Advertisement

ಎಸ್‌ಪಿ ಫೋನ್‌-ಇನ್‌; ಈ ಬಾರಿ ಸಂಚಾರ ಸಮಸ್ಯೆ ದೂರೇ ಹೆಚ್ಚು

06:00 AM Oct 27, 2018 | Team Udayavani |

ಉಡುಪಿ: ಕುಡಿದು ವಾಹನ ಚಲಾಯಿಸುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಕ್ಕಾಗಿ ಉಡುಪಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಮೂರು ಕಡೆಗಳಲ್ಲಿ ಹೆಚ್ಚುವರಿಯಾಗಿ ಚೆಕ್‌ಪೋಸ್ಟ್‌ ಗಳನ್ನು ಆರಂಭಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ಬ.ನಿಂಬರಗಿ ತಿಳಿಸಿದ್ದಾರೆ. ಶುಕ್ರವಾರ ತನ್ನ ಕಚೇರಿಯಲ್ಲಿ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದ ಅನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.  

Advertisement

ಕುಡುಕರ ಹಾವಳಿ
ಮಂದಾರ್ತಿಯ ಸುರ್ಗಿಕಟ್ಟೆಯ ಅಶ್ವತ್ಥಕಟ್ಟೆ ಬಳಿಯ ಬಾರ್‌ನಿಂದ ಕೆಲವು ಮಂದಿ ಕುಡುಕರು ಅಶ್ವತ್ಥಕಟ್ಟೆಗೆ ಪ್ರದಕ್ಷಿಣೆ ಹಾಕಲು ಬರುವ ಮಹಿಳೆಯರಿಗೆ ತೊಂದರೆ ನೀಡುತ್ತಿದ್ದಾರೆ. ಇಲ್ಲಿ ಅನಧಿಕೃತ ಗೂಡಂಗಡಿಗಳು ಕೂಡ ಇವೆ. ಇಲ್ಲಿಯೂ ಕೆಲವರು ಅಲೆದಾಡುತ್ತಾ ಉಪಟಳ ನೀಡುತ್ತಿದ್ದಾರೆ. ಸ್ಥಳೀಯ ಪಂಚಾಯತ್‌ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಇಬ್ಬರು ಮಹಿಳೆಯರು ಕರೆ ಮಾಡಿದರು.  ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಭರವಸೆ ನೀಡಿದರು.

ಕಾರ್ಕಳ ಕಲ್ಲು ಕುಂಟಾಡಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷರೋರ್ವರೇ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ.  ಉಪ್ಪುಂದ ಬಾರ್‌ನಿಂದ ಕಂಬದಕೋಣೆಯ ಅಂಗಡಿಗಳಿಗೆ ಮದ್ಯ ಪೂರೈಕೆ ಮಾಡಲಾಗುತ್ತಿದೆ ಎಂಬ ದೂರುಗಳು ಬಂದವು.  ಕಾರ್ಕಳ ಕುಕ್ಕುಂದೂರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಹಾಲಾಡಿಯ 3 ಅಂಗಡಿಗಳಲ್ಲಿ ಮಟ್ಕಾ ನಡೆಯುತ್ತಿದೆ ಎಂಬ ದೂರುಗಳನ್ನು ಎಸ್‌ಪಿ ಆಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕಾರ್ಕಳದಲ್ಲಿ 
 ಕಾರ್ಕಳ ವೆಂಕಟರಮಣ ದೇವಸ್ಥಾನ  ಬಳಿ ಹಂಪ್ಸ್‌ ಬೇಡ. ಇಲ್ಲಿನ ರಥೋತ್ಸವ ವೇಳೆ ಸಂಚಾರ ಮಾರ್ಗ ಬದಲಾಯಿಸಬೇಕು. ಕಾರ್ಕಳ ಪೆ‌ಟ್ರೋಲ್‌ ಪಂಪ್‌ ಸಮೀಪ ಇರುವ ರಿಕ್ಷಾ ನಿಲ್ದಾಣದಿಂದ ಸಮಸ್ಯೆಯಾಗಿದೆ ಎಂಬ ದೂರಿನ ಕರೆಯೂ ಬಂತು.  

ಜೂಜು ಪ್ರಕರಣ: 31 ಮಂದಿ ಬಂಧನ
ಆ.28ರಿಂದ ಅ.26ರವರೆಗೆ ಜಿಲ್ಲೆಯಲ್ಲಿ 7 ಮಟ್ಕಾ ಪ್ರಕರಣಗಳಲ್ಲಿ 7 ಮಂದಿಯನ್ನು, 6 ಇಸ್ಪೀಟು ಜೂಜು ಪ್ರಕರಣದಲ್ಲಿ  31 ಮಂದಿಯನ್ನು, ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿ ಒಬ್ಬರನ್ನು, ಎನ್‌ಡಿಪಿಎಸ್‌ 2 ಪ್ರಕರಣಗಳಲ್ಲಿ 4 ಮಂದಿಯನ್ನು ಬಂಧಿಸಲಾಗಿದೆ. ಕೋಟಾ³ ಕಾಯಿದೆಯಡಿ 135, ಕುಡಿದು ವಾಹನ ಚಲಾಯಿಸಿರುವವರ ವಿರುದ್ಧ 19, ಕರ್ಕಶ ಹಾರನ್‌ ಬಳಸಿದವರ ವಿರುದ್ಧ 207, ವಾಹನ ಚಲಾವಣೆ ಮಾಡುವಾಗ ಮೊಬೈಲ್‌ ಬಳಸಿರುವವರ ವಿರುದ್ಧ 95, ಹೆಲ್ಮೆಟ್‌ ರಹಿತವಾಗಿ ಬೈಕ್‌ ಓಡಿಸಿರುವವರ ವಿರುದ್ಧ 2,741 ಹಾಗೂ ಅತಿ ವೇಗದ ಚಾಲನೆಯ ವಿರುದ್ಧ 102  ಹಾಗೂ ಮೋಟಾರು ವಾಹನ ಕಾಯಿದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಇತರ 5,066 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next