Advertisement

“ಜನಸ್ನೇಹಿ ಪೊಲೀಸಿಂಗ್‌’ಗೆ ಕ್ರಮ: ಎಸ್‌ಪಿ ನಿಶಾ ಜೇಮ್ಸ್‌

10:54 PM Aug 02, 2019 | Sriram |

ಉಡುಪಿ: ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಎಲ್ಲ ಪೊಲೀಸ್‌ ಠಾಣೆಗಳ ಆಯ್ದ ಸಿಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಉಡುಪಿ ಎಸ್‌ಪಿ ನಿಶಾ ಜೇಮ್ಸ್‌ ತಿಳಿಸಿದ್ದಾರೆ.

Advertisement

ಆ.2ರಂದು ಪೊಲೀಸ್‌ ಪೋನ್‌-ಇನ್‌ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದರು.

ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಬೀಟ್‌ ಪೊಲೀಸರು ಕೂಡ ಜನರೊಂದಿಗೆ ಸ್ನೇಹಿತರಂತೆ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಎಸ್‌ಪಿ ತಿಳಿಸಿದರು.

ಆಟೋರಿಕ್ಷಾ ಮೀಟರ್‌ ಕಾರ್ಯಾಚರಣೆ
ಉಡುಪಿ ನಗರದಲ್ಲಿ ಕೆಲವು ಆಟೋರಿಕ್ಷಾದವರು ಮನಬಂದಂತೆ ಬಾಡಿಗೆ ವಸೂಲಿ ಮಾಡುತ್ತಾರೆ. ಮೀಟರ್‌ ಇದ್ದರೂ ಅದನ್ನು ಚಾಲನೆಯಲ್ಲಿಡುವುದಿಲ್ಲ ಎಂದು ನಾಗರಿಕರೋರ್ವರು ದೂರಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಪಿ ಅವರು “ಮೀಟರ್‌ ಅಳವಡಿಕೆ, ಮೀಟರ್‌ ಚಾಲನೆ ಬಗ್ಗೆ ಈಗಾಗಲೇ ಹಲವಾರು ಸಭೆಗಳಲ್ಲಿ ಆಟೋ ರಿಕ್ಷಾ ಚಾಲಕರು, ಮಾಲಕರ ಸಂಘದವರಿಗೆ ತಿಳಿಸಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಲಿದೆ’ ಎಂದು ತಿಳಿಸಿದರು.

ಬಸ್‌ ಪಾರ್ಕಿಂಗ್‌ ವಿರುದ್ಧ ಕ್ರಮ
ಉಡುಪಿ ನಗರದ ಕೆಎಸ್‌ಆರ್‌ಟಿಸಿ, ಕ್ಲಾಕ್‌ ಟವರ್‌ ಪರಿಸರದಲ್ಲಿ ಬೆಂಗಳೂರು, ಮುಂಬೈ ಮೊದಲಾದೆಡೆ ತೆರಳುವ ಖಾಸಗಿ ಬಸ್‌ಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‌ಪಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಎಫ್ಎಸ್‌ಎಲ್‌ ವರದಿ ವಿಳಂಬ
ಕೊಲ್ಲೂರಿನ ಜಡ್ಕಲ್‌ನಲ್ಲಿ 2017ರಲ್ಲಿ ನಡೆದಿದ್ದ ಅಡಿಕೆ ಕಳ್ಳತನ ಪ್ರಕರದ ಕುರಿತು ದೂರುದಾರರಿಗೆ ಉತ್ತರಿಸಿದ ಎಸ್‌ಪಿ ಅವರು “ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್ಎಸ್‌ಎಲ್‌ ವರದಿ ಇನ್ನಷ್ಟೇ ಬರಬೇಕಿದೆ. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ರಾಜ್ಯದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಹಲವಾರು ವರದಿಗಳು ಬಾಕಿ ಇವೆ. ಈ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಆದ್ಯತೆ ಮೇಲೆ ನೀಡಲು ಮನವಿ ಮಾಡುತ್ತೇವೆ’ ಎಂದು ಹೇಳಿದರು.

