Advertisement
ಶ್ರೀಮಧ್ವಾಚಾರ್ಯರು ಮಕರ ಸಂಕ್ರಮಣ ದಿನ ಶ್ರೀ ಕೃಷ್ಣ ದೇವರನ್ನು ಪ್ರತಿಷ್ಠಾಪಿಸಿದರು ಎಂಬ ನಂಬಿಕೆ ಹಿನ್ನೆಲೆಯಲ್ಲಿ ಮಕರಸಂಕ್ರಾಂತಿ ಉತ್ಸವ ಮಂಗಳವಾರ ಜರಗಿತು. ಸಪ್ತೋತ್ಸವದ ಕೊನೆಯ ದಿನದಂದು ಚೂರ್ಣೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ನಡೆಯುವುದು ಇಲ್ಲಿನ ವಿಶೇಷವಾಗಿದೆ. ಸುವರ್ಣ ಪಲ್ಲಕಿಯಲ್ಲಿ ಶ್ರೀ ಕೃಷ್ಣಮುಖ್ಯಪ್ರಾಣ ದೇವರ ಉತ್ಸವಮೂರ್ತಿಯನ್ನು ತಂದು ಬ್ರಹ್ಮರಥದಲ್ಲಿ ಕೂರಿಸಿ ಪೂಜೆ, ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ ನೆರವೇರಿಸಲಾಯಿತು.
ಭಕ್ತರು ಶ್ರೀಕೃಷ್ಣ ದೇವರ ರಥೋತ್ಸವ ವೀಕ್ಷಿಸಿ ಪುಣೀತರಾದರು. ರಥೋತ್ಸವದಲ್ಲಿ ಭಾಗಿಯಾಗಿ ಗೋವಿಂದಾ ಎಂದು ನಾಮಸ್ಮರಣೆ ಮಾಡಿದರು. ಭಕ್ತರು ರಥದ ಹಗ್ಗವನ್ನು ಎಳೆದರು. ರಥವು ರಾಜಬೀದಿಗೆ ಒಂದು ಸುತ್ತು ಪ್ರದಕ್ಷಿಣೆ ಬಂದಿತು. ರಥದ ಉತ್ಸವ ಮುಂದೆ ತೆರಳಿದ್ದಂತೆ ಹತ್ತಾರು ಮಂದಿ ಭಕ್ತರು ಅದರ ಹಿಂದಿನಿಂದ ಉರುಳು ಸೇವೆ ಸಲ್ಲಿಸಿದರು. ರಥದ ಹಗ್ಗ ಎಳೆಯಲು ನೂಕುನುಗ್ಗಲು ನಡೆಯಿತು. ಮಠದ ಸಿಬಂದಿ, ಪೊಲೀಸರು ನಿಯಂತ್ರಿಸಿದರು.
Related Articles
ಉತ್ಸವದ ಬಳಿಕ ಶ್ರೀ ಕೃಷ್ಣನಿಗೆ ವಸಂತ ಮಹಲ್‌ನಲ್ಲಿ ಅಷ್ಟಾವಧಾನ ಪೂಜೆ, ಓಲಗ ಮಂಟಪ ಸೇವೆ ನಡೆಯಿತು. ಸೇವಾಕರ್ತರಿಗೆ ಓಕುಳಿ ಎರಚುವ ಸಂಪ್ರದಾಯಗಳು ನಡೆದವು. ಬಳಿಕ ಮಧ್ವ ಸರೋವರದಲ್ಲಿ ಅವಭೃಥಸ್ನಾನದಲ್ಲಿ ಎಲ್ಲ ಮಠಾಧೀಶರು ಮತ್ತು 23 ಸಪ್ತೋತ್ಸವದ ಸೇವಾಕರ್ತರು ಪಾಲ್ಗೊಂಡರು.
Advertisement
ಆಕರ್ಷಕ ತೆಂಗಿನ ಗರಿಯ ಟೋಪಿಪೇಜಾವರ ಶ್ರೀಗಳು ಬೆಂಗಳೂರಿನಿಂದ ಝಾರ್ಖಂಡ್ ಕಲಾವಿದನೊಬ್ಬ ನಿಂದ ಮಾಡಿಸಿ ತಂದ ತೆಂಗಿನ ಗರಿಯ ಕಲಾತ್ಮಕ ಟೋಪಿಯನ್ನು ಎಲ್ಲ ಸ್ವಾಮೀಜಿಯವರು ಧರಿಸಿದ್ದರು. ಇದು ಬಿಸಿಲಿನಿಂದ ರಕ್ಷಣೆ ಒದಗಿಸುವಂತಿತ್ತು. ಗಮನ ಸೆಳೆದ ರಾಮ, ಕೃಷ್ಣ
ರಥೋತ್ಸವದ ವೇಳೆ ಮಠದ ಗೋ ಶಾಲೆಯ ಓಂಗೋಲ್ ತಳಿಯ ರಾಮ ಮತ್ತು ಕೃಷ್ಣ ಎರಡು ಜೋಡಿ ಜಾನುವಾರುಗಳು ಗಮನ ಸೆಳೆದವು. ಅವುಗಳೆರಡು ಮೆರವಣಿಗೆಯ ಮುಂಚೂಣಿಯಲ್ಲಿದ್ದವು. ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅವುಗಳನ್ನು ಭಕ್ತರು ಮುಟ್ಟಿ ನಮಸ್ಕರಿಸುತ್ತಿದ್ದರು. ಬ್ರಹ್ಮರಥ ಸಾಗಿ ಬಂದ ವೇಳೆ ನೆರೆದಿದ್ದ ಭಕ್ತರಲ್ಲಿ ಹಲವರು ಉದ್ದಂಡ ನಮಸ್ಕಾರ ಸಲ್ಲಿಸಿದರು.