ಉಡುಪಿ: ಯುದ್ಧದ ಭೀಕರತೆಯ ನಡುವೆಯೇ ನಮಗೆ ನಾವೇ ಸಮಾಧಾನ ಹೇಳಿ ಕೊಂಡಿದ್ದೆವು. ಅಲ್ಲಿದ್ದ ಸ್ನೇಹಿತರು ಬಿಟ್ಟರೆ ಬೇರ್ಯಾರೂ ನಮ್ಮನ್ನು ಸಂತೈಸಲಿಲ್ಲ. ಶಿಕ್ಷಣಕ್ಕಾಗಿ ಅಲ್ಲಿಗೆ ಕರೆದು ಕೊಂಡು ಹೋದವರೂ ಧೈರ್ಯ ತುಂಬಲಿಲ್ಲ.
ಇದು, ಉಕ್ರೇನ್‌ನ ಐವನೊ-ಫ್ರಾನ್ ಕಿವಸ್ಕ್ ನ್ಯಾಷನಲ್ ಮೆಡಿಕಲ್ ವಿಶ್ವವಿದ್ಯಾನಿಲಯದಲ್ಲಿ ತಿಂಗಳ ಹಿಂದಷ್ಟೇ ಎಂಬಿಬಿಎಸ್‌ಗೆ ದಾಖಲಾಗಿದ್ದ ಉಡುಪಿ ಉದ್ಯಾವರದ ಸಂಪಿಗೆ ನಗರದ ಮೃಣಾಲ್ ರಾಜೇಶ್ ಅವರ ಮಾತು.
ರಷ್ಯ ದಾಳಿ ಬಗ್ಗೆ ತಿಂಗಳ ಹಿಂದೆಯೇ ಮಾತು ಕೇಳಿ ಬಂದಿತ್ತು. ಕೆಲವರನ್ನು ಹೊರತು ಪಡಿಸಿ ಬೇರ್ಯಾರು ಯುದ್ಧ ಶುರುವಾದ ದಿನದ ವರೆಗೂ ವಿಚಲಿತ ರಾಗಿರಲಿಲ್ಲ. ಯುದ್ಧ ಆರಂಭ ವಾಗುತ್ತಿದ್ದಂತೆ ವಿಮಾನ ಪ್ರಯಾಣ ದರವೂ ದುಪ್ಪಟ್ಟಾಗಿದ್ದು, ಕೆಲವರು ಭಾರತಕ್ಕೆ ಬಂದಿದ್ದರು. ಉಳಿದವರು ಪರಸ್ಪರ ಸಮಾಧಾನ ಮಾಡಿಕೊಂಡು ದಿನ ಕಳೆದವು.
ನಮ್ಮ ಕಾಲೇಜಿನಿಂದ ಸುಮಾರು 180 ಕಿ.ಮೀ. ದೂರದಲ್ಲಿ ರೊಮಾನಿಯ ಗಡಿ. ಯುದ್ಧ ಶುರುವಾದ ಬಳಿಕ ನಾವಿದ್ದ (ಖಾಸಗಿ ಹಾಸ್ಟೆಲ್) ಮೆಸ್ ಕೂಡ ಬಂದಾಗಿತ್ತು. ಊಟ, ತಿಂಡಿಗೂ ಕಷ್ಟ ಪಟ್ಟೆವು. ಅಗತ್ಯ ವಸ್ತುಗಳ ಬ್ಯಾಗ್ ಮತ್ತು ದಾಖಲೆಗಳೊಂದಿಗೆ ಶುಕ್ರವಾರ ಹೊರಡಲು ಎಂಬಸಿಯಿಂದ ಸೂಚನೆ ಬಂದಿತ್ತು. ರಾತ್ರಿ ಕೊರೆವ ಚಳಿಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸಿ ವಿಮಾನ ನಿಲ್ದಾಣ ತಲುಪಿದೆವು. ದಾಖಲೆ ಪರಿಶೀಲನೆಗೆ ಸುಮಾರು 10-12 ಗಂಟೆ ಕಾದೆವು. ಭಾರತದ ವಿಮಾನ ಹತ್ತಿದ ಬಳಿಕ ನೆಮ್ಮದಿಯ ಉಸಿರು ಬಿಟ್ಟೆವು. ದಿಲ್ಲಿಯ ಕನ್ನಡಭವನದಲ್ಲಿ ಚೆನ್ನಾಗಿ ಉಪಚರಿಸಿದರು. ಅಲ್ಲಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು, ಮಂಗಳೂರಿಗೆ ಬಸ್ ಮೂಲಕ ಬಂದು ಮನೆಗೆ ತಲುಪಿದೆ.
