Advertisement

“ಕರಾವಳಿಯಲ್ಲಿ ಹಸ್ತಪ್ರತಿ ಸಂಶೋಧನೆಗೆ ವಿಪುಲ ಅವಕಾಶ’

01:56 AM Oct 31, 2021 | Team Udayavani |

ಉಡುಪಿ: ಕರಾವಳಿ ಭಾಗದಲ್ಲಿ ಹಸ್ತಪ್ರತಿ ಸಂಶೋಧನೆಗೆ ವಿಪುಲ ಅವಕಾಶಗಳಿವೆ ಎಂದು ಸಂಶೋಧಕ, ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ, ಡಾ| ಹಾಮಾನಾ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ| ಎಸ್‌.ಡಿ. ಶೆಟ್ಟಿ ಹೇಳಿದರು.

Advertisement

ಮಣಿಪಾಲ ಮಾಹೆಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಶನಿವಾರ ಎಂಜಿಎಂ ಕಾಲೇಜಿನಲ್ಲಿ ನಡೆದ ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾನೇ ಸ್ವತಃ ಸುಮಾರು 10,000 ಹಸ್ತಪ್ರತಿಗಳನ್ನು ಧರ್ಮಸ್ಥಳದ ಕೇಂದ್ರಕ್ಕೆ ಸಂಗ್ರಹಿಸಿದ್ದೇನೆ. ಇದರ ಅನ್ವೇಷಣೆ, ಸಂರಕ್ಷಣೆ, ಎದುರಿಸಿದ ಸ್ಥಿತಿಗಳ ಬಗೆಗೆ ಹೇಳಿದಷ್ಟೂ ಇವೆ. ಕರಾವಳಿಯಲ್ಲಿ ಹಸ್ತಪ್ರತಿಗಳ ಸಂಪಾದನ ಕಾರ್ಯ ನಡೆದಿರುವುದು ಏನೂ ಸಾಲದು. ಈ ಕ್ಷೇತ್ರವನ್ನೇ ಉಪೇಕ್ಷಿಸಿ ಮರೆತುಬಿಟ್ಟಿದ್ದೇವೆ. ಅನೇಕ ಗ್ರಂಥಗಳು ಅಪ್ರಕಟಿತವಾಗಿವೆ ಎಂದು ಡಾ| ಶೆಟ್ಟಿ ಹೇಳಿದರು.

ಹಸ್ತಪ್ರತಿ ಸಂಶೋಧಕರ
ಸಂಖ್ಯೆ 18 ಮಾತ್ರ!
ರಾಜ್ಯದಲ್ಲಿ 18 ಮಂದಿ ಮಾತ್ರ ಈ ಕೆಲಸದ ಸಂಶೋಧನೆಯಲ್ಲಿ ತೊಡಗಿದ್ದಾರೆ. ಬೇರೆ ಬೇರೆ ವಿ.ವಿ.ಗಳಲ್ಲಿ ಹಸ್ತಪ್ರತಿ ವಿಭಾಗಗಳು ಕಣ್ಮುಚ್ಚಿ ಕೇವಲ ಹಂಪಿಯಲ್ಲಿ ಮಾತ್ರ ಉಸಿರಾಡುತ್ತಿದೆ. ಹಸ್ತಪ್ರತಿಗಳು ನಮ್ಮ ಸಂಸ್ಕೃತಿಯ ಪ್ರಶ್ನೆ. ಹಸ್ತಪ್ರತಿಗಳನ್ನು ಓದುವವರಿದ್ದರೆ ಅವರಿಗೆ ಪ್ರೋತ್ಸಾಹ ನೀಡಬೇಕು. ಸಂಶೋಧನೆ ಎನ್ನುವುದು ಪೂರ್ಣವಿರಾಮದ ಕೆಲಸವಲ್ಲ, ಅರ್ಧವಿರಾಮದ ಕೆಲಸ. ಅದು ಮುಗಿಯುವಂಥದ್ದಲ್ಲ ಎಂದು ಡಾ| ಶೆಟ್ಟಿ ಅಭಿಪ್ರಾಯಪಟ್ಟರು.

