ಉಡುಪಿ: ಕೋವಿಡ್-19 ಕಾರಣದಿಂದ ಶ್ರೀಕೃಷ್ಣ ಮಠದಲ್ಲಿ ಮಾ. 25ರಿಂದ ಭಕ್ತರಿಗೆ ಪ್ರವೇಶವಿಲ್ಲ. ಜೂ. 8ರಂದು ಆರಾಧನಾಲಯಗಳು ತೆರೆದು ಕೊಂಡಿದ್ದರೂ ಶ್ರೀಕೃಷ್ಣ ಮಠದಲ್ಲಿ ಕಾದು ನೋಡುವ ನಿರ್ಧಾರ ತಳೆಯಲಾಗಿದೆ. ಬಹುತೇಕ ಈ ತಿಂಗಳಾಂತ್ಯದವರೆಗೂ ಭಕ್ತರಿಗೆ ಪ್ರವೇಶವಿಲ್ಲ ಎಂದು ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಜು. 1ರಂದು ಪ್ರಥಮನ ಏಕಾದಶಿ. ಈ ದಿನ ಬೆಳಗ್ಗೆ ವೈದಿಕರು ಸುದರ್ಶನ ಹೋಮ ನಡೆಸಿದ ಬಳಿಕ ಸ್ವಾಮೀಜಿ ಯವರು ಮುದ್ರಾಧಾರಣೆ ಮಾಡುತ್ತಿದ್ದರು. ಸಾವಿರಾರು ಭಕ್ತರು ಸರತಿಯಲ್ಲಿ ಮುದ್ರಾಧಾರಣೆ ಮಾಡಿಸಿಕೊಳ್ಳುವುದು ವಿಶೇಷ. ಈ ಬಾರಿ ಕೊರೊನಾ ಕಾರಣದಿಂದ ಶ್ರೀಕೃಷ್ಣ ಮಠದಲ್ಲಿ ಮುದ್ರಾಧಾರಣೆ ನಡೆಯ ಬಹುದೆ?
ಎರಡು- ಮೂರು ರೀತಿಯ ಸಾಧ್ಯತೆ ಗಳಿವೆ. ಭಕ್ತರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮುದ್ರಾಧಾರಣೆ ಅಥವಾ ಸ್ವಾಮೀಜಿಯವರು ಮಾತ್ರ ಮುದ್ರಾಧಾರಣೆ ಮಾಡಿಸಿಕೊಳ್ಳುವುದು ಯಾ ಸಂಪ್ರದಾಯದಂತೆ ಇನ್ನೊಂದು ಏಕಾದಶಿಯಂದು ಮುದ್ರಾಧಾರಣೆ.
ಶ್ರೀಕೃಷ್ಣ ಮಠವನ್ನು ಭಕ್ತರಿಗೆ ತೆರೆಯುವ ಕುರಿತಂತೆ ಇತ್ತೀಚೆಗಷ್ಟೇ ಸ್ವಾಮೀಜಿಯವರು ಪ್ರಕಟನೆ ನೀಡಿ, ಇನ್ನೂ ಕೆಲವು ದಿನ ಬಿಟ್ಟು ಆಗಿನ ಸ್ಥಿತಿ ನೋಡಿ ನಿರ್ಧರಿಸಲಾಗುವುದು ಎಂದಿದ್ದರು. ಆಗ ಪ್ರಥಮನ ಏಕಾದಶಿ ಕುರಿತಂತೆ ಯಾವುದೇ ಹೇಳಿಕೆ ಕೊಟ್ಟಿರಲಿಲ್ಲ. ಸದ್ಯ ಮುದ್ರಾಧಾರಣೆ ಕುರಿತು ಯಾವುದೇ ನಿರ್ಧಾರ ತಳೆದಿಲ್ಲ. ಮೂಲಗಳ ಪ್ರಕಾರ ಸ್ವಾಮೀಜಿಯವರು ಮಾತ್ರ ಪ್ರಥಮನ ಏಕಾದಶಿಯಂದು ಮುದ್ರಾಧಾರಣೆ ಮಾಡಿಸಿಕೊಳ್ಳುವ ಸಾಧ್ಯತೆ ಇದೆ. ಘಟ್ಟದ ಮೇಲಿನ ಮಠಗಳಲ್ಲಿ ಈಗಾಗಲೇ ಭಕ್ತರಿಗೆ ಮುದ್ರಾಧಾರಣೆ ಮುಂದೂಡಲಾಗಿದೆ.