್ಡ ಗ್ರಾ. ಪಂ. ಆಗಿರುವ ಪೆರ್ಡೂರಿನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್‌ ತಮ್ಮ ಬೆಂಬಲಿಗರಿಗೆ ಅಧಿಕಾರ ನೀಡಲು ವಿವಿಧ ಆಯಾಮಗಳಲ್ಲಿ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ.

ಒಟ್ಟು 28 ಸ್ಥಾನದಲ್ಲಿ 13 ಬಿಜೆಪಿ, 15 ಕಾಂಗ್ರೆಸ್‌ ಬೆಂಬಲಿತ ಸದಸ್ಯರಿದ್ದಾರೆ. ಇಲ್ಲಿ ಇದುವರೆಗೆ ಬಿಜೆಪಿ ಬೆಂಬಲಿತ ಅಧ್ಯಕ್ಷರಿದ್ದು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಕಸರತ್ತು ನಡೆಸುತ್ತಿದ್ದಾರೆ. ಇತ್ತ ಬಹುಮತವಿರುವ ಕಾಂಗ್ರೆಸ್‌ ಈ ಭಾರಿ ಅಧಿಕಾರ ಹಿಡಿಯಲು ಚಾಣಾಕ್ಷತನದ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದೆ.

ಅಲೆವೂರು ತೀವ್ರ ಪೈಪೋಟಿ
ಅಲೆವೂರು ಗ್ರಾ. ಪಂ. ಹಿಂದಿನ ಅವಧಿಯಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಆಡಳಿತ ನಡೆಸಿದ್ದು, ಈ ಬಾರಿ ಮತ್ತೆ ಕಾಂಗ್ರೆಸ್‌
ಬೆಂಬಲಿತರು ಆಡಳಿತ ಚುಕ್ಕಾಣಿ ಹಿಡಿಯುವ ಉತ್ಸಾಹದಲ್ಲಿದ್ದಾರೆ. ಬಿಜೆಪಿಯೂ ಅಧಿಕಾರಕ್ಕೆ ತಂತ್ರಗಾರಿಕೆ ನಡೆಸುತ್ತಿದೆ. 29 ಸ್ಥಾನದಲ್ಲಿ ಕಾಂಗ್ರೆಸ್‌ 15, ಬಿಜೆಪಿ 14 ಸ್ಥಾನವನ್ನು ಹೊಂದಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿತ ಸದಸ್ಯರಲ್ಲಿ ಅರ್ಹರಿದ್ದು, ಭಾರೀ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಬೆಂಬಲಿತರು ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ.‌

*ಅವಿನ್/ನಟರಾಜ್

Advertisement

Udayavani is now on Telegram. Click here to join our channel and stay updated with the latest news.

Next