ಡಾ| ಎಸ್‌.ಡಿ. ಶೆಟ್ಟಿ ಮತ್ತು ವಿದ್ವಾಂಸ ಡಾ| ಪಾದೆಕಲ್ಲು ವಿಷ್ಣು ಭಟ್ಟರಿಗೆ 2020 ಮತ್ತು 2021ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಬರೆದ “ಪುರಾಣ ಕಥಾ ಚಿಂತಾ ರತ್ನ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಪುಸ್ತಕ ಕುರಿತು ಪಾದೆಕಲ್ಲು ವಿಷ್ಣು ಭಟ್‌ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ ಎಸ್‌. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ|ಎಸ್‌.ಆರ್‌.ಅರುಣ ಕುಮಾರ್‌ ಅಭಿನಂದನ ಭಾಷಣ ಮಾಡಿದರು.

Advertisement

ಡಾ| ಬಿ. ಜಗದೀಶ ಶೆಟ್ಟಿ ಸ್ವಾಗತಿಸಿ ಶಿವಕುಮಾರ ಅಳಗೋಡು ಕಾರ್ಯಕ್ರಮ ನಿರ್ವಹಿಸಿದರು. ಟಿ.ಕೆ.ರಘುಪತಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಟಿ20 ವಿಶ್ವಕಪ್‌: ಬಟ್ಲರ್‌ ಬ್ಯಾಟಿಂಗಿಗೆ ನಡುಗಿದ ಆಸೀಸ್‌

ಪಾಡ್ದನಗಳ ಆಂತರ್ಯ ಗಮನಿಸಿ
ಪಾಡ್ದನಗಳನ್ನು ಸಂಗ್ರಹ, ಸಾಹಿತ್ಯಕೃತಿ, ಜನಪದ ಪಠ್ಯ, ಸಾಂದರ್ಭಿಕ ಪಠ್ಯವಾಗಿ ಮಾತ್ರ ಕಾಣದೆ ಸಾಂಸ್ಕೃತಿಕ ಪಠ್ಯವಾಗಿಯೂ ಕಾಣಬೇಕು. ಇವು ಚಾರಿತ್ರಿಕ, ರಾಜಕೀಯ ಸಂಘರ್ಷಗಳನ್ನೂ ಹೇಳುತ್ತವೆ. ಪಾಡªನದ ವಿಚಾರಗಳನ್ನು ಶಾಬ್ದಿಕವಾಗಿ ನೋಡದೆ ಆಂತರ್ಯ ವನ್ನು ನೋಡಬೇಕು ಎಂದು ವಿಶ್ರಾಂತ ಕುಲಪತಿ ಡಾ| ಚಿನ್ನಪ್ಪ ಗೌಡ ಹೇಳಿದರು.

ಕಸಾಪ ನಿಧಿ ಏನಾಯಿತೆಂದು ಗೊತ್ತಿಲ್ಲ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಮೂಲನಿಧಿಯನ್ನು ಇರಿಸಿ 2009ರಿಂದ ಪ್ರತೀ ವರ್ಷ ಒಬ್ಬ ವಿದ್ವಾಂಸರಿಗೆ ತಾಳ್ತಜೆ ಕೇಶವ ಭಟ್ಟರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೂ ಒಂದು ನಿಧಿಯನ್ನು ಇರಿಸಿದ್ದೆವು. ಎರಡು ವರ್ಷ ಅದರ ಕಾರ್ಯಕ್ರಮ ನಡೆಯಿತು. ಮತ್ತೆ ಯಾವ ಚಟುವಟಿಕೆಯೂ ನಡೆದಿಲ್ಲ. ಪತ್ರವ್ಯವಹಾರ, ಮುಖತಃ ಕೇಳಿದರೂ ಸ್ಪಂದನ ಇಲ್ಲ.
– ಡಾ| ತಾಳ್ತಜೆ ವಸಂತ ಕುಮಾರ್‌,
ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿ ಸಮಿತಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next