Advertisement

ಆರು ತಿಂಗಳುಗಳಲ್ಲಿ 57 ಗೋವುಗಳ ರಕ್ಷಣೆ: ಎಸ್‌ಪಿ ನಿಶಾ ಜೇಮ್ಸ್‌

10:47 PM Jul 12, 2019 | Team Udayavani |

ಉಡುಪಿ: ಜಿಲ್ಲೆಯಲ್ಲಿ ಗೋ ಕಳ್ಳತನ, ಅಕ್ರಮ ಸಾಗಾಟ ತಡೆಗೆ ಪೊಲೀಸ್‌ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿಶೇಷ ಗಸ್ತು ಆರಂಭಿಸಲಾಗಿದೆ ಎಂದು ಎಸ್‌ಪಿ ನಿಶಾ ಜೇಮ್ಸ್‌ ತಿಳಿಸಿದ್ದಾರೆ.

Advertisement

ಜು. 12ರಂದು ತನ್ನ ಕಚೇರಿಯಲ್ಲಿ ಪೊಲೀಸ್‌ ಪೋನ್‌-ಇನ್‌ ನಡೆಸಿಕೊಟ್ಟ ಸಂದರ್ಭದಲ್ಲಿ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದರು.

2017ರಲ್ಲಿ 7 ಪ್ರಕರಣಗಳಲ್ಲಿ 14 ದನಗಳ ಕಳ್ಳತನ, 2018ರಲ್ಲಿ 11 ಪ್ರಕರಣಗಳಲ್ಲಿ 20 ದನಗಳ ಕಳ್ಳತನ ಮತ್ತು 2019ರ ಜನವರಿಯಿಂದ ಜು. 11ರ ವರೆಗೆ 5 ಪ್ರಕರಣಗಳಲ್ಲಿ 11 ದನಗಳ ಕಳ್ಳತನ ನಡೆದಿದೆ. ಜೂನ್‌ ತಿಂಗಳಲ್ಲಿ ಮೂರು ಪ್ರಕರಣಗಳಲ್ಲಿ ಮೂವರ ಬಂಧನ ನಡೆದಿದೆ. ಇದು ಸಾರ್ವಜನಿಕರು ನೀಡಿರುವ ದೂರಿನಂತೆ ದಾಖಲಾದ ಪ್ರಕರಣಗಳು. ಇದಲ್ಲದೆ ಪೊಲೀಸರು ಕೂಡ ಅಕ್ರಮ ದನ ಸಾಗಾಟ ಕುರಿತು ಸ್ವಯಂಪ್ರೇರಿತರಾಗಿ 2017ರಲ್ಲಿ 26 ಪ್ರಕರಣಗಳನ್ನು ದಾಖಲಿಸಿ 68 ಮಂದಿಯನ್ನು ಬಂಧಿಸಿದ್ದಾರೆ. 2018ರಲ್ಲಿ 31 ಪ್ರಕರಣಗಳಲ್ಲಿ 47 ಮಂದಿಯನ್ನು 2019ರಲ್ಲಿ 14 ಪ್ರಕರಣಗಳಲ್ಲಿ 31 ಮಂದಿಯನ್ನು ಬಂಧಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದರು.

ದನಗಳ ರಕ್ಷಣೆ
2017ರಲ್ಲಿ 41 ದನಗಳನ್ನು, 2018ರಲ್ಲಿ 73 ಹಾಗೂ 2019ರಲ್ಲಿ 57 ದನಗಳನ್ನು ರಕ್ಷಿಸಲಾಗಿದೆ. ಈ ರೀತಿ ದನಕಳ್ಳತನ, ಸಾಗಾಟದಲ್ಲಿ ಕಳೆದ 5 ವರ್ಷಗಳಿಂದ ತೊಡಗಿಸಿಕೊಂಡಿರುವವರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿಯಾಗಿ ಪ್ರಕರಣ ದಾಖಲಿಸಿಕೊಂಡು ಠಾಣಾ ಮಟ್ಟದಲ್ಲಿ ಹಾಗೂ ಉಪ ವಿಭಾಗ ಮಟ್ಟದಲ್ಲಿ ಪರೇಡ್‌ ನಡೆಸಿ ಎಚ್ಚರಿಕೆ ನೀಡಲಾಗುತ್ತಿದೆ. ಅವರಿಂದ ಬಾಂಡ್‌ ಪಡೆಯಲಾಗುತ್ತಿದೆ. ಚೆಕ್‌ಪೋಸ್ಟ್‌ಗಳನ್ನು ಕೂಡ ತೆರೆಯಲಾಗಿದೆ. ದನಗಳನ್ನು ಮೇಯಲು ಕಟ್ಟುವವರು ಕೂಡ ಹೆಚ್ಚು ಕಾಳಜಿ ವಹಿಸಬೇಕು. ಬೀದಿಗಳಲ್ಲಿ ದನಗಳನ್ನು ಬಿಡಬಾರದು. ಒಂದು ವೇಳೆ ದೇವರಿಗೆ ಅರ್ಪಣೆಯ ಹಿನ್ನೆಲೆಯಲ್ಲಿ ಬೀದಿಗೆ ಬಿಟ್ಟಿದ್ದರೆ ಅಂಥ ದನಗಳನ್ನು ಗೋ ಶಾಲೆಗೆ ಸಾಗಿಸುವುದಕ್ಕಾಗಿ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ಎಸ್‌ಪಿ ಹೇಳಿದರು.