ತೃತೀಯ ಲಿಂಗಿಗಳಿಗೆ ಗುರುತು ಕಾರ್ಡ್‌
ತೃತೀಯ ಲಿಂಗಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತಾದ ದೂರಿಗೆ ಪ್ರತಿಕ್ರಿಯಿಸಿದ ಅವರು “ತೃತೀಯ ಲಿಂಗಿಗಳನ್ನು ನೋಡುವ ದೃಷ್ಟಿ ಕೂಡ ಬದಲಾಗಬೇಕಿದೆ. ಅವರು ಸಮಾಜದ ಮುಖ್ಯವಾಹಿನಿಗೆ ಬರಲು, ಜೀವನ ನಿರ್ವಹಣೆಗೆ ಅವಕಾಶ ಮಾಡಿಕೊಡಲು ಜಿಲ್ಲಾಡಳಿತ ಮುಂದಾಗಿದೆ. ಗುರುತಿನ ಚೀಟಿ ನೀಡುವ ಕುರಿತಾಗಿಯೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ’ ಎಂದು ತಿಳಿಸಿದರು.

ಸಿಸಿ ಕೆಮರಾ ನಿರ್ವಹಣೆಗೆ ಕ್ರಮ
ಹೆದ್ದಾರಿ ಸೇರಿದಂತೆ ನಗರದ ಹಲವೆಡೆ ಸಿಗ್ನಲ್‌ ಲೈಟ್‌ಗಳನ್ನು ಅಳವಡಿಸುವಾಗ ಅದರೊಂದಿಗೆ ಸಿಸಿ ಕೆಮರಾಗಳನ್ನು ಕೂಡ ಅಳವಡಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಈ ಹಿಂದೆ ನಗರದಲ್ಲಿ ಅಳವಡಿಸಿ ರುವ ಸಿಸಿ ಕೆಮರಾಗಳ ನಿರ್ವಹಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ತಿಳಿಸಿದರು.
ಡಿವೈಎಸ್‌ಪಿ ಜೈ ಶಂಕರ್‌, ಸೆನ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಸೀತಾರಾಮ್‌, ಸಂಚಾರ ಠಾಣೆಯ ಎಸ್‌ಐ ನಾರಾಯಣ, ಡಿಸಿಆರ್‌ಬಿ ಎಎಸ್‌ಐ ಪ್ರಕಾಶ್‌ ಉಪಸ್ಥಿತರಿದ್ದರು.

ಪ್ರಕರಣ,ಬಂಧನ
ಜು.12ರಿಂದ ಆ.1ರ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮಟ್ಕಾ ಜುಗಾರಿಗೆ ಸಂಬಂಧಿಸಿ 7 ಪ್ರಕರಣಗಳನ್ನು ದಾಖಲಿಸಿ 8 ಮಂದಿಯನ್ನು ಬಂಧಿಸಲಾಗಿದೆ. ಇತರೆ ಜೂಜಿಗೆ ಸಂಬಂಧಿಸಿ 4 ಪ್ರಕರಣಗಳನ್ನು ದಾಖಲಿಸಿ 27 ಮಂದಿಯನ್ನು ಬಂಧಿಸಲಾಗಿದೆ. ಅಕ್ರಮ ಮದ್ಯಕ್ಕೆ ಸಂಬಂಧಿಸಿ 1 ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಎನ್‌ಡಿಪಿಎಸ್‌ಗೆ ಸಂಬಂಧಿಸಿ 33 ಪ್ರಕರಣಗಳಲ್ಲಿ 33 ಮಂದಿಯನ್ನು ಬಂಧಿಸಲಾಗಿದೆ. ಕೋಟಾ³ದಡಿ 316 ಪ್ರಕರಣ ದಾಖಲಿಸಲಾಗಿದೆ. ಕುಡಿದು ವಾಹನ ಚಾಲನೆ ಮಾಡಿದ 45 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕರ್ಕಶ ಹಾರನ್‌ ಬಳಕೆ ವಿರುದ್ಧ 517 ಪ್ರಕರಣ, ಚಾಲನೆ/ಸವಾರಿ ವೇಳೆ ಮೊಬೈಲ್‌ ಬಳಕೆ ಮಾಡಿದವರ ವಿರುದ್ಧ 20, ಹೆಲ್ಮೆಟ್‌ ರಹಿತ ಬೈಕ್‌ ಸವಾರಿ ಮಾಡಿರುವವರ ವಿರುದ್ಧ 2,445 ಪ್ರಕರಣ, ಅತಿ ವೇಗದ ಚಾಲನೆ ವಿರುದ್ಧ 40 ಹಾಗೂ ಇತರ ಮೋಟಾರು ವಾಹನ ಕಾಯಿದೆ ಉಲ್ಲಂಘನೆಗೆ ಸಂಬಂಧಿಸಿ 7,188 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next