Advertisement

ಉಡುಪಿಯಲ್ಲಿ ಶ್ರೀಕೃಷ್ಣನಿಗೆ ತುಲಾಭಾರ

10:13 AM Jan 07, 2020 | Sriram |

ಉಡುಪಿ: ಶ್ರೀಕೃಷ್ಣ ಮಠದ ಉತ್ಸವ ಮೂರ್ತಿಗೆ ರವಿವಾರ ತುಲಾಭಾರ ಮಹೋತ್ಸವವು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮೊದಲ ಬಾರಿಗೆ ಸಂಭ್ರಮದಿಂದ ಸಂಪನ್ನಗೊಂಡಿತು.

Advertisement

ಸಂಜೆ ಚಾಮರಸೇವೆ ನಡೆದ ಬಳಿಕ, ರಾತ್ರಿ ಪೂಜೆ, ಶ್ರೀ ಮುಖ್ಯಪ್ರಾಣ ದೇವರಿಗೆ ರಂಗಪೂಜೆ, ಉತ್ಸವ ನಡೆಯಿತು. ಅನಂತರ ಸೃಷ್ಟಿ ನೃತ್ಯ ಕಲಾ ಕುಟೀರದ ಡಾ| ಮಂಜರಿ ಅವರಿಂದ “ಶ್ರೀಕೃಷ್ಣ ಸಂದರ್ಶನಂ’ ನೃತ್ಯರೂಪಕ ರಥಬೀದಿಯಲ್ಲಿ ನಿರ್ಮಿಸಿದ್ದ ಸುಧರ್ಮ ವೇದಿಕೆಯಲ್ಲಿ ನಡೆಯಿತು. ಬಳಿಕ ಶ್ರೀಕೃಷ್ಣ ದೇವರ ಉತ್ಸವಮೂರ್ತಿಗೆ ಸ್ವರ್ಣ ತುಲಾಭಾರ ಮಹೋತ್ಸವ ಇದೇ ಮೊದಲ ಬಾರಿ ನಡೆಯಿತು. ರಥಬೀದಿಯಲ್ಲಿ ಕಾರ್ಯಕ್ರಮ ಪೂರ್ತಿ ಕಿಕ್ಕಿರಿದ ಜನಸಂದಣಿ ಸೇರಿತ್ತು.

ದೇವರನ್ನು ತೂಗಲಿಕ್ಕೆ ನಾವು ಯಾರು, ದೇವರು ಕೊಟ್ಟದ್ದನ್ನೇ ನಾವು ಆತನಿಗೆ ಸಮರ್ಪಿಸುತ್ತಿದ್ದೇವೆ. ನಮ್ಮ ಭಾರ ಕಡಿಮೆ ಮಾಡಿ ಕೊಳ್ಳಲು ದೇವರಿಗೆ ಸಮರ್ಪಿಸುತ್ತಿದ್ದೇವೆ ಎಂದು ಪರ್ಯಾಯ ಶ್ರೀಪಾದರು ಆಶೀರ್ವಚನದಲ್ಲಿ ನುಡಿದರು.
ಇಂತಹ ಸತ್ಕಾರ್ಯಗಳನ್ನು ದೇವರು ನಮ್ಮೊಳ ಗಿದ್ದು, ಆತನೇ ಮಾಡಿಸಿಕೊಂಡದ್ದು ಎಂಬ ಅನುಸಂಧಾನ ಅಗತ್ಯ ಎಂದು ಶ್ರೀ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಹೇಳಿದರು. ಪಲಿಮಾರು ಸ್ವಾಮೀಜಿಯವರು ನಿತ್ಯ ಲಕ್ಷ ತುಳಸೀ ಅರ್ಚನೆ ನಡೆಸಿದರು. ನಾವು ಒಂದು ದಳವನ್ನಾದರೂ ಸಮರ್ಪಿಸಬೇಕು ಎಂದು ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

ದೇವರಿಗೆ ತುಲನೆ ಇಲ್ಲ. ಪಲಿಮಾರು ಶ್ರೀಗಳು ಈಗಾಗಲೇ ವ್ಯಾಸರ ಸುವರ್ಣವೆಂಬ ಮಹಾಭಾರತ ಗ್ರಂಥದಿಂದಲೂ ಸುವರ್ಣದಿಂದಲೂ ತೂಗಿದ್ದಾರೆ. ಈಗ ಇನ್ನೊಂದು ಬಗೆಯಲ್ಲಿ ತೂಗಿದ್ದಾರೆಂದು ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥರು ಅಭಿಪ್ರಾಯಪಟ್ಟರು.

ಭಗವಂತ ನೀಡಿದ ಶಕ್ತಿಯಿಂದಲೇ ಜಗದೋದ್ಧಾರಕನನ್ನು ತೂಗಲಾಗಿದೆ ಎಂದು ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಗಳು ನುಡಿದರು. ಹೃತೂ³ರ್ವಕ ಅನುಸಂಧಾನ ದಿಂದ ತುಲಾಭಾರದಲ್ಲಿ ಪಾಲ್ಗೊಂಡರೆ ದೇಹದ ಭಾರ, ತಲೆಯ ಭಾರ ಇಳಿಕೆಯಾಗುತ್ತದೆ ಎಂದು ಶ್ರೀ ಬಾಳೆಗಾರು ಮಠದ ಶ್ರೀ ರಘುಭೂಷಣತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು. ಸತ್ಯ ಭಾಮೆ ಸುವರ್ಣದಿಂದ ಶ್ರೀಕೃಷ್ಣನನ್ನು ತೂಗಿದರೆ, ರುಕ್ಮಿಣಿ ತುಳಸಿಪತ್ರದಿಂದ ತೂಗಿದಳು ಎಂದು ಶ್ರೀ ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಹೇಳಿದರು. ವಿ| ಕೊರ್ಲಹಳ್ಳಿ ವೆಂಕಟೇಶಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

Advertisement

ನೃತ್ಯ ಕಲಾವಿದೆಯ
ಏಕಾದಶಿ ಉಪವಾಸ
ನೃತ್ಯರೂಪಕ ನಡೆಸಿಕೊಟ್ಟ ಡಾ| ಮಂಜರಿ ಅವರು ಏಕಾದಶಿಯಂದು ನಿರ್ಜಲ ಉಪವಾಸ ಮಾಡುತ್ತಿದ್ದಾರೆ. ಅವರು ಕಲಾವಿದೆ ಮಾತ್ರವಲ್ಲದೆ ಧಾರ್ಮಿಕರೂ ಆಗಿದ್ದಾರೆ ಎಂದು ಪಲಿಮಾರು ಶ್ರೀಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next