40 ಚೆಕ್‌ಪೋಸ್ಟ್‌ಗಳು
ಜಿಲ್ಲೆಯ ಹೆದ್ದಾರಿ ಹಾಗೂ ಒಳರಸ್ತೆಗಳಲ್ಲಿ ದನ ಸಾಗಾಟ ಸೇರಿದಂತೆ ಇತರೆ ಅಕ್ರಮಗಳ ನಿಯಂತ್ರಣ ತಡೆಯುವ ಉದ್ದೇಶದಿಂದ ರಾತ್ರಿ ವೇಳೆಗೆ 30 ಹಾಗೂ ಹಗಲಿನ ವೇಳೆಗೆ 10 ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

Advertisement

ಅಧಿಕ ದಂಡ ಕಾರ್ಯಗತ
ಸಂಚಾರ ನಿಯಮ ಉಲ್ಲಂ ಸಿದರೆ ಹೊಸ ನಿಯಮಾವಳಿಯಂತೆ ಅಧಿಕ ದಂಡವನ್ನು ವಸೂಲಿ ಮಾಡುವ ಹಾಗೂ ಇತರೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಾಗಿದೆ ಎಂದು ಎಸ್‌ಪಿ ತಿಳಿಸಿದರು.

ಪೊಲೀಸರ ಬಗ್ಗೆ ಕಾಳಜಿ
ನಾಗರಿಕರೋರ್ವರು ಕರೆ ಮಾಡಿ “ಮಹಿಳಾ ಸಿಬಂದಿ ಸೇರಿದಂತೆ ಸಂಚಾರಿ ಪೊಲೀಸ್‌ ಸಿಬಂದಿ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಅವರಿಗೆ ಅಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೆ ತೊಂದರೆಯಾಗಿದೆ. ಮೊಬೈಲ್‌ ಟಾಯ್ಲೆಟ್‌ಗಳ ನ್ನಾದರೂ ನಿರ್ಮಿಸಿಕೊಡಬೇಕು’ ಎಂದು ಮನವಿ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಭರವಸೆ ನೀಡಿದರು.

ಡಿವೈಎಸ್‌ಪಿ ಜೈ ಶಂಕರ್‌, ಸೆನ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸೀತಾರಾಮ್‌, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್‌., ಕಾರ್ಕಳ ವೃತ್ತ ನಿರೀಕ್ಷಕ ಹಾಲಾಮೂರ್ತಿ, ಸಂಚಾರ ಠಾಣೆಯ ಎಸ್‌ಐ ನಾರಾಯಣ, ಡಿಸಿಆರ್‌ಬಿ ಎಎಸ್‌ಐ ಪ್ರಕಾಶ್‌ ಉಪಸ್ಥಿತರಿದ್ದರು.

