Advertisement

ಉಡುಪಿ ಶ್ರೀ ಕೃಷ್ಣನಿಗೆ ಸುವರ್ಣ ಗೋಪುರ, ರಜತ ಕಲಶ ಸಮರ್ಪಣೆ

12:19 AM May 26, 2019 | Team Udayavani |

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕೃಷ್ಣನಿಗೆ ಸುವರ್ಣಗೋಪುರ ಸಮರ್ಪಣೆಯಾಗಲಿದ್ದು, ಜೂ.1ರಂದು ಅಪರಾಹ್ನ 4 ಗಂಟೆಗೆ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ಮತ್ತು ಕಿದಿಯೂರು ವಿಷ್ಣುಮೂರ್ತಿ ಹಾಗೂ ವನದುರ್ಗಾ ಸೇವಾ ಸಮಿತಿಯ ನೇತೃತ್ವದಲ್ಲಿ ಸುವರ್ಣ ಶಿಖರ ಮತ್ತು ರಜತ ಕಲಶದ ವೈಭವದ ಮೆರವಣಿಗೆ ನಡೆಯಲಿದೆ.

Advertisement

1008 ರಜತ ಕಲಶಗಳನ್ನು ಬ್ರಹ್ಮರಥದ ಮಾದರಿಯಲ್ಲಿ ಜೋಡಿಸಿ ಸ್ತಬ್ಧಚಿತ್ರ ನಿರ್ಮಿಸಲಾಗಿದೆ. ವಾದಿರಾಜ ಸ್ವಾಮೀಜಿಗಳ ನೇತೃತ್ವದಲ್ಲಿ ರಚಿತವಾದ 6 ಅಡಿಯ ಒಂದು, 4 ಅಡಿಯ 2 ಶಿಖರಗಳಿಗೆ ಸಂಪೂರ್ಣ ಚಿನ್ನದ ಹೊದಿಕೆಯನ್ನು ನಿರ್ಮಿಸಲಾಗಿದೆ.

4,000ಕ್ಕೂ ಅಧಿಕ ಭಜಕರು
ಮೆರವಣಿಗೆಯಲ್ಲಿ ವೈವಿಧ್ಯಮಯ ಟ್ಯಾಬ್ಲೊ, ವಿವಿಧ ತಂಡಗಳಿಂದ ಚೆಂಡೆ, ಬ್ಯಾಂಡ್‌ ಸೆಟ್‌, 65 ಮಂದಿಯ ಕೇರಳ ಚೆಂಡೆ, ಉಡುಪಿ ಜಿಲ್ಲಾ ಭಜನ ಒಕ್ಕೂಟದ ಸುಮಾರು 2,000 ಪುರುಷ -ಮಹಿಳೆಯರ ಭಜನ ತಂಡ, ಕಿದಿಯೂರಿನ 600 ಮಂದಿ ಪೂರ್ಣಕುಂಭಧಾರಿ ಮಹಿಳೆಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 1,500 ಪುರುಷರು, ಮಹಿಳೆಯರು ಪಾಲ್ಗೊಳ್ಳಲಿದ್ದಾರೆ.

ಮೆರವಣಿಗೆಯ ಮಾರ್ಗ
ಮೆರವಣಿಗೆಯು ಜೋಡುಕಟ್ಟೆಯಿಂದ ಆರಂಭವಾಗಿ ಹಳೆ ಡಯಾನ ವೃತ್ತ, ಕೆ.ಎಂ. ಮಾರ್ಗ, ಸರ್ವೀಸ್‌ ಬಸ್ಸು ನಿಲ್ದಾಣ, ಕಿದಿಯೂರು ಹೋಟೆಲ್‌ ಮುಂಭಾಗದಿಂದ ಹಾದು ಶಿರಿಬೀಡು, ಸಿಟಿಬಸ್‌ ನಿಲ್ದಾಣ, ಕಲ್ಸಂಕ, ರಾಜಾಂಗಣ ಪಾರ್ಕಿಂಗ್‌, ವಿದ್ಯೋದಯ ಶಾಲೆಯ ಮುಂಭಾಗದಿಂದ ರಥಬೀದಿಯನ್ನು ಪ್ರವೇಶಿಸಲಿದೆ.

ಉದ್ಘಾಟನಾ ಸಮಾರಂಭ
ಮೆರವಣಿಗೆಯನ್ನು ಪೇಜಾವರ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಗಳು ದೀಪ ಬೆಳಗಿ ಉದ್ಘಾಟಿಸಲಿದ್ದಾರೆ. ನಾಡೋಜ ಡಾ| ಜಿ. ಶಂಕರ್‌ ಶೋಭಾಯಾತ್ರೆಗೆ ಚಾಲನೆ ನೀಡುವರು. ಶಾಸಕ ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮಣಿಪಾಲ ವಿವಿ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಮನೋಹರ ಶೆಟ್ಟಿ ಉಪಸ್ಥಿತರಿರುತ್ತಾರೆ ಎಂದು ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ಸಂಚಾಲಕ ಭುವನೇಂದ್ರ ಕಿದಿಯೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ಕೃಷ್ಣಾರ್ಜುನ, ಭೀಮ
ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಸ್ಟಾರ್‌ಪ್ಲಸ್‌ ಧಾರಾವಾಹಿಯ ಮಹಾಭಾರತ ಖ್ಯಾತಿಯ ಶ್ರೀಕೃಷ್ಣ, ಅರ್ಜುನ ಮತ್ತು ಭೀಮ ವೇಷಧಾರಿಗಳು ಗೀತೋಪದೇಶದ ರಥದಲ್ಲಿ ಕುಳಿತು ಸಾಗಿ ಬರುವ ಟ್ಯಾಬ್ಲೋ ಮೆರವಣಿಗೆಗೆ ಮೆರುಗು ನೀಡಲಿದೆ ಎಂದು ಸಮಿತಿಯ ಸಂಚಾಲಕ ಭುವನೇಂದ್ರ ಕಿದಿಯೂರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next