ಉಕ್ರೇನ್‌ನಲ್ಲಿ ಯುದ್ಧ ಆರಂಭ ವಾಗಿದ ಸುದ್ದಿ ಸಿಕ್ಕ ದಿನದಿಂದ ಸರಿಯಾಗಿ ಊಟ, ನಿದ್ದೆ ಮಾಡಿಲ್ಲ. ಪ್ರತಿಕ್ಷಣವೂ ಮಗನದ್ದೇ ಚಿಂತೆಯಾಗಿತ್ತು. ಆಗಾಗ ವೀಡಿಯೋ ಕಾಲ್ ಮಾಡಿ ಮಾತನಾಡುತ್ತಾ ಮಗನಿಗೆ ಧೈರ್ಯ ತುಂಬುತ್ತಿದ್ದೆವು. ಆತ ಮನೆಗೆ ಮರಳಿದ ಬಳಿಕ ನಿಟ್ಟುಸಿರು ಬಿಟ್ಟೆವು ಎಂದು ಮೃಣಾಲ್ ತಂದೆ ರಾಜೇಶ್, ತಾಯಿ ಸಂಧ್ಯಾ ಹೇಳಿದರು.
ದಾಖಲಾಗಿ ಒಂದೇ ತಿಂಗಳು
ಮೃಣಾಲ್ ಡಿ. 23ರಂದು ಉಕ್ರೇನ್‌ಗೆ ಹೋಗಿದ್ದರು. ಕ್ರಿಸ್ಮಸ್ ರಜೆ ಇದ್ದುದ್ದರಿಂದ ಅಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಎಂಬಿಬಿಎಸ್‌ಗೆ ದಾಖಲಾಗಿದ್ದರು. ತರಗತಿ ಆರಂಭವಾಗಿ ಎರಡು ವಾರವಾಗಿತ್ತಷ್ಟೆ. ಕಾಲೇಜು ಶುಲ್ಕ ಹಾಗೂ ಇತರ ವೆಚ್ಚ ಸೇರಿ ಸುಮಾರು 10 ಲಕ್ಷ ರೂ. ಖರ್ಚಾಗಿದೆ. ಒಂದು ವರ್ಷದ ಪೂರ್ತಿ ಶುಲ್ಕ ಪಾವತಿಸಿದ್ದೇವೆ ಎಂದು ರಾಜೇಶ್ ತಿಳಿಸಿದರು.
ಶಾಸಕ ಕೆ. ರಘುಪತಿ ಭಟ್ ಅವರು ಸೋಮವಾರ ಉಕ್ರೇನ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಉಡುಪಿಯ ಕೆಮ್ಮಣ್ಣು ನಿವಾಸಿ ಗ್ಲೆನ್‌ವಿಲ್, ಕಲ್ಯಾಣಪುರ ನಿವಾಸಿ ಅನಿಫ್ರೆಡ್ ರಿಡ್ಲಿ ಅವರ ಮನೆಗೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.
ಜಿಲ್ಲೆಯ ಇತರ ವಿದ್ಯಾರ್ಥಿಗಳ ಮಾಹಿತಿ
ಪರ್ಕಳದ ನಿಯಮ್ ರಾಘವೇಂದ್ರ ರೊಮೇನಿಯಾ ಗಡಿ ದಾಟಿದ್ದಾರೆ. ಇತರ ವಿದ್ಯಾರ್ಥಿಗಳಾದ ಗ್ಲೆನ್‌ವಿಲ್, ಅನಿಫ್ರೆಡ್ ರಿಡ್ಲಿ, ರೋಹನ್ ಧನಂಜಯ ಖಾರ್ಕಿವ್‌ನ ಬಂಕರ್‌ಗಳಲ್ಲಿದ್ದಾರೆ. ನಂದಿನಿ ಅರುಣ್ ರೊಮೇನಿಯಾ ಗಡಿ ದಾಟಿ, ಬುಕಾರೆಸ್ಟ್ ಮೂಲಕ ಖಾಸಗಿ ವಿಮಾನದಲ್ಲಿ ಮಸ್ಕತ್‌ಗೆ ಬಂದಿಳಿದ್ದಾರೆ. ಅಂಕಿತಾ ಜಗದೀಶ್ ಪೂಜಾರಿ ಅವರು ಪೋಲೆಂಡ್ ಗಡಿಯಲ್ಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.