ಸಾರ್ವಜನಿಕರೇ ಸಿಸಿ ಕೆಮರಾ ಹಾಕಿಸಿ
ಉಡುಪಿ ಪುತ್ತೂರಿನ ಸುಬ್ರಹ್ಮಣ್ಯ ನಗರದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಕೊಲೆ ಪ್ರಕರಣ ನಡೆದ ಸಂದರ್ಭ ಅಲ್ಲಿನ ಜನರಲ್ಲಿ ಆ ಭಾಗದ ಪ್ರಮುಖ ಜಂಕ್ಷನ್‌ನಲ್ಲಿ ಸಾರ್ವಜನಿಕರೇ ಮುಂದೆ ಬಂದು ಸಿಸಿ ಕೆಮರಾ ಹಾಕುವಂತೆ ಸೂಚನೆ ನೀಡಿದ್ದೆ. ಇತರೆ ಪ್ರದೇಶದಲ್ಲಿಯೂ ಜನವಸತಿ ಪ್ರದೇಶದ ಪ್ರಮುಖ ಜಂಕ್ಷನ್‌ಗಳಲ್ಲಿ ಸಾರ್ವಜನಿಕರೇ ಮುಂದೆ ಬಂದು ಸಿಸಿ ಕೆಮರಾ ಅಳವಡಿಸಬೇಕು. ಇದರಿಂದ ಕಳ್ಳತನದಂತಹ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಮಾತ್ರವಲ್ಲದೆ ಹಿಟ್‌ ಆ್ಯಂಡ್‌ ರನ್‌ನಂಥ ಅಪಘಾತ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲು ಅನುಕೂಲವಾಗುತ್ತದೆ. ಮಳೆಗಾಲದಲ್ಲಿ ಕಳ್ಳತನದಂಥ ಪ್ರಕರಣಗಳು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಸಾರ್ವಜನಿಕರೂ ಹೆಚ್ಚು ಜಾಗರೂಕರಾಗಿರಬೇಕು ಎಂದು ಎಸ್‌ಪಿ ಹೇಳಿದರು.

ದೂರು-ದುಮ್ಮಾನ
ಪೊಲೀಸ್‌ ಪೋನ್‌-ಇನ್‌ನಲ್ಲಿ ಈ ಬಾರಿಯೂ ಸಂಚಾರ ನಿಯಮ ಉಲ್ಲಂಘನೆ ಕುರಿತಾದ ದೂರುಗಳೇ ಅಧಿಕವಾಗಿದ್ದವು. ಪ್ರಮುಖ ದೂರುಗಳು ಇಂತಿವೆ:
– ಅಜ್ಜರಕಾಡು ಪಾರ್ಕ್‌ನಲ್ಲಿ ಕುಡುಕರ ಹಾವಳಿ ಇದೆ. ಕೆಲವು ಶಾಲಾ ಕಾಲೇಜು ವಿದ್ಯಾರ್ಥಿಗಳು ಕೂಡ ತರಗತಿಗೆ ಚಕ್ಕರ್‌ ಹಾಕಿ ಪಾರ್ಕ್‌ನಲ್ಲಿ ಬಂದು ಮೋಜು ಮಾಡುತ್ತಿರುತ್ತಾರೆ.
– ಹಿರಿಯಡಕ, ಚೇರ್ಕಾಡಿಯಲ್ಲಿ ಮಟ್ಕಾ; ಮಂದಾರ್ತಿಯಲ್ಲಿ ಅಕ್ರಮ ಸಾರಾಯಿ ಮಾರಾಟ ದೂರು.
– ಉದ್ಯಾವರ ಗ್ರಂಥಾಲಯದ ಬಳಿ ಮೈಕ್‌ ಸದ್ದಿನಿಂದ ಸ್ಥಳೀಯರ ನೆಮ್ಮದಿ ಭಂಗವಾಗಿದೆ ಎಂದು ಮಹಿಳೆಯೋರ್ವರಿಂದ ದೂರು.
– ನಗರದ ಹಲವು ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ
– ಗುಜ್ಜಾಡಿಯಲ್ಲಿ ಅಕ್ರಮ ಮಣ್ಣು ಸಾಗಾಟ
– ಸುಬ್ರಹ್ಮಣ್ಯ ನಗರದ ಮಹಿಳೆ ಕೊಲೆ ಪ್ರಕರಣ ಭೇದಿಸಿದ ಪೊಲೀಸರಿಗೆ ಅಭಿನಂದನೆ
– ಅತಿ ವೇಗದ ಬೈಕ್‌ ಸವಾರಿ, ವಿರುದ್ಧ ದಿಕ್ಕಿನಲ್ಲಿ ಸಂಚಾರ ದೂರು
– ಹಿರಿಯಡಕದಲ್ಲಿ ತ್ಯಾಜ್ಯ, ಬೀದಿನಾಯಿ ತೊಂದರೆ; ನ್ಯಾಯಬೆಲೆ ಅಂಗಡಿಯಲ್ಲಿ ಅಸಮರ್ಪಕ ಸೇವೆ ಕುರಿತು ಕೂಡ ಪೊಲೀಸರಿಗೆ ದೂರು.

Advertisement

Udayavani is now on Telegram. Click here to join our channel and stay updated with the latest news.

Next