ಉಡುಪಿ: ಶ್ರೀ ಕೃಷ್ಣ ಮಠದ ಗರ್ಭಗುಡಿಯ ಗೋಪುರದ ಮೇಲ್ಛಾವಣಿಯ ಜೀರ್ಣವಾದ ತಾಮ್ರವು ಟಂಕೆಯ ರೂಪ ಪಡೆದು ಕೊಂಡು ಪ್ರಸಾದ ರೂಪದಲ್ಲಿ ಭಕ್ತರ ಕೈಸೇರಲು ಸಿದ್ಧವಾಗಿದೆ.
ಗರ್ಭ ಗುಡಿಯ ಮೇಲ್ಛಾವಣಿಯಲ್ಲಿ ಜೀರ್ಣವಾದ 1,500 ಕೆ.ಜಿ. ತಾಮ್ರದ ತಗಡನ್ನು ತೆಗೆದು ಶುದ್ಧೀಕರಿಸಿ 4 ಇಂಚಿನ 20 ಸಾವಿರ ಟಂಕೆಗಳನ್ನು
ತಯಾರಿಸಲಾಗಿದೆ. ಪ್ರತೀ ಟಂಕೆಯ ಎರಡು ಪಾರ್ಶ್ವಗಳಲ್ಲಿ ಉಡುಪಿ ಶ್ರೀಕೃಷ್ಣನ ಚಿತ್ರ ಅಚ್ಚೊತ್ತಲಾಗಿದೆ. ಅದನ್ನು ಸುವರ್ಣ ಗೋಪುರಕ್ಕೆ ಧನ ಸಹಾಯ ಮಾಡಿದವರಿಗೆ ವಿತರಿಸಲಾಗುತ್ತದೆ. ಶೇ. 80 ಕೆಲಸ ಮುಕ್ತಾಯ ಕೆಲಸ ಶೇ. 80ರಷ್ಟು ಮುಕ್ತಾಯವಾಗಿದೆ. ಗೋಪುರಕ್ಕೆ ಸುಮಾರು 1. ಕೋ.ರೂ. ವೆಚ್ಚದ ಸಾಗುವಾನಿ ಮರ ಹಾಕಲಾಗಿದೆ. ಗೋಪುರದ ಮೆಲಂತಸ್ತಿನ ಚಿನ್ನದ ಹೊದಿಕೆ ಕಾರ್ಯ ಪೂರ್ಣಗೊಂಡಿದೆ.
ಸಾಗುವಾನಿ ಮರದ ಹೊದಿಕೆಯ ಮೇಲೆ ಸರ್ವಮೂಲ ಗ್ರಂಥ ಮತ್ತು ಹಂಸ ಮಂತ್ರ ಬರೆಸಿದ ತಾಮ್ರದ ತಗಡು ಹಾಕಲಾಗಿದೆ. ಅದರ ಮೇಲೆ ಬೆಳ್ಳಿ ಮತ್ತು ಬಂಗಾರದ ತಗಡು ಜೋಡಿಸಲಾಗಿದೆ. ಈಗ ಕೆಳ ಅಂತಸ್ತಿನ ಮರ, ತಾಮ್ರ ಬೆಳ್ಳಿ ಚಿನ್ನ ಆಳವಡಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಕಲಶಕ್ಕೂ ಚಿನ್ನದ ಲೇಪನ ಗೋಪುರದ ಕಲಶಗಳಿಗೂ ಚಿನ್ನದಲೇಪನ ಮಾಡಲಾಗಿದೆ. ಜೂ. 3ರಂದು ಜೋಡುಕಟ್ಟೆಯಿಂದ ಬೃಹತ್ ಮೆರವಣಿಗೆಯೊಂದಿಗೆ ಶ್ರೀಕೃಷ್ಣ ಮಠಕ್ಕೆ ಬರಲಿದೆ. ಮೂರು ಕಲಶಗಳು ತಲಾ ಐದೂವರೆ, ನಾಲ್ಕೂವರೆ, ಮೂರು ಮುಕ್ಕಾಲು ಅಡಿ ಎತ್ತರವಿವೆ.
ಸುಮಾರು 4 ಇಂಚಿನ ತಾಮ್ರದ ತಗಡಿನಲ್ಲಿ ಕೃಷ್ಣಮೂರ್ತಿಯನ್ನು ಕೆತ್ತಲಾಗಿದೆ. ಇದರ ಸಂಪೂರ್ಣ ಕಾರ್ಯವನ್ನು ಉಡುಪಿಯ ಕುಶಲಕರ್ಮಿಗಳು ಮಾಡಿದ್ದಾರೆ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣವಾಗಲಿದೆ.
ವೆಂಕಟೇಶ್ ಶೇಟ್, ಸುವರ್ಣಗೋಪುರ ಉಸ್ತುವಾರಿ